ಕೆಲವು ದಶಕಗಳ ಹಿಂದೆ ಖಿನ್ನತೆ ಎನ್ನುವ ಮಾನಸಿಕ ಅನಾರೋಗ್ಯ ಬಹಳ ಕಡಿಮೆ ಪ್ರಮಾಣದಲ್ಲಿತ್ತು. ಜೀವನ ಪ್ರಶಾಂತ ನದಿಯಂತೆ ಹರಿಯುತ್ತಿದ್ದ ಆ ಕಾಲದಲ್ಲಿ ಎಲ್ಲರ ಬಳಿಯೂ ಸಮಯ ಇತ್ತು, ಯೋಚಿಸುವುದಕ್ಕೆ, ಎಲ್ಲರ ಜತೆಗೆ ಒಡಗೂಡಿ ಕಾಲ ಕಳೆಯುವುದಕ್ಕೆ, ಕಷ್ಟ ಸುಖಗಳನ್ನು ಹಂಚಿಕೊಳ್ಳುವುದಕ್ಕೆ ವ್ಯವಧಾನ ಇತ್ತು. ಬಹುತೇಕ ಎಲ್ಲರೂ ದೈಹಿಕ ಶ್ರಮದ ದುಡಿಮೆ ನಡೆಸಿ ಉಣ್ಣುವವರು. ಹಾಗಾಗಿ ದೈಹಿಕ – ಮಾನಸಿಕ ಆರೋಗ್ಯ ಚೆನ್ನಾಗಿತ್ತು. ಮನುಷ್ಯನಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯಗಳು ಒಂದು ಬಿಟ್ಟು ಇನ್ನೊಂದಿಲ್ಲ. ಅವು ಒಂದರೊಳಗೆ ಇನ್ನೊಂದು ಹಾಸು-ಹೊಕ್ಕು ನಾವು ಆಧುನಿಕರಾದಂತೆ, ಕುಳಿತು ಮಾಡುವ ಕೆಲಸ ಹೆಚ್ಚಿದಂತೆ, ಬಾಹ್ಯ ಜಗತ್ತಿನ ಮೇಲೆ ಅವಲಂಬನೆ ವೃದ್ಧಿಸಿದಂತೆ ಖಿನ್ನತೆಗೆ ಒಳಗಾಗುವುದು ಕೂಡ ಅಧಿಕವಾಗಿದೆ ಎನ್ನಿಸುವುದಿಲ್ಲವೆ? ಎಲ್ಲರಿಗೂ ಖಿನ್ನತೆಯು ಒಂದು ಅನಾರೋಗ್ಯದ ಸ್ವರೂಪದಲ್ಲಿ ಕಾಡದೆ ಇದ್ದರೂ ಬಹುತೇಕ ಮಂದಿ ಒಂದಲ್ಲ ಒಂದು ಕಾರಣದಿಂದ ಆಗಾಗ ಖಿನ್ನರಾಗುತ್ತಾರೆ.
ಪುಟ್ಟ ಮಕ್ಕಳನ್ನು ನೋಡಿ, ಅವರು ಸದಾ ಆನಂದ ತುಂದಿಲರಾಗಿಯೇ ಇರುತ್ತಾರೆ. ನೀವು ಬೈದರೆ ಅವರು ಸ್ವಲ್ಪ ಹೊತ್ತು ದುಃಖಿಸಬಹುದು. ಆಟಿಕೆ ತೆಗೆದಿಟ್ಟರೆ ಸಿಟ್ಟಾಗಬಹುದು. ಸಮ ಪ್ರಾಯದ ಇನ್ನೊಂದು ಮಗುವಿನೊಂದಿಗೆ ಆಟವಾಡುವಾಗ ಅಸೂಯೆ ಪ್ರದರ್ಶಿಸಬಹುದು. ಆದರೆ ಮಕ್ಕಳು ಖಿನ್ನರಾಗುವುದಿಲ್ಲ. ಯಾಕೆಂದರೆ ಖಿನ್ನತೆ ಅನ್ನುವುದು ನಮ್ಮ ಮೂಲ ಗುಣ ಅಲ್ಲ.
