ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪರಿಸರದಲ್ಲಿ ಸೋಮವಾರ ಒಂದೆಡೆ ಉಳುಮೆ, ಇನ್ನೊಂದೆಡೆ ನೇಜಿ ಕೀಳುವ ಹಾಗೂ ನಾಟಿ ಮಾಡುವ ಕಾರ್ಯ ಆರಂಭವಾಗಿದೆ. ಮಳೆ ಕೊಂಚ ತಡವಾದರೂ ಕಾದು ಸ್ವಲ್ಪ ಮಳೆಗೆ ತನ್ನ ಅನಿ ವಾರ್ಯ, ಅಗತ್ಯದ ಕಾಯಕವನ್ನು ಬಿಡುವಂತಿಲ್ಲವಾಗಿದೆ. ಸಮಯಕ್ಕೆ ತಕ್ಕಂತೆ ಹೊಂದಿಕೊಂಡು ಕೃಷಿಗೆ ಪ್ರಾಧಾನ್ಯವನ್ನು ನೀಡಬೇಕಾಗಿದೆ. ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವತಿಯಿಂದ ಚೌತಿಯಂದು ನಡೆಯುವ ತೆನೆ ಹಬ್ಬಕ್ಕೆ ತೆನೆಯನ್ನು ನೀಡಲು ಈ ಗದ್ದೆ ಉಳುಮೆ ಮತ್ತು ನಾಟಿ. ಪ್ರತಿ ವರ್ಷದಂತೆ ಈ ಬಾರಿಯೂ ದೇವಸ್ಥಾನದ ವತಿಯಿಂದ ಭಕ್ತರಿಗೆ ತೆನೆಯನ್ನು ನೀಡಲು ಈಗಾಗಲೇ ಸಿದ್ಧತೆ ಮಾಡಲಾಗಿದೆ. ಕಳೆದ ಬಾರಿ 2 ಸಾವಿರ ಕ್ಕಿಂತಲೂ ಅಧಿಕ ಭಕ್ತರು ದೇಗುಲದಿಂದ ತೆನೆಯನ್ನು ಮನೆಗೆ ಕೊಂಡೊಯ್ದಿದ್ದರು. ಈ ಬಾರಿಯೂ ಅದಕ್ಕಿಂತಲೂ ಹೆಚ್ಚಿನ ಭಕ್ತರು ತೆನೆಯನ್ನು ಕೊಂಡೊಯ್ಯಲು ಬರುವ ನಿರೀಕ್ಷೆ ಇದೆ.
75 ಸೆಂಟ್ಸ್ ಗದ್ದೆಯಲ್ಲಿ ಭತ್ತದ ಕೃಷಿ
ಈ ಬಾರಿ 75 ಸೆಂಟ್ಸ್ ಗದ್ದೆಯಲ್ಲಿ ಭತ್ತ ಬೇಸಾಯಕ್ಕೆ ತಯಾರು ಮಾಡಲಾಗಿದೆ. ಇದು ವರ್ಷ ಕಳೆದಂತೆ ಜಾಸ್ತಿಯಾಗುತ್ತಿದೆ. ಕಳೆದ ಸಾಲಿನಲ್ಲಿ 60 ಸೆಂಟ್ಸ್ ಜಾಗದಲ್ಲಿ ಬೇಸಾಯ ಮಾಡಲಾಗಿತ್ತು. ಪ್ರಗತಿಪರ ಕೃಷಿಕ ತಾರಾನಾಥ ಶೆಟ್ಟಿ ವರ್ಣಬಾಗಿಲು ಪಡ್ಡೋಡಿ ಅವರ ಮಾರ್ಗದರ್ಶನದಲ್ಲಿ ನಿತಿನ್ ಚಿಕ್ಕಪರಾರಿ ಪೇಜಾವರ, ದಿನೇಶ್ ಶೆಟ್ಟಿ ದೋಟಮನೆ ಚಿಕ್ಕಪರಾರಿ ಅವರ ಸಹಕಾರದೊಂದಿಗೆ ಕೃಷಿ ಚಟುವಟಿಕೆಗಳು ನಡೆಯುತ್ತಿದೆ. ಭಕ್ತರು ತೆನೆಗಾಗಿ ಅಲೆದಾಟ ಮಾಡಬಾರದು, ದೇಗುಲದಿಂದ ಭಕ್ತರಿಗೆ ಸಿಗುವಂತಾಗಬೇಕೆಂಬ ಉದ್ದೇಶವಾಗಿದೆ.
ಈ ಬಾರಿ ಕೊಂಚ ತಡವಾಗಿ ನೇಜಿಗೆ ಬಿತ್ತನೆ ಮಾಡಲಾಗಿತ್ತು. ಚೌತಿ ಹಬ್ಬ ತಡವಾಗಿ ಬರುವುದರಿಂದ ಆ ಸಮಯಕ್ಕೆ ತಕ್ಕಂತೆ ತೆನೆ ಸಿಗುವಂತೆ ಭತ್ತ ಬೀಜ ಬಿತ್ತನೆ ಮಾಡಲಾಗಿತ್ತು. ಪೊರ್ಕೋಡಿ ದೇವಸ್ಥಾನದ ಎದುರಿನಲ್ಲಿರುವ ಪೊರ್ಕೋಡಿ ಪಾದಮನೆ ಪ್ರಶಾಂತ್ ಶೆಟ್ಟಿ ಅವರ ಎರಡು ಗದ್ದೆಯಲ್ಲಿ ಉಳುಮೆ ಮಾಡಲಾಗಿದೆ. ನೇಜಿ ಕೀಳುವ ಹಾಗೂ ನಾಟಿ ಮಾಡುವ ಕಾರ್ಯವೂ ಶುರುವಾಗಿದೆ.
ಭಕ್ತರ ಸಂಖ್ಯೆ ಹೆಚ್ಚಳ :
ಚೌತಿ ಹಬ್ಬದಂದು ತೆನೆಯನ್ನು ದೇವಸ್ಥಾನ ವತಿಯಿಂದ ನೀಡಲು ಪ್ರತಿವರ್ಷ ಭತ್ತ ಬೇಸಾಯ ಮಾಡಲಾಗುತ್ತದೆ. ವರ್ಷದಿಂದ ವರ್ಷಕ್ಕೆ ತೆನೆ ಕೊಂಡೊಯ್ಯಲು ಭಕ್ತರ ಸಂಖ್ಯೆ ಜಾಸ್ತಿಯಾಗುತ್ತಾ ಇದೆ. ಇದನ್ನು ಮನಗಂಡು ಈ ಬಾರಿ ಹೆಚ್ಚು ಜಾಗದಲ್ಲಿ ಭತ್ತದ ಬೇಸಾಯ ಮಾಡಲಾಗುತ್ತಿದೆ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಡಾ. ಜಯರಾಮ್ ಶೆಟ್ಟಿ ಹೇಳಿದ್ದಾರೆ.