ನಿಜವಾದ ಪ್ರೀತಿಗೆ ಬಣ್ಣ ಬಣ್ಣದ ಮಾತುಗಳು ಬೇಕಾಗಿಲ್ಲ, ಸರ್ಪ್ರೈಸ್ ಗಿಫ್ಟ್ ಗಳ ಆಗತ್ಯವಿಲ್ಲ, ಆಸ್ತಿ – ಅಂತಸ್ತು ಲೆಕ್ಕಕ್ಕೇ ಬರೋದಿಲ್ಲ. ಅಲ್ಲಿ ಬೇಕಾಗಿರೋದು ಪರಸ್ಪರ ಪ್ರೀತಿ, ನಂಬಿಕೆ, ವಿಶ್ವಾಸ. ಜೊತೆಗೊಂದು ಭವಿಷ್ಯದ ಭರವಸೆ. ಈ ಅಂಶಗಳನ್ನು ಮೂಲವಾಗಿಟ್ಟುಕೊಂಡು ಅದನ್ನು ಅಚ್ಚುಕಟ್ಟಾಗಿ ಮನಮುಟ್ಟುವಂತೆ ಕಟ್ಟಿ ಕೊಟ್ಟಿರುವ ಚಿತ್ರ ‘ಸಪ್ತಸಾಗರದಾಚೆ ಎಲ್ಲೋ’. ಈ ಸಿನಿಮಾದ ಬಗ್ಗೆ ಒಂದೇ ಮಾತಲ್ಲಿ ಹೇಳಬೇಕಾದರೆ ನೋಡ ನೋಡುತ್ತಲೇ ಕಾಡುವ ಸಿನಿಮಾ. ಆ ಮಟ್ಟಿಗೆ ನಿರ್ದೇಶಕ ಹೇಮಂತ್ ಒಂದು ಸುಂದರವಾದ ಕಥೆಯನ್ನು ಅಷ್ಟೇ ಸೊಗಸಾಗಿ ಹೆಣೆದು ಪ್ರೇಕ್ಷಕರ ಮಡಿಲಿಗೆ ಹಾಕಿದ್ದಾರೆ.
‘ಸಪ್ತಸಾಗರದಾಚೆ ಎಲ್ಲೋ’ ಒಂದು ಔಟ್ ಅಂಡ್ ಔಟ್ ಲವ್ಸ್ಟೋರಿ. ಹಾಗಂತ ಇದು ಸಾದ – ಸೀದಾ ಲವ್ಸ್ಟೋರಿ ಯಲ್ಲ, ಇಂಟೆನ್ಸ್ ಲವ್ಸ್ಟೋರಿ. ಈ ಲವ್ ಸ್ಟೋರಿಗೆ ಹಲವು ಮಗ್ಗುಲುಗಳಿವೆ. ಪ್ರೀತಿ, ದ್ವೇಷ, ಸ್ವಾರ್ಥ, ಮೋಸ. ಹೀಗೆ ವಿವಿಧ ಆಯಾಮಗಳೊಂದಿಗೆ ಸಿನಿಮಾ ಸಾಗುವುದು ವಿಶೇಷ.
ಹಾಗಂತ ಯಾವುದನ್ನೂ ಇಲ್ಲಿ ಅತಿಯಾಗಿ ತೋರಿಸಿಲ್ಲ. ಎಲ್ಲವೂ ಮೂಲಕಥೆಯಲ್ಲಿ ಹಾಸುಹೊಕ್ಕಾಗಿದೆ. ಮನು-ಪ್ರಿಯಾಳ ಸರಳ ಸುಂದರ ಪ್ರೇಮಕಥೆಯೊಂದಿಗೆ ಸಿನಿಮಾ ಆರಂಭವಾಗುತ್ತದೆ. ಅವರ ಕನಸು, ಭವಿಷ್ಯದ ಭರವಸೆ, ಪರಸ್ಪರ ಅರ್ಥಮಾಡಿಕೊಂಡಿರುವ ರೀತಿ.. ಈ ಅಂಶದೊಂದಿಗೆ ಸಾಗುವ ಕಥೆಯಲ್ಲೊಂದು ತಿರುವು. ಅಲ್ಲಿಂದ ಸಿನಿಮಾದ ಬಣ್ಣ, ಓಘ ಎಲ್ಲವೂ ಬದಲು. ಕಥೆ ಹೆಚ್ಚು ಗಂಭೀರವಾಗುತ್ತಾ ಸಾಗುವ ಜೊತೆಗೆ ಹೆಚ್ಚಿನ ಕುತೂಹಲಕ್ಕೆ ನಾಂದಿ.
