ಚೇಳ್ಯಾರು ಖಂಡಿಗೆ ಶ್ರೀ ಧರ್ಮರಸು ಉಳ್ಳಾಯ ಕ್ಷೇತ್ರದ ಗಡಿಪ್ರಧಾನರಾದ ಆದಿತ್ಯ ಮುಕ್ಕಾಲ್ದಿಯವರ ಸಾರ್ವಜನಿಕ ಅಭಿನಂದನಾ ಸಮಾರಂಭ ಹಾಗೂ ವಾರ್ಷಿಕ ಜಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶ್ರೀ ಕ್ಷೇತ್ರ ಖಂಡಿಗೆಯಲ್ಲಿ ಜರುಗಿತು. ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು, “ಎರ್ಮಾಳ್ ಜಪ್ಪು ಕಂಡೇವು ಅಡೆಪು ಅನ್ನೋದು ಲೋಕ ಪ್ರಸಿದ್ಧ ಮಾತು. ಕಂಡೇವು ಕ್ಷೇತ್ರದಲ್ಲಿ ನಡೆಯಲಿರುವ ಗಡಿ ಪ್ರಧಾನರಾದ ಆದಿತ್ಯ ಮುಕ್ಕಾಲ್ದಿಯವರ ಸಾರ್ವಜನಿಕ ಅಭಿನಂದನಾ ಸಮಾರಂಭ ಅವರ ಆದರ್ಶ ವ್ಯಕ್ತಿತ್ವ, ಸತ್ಯ ಧರ್ಮದ ನಡವಳಿಕೆಗೆ ಸಂದ ಗೌರವ. ಇವರ ಕಾಲದಲ್ಲಿ ನಾವೆಲ್ಲರೂ ಇದ್ದೇವೆ ಅನ್ನುವುದೇ ನಮ್ಮೆಲ್ಲರ ಯೋಗ್ಯತೆ. ದೈವಾರಾಧನೆ ತುಳುನಾಡಿನಲ್ಲಿ ಹಾಸುಹೊಕ್ಕಿದ್ದು ಇಲ್ಲಿನ ಅನೇಕ ಹಿರಿಯರು ದೈವಾಂಶ ಸಂಭೂತರಾದ ಉದಾಹರಣೆಯೂ ಇದೆ. ಹೀಗಿರುವಾಗ ಧರ್ಮರಸು ಕ್ಷೇತ್ರದಲ್ಲಿ ಗಡಿ ಪ್ರಧಾನರಿಗೆ ಅಭಿನಂದನೆ ಸಲ್ಲಿಸಿದರೆ ಉಳ್ಳಾಯನಿಗೆ ಅಭಿನಂದನೆ ಸಲ್ಲಿಸಿದಂತೆ. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ” ಎಂದು ಹೇಳಿದರು.
ಬಳಿಕ ಮಾತಾಡಿದ ಪಾಂಡುರಂಗ ಪ್ರಭು ಅವರು, “ಗಡಿ ಪ್ರಧಾನರ ಅಭಿನಂದನಾ ಸಮಾರಂಭ ಹಾಗೂ ಶ್ರೀ ಕ್ಷೇತ್ರದ ವಾರ್ಷಿಕ ಮಹೋತ್ಸವದಲ್ಲಿ ಕ್ಷೇತ್ರದ ಭಕ್ತರು, ಊರಿನವರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು” ಎಂದರು. ಮಾತು ಮುಂದುವರಿಸಿದ ಗಡಿ ಪ್ರಧಾನರಾದ ಆದಿತ್ಯ ಮುಕ್ಕಾಲ್ದಿ ಅವರು, “ನನಗೆ ಸನ್ಮಾನ ಮುಖ್ಯವಲ್ಲ. ಜನರು ತೋರಿಸುತ್ತಿರುವ ಪ್ರೀತಿ ವಿಶ್ವಾಸವೇ ನಿಜವಾದ ಸನ್ಮಾನ. ಇದಕ್ಕಾಗಿ ನಾನು ಅಭಾರಿಯಾಗಿದ್ದೇನೆ. 30 ವರ್ಷಗಳಿಂದ ಶ್ರೀ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು ಮುಂದೆ ನಡೆಯಲಿರುವ ಕಾರ್ಯಕ್ರಮಕ್ಕೆ ಎಲ್ಲರೂ ಬಂದು ಸಹಕರಿಸಿ” ಎಂದರು.
ಸಭಾಧ್ಯಕ್ಷತೆ ವಹಿಸಿ ಮಾತಾಡಿದ ಅಭಿನಂದನಾ ಸಮಿತಿ ಅಧ್ಯಕ್ಷ ಪಣಿಯೂರುಗುತ್ತು ಕರುಣಾಕರ ಶೆಟ್ಟಿ ಅವರು, “ಶ್ರೀ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅಧ್ಯಕ್ಷ ಸ್ಥಾನದಲ್ಲಿ ನಾನಿದ್ದರೂ ಭಕ್ತರು, ಊರಿನವರು ಸಹಕಾರ ನೀಡಿದಲ್ಲಿ ಮಾತ್ರ ಸಂಪೂರ್ಣ ಯಶಸ್ಸು ಕಾಣಬಹುದು. ನಾವೆಲ್ಲರೂ ಮೇ 12ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಒಗ್ಗಟ್ಟಾಗಿ ಪಾಲ್ಗೊಳ್ಳೋಣ” ಎಂದರು.
ವೇದಿಕೆಯಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ದಯಾನಂದ ಶೆಟ್ಟಿ ಖಂಡಿಗೆಬೀಡು, ವೇದಮೂರ್ತಿ ರಂಗನಾಥ ಭಟ್ ಹಳೆಯಂಗಡಿ, ಸತ್ಯನಾರಾಯಣ ಭಟ್, ನಡಿಬೊಟ್ಟು ಗುತ್ತಿನಾರ್ ಸುಧಾಕರ್ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜಾ, ಕಾಂತು ಲಕ್ಕಣ ಗುರಿಕಾರರು ಮತ್ತಿತರರು ಉಪಸ್ಥಿತರಿದ್ದರು.
ಉದಯ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು.
ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಸುಧಾಕರ್ ಶೆಟ್ಟಿ ಖಂಡಿಗೆ ವಂದಿಸಿದರು.