ಕ್ರೀಡಾ ಸ್ಪೂರ್ತಿಯೊಂದಿಗೆ ನ್ಯಾಯಯುತವಾಗಿ ಕ್ರೀಡಾ ಸ್ಪರ್ಧೆಗಳು ನಡೆದಾಗ ಆಟಗಾರರಿಗೆ ಮತ್ತು ಸ್ಪರ್ಧಿಗಳಿಗೆ ಸೌಜನ್ಯ, ನೈತಿಕ ನಡವಳಿಕೆ ಮತ್ತು ಸಮಗ್ರತೆಯೊಂದಿಗೆ ಸೋಲು ಮತ್ತು ಗೆಲುವನ್ನು ಸಮಾನಾಂತರವಾಗಿ ಸ್ವೀಕರಿಸುವ ಮನೋಬಲ ದೊರೆಯುತ್ತದೆ. ಇದರಿಂದ ಕ್ರೀಡಾಸಕ್ತರಲ್ಲಿ ಆಕಾಂಕ್ಷೆಗಳು ಮತ್ತಷ್ಟು ಚಿಗುರಿಕೊಂಡು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸ್ಪೂರ್ತಿಯನ್ನು ನೀಡುತ್ತದೆ. ಯಾವುದೇ ಸ್ಪರ್ಧಿ ಸೋಲು ಗೆಲುವಿಗಾಗಿ ಅಸೆ ಪಡದೆ ತಾನು ಕ್ರೀಡೆಯಲ್ಲಿ ಪಾಲು ಪಡೆದು ಹೇಗೆ ಆಡಿದ್ದೇನೆ ಎಂಬುದು ಮುಖ್ಯವಾಗಬೇಕು. ರಚನಾತ್ಮಕ ಸಂಬಂಧಗಳನ್ನು ಸೇರಿಸಿಕೊಂಡು ಪರಸ್ಪರ ವ್ಯಕ್ತಿಗತ ಪರಿಚಯ ಮತ್ತು ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಸಂಘ ಸಂಸ್ಥೆಗಳ ಮಹತ್ವ ಬಹಳಷ್ಟಿದೆ. ಇದಕ್ಕೆ ಸಂಬಂದಪಟ್ಟಂತೆ ಇಂತಹ ಕ್ರೀಡಾ ಕೂಟಗಳು ನಡೆಯಬೇಕು. ಪುಣೆ ಬಂಟರ ಸಂಘದ ಮೂಲಕ ವರ್ಷಂಪ್ರತಿ ಸಮಾಜ ಬಾಂಧವರಿಗಾಗಿ ಕ್ರೀಡಾಕೂಟ ನಡೆಯುತ್ತಾ ಬರುತ್ತಿದೆ. ಇದರಿಂದ ಸಮಾಜದ ನಮ್ಮ ಸಂಘಟನಾ ಸಾಮರ್ಥ್ಯಕ್ಕೆ ಬಲ ಸಿಗುತ್ತದೆ ಮತ್ತು ಕ್ರೀಡಾ ಕೂಟಗಳು ಸ್ಪರ್ಧಾತ್ಮಕವಾಗಿ ನಡೆದರೆ ಸಂಘಟಿತರಾಗಳು ವೇದಿಕೆಯಾಗುತ್ತದೆ ಎಂದು ಪುಣೆ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ, ತಮನ್ನಾ ಗ್ರೂಪ್ ಆಫ್ ಹೋಟೆಲ್ಸ್ ನ ಆಡಳಿತ ನಿರ್ದೇಶಕ ಪ್ರಭಾಕರ್ ವಿ ಶೆಟ್ಟಿ ನುಡಿದರು.
