ಚಂದನವನದಲ್ಲಿ ಉತ್ತಮ ಪಾತ್ರಗಳ ನಿರೀಕ್ಷೆಯಲ್ಲಿರುವ ಸುಂದರ ಮುದ್ದು ಮುಖದ ಚೆಲುವೆ ನಟಿ ಶಿಲ್ಪಾ ಆರ್ ಶೆಟ್ಟಿ. ಒಳ್ಳೆ ನಿರ್ಮಾಣ ಸಂಸ್ಥೆ ಅಥವಾ ಪಾತ್ರವು ಶಕ್ತಿಶಾಲಿಯಾಗಿದ್ದರೆ ಎಲ್ಲದಕ್ಕೂ ಸೈ ಎಂದು ಪ್ರಸಕ್ತ ಚಿತ್ರರಂಗಕ್ಕೆ ಬರುವ ಕಲಾವಿದೆಯರು ಹೇಳುವುದುಂಟು. ಅಪರೂಪ ಎನ್ನುವಂತೆ ನಮ್ಮ ಕರ್ನಾಟಕ ಸಂಸ್ಕ್ರತಿ ಬಿಂಬಿಸುವಂತ ಪಾತ್ರಗಳು ಬಂದರೆ ಮಾಡುತ್ತೇನೆ.


ಯಾವುದೇ ದೊಡ್ಡ ಬ್ಯಾನರ್ ಸಿಗುತ್ತದೆ ಅಂಥ ಬೇರೆ ತರಹದ ರೋಲ್ ಮಾಡಲಾರೆ. ಇದು ಹೊಸ ಪ್ರತಿಭೆ ಮಂಗಳೂರು ಮೂಲದ ನಿರಾಡಂಬರ ಚೆಲುವೆ ಶಿಲ್ಪಾ ಆರ್ ಶೆಟ್ಟಿ ಅವರ ಖಡಕ್ ನುಡಿಗಳು.

ವೃತ್ತಿಯಲ್ಲಿ ಬ್ಯೂಟಿಷಿಯನ್ ಆಗಿ, ಆದರ್ಶ ಗೃಹಿಣಿಯಾಗಿದ್ದುಕೊಂಡು ಹಲವಾರು ತುಳು ನಾಟಕಗಳಲ್ಲಿ ನಟಿಸಿ, ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್, ಶ್ರೀನಗರ ಕಿಟ್ಟಿ ಅಭಿನಯದ ಗೌಳಿ, ಕಿಶೋರ್ ಡಿ ಶೆಟ್ಟಿ ನಿರ್ಮಾಣದ ಅಕ್ಷಮ್ಯ ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ಗತ ವೈಭವ ಸಿನಿಮಾದಲ್ಲಿ ವಿಶಿಷ್ಟ ಪಾತ್ರದಲ್ಲಿ ಅಭಿನಯಿಸಿದ್ದು ಚಿತ್ರೀಕರಣ ಭರದಿಂದ ಸಾಗುತ್ತಿದೆ. ಶಿಲ್ಪಾ ಅವರು ಹಲವಾರು ತುಳು ಚಿತ್ರಗಳಲ್ಲೂ ಅಭಿನಯಿಸಿದ್ದು ಗಬ್ಬರ್ ಸಿಂಗ್ ತುಳು ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದ್ದು, ಸಾಯಿ ಕೃಷ್ಣ ನಿರ್ದೇಶನದ ಅರ್ಜುನ್ ಕಾಪಿಕಾಡ್ ನಟನೆಯ ಗೋಸ್ಮರಿ ಫ್ಯಾಮಿಲಿ ಮುಂದಿನ ತಿಂಗಳು ಬಿಡುಗಡೆಗೊಳ್ಳಲಿದೆ. ಗಂಡ ಪತ್ರಿಕೋದ್ಯಮಿಯಾಗಿದ್ದು ಇಬ್ಬರು ಮಕ್ಕಳೊಂದಿಗೆ ಮಂಗಳೂರಿನಲ್ಲಿ ವಾಸವಾಗಿದ್ದಾರೆ.

ನಾನು ಹೇಗಿದ್ದೀನೋ ಅಂತಹುದೆ ರೋಲ್ ಮಾಡಬೇಕಂಬ ಬಯಕೆ. ಗಂಡನೂ ಇದೇ ತರಹದ ಪಾತ್ರ ಮಾಡಬೇಕೆಂದು ಸಲಹೆ, ಸೂಚನೆ ನೀಡಿದ್ದಾರೆ. ನಟಿಯಾಗಿರುವುದನ್ನು ನೋಡಲು ತಂದೆ ಇಲ್ಲವೆಂಬುದೇ ಬೇಗುದಿಯಾಗಿದೆ ಎನ್ನುತ್ತಾರೆ. ಆಮದು ನಟಿಯರ ಮುಂದೆ ಇಂತಹ ಕಲಾವಿದರಿಗೂ ಅವಕಾಶ ಮಾಡಿಕೊಟ್ಟರೆ, ಒಳ್ಳೆ ಪ್ರತಿಭೆಗಳು ಹೊರಬರುತ್ತಾರೆ ಎಂಬುದಕ್ಕೆ ಶಿಲ್ಪಾ ಸಾಕ್ಷಿಯಾಗಿ ನಿಲ್ಲುತ್ತಾರೆ.






































































































