ಅಧ್ಯಾತ್ಮಿಕತೆಯೊಂದಿಗೆ ಕೂಡಿ ಬದುಕುವ ಕಲೆ, ಜೀವನ ಮೌಲ್ಯ, ಆದರ್ಶಗಳಿಂದ ಸಂಸ್ಕಾರಯುತವಾದ ಜೀವನ ಸಾಧ್ಯ. ನಮ್ಮ ಪೌರಾಣಿಕ ಹಿನ್ನಲೆಯ ಯಕ್ಷಗಾನದಿಂದ ಭಾಷಾ ಶುದ್ದತಿ, ತತ್ವ ಮತ್ತು ಚರಿತ್ರೆಯನ್ನು ತಿಳಿದಂತೆ ಭಕ್ತಿ ಮತ್ತು ಸಂಸ್ಕಾರ ಪಾಠವನ್ನು ಭಜನೆ ಕಳಿಸುತ್ತದೆ. ಸುಜ್ಞಾನದಿಂದ ಕೂಡಿದ ಉತ್ತಮ ವಿಚಾರಗಳೊಂದಿಗೆ ಮಕ್ಕಳಿಗೆ ಸಂಸ್ಕಾರ, ಧರ್ಮದ ಪ್ರಜ್ಞೆಯನ್ನು ಕಳಿಸುವ ಕಾರ್ಯ ಆಗಬೇಕು. ಅದು ಇಂದು ಇಲ್ಲಿ ಉತ್ತಮ ಕಾರ್ಯ ಸೇವಾ ಬಳಗದಿಂದ ನಡೆದಿದೆ. ಭಾರತದ ಮೂಲ ಕೃಷಿ ಸಂಸ್ಕ್ರತಿಯಿಂದ ಹಳ್ಳಿಯಿಂದ ದೇಶದ ಪ್ರಗತಿಯಾದಂತೆ ಋಷಿ ಪರಂಪರೆಯಿಂದ ಸಂಸ್ಕ್ರತಿ, ಧರ್ಮ ಸಂರಕ್ಷಣೆ ಕಾರ್ಯ ಆಗುತ್ತಿದೆ. ತ್ಯಾಗ ಮತ್ತು ಸೇವೆಯಿಂದ ಸಮಾಜದ ಅಭಿವೃದ್ಧಿ ಸಾದ್ಯ. ಪ್ರತಿಯೊಂದು ಉತ್ತಮ ವಿಚಾರಗಳು ಸಂಸ್ಕಾರಯುತವಾಗಿ ನಡೆದರೆ ಸದೃಡ ಸಮಾಜ ನಿರ್ಮಾಣ ಆಗಬಹುದು ಎಂದು ಒಡಿಯೂರು ಶ್ರೀ ಗುರುದೇವ ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಜಿಯವರು ಆಶೀರ್ವಚನ ನೀಡಿದರು.
