ಇತ್ತೀಚಿನ ದಿನಗಳಲ್ಲಿ ಎಲ್ಲ ವಯಸ್ಸಿನವರಲ್ಲೂ ಗ್ಯಾಸ್ಟ್ರಿಕ್, ಹೈಪರ್ ಆ್ಯಸಿಡಿಟಿ, ಅಲ್ಸರ್ಗಳು ಸಾಮಾನ್ಯವಾಗಿ ಕಾಡುತ್ತಿವೆ. ಗ್ಯಾಸ್ಟ್ರಿಕ್ ಎಂದರೆ ಜಠರಕ್ಕೆ ಸಂಬಂಧಿಸಿದ್ದಾಗಿದೆ. ಯೋಗ, ಪ್ರಾಣಾಯಾಮ, ಧ್ಯಾನದ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಈ ರೀತಿಯ ತೊಂದರೆಗೆ ಮಾನಸಿಕ ನೆಮ್ಮದಿ ಕಾಯ್ದುಕೊಳ್ಳುವುದು ಅತ್ಯುತ್ತಮ ಚಿಕಿತ್ಸೆಯಾಗಿರುತ್ತದೆ. ಭಾವನಾತ್ಮಕ ವಿಷಯಗಳು ಅಧಿಕವಾದಾಗ ಮಾನಸಿಕ ಒತ್ತಡ ಹೆಚ್ಚಿ ಅದು ಮೆದುಳಿನ ಲಿಂಬಿಕ್ ಸೆಂಟರ್ನ ಮೇಲೆ ಪ್ರಭಾವ ಬೀರುತ್ತದೆ. ಈ ಲಿಂಬಿಕ್ ಸೆಂಟರ್ ಹೈಪೋಥೆಲಾಮಸ್ನ ಮೇಲೆ ಒತ್ತಡ ಹೇರಲಾರಂಭಿಸಿ ತನ್ಮೂಲಕ ನರಗಳ ಮೇಲೆ ಪ್ರಭಾವ ಬೀರುತ್ತದೆ. 2 ಮುಖ್ಯ ನರಗಳ ವ್ಯವಸ್ಥೆಗಳಾದ ಸಿಂಪಥೆಟಿಕ್ ಮತ್ತು ಪ್ಯಾರಾಸಿಂಪಥೆಟಿಕ್ ನರಗಳಲ್ಲಿ ಏರು-ಪೇರಾಗುತ್ತದೆ. ಈ ಪ್ಯಾರಾಸಿಂಪಥೆಟಿಕ್ ಏರು-ಪೇರಿನಿಂದ ಇದು 2 ರೀತಿಯಲ್ಲಿ ಜಠರ ಹಾಗೂ ಜಠರ ರಸಗಳ ಮೇಲೆ ಪ್ರಭಾವ ಬೀರುತ್ತದೆ. ಪ್ಯಾರಾಸಿಂಪಥೆಟಿಕ್ ನರವಾದ ವೇಗಸ್ ನರವು ಹೆಚ್ಚಿನ ಗ್ಯಾಸ್ಟ್ರಿಕ್ ಹಾರ್ಮೋನ್ನ್ನು ಉತ್ಪಾದಿಸಲು ಪ್ರಚೋದಿಸಿ ಇದು ಹೆಚ್ಚಿನ ಹೈಡ್ರೋಕ್ಲೋರಿಕ್ ಆಮ್ಲವನ್ನು ಉತ್ಪತ್ತಿಗೊಳಿಸುತ್ತದೆ. ಪ್ಯಾರಾಸಿಂಪಥೆಟಿಕ್ ನರಗಳು ನೇರವಾಗಿ ಆಕ್ಸಿಂಟಿಕ್ ಜೀವಕೋಶಗಳನ್ನು ಪ್ರಚೋದಿಸಿ ಹೆಚ್ಚಿನ ಹೈಡ್ರೋಕ್ಲೋರಿಕ್ ಆಮ್ಲದ ಉತ್ಪಾದಿಸುತ್ತದೆ. ಈ ರೀತಿ ಹೆಚ್ಚಳವಾಗುವ ಆ್ಯಸಿಡ್ ಹೈಪರ್ ಅಸಿಡಿಟಿಗೆ ಕಾರಣವಾಗುತ್ತದೆ. ಸಿಂಪಥೆಟಿಕ್ ನರಗಳ ಅತಿಯಾದ ಪ್ರಚೋದನೆಯು ಜಠರ ಜೀವಕೋಶಗಳಿಗೆ ಮುಖ್ಯವಾಗಿ ಗ್ಲೋಬೆಟ್ ಜೀವಕೋಶಗಳಿಗೆ ರಕ್ತಸಂಚಾರವನ್ನು ಕಡಿಮೆಗೊಳಿಸುತ್ತದೆ. ಇದರಿಂದ ಜಠರ ಜೀವಕೋಶಗಳಾದ ಗ್ಲೋಬೆಟ್ಗಳು ಮ್ಯುಕಸ್ ಉತ್ಪಾದನೆ ಕ್ಷೀಣಿಸುತ್ತದೆ.
