ನವಿಮುಂಬಯಿಯ ನೆರುಲ್ ಪಶ್ಚಿಮದಲ್ಲಿರುವ ನೋಂದಾಯಿತ ಚಾರಿಟೇಬಲ್ ಟ್ರಸ್ಟ್ ಆಗಿರುವ ನೆರುಲ್ ಜಿಮ್ಖಾನದ ಪ್ರಸ್ತುತ ಗೌರವ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಐಕಳಬಾವ ವಿಕಾಸ್ ಎಚ್ ಶೆಟ್ಟಿಯವರು ತನ್ನ ಮಾದರಿ ಕಾರ್ಯಗಳಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ ಹಾಗೂ ಬಂಟ ಬಾಂಧವರಿಗೆ ಸಹಾಯಹಸ್ತ ಚಾಚುತ್ತಿದ್ದಾರೆ.
ದಿವಂಗತ ಐಕಳಬಾವ ಸರ್ವಾಣಿ ಶೆಟ್ಟಿ ಮತ್ತು ಹಿರಿಯಣ್ಣ ಶೆಟ್ಟಿ ಕೆಂಜೂರು ದಂಪತಿಯ ಪುತ್ರರಾಗಿರುವ ವಿಕಾಸ್ ಶೆಟ್ಟಿಯವರು ಸ್ವಂತ ಉದ್ಯಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಮುಂಬಯಿ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿದ್ದಾರೆ. ಸಮರ್ಥ ನಾಯಕರೂ, ದೂರಗಾಮಿ ಚಿಂತಕರೂ ಆಗಿರುವ ವಿಕಾಸ್ ಶೆಟ್ಟರು ಜವಾಬ್ದಾರಿ ವಹಿಸಿಕೊಂಡಿರುವ ಎಲ್ಲಾ ಸಂಘ ಸಂಸ್ಥೆಗಳಲ್ಲೂ ನಿಸ್ವಾರ್ಥದಿಂದ ದುಡಿಯುವ ಮೂಲಕ ಸಂಘ ಹಾಗೂ ಅದರ ಆಶ್ರಿತರಿಗೆ ಸಹಾಯ ಮಾಡಿಕೊಂಡು ಬರುತ್ತಿದ್ದಾರೆ. ವಿಕಾಸ್ ಶೆಟ್ಟರಿಗೆ ಬಾಲ್ಯದಿಂದಲೂ ಬಡವರ ಬಗ್ಗೆ ವಿಶೇಷ ಪ್ರೀತಿ, ಒಲವು, ಕಾಳಜಿ. ನಾಯಕತ್ವ ಹಾಗೂ ಆಡಳಿತ ನಿರ್ವಹಣೆಯಲ್ಲಿ ಎತ್ತಿದ ಕೈಯಾಗಿರುವ ಇವರು ಕಠಿಣ ಪರಿಶ್ರಮಿ. ತಾನು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ನಿಷ್ಠೆ, ಬದ್ಧತೆ, ಅರ್ಪಣಾ ಮನೋಭಾವನೆ, ಗುಣಮಟ್ಟವನ್ನು ಕಾಪಾಡಿಕೊಂಡು ಬಾಂದವರು ಶಿಸ್ತಿನ ವ್ಯಕ್ತಿಯಾಗಿರುವ ಇವರು ಈವರೆಗೆ ಶುದ್ಧ ಹಸ್ತ ಹಾಗೂ ಪ್ರಾಮಾಣಿಕತೆಯನ್ನು ಉಳಿಸಿ ಕೊಂಡಿರುವವರು. ಆಕರ್ಷಕ ವ್ಯಕ್ತಿತ್ವ ಹೊಂದಿರುವ ಇವರು ಅಜಾತ ಶತ್ರುವಾಗಿದ್ದರೆ. ಆದ್ದರಿಂದಲೇ ನೆರುಲ್ ಜಿಮ್ಖಾನದಲ್ಲಿ ಪ್ರಧಾನ ಕಾರ್ಯದರ್ಶಿಯ ಹೊಣೆ ಸಿಕ್ಕಿದೆ. ಅದಕ್ಕೆ ನ್ಯಾಯ ಒದಗಿಸಿ ಅಹರ್ನಿಶಿ ದುಡಿಯುತ್ತಿದ್ದಾರೆ. ಸುಮಾರು 3783 ಪ್ರಾಥಮಿಕ ಸದಸ್ಯರು ಮತ್ತು 8000 ಕ್ಕೂ ಹೆಚ್ಚಿನ ಕುಟುಂಬ ಸದಸ್ಯರನ್ನು ಹೊಂದಿರುವ ಸಂಸ್ಥೆ ಇದಾಗಿದೆ. ಈ ಸಂಸ್ಥೆಯು ನವಿಮುಂಬಾಯಿ ಪರಿಸರದಲ್ಲಿ ಕ್ರೀಡೆ, ಆರೋಗ್ಯ ಸೇವೆ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತನ್ನದೇ ಆದ ಕೊಡುಗೆಯನ್ನು ಸಮಾಜಕ್ಕೆ ನೀಡುತ್ತಿದೆ. ಇಂತಹ ಬಹುಮುಖ ವ್ಯಕ್ತಿತ್ವದ ವಿಕಾಸ್ ಶೆಟ್ಟರಿಗೆ ಇನ್ನಷ್ಟು ಉಜ್ವಲ ಅವಕಾಶಗಳು ಹಾಗೂ ಮಹತ್ತರ ಹೊಣೆಗಾರಿಕೆಗಳು ಸಿಗಲಿ. ಅವರ ಸೇವೆ ಸಮಾಜ ಹಾಗೂ ಸಮುದಾಯಕ್ಕೆ ಪ್ರಾಪ್ತಿಯಾಗಲಿ ಎಂಬುದು ನಮ್ಮ ಮಾಧ್ಯಮದ ಹಾರೈಕೆ.