ಮೊದಲೇ ಹೇಳಿದಂತೆ ಲವ್ಸ್ಟೋರಿಯಲ್ಲಿ ಇರಬೇಕಾದ ಬಣ್ಣ ಬಣ್ಣದ ಮಾತುಗಳು, ಕಲರ್ಫುಲ್ ಹಾಡುಗಳು, ನಾಯಕ – ನಾಯಕಿಯ ರೊಮ್ಯಾನ್ಸ್. ಇವುಗಳಿಂದ ‘ಸಪ್ತ ಸಾಗರ’ ಮುಕ್ತವಾಗಿದೆ. ಆದರೂ ಸಿನಿಮಾ ಕಾಡುತ್ತದೆ ಎಂದರೆ ಅದಕ್ಕೆ ಸಿನಿಮಾದ ಕಥೆ ಹಾಗೂ ಕಟ್ಟಿಕೊಟ್ಟಿರುವ ರೀತಿ ಕಾರಣ. ಮೂಲಕಥೆ ಹಾಗೂ ಆಶಯ ಸ್ಪಷ್ಟವಾಗಿದ್ದಾಗ ಭಾಷೆ, ಪರಿಸರ ಯಾವುದೂ ಮುಖ್ಯವಾಗುವುದಿಲ್ಲ. ಇಲ್ಲೂ ಅಷ್ಟೇ ಭಾಷೆ, ಪರಿಸರದ ಹಂಗು ಮೀರಿ ‘ಸಪ್ತ’ ಪ್ರೇಕ್ಷಕರ ಮನಸ್ಸು ಗೆಲ್ಲುತ್ತಾ ಹೋಗುತ್ತದೆ.
ಸಾಮಾನ್ಯವಾಗಿ ಸಿನಿಮಾಗಳು ಆರಂಭವಾಗಿ ಕಥೆ ತೆರೆದುಕೊಳ್ಳುವ ಹೊತ್ತಿಗೆ ಮಧ್ಯಂತರ ಬಂದಿರುತ್ತದೆ. ಆದರೆ, ನಿರ್ದೇಶಕ ಹೇಮಂತ್ ಸಿನಿಮಾದ ಆರಂಭವನ್ನೇ ಕಥೆಯೊಂದಿಗೇ ಮಾಡಿದ್ದಾರೆ. ಹಾಗಾಗಿ, ಪ್ರೇಕ್ಷಕನಿಗೂ ಸಿನಿಮಾ ಆರಂಭದಿಂದಲೇ ಆಪ್ತವಾಗುತ್ತಾ ಸಾಗುವುದು ಈ ಸಿನಿಮಾದ ಪ್ಲಸ್ ಪಾಯಿಂಟ್ ಚಿತ್ರದ ಕೆಲವು ಅಂಶಗಳನ್ನು ತುಂಬಾ ಸೊಗಸಾಗಿ ಕಟ್ಟಿಕೊಡಲಾಗಿದೆ. ಅದರಲ್ಲೊಂದು ನಾಯಕಿ ಬಾಳಲ್ಲಿ ಬರುವ ಸನ್ನಿವೇಶ ಹಾಗೂ ನಾಯಕನ ಸಿಟ್ಟಿನ ಕಟ್ಟೆ ಒಡೆಯುವುದು. ಈ ತರಹದ ಹಲವು ಸನ್ನಿವೇಶಗಳು ಸಿನಿಮಾವನ್ನು ಮತ್ತಷ್ಟು ಹತ್ತಿರವಾಗಿಸುತ್ತವೆ.
ಇನ್ನು, ಈ ಸಿನಿಮಾದ ಹೈಲೈಟ್ಗಳಲ್ಲಿ ಸಂಭಾಷಣೆ ಕೂಡಾ ಒಂದು. ತುಂಬಾ ಗಂಭೀರವಾದ ಹಾಗೂ ಅತಿ ಎನಿಸದ ಮಾತುಗಳು “ಸಪ್ತ’ ಸುಂದರವಾಗಿದೆ. ಉದಾಹರಣೆಗೆ, “ನಾವು ಮನುಷ್ಯರಾಗಿ ಹುಟ್ಟಿಲ್ಲ…ಮನುಷ್ಯರಾಗೋಕೆ ಹುಟ್ಟಿದ್ದೀವಿ..’, “ಹೆಣ್ಣಿನ ಕಣ್ಣಲ್ಲೇ ನಿಜವಾದ ಪ್ರೀತಿ ಕಾಣಿಸೋದು..’, “ಕೆಲವು ತಪ್ಪುಗಳಿಗೆ ಶಿಕ್ಷೆ ಇದೆ, ಆದ್ರೆ ಕ್ಷಮೆ ಇಲ್ಲ..’, “ಕ್ಷಮಿಸಿಬಿಡೋದು ಸುಲಭ, ಆದರೆ ಮರೆಯೋದು ಕಷ್ಟ..’ ಇಂತಹ ತೂಕಭರಿತ ಸಂಭಾಷಣೆಗಳು ಸಿನಿಮಾದ ಕಥೆಗೆ ಹೆಚ್ಚು ಪೂರಕವಾಗಿವೆ.
