ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ ವತಿಯಿಂದ ಧನ್ವಂತರಿ ಪೂಜಾ ಮಹೋತ್ಸವ, ಶಿಷ್ಯೋಪನಯನ ಸಂಸ್ಕಾರ, ಆಳ್ವಾಸ್ ಧನ್ವಂತರಿ ಪ್ರಶಸ್ತಿ ಪ್ರದಾನ ಮತ್ತು ಕಾಲೇಜು ವಾರ್ಷಿಕೋತ್ಸವ ಸಮಾರಂಭ ಕಾಲೇಜಿನ ಆವರಣದಲ್ಲಿ ಮಂಗಳವಾರ ಜರುಗಿತು.


ಆಳ್ವಾಸ್ ಧನ್ವಂತರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಆಯುರ್ವೇದ ಚಿಕಿತ್ಸಾ ತಜ್ಞ ಡಾ ಶ್ರೀಪತಿ ಕಿನ್ನಿಕಂಬಳ, ಈ ಪುರಸ್ಕಾರಕ್ಕೆ ಆಯ್ಕೆ ಮಾಡಿರುವುದು ನನ್ನನ್ನು ಹೆಚ್ಚು ಚಕಿತಗೊಳಿಸುವುದರ ಜೊತೆಗೆ ಅತೀವ ಸಂತೋಷವನ್ನು ನೀಡಿದೆ. ಈ ಪ್ರಶಸ್ತಿಯನ್ನು ನನ್ನ ಗುರುವೃಂದ ಹಾಗೂ ತಂದೆ-ತಾಯಿಗೆ ಅರ್ಪಿಸಲು ಬಯಸುತ್ತೆನೆ. ತಾವು ಹಾಗೂ
ಮೋಹನ್ ಆಳ್ವರ ಸ್ನೇಹತ್ವ ಅರ್ಧ ಶತಮಾನಕ್ಕಿಂತಲೂ ಅಧಿಕವಾದುದ್ದು. ಪದವಿ ಶಿಕ್ಷಣದಲ್ಲಿ ಆರಂಭವಾದ ಸ್ನೇಹ, ಇಂದಿಗೂ ಶಾಶ್ವತವಾಗಿ ಉಳಿದಿದೆ. ಆ ದಿನಗಳಲ್ಲಿ ವಿದ್ಯಾಗಿರಿಯ ಗುಡ್ಡದ ತುದಿಯಲ್ಲಿ ನಿಂತು ವಿದ್ಯಾಕಾಶಿಯ ಕನಸು ಕಂಡಿದ್ದ ಆಳ್ವರು ಇಂದು ಆ ಕನಸನ್ನು ಸಂಪೂರ್ಣ ನನಸಾಗಿಸಿದ್ದಾರೆ. ಆಳ್ವಾಸ್ನಂತಹ ವಿದ್ಯಾಸಂಸ್ಥೆಯನ್ನು ಬೆಳೆಸಿದ ಮೋಹನ್ ಆಳ್ವರು ನಮ್ಮ ಕಾಲದ ಅದ್ಭುತ ವ್ಯಕ್ತಿ , ಅವರ ಶಕ್ತಿ ವಿರಾಟ ಶಕ್ತಿ ಎಂದು ಶ್ಲಾಘಿಸಿದರು.

ಇನ್ನೋರ್ವ ಪ್ರಶಸ್ತಿ ವಿಜೇತ ಹುಬ್ಬಳ್ಳಿಯ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸ್ನಾತಕ ವಿಭಾಗದ ಡೀನ್, ಡಾ ಎ.ಎಸ್ ಪ್ರಶಾಂತ್ ಮಾತನಾಡಿ, ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ, ಆಳ್ವಾಸ್ನಿಂದ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ಬದುಕಿನ ಅವೀಸ್ಮರಣೀಯ ಕ್ಷಣ. ತನ್ನ ವೃತ್ತಿ ಬದುಕಿನ ಆರಂಭದ ದಿನಗಳನ್ನು ಮೂಡುಬಿದಿರೆಯಲ್ಲಿ ಆರಂಭಿಸಿರುವುದನ್ನು ನೆನೆದ ಅವರು, ಅಂದಿನ ಕಾಲಕ್ಕೆ ಹೋಲಿಸಿದರೆ ಮೂಡುಬಿದಿರೆ ಇಂದು ಶೈಕ್ಷಣಿಕವಾಗಿ ಅಪಾರ ಅಭಿವೃದ್ಧಿಯನ್ನು ಹೊಂದಿದೆ. ಈ ಉನ್ನತಿಗೆ ಡಾ ಎಂ. ಮೋಹನ್ ಆಳ್ವರ ಕೊಡುಗೆ ಅನನ್ಯ ಎಂದರು.