ನವೆಂಬರ್ 26 ರಂದು ಪುಣೆಯ ಬಾಣೇರ್ ನಲ್ಲಿರುವ ಬಂಟರ ಭವನದ ಓಣಿಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಕೇಂದ್ರದಲ್ಲಿ ಜರಗಿದ ಪುಣೆ ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರ ಮಾತಾ ಮಹಿಳಾ ವಿಕಾಸ ಕೇಂದ್ರದ 20 ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಭಗವದ್ಭಕ್ತರನ್ನು ಉದ್ದೇಶಿಸಿ ಅಶಿರ್ವಚನ ನೀಡಿದ ಶ್ರೀಗಳು ಮೌಲ್ಯಯುತವಾದ ಉತ್ತಮ ವಿಚಾರಗಳು ನಮ್ಮಲ್ಲಿರಬೇಕು. ಜೀವನದಲ್ಲಿ ದಾರಿ ತಪ್ಪಿದರೆ ಮತ್ತು ಮಾತು ತಪ್ಪಿದರೆ ಕಷ್ಟ. ನಡೆ ನುಡಿಯಲ್ಲಿ ಧರ್ಮದ ಮಾರ್ಗ ಅಡಗಿದೆ. ಆತ್ಮಾವಲೋಕನ ಮಾಡಿಕೊಂಡಾಗ ಯಾವುದೇ ಧರ್ಮದ ಚೌಕಟ್ಟಿನಲ್ಲಿ ತನ್ನ ಆತ್ಮದ ಉದ್ಧಾರದ ಮೂಲ ಸಿಗಬಹುದು. ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ. ಮಕ್ಕಳಿಗೆ ನಮ್ಮ ಸಂಸ್ಕ್ರತಿ, ಸಂಸ್ಕಾರ ಕಲಿಸುವ ಕಾರ್ಯ ಮುಂದುವರಿಯಲಿ. ಅಂತೆಯೇ ಪುಣೆಯ ಸದ್ಭಕ್ತರ ಸೇವಾ ಸಹಕಾರ ಸಿಕ್ಕಿದೆ. ಈ ಪುಣೆಯ ಹೆಮ್ಮೆ ಬಂಟರ ಭವನದಲ್ಲಿ ಸೇರಿದ ಎಲ್ಲಾ ಭಗವದ್ಭಕ್ತತರಿಗೆ ಶ್ರೀ ದತ್ತಾತ್ರೇಯ ಶ್ರೀ ಹನುಮಂತನ ಕೃಪೆ ಸದಾ ಇರಲಿ ಎಂದು ನುಡಿದರು.
ಶ್ರೀಗಳನ್ನು ವಾದ್ಯ ಘೋಷ, ಕಲಶ ಜ್ಯೋತಿಯೊಂದಿಗೆ ಬರಮಾಡಿಕೊಳ್ಳಲಾಯಿತು. ಶ್ರೀಗಳನ್ನು ಬಳಗದ ಅಧ್ಯಕ್ಷ ಪ್ರಭಾಕರ ಶೆಟ್ಟಿ ದಂಪತಿಗಳು ಹೂ ಹಾರ ಹಾಕಿ ಸ್ವಾಗತಿಸಿದರು. ಸಾದ್ವಿ ಮಾತೆಯವರನ್ನು ಕೇಂದ್ರದ ಅಧ್ಯಕ್ಷೆ ಜಯಲಕ್ಷ್ಮಿ ಪಿ ಶೆಟ್ಟಿಯವರು ಹೂ ಹಾರ ಹಾಕಿ ಸ್ವಾಗತಿಸಿದರು. ಧಾರ್ಮಿಕ ಕಾರ್ಯಕ್ರಮದಂಗವಾಗಿ ಶ್ರೀಗಳ ಪಾದುಕಾ ಪೂಜೆಯನ್ನು ಪುಣೆ ಭಕ್ತರ ಪರವಾಗಿ ಪುಣೆಯ ಖ್ಯಾತ ಉದ್ಯಮಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರವೀಣ್ ಶೆಟ್ಟಿ ಪುತ್ತೂರು, ಆಶಾ ಪಿ ಶೆಟ್ಟಿ ದಂಪತಿಗಳು ಸೇರಿ ನೆರವೇರಿಸಿದರು. ಮುತ್ತೈದೆಯರು ಆರತಿ ಬೆಳಗಿದರು. ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಸಾದ್ವಿ ಶ್ರೀ ಮಾತಾನಂದಮಯಿಯವರು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳೆಪ್ಪಾಡಿ ಗುತ್ತು ಆಗಮಿಸಿದ್ದು, ಗೌರವ ಅತಿಥಿಗಳಾಗಿ ಪುಣೆ ಬಂಟರ ಸಂಘದ ಅಧ್ಯಕ್ಷ ಶ್ರೀ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲ್ ಬೆಟ್ಟು, ಮುಂಬಯಿ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ದಾಮೋದರ್ ಶೆಟ್ಟಿ ನೆರೋಳ್, ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ, ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ್ ಪೂಜಾರಿ ಕಡ್ತಲ, ಪುಣೆ ತುಳುಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘ ಕಾತ್ರಜ್ ಪುಣೆ ಅಧ್ಯಕ್ಷ ಸುಭಾಷ್ ಶೆಟ್ಟಿ ಉಪಸ್ಥಿತರಿದ್ದರು.