ಬಂಟರ ಸಂಘ ಪುಣೆ ಇದರ ವತಿಯಿಂದ ಬಂಟ ಸಮಾಜ ಬಾಂಧವರಿಗಾಗಿ ನಡೆಯುವ ವಾರ್ಷಿಕ ಕ್ರೀಡಾಕೂಟವು ಜನವರಿ 7 ರವಿವಾರದಂದು ಪುಣೆಯ ಮುಕುಂದ್ ನಗರದ ಮಹಾರಾಷ್ಟ್ರೀಯ ಮಂಡಲ ಕಟಾರಿಯಾ ಕಾಲೇಜ್ ಗ್ರೌಂಡ್ ನಲ್ಲಿ ಜರಗಿತು. ಈ ಕ್ರೀಡಾ ಕೂಟದ ಮುಖ್ಯ ಅತಿಥಿಯಾಗಿ ಆಗಮಿಸಿ ಕ್ರೀಡಾ ಕೂಟ ಉದ್ಘಾಟಿಸಿದ ಪ್ರಭಾಕರ್ ವಿ ಶೆಟ್ಟಿಯವರು ಮಾತನಾಡಿ, ಪುಣೆ ಬಂಟರ ಸಂಘದ ಸುವರ್ಣ ಮಹೋತ್ಸವ ಈ ವರ್ಷ ನಡೆಯಲಿದ್ದು ಅದಕ್ಕೆ ಪೂರಕವಾಗಿ ಕ್ರೀಡಾ ಕೂಟ ನಡೆಯುತ್ತಿದೆ. ಬಂಟರ ಸಂಘ ಸಮಾಜ ಬಾಂಧವರ ಸೇವೆಯಲ್ಲಿ ಮುಂಚೂಣಿಯಲ್ಲಿ ನಿಂತು ಸೇವಾ ಕಾರ್ಯ ಮಾಡುತಿದ್ದು, ಸಮಾಜದ ಸೇವಾ ಕಾರ್ಯಗಳಿಗೆ ಮತ್ತು ಕ್ರೀಡೆ ಕಲೆಗೆ ಉತ್ತಮ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ. ಇಂದು ದೊಡ್ಡ ಮಟ್ಟದಲ್ಲಿ ಸಮಾಜ ಬಾಂಧವರ ಸಂಘಟನೆಯ ಅನಾವರಣ ಮಾಡಿದಂತೆ ಇಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸಿದೆ. ಇದು ಸಮಾಜದ ಅಭಿವೃದ್ದಿ ಸದೃಡವಾಗಲು ಪೂರಕವಾದ ಕಾರ್ಯವಾಗಿದೆ ಎಂದರು.
ಪುಣೆ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಜರಗಿದ ಕ್ರೀಡಾ ಕೂಟದ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಪುಣೆ ತುಳುಕೂಟದ ಅಧ್ಯಕ್ಷ, ಪುಣೆ ಬಂಟರ ಸಂಘದ ಕ್ಯಾಟರಿಂಗ್ ವಿಬಾಗದ ಕಾರ್ಯಾಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು ಅಶ್ವಥಗುತ್ತು, ವಿಜಯಾ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಅಜಿತ್ ಶೆಟ್ಟಿ, ಪುಣೆ ಬಂಟರ ಸಂಘದ ಕಲ್ಪವೃಕ್ಷ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್. ಶೆಟ್ಟಿ, ಕ್ರೀಡಾ ಕಾರ್ಯಾಧ್ಯಕ್ಷ ವಿವೇಕಾನಂದ ಶೆಟ್ಟಿ, ಮಹಿಳಾ ಕ್ರೀಡಾ ಕಾರ್ಯಾಧ್ಯಕ್ಷೆ ವಿನಯ ಯು .ಶೆಟ್ಟಿ, ಯುವ ವಿಬಾಗದ ಕಾರ್ಯಾಧ್ಯಕ್ಷ ಉದಯ್ ಶೆಟ್ಟಿ, ಉತ್ತರ ವಲಯ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಣೇಶ್ ಪೂಂಜಾ, ದಕ್ಷಿಣ ವಲಯ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಶೆಟ್ಟಿ, ನಾರಾಯಣ ಹೆಗ್ಡೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆಯವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗಣಪತಿ ಸ್ತೋತ್ರ ಪಠಿಸುವ ಮೂಲಕ ಗಣಪತಿ ದೇವರ ಫೋಟೋಗೆ ಪೂಜೆ ಸಲ್ಲಿಸಿ ಕಾಯಿ ಒಡೆದು ಮುಖ್ಯ ಅತಿಥಿ ಪ್ರಭಾಕರ್ ವಿ ಶೆಟ್ಟಿ, ಅಜಿತ್ ಹೆಗ್ಡೆ, ಸುಲತಾ ಶೆಟ್ಟಿಯವರು ದೀಪ ಜ್ಯೋತಿ ಬೆಳಗಿಸಿ ಬಲೂನ್ ಹಾರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕ್ರೀಡಾ ಕಾರ್ಯಾಧ್ಯಕ್ಷ ವಿವೇಕಾನಂದ ಶೆಟ್ಟಿಯವರು ಕ್ರೀಡಾ ಜ್ಯೋತಿ ಬೆಳಗಿಸಿ ಎಲ್ಲಾ ಕ್ರೀಡಾ ಪಟುಗಳೊಂದಿಗೆ ಕ್ರೀಡಾಂಗಣಕ್ಕೆ ಪ್ರದಕ್ಷಿಣೆ ಬಂದರು. ಈ ಸಂದರ್ಭದಲ್ಲಿ ಮುಖ್ಯಅತಿಥಿ ಪ್ರಭಾಕರ್ ಶೆಟ್ಟಿವರನ್ನು ಅಜಿತ್ ಹೆಗ್ಡೆಯವರು ಶಾಲು ಪಲಪುಷ್ಪ ಸ್ಮರಣಿಕೆ ನೀಡಿ ಸತ್ಕರಿಸಿದರು. ತುಳುಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ, ಅಜಿತ್ ಶೆಟ್ಟಿಯವರನ್ನು ಶಾಲು ಹೂಗುಚ್ಛ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಂಟ ಸಮಾಜ ಬಾಂಧವರ ಪುಟಾಣಿಗಳು, ಮಕ್ಕಳು, ಮಹಿಳೆಯರು, ಪುರುಷರಿಗಾಗಿ ವಿವಿಧ ವಯೋಮಿತಿಗನುಗುಣವಾಗಿ ಕ್ರೀಡಾ ಕೂಟ ಸ್ಪರ್ದೆಗಳು ಮುಖ್ಯವಾಗಿ ರನ್ನಿಂಗ್, ಚಾಕಲೇಟ್ ಪಿಕ್ಕಿಂಗ್, ಶಾಟ್ ಬಾಲ್, ಡಿಸ್ಕಸ್ ತ್ರೋ ಮೊದಲಾದ ಆಟೋಟ ಸ್ಪರ್ಧೆಗಳು ಜರಗಿದವು. ಅಲ್ಲದೇ ಇದೇ ಸಂದರ್ಭದಲ್ಲಿ ಬಂಟ ಸಮಾಜ ಭಾಂದವರಿಗಾಗಿ ಪುರುಷ ಮತ್ತು ಮಹಿಳೆಯರಿಗಾಗಿ ವಾಲಿಬಾಲ್, ಥ್ರೋಬಾಲ್, ಹಗ್ಗ ಜಗ್ಗಾಟ ಪಂದ್ಯಾಟಗಳು ನಡೆದವು. ಈ ಕ್ರೀಡಾ ಕೂಟದ ಯಶಸ್ವಿಗೆ ಪುಣೆ ಬಂಟರ ಸಂಘದ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು, ಎಲ್ಲಾ ಸಮಿತಿಯ ಕಾರ್ಯಾಧ್ಯಕ್ಷರುಗಳು, ಮಹಿಳಾ ವಿಬಾಗದ ಪದಾಧಿಕಾರಿಗಳು, ಯುವ ವಿಬಾಗ, ಉತ್ತರ ಮತ್ತು ದಕ್ಷಿಣ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರುಗಳು, ಸದಸ್ಯರುಗಳು ಸಹಕರಿಸಿದರು. ಪುಣೆ ಬಂಟರ ಸಂಘದ ಸಾಮಾಜಿಕ ಮಾಧ್ಯಮ ಸಮಿತಿಯ ಕಾರ್ಯಾಧ್ಯಕ್ಷ ಕಿಶೋರ್ ಹೆಗ್ಡೆಯವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವರದಿ :ಹರೀಶ್ ಮೂಡಬಿದ್ರಿ ಪುಣೆ