ಆಯುರ್ವೇದ ವಿದ್ಯಾರ್ಥಿಗಳು ವಿಧೇಯತೆ ಹಾಗೂ ಪರಮದಯೆಯನ್ನು ಆಳವಡಿಸಿಕೊಂಡು, ವೃತ್ತಿ ಕ್ಷೇತ್ರದಲ್ಲಿ ಯಶಸ್ಸನ್ನು ಕಂಡುಕೊಳ್ಳಬೇಕು. ವಿದ್ಯಾರ್ಥಿಗಳು ನಿರಂತರ ಅಧ್ಯಯನ, ಅವಲೋಕನ, ಕೌಶಲಗಳನ್ನು
ಮೈಗೂಡಿಸಿಕೊಳ್ಳುತ್ತಾ, ಈ ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಬೇಕು. ಜ್ಞಾನದ ಹುಡುಕಾಟ, ಸಂಗ್ರಹ ಹಾಗೂ ಆಳವಡಿಕೆ ಇಂದಿನ ಯುವಪೀಳಿಗೆಯಲ್ಲಿ ಕ್ಷೀಣಿಸುತ್ತಿರುವುದು, ಗುಣಮಟ್ಟದಲ್ಲಿ ಪ್ರತಿಫಲಿಸುತ್ತಿದೆ. ಇದು ಸಲ್ಲ ಎಂದರು.
ಮಂಗಳೂರಿನ ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ ಸಂದೀಪ್ ಬೇಕಲ್. ಆರ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಕಲಿಕೆ ಒಂದು ನಿರಂತರ ಕಾರ್ಯ, ಆ ಕಾರ್ಯಕ್ಕೆ ಅನುಗುಣವಾಗಿ ಪರಿಶ್ರಮ, ಆಸಕ್ತಿ, ಆಳವಾದ ಅಧ್ಯಯನ ಅತ್ಯವಶ್ಯಕ. ಜಾಗತಿಕ ಮಟ್ಟದಲ್ಲಿ ಆಯುರ್ವೇದಕ್ಕೆ ಮನ್ನಣೆ ದೊರಕಿದ್ದರೂ, ಇಂದಿನ ಹೆಚ್ಚಿನ ಆಯುರ್ವೇದದ ವಿದ್ಯಾರ್ಥಿಗಳಲ್ಲಿ ಹಿಂಜರಿಕೆಯ ಸ್ವಭಾವ ಎದ್ದು ಕಾಣುತ್ತಿದೆ. ಆ ಹಿಂಜರಿಕೆಯಿಂದ ಹೊರಬಂದು ಕಾರ್ಯಪ್ರವೃತ್ತರಾಗುವುದು ಅತೀ ಮುಖ್ಯ. ಆಳ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡುತ್ತದೆ. ಇಂತಹ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಆಯುರ್ವೇದ ವಿದ್ಯಾರ್ಥಿಗಳು ಆಯುವೇದಶಾಸ್ತ್ರದ ಕಥೆಯನ್ನು ಕೇಳುವುದರ ಜೊತೆಗೆ ಕ್ರಿಯೆಯಲ್ಲಿ ತೊಡಗುವುದು ಅತೀ ಅಗತ್ಯ. ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವುದರಿಂದ ಬೆಳವಣಿಗೆ ಸಾಧ್ಯ. ಸಾಧನೆ ಎನ್ನುವುದು ಒಮ್ಮಿಂದೊಮ್ಮೆಲೆ ಆಗುವಂತದ್ದಲ್ಲ, ನಿರಂತರ ಪ್ರಯತ್ನ, ಪರಿಶ್ರಮದ ಫಲ ಎಂದರು. ಕಾರ್ಯಕ್ರಮದಲ್ಲಿ ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 2017ನೇ ಸಾಲಿನ ಅಂತಿಮ ವರ್ಷದ ಬಿಎಎಂಎಸ್ ಪರೀಕ್ಷೆಯಲ್ಲಿ ಚಿನ್ನದ ಪದಕ ವಿಜೇತ ಡಾ ವಿಷ್ಣು ಆರ್, 2021ನೇ ಸಾಲಿನ ಚಿನ್ನದ ಪದಕ ಹಾಗೂ ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಡಾ ಸಾಯಿ ಚಿನ್ಮಯಿ ಟಿ, ಎಂ.ಡಿ ಆಯುರ್ವೇದ ಪಂಚಕರ್ಮದಲ್ಲಿ ಚಿನ್ನದ ಪದಕ ಪಡೆದ ಡಾ ಲಿಫಾಮ್ ರೋಶನಾರ ಅವರನ್ನು ಆಳ್ವಾಸ್ ಅಕಾಡೆಮಿಕ್ ಎಕ್ಸ್ಲೆನ್ಸ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ವಾರ್ಷಿಕ ನಿಯತಕಾಲಿಕೆ ‘ಚಿರಂತನ’ ವನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಡಾ. ಶ್ರೀಪತಿ ಕಿನ್ನಿಕಂಬಳರವರ ಪತ್ನಿ ವಿಜಯಲಕ್ಷ್ಮಿ ಉಪಸ್ಥಿತರಿದ್ದರು. ಯುಜಿ ಡೀನ್ ಡಾ ಪ್ರಶಾಂತ್ ಜೈನ್ ವಾರ್ಷಿಕ ವರದಿ ವಾಚಿಸಿದರು. ಪಿಜಿ ಡೀನ್ ಡಾ ರವಿಪ್ರಸಾದ ಹೆಗ್ಡೆ ಪ್ರಶಸ್ತಿ ವಿಜೇತರ ಪಟ್ಟಿಯನ್ನು ವಾಚಿಸಿ, ಸನ್ಮಾನಪತ್ರವನ್ನು ಡಾ. ಸ್ವಪ್ನಕುಮಾರಿ, ಡಾ ಕೃಷ್ಣಮೂರ್ತಿ, ಡಾ. ವಿಜಯಲಕ್ಷ್ಮಿ ವಾಚಿಸಿದರು. ಕಾಲೇಜಿನ ಪ್ರಾಚಾರ್ಯ ಡಾ ಸಜಿತ್ ಎಂ ಸ್ವಾಗತಿಸಿ, ಡಾ. ಗೀತಾ ಎಂ. ಬಿ ನಿರೂಪಿಸಿ, ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ ಮಂಜುನಾಥ ಭಟ್ ವಂದಿಸಿದರು. ನಂತರ ವಾರ್ಷಿಕ ಕ್ರೀಡೋತ್ಸವದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.








































































































