ಬಂಟರ ಸಂಘ ಪಿಂಪ್ರಿ- ಚಿಂಚ್ವಾಡ್ ಇದರ ರಜತ ಸಂಭ್ರಮದಲ್ಲಿ ಭಾಗವಹಿಸಿರುವುದು ಬಹಳಷ್ಟು ಸಂತೋಷ ನೀಡಿದೆ. ಸಂಘದ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆಯವರ ನೇತೃತ್ವದಲ್ಲಿ ಸಂಸ್ಥೆ ಮಾಡುತ್ತಿರುವ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಗಳು ಅಭಿನಂದನೀಯವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಸಂಘ ಸಂಸ್ಥೆಗಳ ಮೂಲಕ ಆಗಬೇಕಾಗಿದೆ. ಇದು ಈ ಸಂಘದಿಂದ ಆಗುತ್ತಿದೆ, ಇದುವೇ ನಿಜವಾದ ಆಧ್ಯಾತ್ಮ ಎಂದು ಸಾಂದೀಪನಿ ಸಾಧನಾಶ್ರಮ ಕೇಮಾರು ಇಲ್ಲಿನ ಪೂಜ್ಯರಾದ ಶ್ರೀ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಎ. ೧೬ ರಂದು ಚಿಂಚ್ವಾಡ್ ರಾಮಕೃಷ್ಣ ಮೋರೆ ಸಭಾಗೃಹದಲ್ಲಿ ನಡೆದ ಪಿಂಪ್ರಿ- ಚಿಂಚ್ವಾಡ್ ಬಂಟರ ಸಂಘದ ರಜತ ಮಹೋತ್ಸವವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಆಶೀರ್ವಚನ ನೀಡುತ್ತಾ ಪ್ರತಿಯೋಬ್ಬರ ಆತ್ಮದಲ್ಲಿ ದೇವರಿದ್ದಾನೆ, ಅವನನ್ನು ಸಾಕ್ಷಾತ್ಕರಿಸುವುದು ನಮ್ಮ ಆದ್ಯತೆಯಾಗಬೇಕು. ಇಂದು ವಿಜ್ಞಾನ, ತಂತ್ರಜ್ಞಾನ ಬಹಳಷ್ಟು ಮುಂದುವರಿದಿದೆ. ಆದರೆ ಮನುಷ್ಯ ಸಂಬಂಧಗಳು ಅಷ್ಟೇ ಹಾಳಾಗುತ್ತಿವೆ. ಇದು ಇಂದಿನ ದುರಂತ ಸತ್ಯವಾಗಿದೆ. ಟಿವಿ, ಮೊಬೈಲ್, ಸಾಮಾಜಿಕ ಜಾಲತಾಣಗಳ ದುರುಪಯೋಗದಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತದೆ. ಮಕ್ಕಳು ತಪ್ಪು ದಾರಿ ಹಿಡಿಯುತ್ತಿದ್ದು ತಾಯಂದಿರು ಅವರಿಗೆ ನಮ್ಮ ಜೀವನ ಮೌಲ್ಯಗಳು ಸಂಸ್ಕೃತಿ, ಸಂಸ್ಕಾರಗಳನ್ನು ನೀಡಿ ಜಾಗೃತಿಯನ್ನು ಮೂಡಿಸುವ ಕಾರ್ಯವಾಗಬೇಕು. ಪುಣೆಗೆ ಬಂದು ಸಂತ ತುಕಾರಾಮರ, ಸಂತ ಜ್ಞಾನೇಶ್ವರ ಮಹಾರಾಜರ ಸಮಾಧಿ ದರ್ಶನ ಮಾಡುವ ಉದ್ದೇಶವಿತ್ತು. ಅದು ಇಂದು ಈಡೇರಿದೆ. ಪಿಂಪ್ರಿ- ಚಿಂಚ್ವಾಡ್ ಬಂಟರ ಸಂಘ ಸಾರ್ಥಕ ಸೇವಾ ಕಾರ್ಯಗಳನ್ನು ಮಾಡುತ್ತಾ ಸಮಾಜಬಾಂಧವರ ನೋವುಗಳಿಗೆ ಸ್ಪಂದಿಸುತ್ತಾ ಸುವರ್ಣ ಸಂಭ್ರಮವನ್ನು ಆಚರಿಸುವಂತಾಗಲಿ ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಸಂಘದ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಾ ನೀವು ಸಂಘದ ಬೆಳ್ಳಿಹಬ್ಬದ ಸಂಭ್ರಮದಲ್ಲಿ ನೀಡಿದ ಪ್ರೀತಿಯ ಸನ್ಮಾನಕ್ಕೆ ಸಂಘದ ಅಧ್ಯಕ್ಷರಿಗೆ ಹಾಗೂ ಪಧಾಧಿಕಾರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಸಂಘದ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆಯವರಿಗೆ ರಜತ ಸಂಭ್ರಮವನ್ನಾಚರಿಸುವ ಯೋಗ ಒದಗಿದ್ದು ಸಂಘದ ಮಾಜಿ ಅಧ್ಯಕ್ಷರು, ಹಿರಿ ಕಿರಿಯರೆಲ್ಲರನ್ನೂ ಒಟ್ಟು ಸೇರಿಸಿಕೊಂಡು ಬಹಳ ಅಚ್ಚುಕಟ್ಟಿನ ಕಾರ್ಯಕ್ರಮವನ್ನು ಮಾಡಿರುತ್ತೀರಿ. ಒಬ್ಬ ಸಮರ್ಥ ನಾಯಕನಾದವನು ಹೀಗಿದ್ದಾಗ ಸಮಾಜ ಒಗ್ಗಟ್ಟಾಗುತ್ತದೆ. ನಾವು ಬಂಟ ಸಮಾಜದಲ್ಲಿ ಹುಟ್ಟಿದ್ದೇ ದೇವರ ಅನುಗ್ರಹವಾಗಿದೆ. ಅಧಿಕಾರ, ಅಂತಷ್ಟು ಯಾವತ್ತೂ ಸ್ಥಿರವಲ್ಲ. ಅಧಿಕಾರ ಇದ್ದಾಗ ಸಮಾಜವನ್ನುದ್ಧರಿಸುವ ಕಾರ್ಯ ಮಾಡಬೇಕಾಗಿದೆ , ನಮ್ಮ ಸಮಾಜದಲ್ಲಿ ಬಹಳಷ್ಟು ಜನರು ಕಷ್ಟದಲ್ಲಿದ್ದಾರೆ. ಅವರನ್ನು ಮೇಲೆತ್ತುವ ಕೆಲಸ ಆಗಬೇಕಾಗಿದೆ ಎಂದರು.
ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಮಾತನಾಡಿ ಪಿಂಪ್ರಿ – ಚಿಂಚ್ವಾಡ್ ಬಂಟರ ಸಂಘ ಎಂದರೆ ಇದೊಂದು “ಗುತ್ತು ಬರ್ಕೆ”ಯ ಕೂಟ. ರಾಕೇಶ ಶೆಟ್ಟಿಯವರು ೨೫ ನೇ ವರ್ಷವನ್ನು ಸಂಘದ ಬಲಿಷ್ಠ, ಸಮರ್ಥ, ಮಾಜಿ ಅಧ್ಯಕ್ಷರು ಹಾಗೂ ಸಮಿತಿ ಸದಸ್ಯರೆಲ್ಲರನ್ನೂ ಸೇರಿಸಿಕೊಂಡು ಸಮಾಜದ ಹಿತವನ್ನು ಬಯಸಿ ಅದ್ಭುತ ಕಾರ್ಯ ಮಾಡುತ್ತಿದ್ದಾರೆ. ಇಂದು ಬಂಟ ಸಮಾಜದಲ್ಲಿ ಯಾವ ವಿಷಯಗಳು ಸಮಾಜಕ್ಕೆ ಹಿನ್ನಡೆಯಾಗುತ್ತಿದೆ ಎಂಬುದನ್ನು ನಾವು ಚಿಂತಿಸುವ ಅಗತ್ಯತೆಯಿದೆ. ನಮ್ಮ ಮೂಲನಂಬಿಕೆಯನ್ನು ಅನುಸರಿಸಬೇಕೇ ಹೊರತು ಮೂಢನಂಬಿಕೆಯನ್ನಲ್ಲ. ನಮ್ಮ ಗುರುಗಳಾದ ಐಕಳ ಹರೀಶ್ ಶೆಟ್ಟಿಯವರು ಸಮಾಜದ ಅಶಕ್ತರನ್ನು ಗುರುತಿಸಿ ಮಾಡುವ ಮಾನವೀಯ ಸೇವೆ ನಮಗೆಲ್ಲ ಪ್ರೇರಣೆಯಾಗಿದೆ. ಸಂಘದ ಈ ರಜತ ಸಂಭ್ರಮ ಅರ್ಥಪೂರ್ಣ ಆಚರಣೆಯಾಗಲಿ. ಸಮಾಜಕ್ಕೊಂದು ಮಾದರಿ ಸಂಘವಾಗಿ ಗುರುತಿಸಿಕೊಳ್ಳಲಿ ಎಂದರು.