ಮಗು ದಿನನಿತ್ಯದ ಸಣ್ಣಪುಟ್ಟ ಸಂಗತಿಗಳಲ್ಲಿಯೂ ಖುಷಿಯನ್ನು ಕಂಡುಕೊಳ್ಳಬಲ್ಲುದು. ಸಮೃದ್ಧವಾದ ಬದುಕನ್ನು ಸಂಪೂರ್ಣವಾಗಿ ಅನುಭವಿಸುವುದು ಮಗುವಿನ ಸಹಜ ಗುಣ. ನಿಜಾಂಶ ಎಂದರೆ ಪ್ರೌಢನಾದಾಗಲೂ ಮನುಷ್ಯ ಹಾಗೆಯೇ ಇರಬೇಕು ಮತ್ತು ಇರಲು ಸಾಧ್ಯವಿದೆ. ಆದರೆ ನಮ್ಮೊಳಗಿನ ಸಮೃದ್ಧವಾದ ಬದುಕನ್ನು ನಿಭಾಯಿಸುವುದಕ್ಕೆ ಸಾಧ್ಯವಾಗದೆ ಹೋದರೆ ಆಗ ಖನ್ನತೆ ಕಾಲಿಡುತ್ತದೆ. ಅದು ಮನಸ್ಸಿಗೆ ಮಾತ್ರ ಸಂಬಂಧಪಟ್ಟ ಸ್ಥಿತಿಯಲ್ಲ. ಮನಸ್ಸು ಖಿನ್ನವಾದರೆ ದೇಹವೂ ಕುಗ್ಗುತ್ತದೆ.
ಬದುಕು ಪ್ರಜ್ವಲಿಸುತ್ತಿರುವ ಜ್ವಾಲೆಯ ಹಾಗೆ. ಅದು ಪ್ರಜ್ವಲಿಸುತ್ತಿಲ್ಲ ಎಂದಾದರೆ ಅದಕ್ಕೆ ನಾವೇ ಕಾರಣ. ಅಗ್ನಿ ಉರಿಯಲು ದಹನಶೀಲ ವಸ್ತುಗಳನ್ನೇ ಹಾಕಬೇಕು. ಹಸಿ ಕಟ್ಟಿಗೆ ತಂದು ಒಲೆಗೆ ತುರುಕಿದರೆ ಹೊಗೆಯೇಳುತ್ತದೆ. ನಮ್ಮೊಳಗಿನ ಬದುಕೆಂಬ ಅಗ್ನಿಗೂ ಒಳ್ಳೆಯದನ್ನೇ ಊಡುತ್ತಿರಬೇಕು. ನಮಗೆ ಅಗತ್ಯವಿಲ್ಲದ ಕ್ಲೇಶಗಳನ್ನು, ತರಲೆಗಳನ್ನು, ಚಿಂತೆಗಳನ್ನು ತುರುಕಿದರೆ ಬದುಕೆಂಬ ಅಗ್ನಿ ಉರಿಯದು.
ಖಿನ್ನತೆ ಅನ್ನುವುದು ಮುದುಡುವ ಪ್ರಕ್ರಿಯೆ, ಅರಳುವಿಕೆಯಲ್ಲ. ನಮ್ಮ ಬದುಕಿನ ಬಹುಭಾಗ ಒತ್ತಾಯ ಪೂರ್ವಕವಾಗಿ ಘಟಿಸುವ ಸ್ಥಿತಿ ಉಂಟಾದರೆ ಆಗ ಖನ್ನತೆ ಕಾಲಿರಿಸುತ್ತದೆ. ಬಾಹ್ಯ ಜಗತ್ತಿನಲ್ಲಿ ಘಟಿಸುತ್ತಿರುವುದಕ್ಕೆ ಪ್ರತಿಕ್ರಿಯೆಯಾಗಿ ಅದು ಉಂಟಾಗುತ್ತದೆ. ನಮ್ಮಿಂದ ಹೊರಗೆ ನಡೆಯುವ ತೊಂಭತ್ತು ಶೇಕಡಾ ಘಟನೆಗಳು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ, ನಾವು ಬಯಸಿದಂತೆ ಆಗುವುದಿಲ್ಲ. ಆಗ ಖಿನ್ನತೆ ಉಂಟಾಗುವುದು ಸಹಜ.
ಸಮೃದ್ಧ ಬದುಕನ್ನು ಸಮೃದ್ಧವಾಗಿ ಅನುಭವಿಸುವುದಕ್ಕೆ ಸುಖ ಸಂಪತ್ತು ಸಿಕ್ಕಿದರೆ ಮಾತ್ರ ಸಾಲದು. ಮನುಷ್ಯನೊಳಗೂ ಬದಲಾವಣೆ ಆಗಬೇಕು. ಆಧ್ಯಾತ್ಮಿಕ ಪ್ರಕ್ರಿಯೆ ಎಂದರೆ ಇದು- ಬಹಿರಂಗದಲ್ಲಿ ನಾವೇನು ಎಂದು ಗುರುತಿಸಿಕೊಳ್ಳುವುದರ ಜತೆಗೆ ಆಂತರಿಕವಾಗಿಯೂ ಬಲಗೊಳ್ಳುವುದು. ಹಾಗೆ ದೃಢವಾದರೆ ಖಿನ್ನತೆಗೆ ಆಸ್ಪದವೇ ಇರದು