ಪುಣೆ ಬಳಗದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಪಿ ಶೆಟ್ಟಿಯವರು ವೇದಿಕೆಯಲ್ಲಿದ್ದು, ಪೂಜ್ಯ ಶ್ರೀಗಳು, ಸಾದ್ವಿ ಮಾತೆ, ಅತಿಥಿ ಗಣ್ಯರು 20ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಶುಭ ಕೋರಿದರು. ಮುತ್ತೈದೆಯರು ಪ್ರಾರ್ಥನೆಗೈದರು. ಪುಣೆ ಬಳಗದ ಅಧ್ಯಕ್ಷ ಪ್ರಭಾಕರ ಶೆಟ್ಟಿಯವರು ಸ್ವಾಗತಿಸಿದರು. ಅಥಿತಿ ಗಣ್ಯರನ್ನು ಸದಾನಂದ ಕೆ ಶೆಟ್ಟಿ, ಉಷಾಕುಮಾರ್ ಶೆಟ್ಟಿ, ನಾರಾಯಣ ಶೆಟ್ಟಿ, ಪದ್ಮನಾಭ ಶೆಟ್ಟಿ, ರೋಹಿತ್ ಶೆಟ್ಟಿ, ರಂಜಿತ್ ಶೆಟ್ಟಿ, ಸುಧಾಕರ್ ಶೆಟ್ಟಿಯವರು ಫಲ ತಾಂಬೂಲ ನೀಡಿ ಗೌರವಿಸಿದರು. ಪೂಜ್ಯ ಸ್ವಾಮೀಜಿಯವರು ಅಥಿತಿ ಗಣ್ಯರಿಗೆ ಪಲ ಮಂತ್ರಾಕ್ಷತೆ ನೀಡಿ ಹರಸಿದರು. ಬಳಗದ ಪ್ರ.ಕಾರ್ಯದರ್ಶಿ ರೋಹಿತ್ ಶೆಟ್ಟಿ ನಗ್ರಿಗುತ್ತು ಬಳಗದ ಸಮಾಜ ಸೇವಾ ಕಾರ್ಯಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತಾನಾಡಿದರು. ಈ ಸಂದರ್ಭದಲ್ಲಿ ಬಳಗದ ಸೇವಾರ್ಥಿಗಳಿಗೆ ಪ್ರಶಸ್ತಿ ನೀಡಿ ಹರಸಿದರು. ಸಾದ್ವಿ ಮಾತಾನಂದಮಯಿ ಅಶಿರ್ವಚನ ನೀಡಿದರು.
