ಚಿಣ್ಣರ ಬಿಂಬ ಮುಂಬಯಿಯ ಇದರ ಮೀರಾರೋಡ್ ಶಿಬಿರದ ಮಕ್ಕಳ ಉತ್ಸವ ಹಾಗೂ ಪ್ರತಿಭಾ ಸ್ವರ್ಧೆ ಆ. 13 ರಂದು ಅಪರಾಹ್ನ 1 ರಿಂದ ಭಾಯಂದರ್ ಪೂರ್ವ, ಶಕ್ತಿ ನಗರ ಎಸ್ ಎನ್ ಕಾಲೇಜಿನ ಸಮೀಪದ ನ್ಯೂ ಸೈಂಟ್ ಆಗ್ನೇಸ್ ಹೈಸ್ಕೂಲ್ ಸಭಾಗೃಹದಲ್ಲಿ ನಡೆಯಲಿದೆ.
ಪ್ರತಿಭಾ ಸ್ವರ್ಧೆ ಕಾರ್ಯಕ್ರಮವನ್ನು ಸುಮತಿ ಎಜುಕೇಶನಲ್ ಟ್ರಸ್ಟ್, ಸೈಂಟ್ ಅಗ್ನೇಸ್ ಇಂಗ್ಲಿಷ್ ಹೈಸ್ಕೂಲ್, ಮೆಹ್ತಾ ಸ್ಕೂಲ್ ಮತ್ತು ಜೂನಿಯರ್ ಕಾಲೇಜಿನ ಕಾರ್ಯಧ್ಯಕ್ಷ ಡಾ. ಅರುಣೋದಯ ರೈ ಬಿಳಿಯೂರು ಗುತ್ತು ಇವರು ಉದ್ಘಾಟಿಸಲಿದ್ದಾರೆ. ಬಂಟರ ಸಂಘ ಮುಂಬಯಿ ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಜತೆ ಕೋಶಾಧಿಕಾರಿ ರಮೇಶ್ ಎಂ. ಶೆಟ್ಟಿ ಸಿದ್ಧಕಟ್ಟೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೀರಾರೋಡ್ ಶುಭಂ ಹೊಟೇಲ್ ನ ಮಾಲಕ ಉದಯ್ ಎಂ ಶೆಟ್ಟಿ ಮಲಾರಬೀಡು, ಸಾಯಿ ಬಾಲಾಜಿ ಹೌಸಿಂಗ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕ ಯೋಗೇಂದ್ರ ಎಸ್. ಗಾಣಿಗ ಹಾಗೂ ನಿತ್ಯಾನಂದ ಸೇವಾ ಸಂಸ್ಥೆಯ ಮಹಿಳಾ ವಿಭಾಗದ ಅಧ್ಯಕ್ಷೆ ಜಯಶ್ರೀ ಬಾಲಕೃಷ್ಣ ಶೆಟ್ಟಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭ ಶಿಬಿರ ಮಟ್ಟದಲ್ಲಿ ಭಾವಗೀತೆ, ಜಾನಪದ ಗೀತೆ, ಚರ್ಚಾ ಸ್ವರ್ಧೆ, ಏಕಪಾತ್ರಾಭಿನಯ, ಛದ್ಮವೇಷ ಸ್ವರ್ಧೆ, ಪಾಲಕರ ದೇಶ ಭಕ್ತಿ ಗೀತೆ ಸ್ವರ್ಧೆಗಳು ನಡೆಯಲಿವೆ. ಚಿಣ್ಣರ ಬಿಂಬ ಸಾವಿರಾರು ಮಕ್ಕಳಿಗೆ ತಮ್ಮಲ್ಲಿರುವ ಪ್ರತಿಭೆ, ಕೌಶಲವನ್ನು ಅಭಿವ್ಯಕ್ತಗೊಳಿಸಲು ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಿರುವುದು ಈ ಸಂಸ್ಥೆಯ ಧನಾತ್ಮಕ ಸಾಧನೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತುಳು – ಕನ್ನಡಿಗರು ಭಾಗವಹಿಸಿ ಚಿಣ್ಣರನ್ನು ಪ್ರೋತ್ಸಾಹಿಸುವಂತೆ ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಭಂಡಾರಿ ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.