ಉದಯವಾಣಿ ಪತ್ರಿಕೆಯ ಮುಂಬಯಿಯ ಉಪ ಸಂಪಾದಕ ಡಾ. ದಿನೇಶ್ ಶೆಟ್ಟಿ ರೆಂಜಾಳ ಮಾತನಾಡಿ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘ ನನ್ನ ಕುಟುಂಬವಿದ್ದಂತೆ. ಅವರ ಪ್ರೀತಿ ವಿಶ್ವಾಸಕ್ಕಾಗಿ ನಾನಿಲ್ಲಿ ಬಂದಿದ್ದೇನೆ. ಸಂಘದ ಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆಯವರು ರಜತ ಸಂಭ್ರಮದಲ್ಲಿ ಯಾವುದೇ ಭೇದಭಾವವಿಲ್ಲದೆ ಎಲ್ಲರನ್ನೂ ಒಗ್ಗಟ್ಟಿನಿಂದ ಸೇರಿಸಿಕೊಂಡು ಅತ್ಯುತ್ತಮ ಕಾರ್ಯಕ್ರಮವನ್ನು ಮಾಡಿದ್ದು ಇದು ಅವರ ಸಂಘಟನಾತ್ಮಕ ಶಕ್ತಿಯ ಉದಾಹರಣೆಯಾಗಿದೆ. ಸಮಾಜಕ್ಕೆ ಅಪರಿಮಿತ ಮಾನವೀಯ ಸೇವೆ ಮಾಡುತ್ತಿರುವ ಐಕಳ ಹರೀಶ್ ಶೆಟ್ಟಿಯವರು ಎಲ್ಲರಿಗೂ ಮಾದರಿಯಾಗಿದ್ದು ಪುಣೆಯಲ್ಲಿಯೂ ಸಂತೋಷ್ ಶೆಟ್ಟಿ ಹಾಗೂ ರಾಕೇಶ್ ಶೆಟ್ಟಿಯವರು ಅವರ ಸ್ಥಾನವನ್ನು ತುಂಬುತ್ತಿದ್ದಾರೆ. ನಮ್ಮ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಬೆಳೆಸುವಲ್ಲಿ ತಂದೆ ತಾಯಂದಿರು ಕಾಳಜಿ ವಹಿಸಬೇಕಾಗಿದೆ ಎಂದರು.