ಆಸಿಡ್ ಪ್ರಮಾಣವು ಜಠರದ ಜೀವಕೋಶಗಳಿಗೆ ತಾಗದಂತೆ ಈ ಲೋಳೆಯು ಪದರವನ್ನು ನಿರ್ಮಿಸಿ ರಕ್ಷಿಸುತ್ತಿತ್ತು. ಯಾವಾಗ ಇದರ ಗುಣಮಟ್ಟ, ಉತ್ಪಾದನೆ ಕಡಿಮೆಯಾಯಿತೋ ಆಗ ಆ್ಯಸಿಡ್ ಪ್ರಮಾಣವು ಜೀವಕೋಶಗಳನ್ನು ತಾಗಿ ಇನ್ಫ್ಲಮೇಶನ್ಗೆ ಕಾರಣವಾಗಿ ಗ್ಯಾಸ್ಟ್ರಿಕ್, ಅಲ್ಸರ್ ಸಮಸ್ಯೆ ತಂದೊಡ್ಡುತ್ತದೆ. ಜತೆಗೆ ಮಾನಸಿಕ ಒತ್ತಡವು ದೇಹದ ರೋಗನಿರೋಧಕ ಶಕ್ತಿಯನ್ನು ಕಡಿಮೆಗೊಳಿಸುತ್ತದೆ. ಇದರಿಂದಾಗಿ ಹೆಚ್.ಪೈಲೋರಿ ಬ್ಯಾಕ್ಟೀರಿಯಾ ಬೆಳೆದು ಗ್ಯಾಸ್ಟ್ರಿಕ್ ಕಾಣಿಸಿಕೊಳ್ಳುತ್ತದೆ ಮತ್ತು ಹೆಚ್ಚಿನ ಆ್ಯಸಿಡ್ ಉತ್ಪಾದನೆಯು ಅಲ್ಸರ್ಗೆ ಕಾರಣವಾಗುತ್ತದೆ.
ಗ್ಯಾಸ್ಟ್ರಿಕ್, ಆ್ಯಸಿಡಿಟಿ ತಡೆಗೆ ಯೋಗ
ಕ್ರಿಯೆಗಳು: ಧೌತಿ ಕ್ರಿಯೆ, ನೌಲಿ ಕ್ರಿಯೆ, ಲಘು ಶಂಕಪ್ರಕ್ಷಾಲನ (ಯಾವುದಾದ ರೊಂದು ಅಭ್ಯಾಸ), ಕ್ರಿಯೆಯ ಕೊನೆಯಲ್ಲಿ ಕಪಾಲಭಾತಿ ಅಭ್ಯಸಿಸಬೇಕು.
