ಐಕಳಬಾವ ಕಾಂತಾಬಾರೆ ಬೂದಾಬಾರೆ ಕಂಬಳ ಸಮಿತಿ ನೇತೃತ್ವದಲ್ಲಿ ಫೆ. 3ರಂದು ಐಕಳಬಾವ ಕಂಬಳ ಜರಗಲಿದೆ. ಕಂಬಳವನ್ನು ನಿರಂತರವಾಗಿ ಆಯೋಜಿಸುವ ನಿಟ್ಟಿನಲ್ಲಿ 1 ಕೋಟಿ ರೂ.ಗಳ ಶಾಶ್ವತ ನಿಧಿಯನ್ನು ಸ್ಥಾಪಿಸಲಾಗುವುದು ಎಂದು ಕಂಬಳ ಸಮಿತಿಯ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ. ಬೆಳಗ್ಗೆ 8.30ಕ್ಕೆ ಧಾರ್ಮಿಕ ವಿಧಿಯೊಂದಿಗೆ ಕಂಬಳ್ಳೋತ್ಸವ ಆರಂಭಗೊಳ್ಳಲಿದೆ. ಪೂರ್ವಾಹ್ನ 11ಕ್ಕೆ ಐಕಳಬಾವ ಕುಟುಂಬಿಕರ ಕ್ಷೇಮಾಭಿವೃದ್ಧಿ ಟ್ರಸ್ಟ್ನ ಅಧ್ಯಕ್ಷ ಡಾ| ಕೆ.ಪಿ.ಕೆ. ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ವಾಸ್ತುತಜ್ಞ ಶ್ರೀ ಚಂದ್ರಶೇಖರ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಅದಾನಿ ಫೌಂಡೇಶನ್ ದಕ್ಷಿಣ ಭಾರತದ ಅಧ್ಯಕ್ಷ ಕಿಶೋರ್ ಆಳ್ವ ಕಂಬಳ ಕರೆಗಳನ್ನು ಉದ್ಘಾಟಿಸುವರು. ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಅನಂತ ಆಸ್ರಣ್ಣ ಶುಭಾಶಂಸನೆ ನೀಡಲಿದ್ದಾರೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಭಾಗವಹಿಸಲಿದ್ದಾರೆ. ಸಂಜೆಯ ಸಭಾ ಕಾರ್ಯಕ್ರಮವನ್ನು ಕಂಬಳ ಸಮಿತಿಯ ಗೌರವಾಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸುವರು. ಡಾ| ಐಕಳ ಬಾವ ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗೂಂಡೂರಾವ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮಾಜಿ ಸಚಿವ ಸುನಿಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಉಮಾನಾಥ ಕೋಟ್ಯಾನ್, ಮುಂಬಯಿ ಉದ್ಯಮಿ ಸದಾಶಿವ ಶೆಟ್ಟಿ ಕನ್ಯಾನ, ಉದ್ಯಮಿಗಳಾದ ಪ್ರಕಾಶ್ ಶೆಟ್ಟಿ, ಡಾ| ಜಿ. ಶಂಕರ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ‘ಕರಾವಳಿ ರತ್ನ’ ಬಿರುದು ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
ಚಂದ್ರಶೇಖರ ಸ್ವಾಮೀಜಿ ಅವರ ಮಾರ್ಗದರ್ಶನ : ಮೂಲತಃ ಮೂಲ್ಕಿಯವರಾಗಿರುವ ವೈಜ್ಞಾನಿಕ ಜೋತಿಷಿ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರು ಐಕಳ ಕಂಬಳದ ಮಾರ್ಗದರ್ಶಕರಾಗಿದ್ದು, ನಿರಂತರ ಹಲವು ದಶಕಗಳಿಂದ ಚಾಲನೆ ನೀಡಿ ಆಶೀರ್ವದಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಐಕಳ ಕಂಬಳದ ಜನಪ್ರಿಯತೆ ಹೆಚ್ಚುತ್ತಿದೆ ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.