ಮುಖ್ಯ ಅತಿಥಿ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲ್ ಬೆಟ್ಟು ಮಾತನಾಡಿ, ನಮ್ಮ ಸಂಸ್ಕಾರ, ಸಂಸ್ಕ್ರತಿ ಏನಿದೆಯೋ ಅದರ ಪ್ರಕಾರವಾಗಿ ಸಮಾಜ ಬೆಳೆಯಬೇಕು. ಧರ್ಮ ಪ್ರಜ್ಞೆಯ ಉತ್ತಮ ವಿಚಾರಗಳಿಗೆ ಸಮಾಜ ಹೊಂದಿಕೊಂಡು ಹೋದರೆ ಸದೃಡ ಸಮಾಜ ನಿರ್ಮಾಣವಾಗುತ್ತದೆ. ನಿಸ್ವಾರ್ಥದಿಂದ ಸೇವೆ ಮಾಡುವ ಭಾಗ್ಯ ನಮಗೆ ದೇವರು ಕರುಣಿಸಿದ್ದಾರೆ. ಅದನ್ನು ನಿಷ್ಕಳಂಕ ಮನಸ್ಸಿನಿಂದ ಮಾಡಿ ತೋರಿಸುವುದು ನಮ್ಮ ಕರ್ತವ್ಯ. ಉತ್ತಮ ಕಾರ್ಯಗಳಿಗೆ ಸಹಕಾರ, ಪ್ರೋತ್ಸಾಹ ನೀಡುವುದು ಕೂಡಾ ನಮ್ಮ ಕಾರ್ಯ. ದೈವ ದೇವರು ಮತ್ತು ಗುರುವಿನ ಆಶೀರ್ವಾದದಿಂದ ನಮ್ಮ ಸತ್ಕರ್ಮಗಳು ತನ್ನಿಂತಾನೆ ನಿರ್ವಿಘ್ನವಾಗಿ ನಡೆಯುತ್ತವೆ ಎಂಬುದು ನೂರಕ್ಕೆ ನೂರರಷ್ಟು ಸತ್ಯ. ಜ್ಞಾನ ಧಾರೆ ನೀಡುವ ಗುರುವಿನ ಆಶೀರ್ವಾದ ನಮಗೆ ಸಿಗಬೇಕು. ಗುರು ಚರಣದ ಸ್ಪರ್ಶ ನಮ್ಮನ್ನು ಮತ್ತಷ್ಟು ಶುದ್ದವಾಗಿಸಬಹುದು. ಧರ್ಮ ಪ್ರಜ್ಞೆಯೊಂದಿಗೆ ನಮ್ಮನ್ನು ಸದೃಡವಾಗಿಸಬಹುದು. ಹಾಗೆಯೇ ಸಮಾಜವನ್ನು, ದೇಶವನ್ನು ಕಟ್ಟುವ ಕಾರ್ಯವನ್ನು ಮಾಡಬೇಕು. ಪುಣೆಯ ಶ್ರೀ ಗುರುದೇವ ಸೇವಾ ಬಳಗ ಉತ್ತಮ ಸೇವಾ ಕಾರ್ಯಗಳ ಮೂಲಕ ಕಾರ್ಯಗೈಯುತ್ತಿದೆ. ಗುರುವಿನ ಸತ್ಕಾರ್ಯಗಳಲ್ಲಿ ನಾವು ಕೂಡ ಭಾಗಿಗಳಾಗೋಣ ಎಂದರು.
ಮತ್ತೋರ್ವ ಅತಿಥಿ ರಾಕೇಶ್ ಶೆಟ್ಟಿ ಬೆಳ್ಳಾರೆ ಮಾತನಾಡಿ, ಒಡಿಯೂರು ಕ್ಷೇತ್ರದ ಮುಖಾಂತರ ಸಮಾಜದ ಒಳಿತನ್ನು ಬಯಸುವ ಸಮಾಜಮುಖಿ ಸೇವೆಯಲ್ಲಿ ನಗುವನ್ನು ಕಾಣುವ ಒಡಿಯೂರು ಗುರುವಿನಂತಹವರಿಗೆ ನಮ್ಮ ಭಕ್ತರ ಸಹಕಾರ ಸದಾ ಇರುತ್ತದೆ. ಕ್ಷೇತ್ರ ಇಂದು ಬೃಹತ್ ರೂಪದಲ್ಲಿ ಬೆಳೆದಿದೆ. ಹಾಗೆಯೇ ಸೇವಾ ಕಾರ್ಯಗಳು ನಿರಂತವಾಗಿ ನಡೆಯುತ್ತಿವೆ. ಇಂತಹ ಕ್ಷೇತ್ರದಲ್ಲಿ ನಡೆಯುವ ಸೇವಾ ಕಾರ್ಯಗಳನ್ನು ಮತ್ತು ದೇವಸ್ಥಾನದ ಸೊಬಗನ್ನು ನಮ್ಮ ಮಕ್ಕಳಿಗೆ ಜನಮಾನಸಕ್ಕೆ ತಿಳಿಸುವ ಕಾರ್ಯ ಆಗಬೇಕು ಎಂದರು. ಪುಣೆ ತುಳುಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು ಮಾತನಾಡಿ, ಗುರುವಿನ ಮಾರ್ಗದರ್ಶನದಲ್ಲಿ ಸನ್ಮಾರ್ಗದಲ್ಲಿ ನಡೆದರೆ ಜೀವನದ ಪಯಣ ಸುಖಕರವಾಗಿ ಇರುತ್ತದೆ. ಯಾವುದೇ ಅಧಿಕಾರ ಪದವಿ, ಸನ್ಮಾನ, ಸತ್ಕಾರದ ಆಸೆಯನ್ನು ಮೀರಿ ನಾವು ಮಾಡುವ ಸೇವಾ ಕಾರ್ಯ ಸಮಾಜಕ್ಕೆ ಅರ್ಪಣೆಯಾದಾಗ ಸಮಾಜ ನಮ್ಮನ್ನು ಗುರುತಿಸುತ್ತದೆ. ಅದುವೇ ನಮಗೆ ದೊಡ್ಡ ಸತ್ಕಾರ. ನಾವು ತುಳುಕೂಟದ ಮುಖೇನ ಇದೇ ಉದ್ದೇಶವನ್ನು ಇಟ್ಟುಕೊಂಡು ಮುನ್ನಡೆಯುತ್ತಿದ್ದೇವೆ. ಗುರುಗಳ ಆಶಿರ್ವಾದ ಸದಾ ನಮಗೆ ಇರಲಿ ಎಂದರು.
ವೇದಿಕೆಯಲ್ಲಿದ್ದ ಗಣ್ಯರು ಶುಭ ನುಡಿಗಳನ್ನಾಡಿದರು. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ ಇವರಿಂದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ವೀರಮಣಿ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಿತು. ಶ್ವೇತಾ ಎಚ್ ಮೂಡಬಿದ್ರಿ ಮತ್ತು ತಂಡದ ನಿರ್ದೇಶನದಲ್ಲಿ ಶ್ರೀ ಗುರುದೇವ ಚಿಣ್ಣರ ಬಳಗ ಮತ್ತು ಸದಸ್ಯರಿಂದ ಕುಣಿತ ಭಜನೆ ನಡೆಯಿತು. ಮುಂಬಯಿ, ನಾಸಿಕ್, ಔರಂಗಾಬಾದ್ ಸೇರಿದಂತೆ ಹೆಚ್ಚಿನ ಸಂಖ್ಯೆಯ ಭಗವದ್ಭಕ್ತರು ಪ್ರಸಾದ ಸ್ವೀಕರಿಸಿದರು. ಈ ವಾರ್ಷಿಕೋತ್ಸವದ ಯಶಸ್ವಿಗೆ ಪುಣೆ ಬಳಗದ ಸದಸ್ಯರು ಹಾಗೂ ಮಹಿಳಾ ಕೇಂದ್ರದ ಸದಸ್ಯೆಯರು ಶ್ರಮಿಸಿದರು. ತಾರಾನಾಥ್ ಶೆಟ್ಟಿ ಮಡಂತ್ಯಾರ್ ಮತ್ತು ಬಳಗದ ಪ್ರ ಕಾರ್ಯದರ್ಶಿ ರೋಹಿತ್ ಶೆಟ್ಟಿ ನಗ್ರಿಗುತ್ತು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಚಿತ್ರ ವರದಿ : ಹರೀಶ್ ಮೂಡಬಿದ್ರೆ