ದೇಸಿ ಹಾಗೂ ಇತಿಹಾಸಿಕವಾದ ಕಂಬಳ ಕ್ರೀಡೆಗೆ ಹೆಚ್ಚಿನ ಸಹಕಾರ ಕೊಡಲಾಗುವುದು. ಈ ನಿಟ್ಟಿನಲ್ಲಿ 20 ಕಂಬಳಗಳಿಗೆ ತಲಾ 5ಲಕ್ಷ ರೂ. ಗಳಂತೆ 1 ಕೋಟಿ ರೂ. ಸಹಾಯ ಧನವನ್ನು ಈ ಹಿಂದಿನಂತೆ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. ಅರಮನೆ ಮೈದಾನದಲ್ಲಿ ‘ಬೆಂಗಳೂರು ಕಂಬಳ -ನಮ್ಮ ಕಂಬಳ’ದ ಕರೆಪೂಜೆ (ಗುದ್ದಲಿ ಪೂಜೆ) ನೆರವೇರಿಸಿ ಅವರು ಮಾತನಾಡಿ, ಕಂಬಳಕ್ಕೆ ಸಹಾಯಧನ ಬಿಡುಗಡೆ ವಿಚಾರವಾಗಿ ಮುಖ್ಯಮಂತ್ರಿಗಳು ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಜತೆ ಚರ್ಚೆ ನಡೆಸುತ್ತೇವೆ. ದ.ಕ. ಮತ್ತು ಉಡುಪಿ ಜಿಲ್ಲೆಯ ಸಮಾಜಗಳ ಸಂಘಟನೆಗೆ ಒಂದು ನೆಲೆ ಬೇಕು ಎಂದು ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ. ಎಲ್ಲರೂ ಒಟ್ಟಾಗಿ ಸರಕಾರಕ್ಕೆ ಮನವಿ ಸಲ್ಲಿಸಿ ಎಂದರು.
ದ. ಕ. ದ ಆಚರಣೆ ಬೆಂಗಳೂರಿನಲ್ಲೂ ನಡೆಯಲಿ :
ದಕ್ಷಿಣ ಕನ್ನಡ ಶ್ರೀಮಂತ ಜನಪದ ಆಚರಣೆಗಳನ್ನು ಹೊಂದಿದ್ದು, ಅಲ್ಲಿನ ಆಚರಣೆ ಬೆಂಗಳೂರಿನಲ್ಲೂ ನಡೆಯಲಿ. ಕರಾವಳಿಯ ಯುವಕರು ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದು, ಸಾವಿರಾರು ಯುವಕರು ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಈ ಐತಿಹಾಸಿಕ ಕಂಬಳ ಆಯೋಜನೆ ಮಾಡುತ್ತಿರುವುದಕ್ಕೆ ನಮ್ಮ ಸಹಕಾರ ಎಂದಿಗೂ ಇರುತ್ತದೆ ಎಂದವರು ವಿವರಿಸಿದರು. ದ.ಕ. ದ ಜನರು ಅವರ ಸಂಸ್ಕೃತಿ ಉಳಿಸಿಕೊಳ್ಳಲು ಬದ್ಧತೆಯಿಂದ ಇಲ್ಲಿ ಸೇರಿದ್ದಾರೆ. ಬೆಂಗಳೂರು ಕಂಬಳಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ಸರಕಾರ ನೀಡುತ್ತದೆ. ನಡೆ ಮುಂದೆ, ನಡೆ ಮುಂದೆ ನುಗ್ಗಿ ನಡೆ ಮುಂದೆ ಎಂದು ಮುನ್ನಡೆಯಬೇಕು. ಯಾವುದೇ ಅಡಚಣೆಗಳಿಗೆ ಕುಗ್ಗಬಾರದು ಎಂದರು.
ನಮ್ಮ ಸಂಸ್ಕೃತಿಯನ್ನು ಉಳಿಸಿ, ಪರಿಚಯಿಸಬೇಕು ಎಂದು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ದ. ಕ. ಹಾಗೂ ಉಡುಪಿ ಜಿಲ್ಲೆಯ ಜನರು ಒಂದಾಗಿರುವುದು ಸಂತೋಷದ ವಿಚಾರ ಎಂದು ತಿಳಿಸಿದರು.
ಶಾಸಕರಾದ ಅಶೋಕ್ ಕುಮಾರ್ ರೈ, ರಿಜ್ವಾನ್ ಹರ್ಷದ್, ಎ.ಎನ್. ಹ್ಯಾರೀಸ್, ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಸಂಗೀತ ನಿರ್ದೇಶಕ ಗುರು ಕಿರಣ್ ಶೆಟ್ಟಿ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಎಂ ಆರ್ ಜಿ ಗ್ರೂಪ್ ನ ಆಡಳಿತ ನಿರ್ದೇಶಕ ಕೆ ಪ್ರಕಾಶ್ ಶೆಟ್ಟಿ, ಉಮೇಶ್ ಶೆಟ್ಟಿ, ಗುಣರಂಜನ್ ಶೆಟ್ಟಿ, ಉದಯ್ ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ, ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು.