ಭಾರತೀಯ ರೆಡ್ಕ್ರಾಸ್ ಸೊಸೈಟಿ (ಐಆರ್ಸಿ ಎಸ್)ಯ ದಕ್ಷಿಣ ಕನ್ನಡ ಜಿಲ್ಲಾ ಘಟಕ ರಾಜ್ಯದಲ್ಲಿಯೇ ಅತ್ಯುತ್ತಮವಾಗಿ ರಕ್ತ ನಿಧಿಯನ್ನು ನಿರ್ವಹಿಸಿ ಅತಿ ಹೆಚ್ಚು ಬಡ ರೋಗಿಗಳಿಗೆ ರಕ್ತ ಪೂರೈಸಿದ ರಾಜ್ಯದ ಅತ್ಯುತ್ತಮ ಘಟಕ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಬೆಂಗಳೂರಿನ ರಾಜಭವನದಲ್ಲಿ ನಡೆದ ರೆಡ್ಕ್ರಾಸ್ ರಾಜ್ಯ ಘಟಕದ ಮಹಾಸಭೆಯಲ್ಲಿ ರಾಜ್ಯಪಾಲ ಹಾಗೂ ಐಆರ್ಸಿಎಸ್ ರಾಜ್ಯ ಘಟಕದ ಅಧ್ಯಕ್ಷ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಜಿಲ್ಲಾ ಘಟಕದ ಚೇರ್ಮನ್ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು. ರಾಜ್ಯ ಘಟಕದ ದ.ಕ. ಜಿಲ್ಲಾ ಪ್ರತಿನಿಧಿ ಯತೀಶ್ ಬೈಕಂಪಾಡಿ, ಜಿಲ್ಲಾ ಘಟಕದ ನಿರ್ದೇಶಕರಾದ ಡಾ. ಸಚ್ಚಿದಾನಂದ ರೈ, ಗುರುದತ್ ಎಂ. ನಾಯಕ್, ಪಿ.ಬಿ. ಹರೀಶ್ ರೈ, ರಾಜ್ಯ ಘಟಕದ ಉಪಾಧ್ಯಕ್ಷ ಗೋಪಾಲ್ ಹೊಸೂರು, ಚೇರ್ಮನ್ ವಿಜಯಕುಮಾರ್ ಪಾಟೀಲ್ ಉಪಸ್ಥಿತರಿದ್ದರು.

ರೆಡ್ಕ್ರಾಸ್ ದ.ಕ. ಶಾಖೆಯ ಬ್ಲಿಡ್ ಬ್ಯಾಂಕ್ನಿಂದ ಸರಕಾರಿ ಲೇಡಿಗೋಷನ್ ಆಸ್ಪತ್ರೆಗೆ ಪ್ರತೀ ತಿಂಗಳು 450ಕ್ಕೂ ಅಧಿಕ ಯೂನಿಟ್ ರಕ್ತವನ್ನು ಉಚಿತವಾಗಿ ನೀಡುತ್ತಿದೆ. ಈಗ ಅತ್ಯುತ್ತಮ ರಕ್ತ ನಿಧಿ ಪ್ರಶಸ್ತಿ ಬಂದಿರುವುದು ಹೆಮ್ಮೆ ತಂದಿದೆ. ಸದಸ್ಯರ ಹಾಗೂ ಸಿಬಂದಿಯ ಜವಾಬ್ದಾರಿಯೂ ಹೆಚ್ಚಾಗಿದೆ. ನಿರಂತರ ರಕ್ತದಾನ ಮಾಡುವ ಜಿಲ್ಲೆಯ ರಕ್ತದಾನಿಗಳಿಗೆ, ರಕ್ತದಾನ ಶಿಬಿರ ಆಯೋಜಿಸಿದ ಸಂಸ್ಥೆಗಳು ಮತ್ತು ಸ್ವಯಂ ಸೇವಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಶಾಂತಾರಾಮ ಶೆಟ್ಟಿ ತಿಳಿಸಿದರು. ಮುಂದಿನ 3 ತಿಂಗಳಲ್ಲಿ ರೆಡ್ಕ್ರಾಸ್ ಶತಮಾನೋತ್ಸವ ಕಟ್ಟಡ ಪೂರ್ಣಗೊಳ್ಳಲಿದೆ. ಮುಂದಿನ ದಿನದಲ್ಲಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿರುವ ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲ ಅಗತ್ಯ ರೋಗಿಗಳಿಗೆ ಉಚಿತವಾಗಿ ರೆಡ್ಕ್ರಾಸ್ ರಕ್ತ ಪೂರೈಸಲಿದೆ ಎಂದು ಅವರು ಈ ಸಂದರ್ಭ ತಿಳಿಸಿದ್ದಾರೆ.











































































