ಆಸನಗಳು: ಪವನಮುಕ್ತಾಸನ, ತಾಡಾಸನ, ತ್ರಿಕೋನಾಸನ, ಅರ್ಧ ಕಟಿ ಚಕ್ರಾಸನ, ಉತ್ಥಿತ್ತ ಪಾದಾಸನ, ಮತ್ಸ್ಯಾಸನ, ಶವಾಸನ, ಮಕರಾಸನ, ಭುಜಂಗಾಸನ, ಧನುರಾಸನ, ದಂಡಾಸನ, ವಜ್ರಾಸನ
ಪ್ರಾಣಾಯಾಮ: ನಾಡಿಶೋಧನ ಚಂದ್ರಭೇದನ ಶೀತಲಿ ಶೀತಕಾರಿ ಭ್ರಾಮರಿ.
ಧ್ಯಾನ: ಓಂಕಾರ ಅಥವಾ ಶ್ವಾಸ ಧ್ಯಾನ.
ಪಂಚಕೋಶಗಳ ಕಾರ್ಯವೈಖರಿ…
ಯೋಗದ ಪ್ರಕಾರ ದೇಹವು ಪಂಚಕೋಶಗಳಿಂದ ಮಾಡಲ್ಪಟ್ಟಿದೆ. 1.ಅನ್ನಮಯ ಕೋಶ (ಶಾರೀರಿಕ ದೇಹ), 2 ಪ್ರಾಣಮಯ ಕೋಶ (ಪ್ರಾಣವಾಯು), 3. ಮನೋಮಯ ಕೋಶ (ಮನಸ್ಸು), 4.ವಿಜ್ಞಾನಮಯ ಕೋಶ-(ವಿಚಾರ ಶಕ್ತಿ), 5ಆನಂದಮಯ ಕೋಶ (ಮೂಲಸ್ವರೂಪ)
ಯೋಗದ ಪ್ರಕಾರ ಎಲ್ಲ ರೀತಿ ತೊಂದರೆಗಳು ಮಾನವನಿಗೆ ವಿಜ್ಞಾನಮಯ ಕೋಶದಲ್ಲಿ ಉದ್ಭವಿಸುತ್ತವೆ. ಆದರೆ ಇವುಗಳು ಕಾಣಿಸಿಕೊಳ್ಳುವುದು ಮನೋಮಯ ಕೋಶದಲ್ಲಿ. ಮಾನಸಿಕ ಉದ್ವೇಗ ಅಥವಾ ಮಾನಸಿಕ ಒತ್ತಡವು ಮನಸ್ಸಿನ ಸಮತೋಲನವನ್ನು ಏರುಪೇರು ಮಾಡುತ್ತದೆ. ಮಾನಸಿಕ ಉದ್ವೇಗವು ತೀವ್ರವಾದ ಬೇಕು-ಬೇಡ, ರಾಗದ್ವೇಷ, ಇಚ್ಛೆ-ನಿಚ್ಛೆಗಳಿಂದ ಕಾಣಿಸಿಕೊಳ್ಳುತ್ತವೆ. ಈ ಮನೋಮಯಕೋಶದ ಅಸಮತೋಲನವು ಪ್ರಾಣಮಯ ಕೋಶದ ಮೇಲೆ ಪ್ರಭಾವ ಬೀರಿ ಅಲ್ಲಿನ ಪ್ರಾಣದ ಹರಿ ಯುವಿಕೆಯಲ್ಲಿ ಅಡ್ಡಿ-ಅಡಚಣೆಯನ್ನುಂಟು ಮಾಡುತ್ತದೆ. ಈ ಅಡಚಣೆಯು ಅನ್ನಮಯ ಕೋಶದಲ್ಲಿ ವ್ಯಾಧಿಯಾಗಿ ಕಾಣಿಸಿಕೊಳ್ಳುತ್ತದೆ.