ಕಾರ್ಯಾಧ್ಯಕ್ಷ ಜಯಾನಂದ್ ಶೆಟ್ಟಿ, ಶಿಕ್ಷಣ ಮತ್ತು ಸಮಾಜಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ವಿಶ್ವನಾಥ ಕೆ ಶೆಟ್ಟಿ ಮುಂಡ್ಕೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜ್ಯೋತಿ ವಿ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ದೀಪಾ ಪಿ ಶೆಟ್ಟಿ, ಶ್ರೀಮತಿ ಸುನಿತಾ ರಾಕೇಶ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಆಕಾಶ್ ಜೆ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರನ್ನು ಶಾಲು ಹೊದೆಸಿ, ಪೇಟ, ನೆನಪಿನ ಕಾಣಿಕೆಗಳನ್ನು ನೀಡಿ ಸಮ್ಮಾನಿಸಲಾಯಿತು. ಸಮಾಜದ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಗೈದ ಸಂಘದ ಕಾರ್ಯಗಳಿಗೆ ಸಹಕಾರ ನೀಡುತ್ತಿರುವ ಸಾಧಕರನ್ನು ಸಮ್ಮಾನಿಸಲಾಯಿತು. ಪುಣೆ ಬಂಟರ ಸಂಘದ ವತಿಯಿಂದ ರಾಕೇಶ್ ಶೆಟ್ಟಿ – ಸುನೀತಾ ಆರ್ ಶೆಟ್ಟಿ ದಂಪತಿಗಳನ್ನು ಅಧ್ಯಕ್ಷ ಸಂತೋಷ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಸಮ್ಮಾನಿಸಿದರು. ಸಂಘದ ರಜತ ಸಂಭ್ರಮದ ನೆನಪಿನ ಸಂಚಿಕೆ ರಜತಾದ್ರಿಯನ್ನು ಅತಿಥಿ ಗಣ್ಯರ ಹಸ್ತದಿಂದ ಬಿಡುಗಡೆಗೊಳಿಸಲಾಯಿತು. ಅಥಿತಿಗಳನ್ನು ಗೌರವಿಸಲಾಲಾಯಿತು. ಕಾರ್ಯಕ್ರಮದ ಮೊದಲಿಗೆ ವಿಷು ಸಂಕ್ರಾಂತಿಯ ನಿಮಿತ್ತ ಪೂಜ್ಯ ಕೇಮಾರು ಶ್ರೀಗಳು ಕಣಿ ಪೂಜೆಯನ್ನು ನೆರವೇರಿಸಿದರು.
ಸಂಘದ ಗೌರವ ಕೋಶಾಧಿಕಾರಿ ಸುಧಾಕರ ಶೆಟ್ಟಿ ಪೆಲತ್ತೂರು ಸ್ವಾಗತಿಸಿದರು. ಅರ್ಪಿತಾ ಪಿ ಶೆಟ್ಟಿ ಹಾಗೂ ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆ ವಂದಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ವಿಶ್ವನಾಥ ಡಿ ಶೆಟ್ಟಿ, ವಿಠಲ್ ಎಲ್ ಶೆಟ್ಟಿ, ರಘುರಾಮ್ ಶೆಟ್ಟಿ, ಎರ್ಮಾಳ್ ವಿಶ್ವನಾಥ ಶೆಟ್ಟಿ, ಎರ್ಮಾಳ್ ನಾರಾಯಣ ಕೆ ಶೆಟ್ಟಿ, ಕೆ. ಪದ್ಮನಾಭ ಶೆಟ್ಟಿ, ಎರ್ಮಾಳ್ ಸೀತಾರಾಮ ಶೆಟ್ಟಿ, ಮಹೇಶ ಹೆಗ್ಡೆ ಕಟ್ಟಿಂಗೇರಿ ಮನೆ, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾಕಾರಿಗಳು ಹಾಗೂ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರದ್ದರು. ನಂತರ ಬಂಟರ ಮದುವೆ ಹಾಗೂ ಸಂಘದ ಜವಾಬ್ದಾರಿಯ ಬಗ್ಗೆ ಬಂಟ ವಿಚಾರ ವೇದಿಕೆ ನಡೆಯಿತು. ಇದರಲ್ಲಿ ಅತಿಥಿಗಳಾಗಿ ಪ್ರಸಿದ್ಧ ವಾಗ್ಮಿ ಹಾಗೂ ಲೇಖಕರಾದ ಹರಿಶ್ಚಂದ್ರ ಶೆಟ್ಟಿ, ಪುಣೆ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಸತೀಶ್ ಶೆಟ್ಟಿ, ಬಂಟ್ಸ್ ಅಸೋಸಿಯೇಶನ್ ಪುಣೆ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಷಾ ಯು ಶೆಟ್ಟಿ ಭಾಗವಹಿಸಿದರು.