ಇನ್ನು ಚಿತ್ರದಲ್ಲಿ ಅತಿಯಾದ ಪಾತ್ರಗಳಿಲ್ಲ. ಬರುವ ಬೆರಳೆಣಿಕೆಯ ಪಾತ್ರಗಳು ಸಿನಿಮಾದಲ್ಲಿ ತನ್ನ ಇರುವಿಕೆಯನ್ನು ಸಾಬೀತುಪಡಿಸಲು ಸಫಲವಾಗಿವೆ. ಅಂದಹಾಗೆ, ಇದು ಚಿತ್ರದ ಮೊದಲ ಭಾಗ. ಇಲ್ಲಿ ಸರಳ ಸುಂದರ ಪ್ರೇಮಕಥೆಯಾದರೆ, ಪಾರ್ಟ್ – 2ನಲ್ಲಿ ಮತ್ತೊಂದು ಅಚ್ಚರಿ ಕಾದಿದೆ. ಅಲ್ಲಿನ ಕೆಲವು ದೃಶ್ಯಗಳನ್ನು ತೋರಿಸುವ ಮೂಲಕ ‘ಸಪ್ತಸಾಗರದಾಚೆ ಎಲ್ಲೋ ಸೈಡ್-ಬಿ’ ಕುತೂಹಲವನ್ನು ಚಿತ್ರತಂಡ ಹೆಚ್ಚಿಸಿದೆ.
ಮನು ಆಗಿ ನಾಯಕ ರಕ್ಷಿತ್ ಶೆಟ್ಟಿ ಇಷ್ಟವಾಗುತ್ತಾರೆ. ಅವರ ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ತುಂಬಾ ವಿಭಿನ್ನವಾದ ಪಾತ್ರ. ಮಾತು ಕಡಿಮೆ. ಆದರೆ ಭಾವನೆಗಳ ಮೂಲಕವೇ ವ್ಯಕ್ತಪಡಿಸುವಂತಹ ಪಾತ್ರ. ಅದನ್ನು ರಕ್ಷಿತ್ ತುಂಬಾ ಅಚ್ಚುಕಟ್ಟಾಗಿ ಮಾಡಿದ್ದಾರೆ. ಪ್ರೀತಿ, ಕನಸು, ವೇದನೆ, ಭರವಸೆ, ಸಿಟ್ಟು. ಎಲ್ಲವೂ ಮಿಳಿತವಾಗಿರುವ ಪಾತ್ರವನ್ನು ರಕ್ಷಿತ್ ಆವರಿಸಿಕೊಂಡಿದ್ದಾರೆ. ಈ ಸಿನಿಮಾದ ಮತ್ತೊಂದು ಅಚ್ಚರಿ ಎಂದರೆ ನಾಯಕಿ ರುಕ್ಮಿಣಿ ವಸಂತ್. ಗ್ಲಾಮರ್ನ ಹಂಗಿಲ್ಲದ ಸರಳ ಸುಂದರಿಯಾಗಿ ಕಾಣಿಸಿಕೊಂಡಿರುವ ರುಕ್ಮಿಣಿ ತಮ್ಮ ನಟನೆ ಮೂಲಕ ಬೇಗನೇ ಪ್ರೇಕ್ಷಕರಿಗೆ ಬೇಗನೇ ಕನೆಕ್ಟ್ ಆಗುತ್ತಾರೆ. ಇಡೀ ಸಿನಿಮಾದುದ್ದಕ್ಕೂ ಸಾಗಿಬರುವ ತನ್ನ ಪಾತ್ರವನ್ನು ತುಂಬಾ ಸೆಟಲ್ಡ್ ಆಗಿ ಮಾಡಿ ಸೈ ಎನಿಸಿಕೊಂಡಿದ್ದಾರೆ. ಉಳಿದಂತೆ ರಮೇಶ್ ಇಂದಿರಾ, ಅಚ್ಯುತ್ ಕುಮಾರ್, ಗೋಪಾಲ ದೇಶಪಾಂಡೆ, ಶರತ್ ಲೋಹಿತಾಶ್ವ, ಅವಿನಾಶ್ ಪಾತ್ರಗಳು ಸಿನಿಮಾದ ಕಥೆಗೆ ಪೂರಕವಾಗಿವೆ. ಇಂತಹ ಗಂಭೀರ ಕಥೆಯ ಮೈಲೇಜ್ ಹೆಚ್ಚಿಸುವಲ್ಲಿ ಹಿನ್ನೆಲೆ ಸಂಗೀತ ಪ್ರಮುಖ ಪಾತ್ರ ವಹಿಸುತ್ತದೆ. ಆ ಕೆಲಸವನ್ನು ಸಂಗೀತ ನಿರ್ದೇಶಕ ಚರಣ್ ರಾಜ್ ಅಚ್ಚುಕಟ್ಟಾಗಿ ಮಾಡಿದ್ದಾರೆ. ಒಂದು ಫ್ಯಾಮಿಲಿ ಎಂಟರ್ಟೈನರ್ ಸಿನಿಮಾವನ್ನು ಕಣ್ತುಂಬಿಕೊಳ್ಳುವವರಿಗೆ ‘ಸಪ್ತ’ ಅತ್ಯುತ್ತಮ ಆಯ್ಕೆ.
ರವಿಪ್ರಕಾಶ್ ರೈ