ವಿಜ್ಞಾನಮಯ ಕೋಶದಲ್ಲಿ ಉದ್ಭವಗೊಂಡು ಮನೋಮಯ ಕೋಶದಲ್ಲಿ ಅಭಿವೃದ್ಧಿಗೊಳ್ಳುವ ಇದನ್ನು ಯೋಗದ ಪರಿಭಾಷೆಯಲ್ಲಿ “ಆಧಿ” ಎಂದು ಕರೆಯುತ್ತಾರೆ. ವೈಜ್ಞಾನಿಕ ಸಂಶೋಧನೆಗಳ ಪ್ರಕಾರವಾಗಿಯೂ ಕೂಡ ಎಷ್ಟೋ ಕಾಯಿಲೆಗಳನ್ನು ಹಾಗೂ ಜೀರ್ಣಾಂಗವ್ಯೂಹದ ತೊಂದರೆಗಳು ಮಾನಸಿಕ ಉದ್ವೇಗದಿಂದ ಕಾಣಿಸಿಕೊಳ್ಳುತ್ತದೆ.
ಮನಸ್ಸು ಎನ್ನುವುದು ದೇಹದ ಚಲನಾ ಶಕ್ತಿ, ದೇಹವು ಮನಸ್ಸಿನ ಕನ್ನಡಿ. ಮನಸ್ಸು ಶಾಂತವಾಗಿಲ್ಲದಿದ್ದರೆ ದೇಹವು ಆರೋಗ್ಯದಿಂದಿರಲು ಸಹಕರಿಸದು. ಮಾನಸಿಕ ಕ್ಷೊàಭೆ, ಚಿಂತೆ, ಭಯ, ಒತ್ತಡಗಳು ಮೊದಲು ನಮ್ಮ ಜೀರ್ಣಾಂಗವ್ಯೂಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಯೋಗದ ನಿಯಮಿತ ಅಭ್ಯಾಸವು ಎಲ್ಲ ಕೋಶಗಳನ್ನು ಸಮತೋಲನಗೊಳಿಸಿ ಮನುಷ್ಯನನ್ನು ಆರೋಗ್ಯವಂತರನ್ನಾಗಿಸುತ್ತದೆ. ಈ ಅಭ್ಯಾಸವು ನರಮಂಡಲ, ಹಾರ್ಮೋನ್ಗಳು ಹಾಗೂ ಮನಸ್ಸನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವುದರಿಂದ ದೇಹದ ಮೇಲೆ ಉಂಟಾಗುವ ವ್ಯಾಧಿಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಅನ್ನಮಯ ಕೋಶ: ಇದನ್ನು ಸಮಸ್ಥಿತಿಗೆ ತರಲು ಆಸನಗಳು, ಕ್ರಿಯೆಗಳು ಮತ್ತು ಆಹಾರವು ಅತೀ ಮುಖ್ಯವಾದ ಅಂಶಗಳಾಗಿವೆ.
ಪ್ರಾಣಮಯ ಕೋಶ: ನಾಡಿಗಳ ಶುದ್ಧಿ, ನಾಡಿಗಳ ಮೂಲಕ ದೇಹದ ಚಟುವಟಿಕೆಗಳನ್ನು ಹೆಚ್ಚಿಸುವ ಪ್ರಾಣಾಯಾಮವನ್ನು ಮಾಡುವುದು.
ಮನೋಮಯ ಕೋಶ: ಧ್ಯಾನದ ಅಭ್ಯಾಸವು ಚಿಂತೆಗಳಿಂದ ನಮ್ಮನ್ನು ದೂರವಿಡುವುದು.
ವಿಜ್ಞಾನಮಯ ಕೋಶ: ರೋಗದ ಬಗೆಗಿನ ತಿಳಿವಳಿಕೆ ಮತ್ತು ಅದರ ಪರಿಹಾರವನ್ನು ಸೂಕ್ತವಾಗಿ ತಿಳಿಸುವುದು.
ಆನಂದಮಯ ಕೋಶ: ಈ ಎಲ್ಲ ಕೋಶಗಳು ಒಂದಕ್ಕೊಂದು ಸರಿದೂಗಿದಾಗ ನಾವು ಇದನ್ನು ತಲುಪಬಹುದು.