ಕರಾವಳಿ ಮೂಲದ ಸಾಕಷ್ಟು ಕಲಾವಿದರು ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದ ಯಶಸ್ಸು ಪಡೆದು ಜಗತ್ತಿನ ಗಮನ ಸೆಳೆದಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇದೀಗ ಮಂಗಳೂರು ಮೂಲದ ಮತ್ತೊಂದು ಪ್ರತಿಭಾವಂತರ ತಂಡ ಹೊಸ ಚಿತ್ರಕ್ಕೆ ಕೈಹಾಕಿದೆ. ಪಂಚರಂಗಿ ಫಿಲಂಸ್ ಲಾಂಛನದಲ್ಲಿ ಕನ್ಯಾನ ಸದಾಶಿವ ಶೆಟ್ಟಿ ಮತ್ತು ಗುರು ಹೆಗ್ಡೆ ನಿರ್ಮಾಣದಲ್ಲಿ ‘ಅಮರ್ಥ’ ನೂತನ ಕನ್ನಡ ಚಿತ್ರದ ಸ್ಕ್ರಿಪ್ಟ್ ಪೂಜೆ ಮತ್ತು ಮುಹೂರ್ತ ಸಮಾರಂಭ ಸಹಿಹಿತ್ಲು ಶ್ರೀ ಭಗವತಿ ಕ್ಷೇತ್ರದಲ್ಲಿ ನಡೆಯಿತು.
ವಿನಯ್ ಪ್ರೀತಮ್ ನಿರ್ದೇಶನದಲ್ಲಿ ಸಿನಿಮಾ ತಯಾರಾಗುತ್ತಿದ್ದು, ಕ್ಯಾಮರಾಮ್ಯಾನ್ ಆಗಿ ಗುರುಪ್ರಶಾಂತ್ ರೈ, ನಿರ್ಮಾಣ ವಿನ್ಯಾಸಕರಾಗಿ ಪ್ರಶಾಂತ್ ಆಳ್ವ ಕಲ್ಲಡ್ಕ, ಕಲಾ ನಿರ್ದೇಶಕರಾಗಿ ಸಂತೋಷ್ ವೇಣೂರು, ಸಂಗೀತ ನಿರ್ದೇಶಕರಾಗಿ ಶಿನೋಯ್ ಜೋಸೆಫ್, ಸಂಕಲನಕಾರರಾಗಿ ಗಣೇಶ್ ನಿರ್ಚಾಲ್ ಕೆಲಸ ಮಾಡಲಿದ್ದಾರೆ. ತಾರಾಗಣದಲ್ಲಿ ರಾಜ್ ದೀಪಕ್, ಮೇಘನಾ ರಾಜ್, ಕೃತಿ ಶೆಟ್ಟಿ, ರೂಪ ವರ್ಕಾಡಿ, ನಮಿತಾ, ಶೈಲಾಶ್ರೀ, ಮಂಜುಭಾಷಿಣಿ,
ಗೋಪಿನಾಥ್ ಭಟ್, ರಘು ಪಾಂಡೇಶ್ವರ್, ಉಷಾ ಭಂಡಾರಿ, ರವಿ ಭಟ್, ಮಂಜುನಾಥ ಹೆಗಡೆ, ಮಧು ಹೆಗಡೆ, ಅಶ್ವಿನಿ ಹಾಸನ್, ಸಂದೀಪ್ ಮೊದಲಾದವರಿದ್ದಾರೆ.
ಅಮರ್ಥ ಕನ್ನಡ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಚಿತ್ರದ ನಿರ್ಮಾಪಕ, ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಕ್ಯಾಮರಾಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಸಾಮಾಜಿಕವಾಗಿ ವಿವಿಧ ಕ್ಷೇತ್ರದಲ್ಲಿ ನಾನು ಸೇವೆ ಸಲ್ಲಿಸುತ್ತಿದ್ದೇನೆ. ಇದೀಗ ಸಿನಿಮಾ ರಂಗದಲ್ಲಿ ಕೈ ಹಾಕುವ ಪ್ರಯತ್ನ ಮಾಡುತ್ತಿದ್ದೇನೆ. ಸಿನಿಮಾವನ್ನು ಯಶಸ್ವಿಗೊಳಿಸುವುದು ಎಲ್ಲರ ಕೈಯ್ಯಲಿದೆ ಎಂದು ಅವರು ಚಿತ್ರ ತಂಡಕ್ಕೆ ಶುಭ ಹಾರೈಸಿದರು. ತಮ್ಮಣ್ಣ ಶೆಟ್ಟಿ ಕ್ಲಾಪ್ ಮಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಚಿತ್ರನಟ ಶಿವಧ್ವಜ್ ಶೆಟ್ಟಿ ಮಾತನಾಡಿ ಚಿತ್ರದ ನಿರ್ಮಾಪಕರು, ಚಿತ್ರ ತಂಡದಲ್ಲಿರುವ ಹೆಚ್ಚಿನವರು ನನ್ನ ಆತ್ಮೀಯರು. ಹೀಗಾಗಿ ನನಗೆ ಈ ಸಿನೆಮಾದ ಬಗ್ಗೆ ಹೆಚ್ಚು ಆಸಕ್ತಿ. ‘ಅಮರ್ಥ’ ಸಿನಿಮಾ ಕನ್ನಡ ಚಿತ್ರರಂಗದ ಸಮರ್ಥ ಚಿತ್ರವಾಗಲಿ ಎಂದು ಶುಭ ಹಾರೈಸಿದರು.
ಕಿರುತೆರೆ ಕಲಾವಿದ ಗುರುಪ್ರಸಾದ್ ಹೆಗ್ಡೆಯವರು ಈ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾಗಿದ್ದು, ಚಿತ್ರಕಥೆಯ ಜವಾಬ್ದಾರಿಯನ್ನು ಕೂಡ ವಹಿಸಿಕೊಂಡಿದ್ದು, ಪ್ರಾಸ್ಥಾವಿಕ ಮಾತುಗಳನ್ನಾಡಿದರು. ಗುರುಪ್ರಸಾದ್ ಹೆಗ್ಡೆ ರಂಗ ಭೂಮಿಯಲ್ಲಿ ಪಳಗಿ ಧಾರಾವಾಹಿ, ಸಿನಿಮಾಗಳಲ್ಲಿ ತನ್ನ ಪ್ರತಿಭೆಯನ್ನು ಸಾಬೀತು ಪಡಿಸಿದವರು. ಸಿನಿಮಾ ನಿರ್ಮಾಣ ಅವರ ಕನಸ್ಸಾಗಿತ್ತು. ಈಗ ಅದು ತನ್ನ ಸಂಬಂಧಿ ಕನ್ಯಾನ ಸದಾಶಿವ ಶೆಟ್ಟಿಯವರ ಮೂಲಕ ನನಸಾಗುತ್ತಿದೆ. ಗುರು ಹೆಗ್ಡೆಯವರ ಕತೆಯನ್ನು ಮೆಚ್ಚಿ ಸದಾಶಿವ ಶೆಟ್ಟಿ ಅವರು ಚಿತ್ರ ನಿರ್ಮಾಣಕ್ಕೆ ಮುಂದೆ ಬಂದಿದ್ದಾರೆ.
ನಿರ್ದೇಶಕ ವಿನಯ್ ಪ್ರೀತಂ, ಸುನಿಲ್ ನೆಲ್ಲಿಗುಡ್ಡೆ, ಪ್ರಕಾಶ್ ಶೆಟ್ಟಿ ಧರ್ಮನಗರ, ರಘು ಪಾಂಡೇಶ್ವರ, ರೂಪ ವರ್ಕಾಡಿ, ಶೈಲಶ್ರೀ, ಸಿನಿಮಾದ ಕಲಾವಿದರು, ತಂತ್ರಜ್ಞರು, ದೇವಸ್ಥಾನದ ಆಡಳಿತ ಮಂಡಳಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.