ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗ್ರಾಮೀಣ ಭಾಗದ ಬಿದ್ಕಲ್ ಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ವಿಶೇಷ ಕಾರ್ಯಕ್ರಮ ಅನಾವರಣಗೊಂಡಿದೆ. ಇದರ ವಿಶೇಷತೆ ಸಮಾಜಕ್ಕೆ ಮಾದರಿಯಾಗುವುದರೊಂದಿಗೆ ಇಂದಿನ ದುಬಾರಿ ಕಾಲದಲ್ಲಿ ಇಂಧನವಿಲ್ಲದೆ ,ಅಡುಗೆ ತಯಾರಿ ಮಾಡುವ ವೈಶಿಷ್ಟ್ಯತೆಯನ್ನು ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರು ಮನನ ಮಾಡಿದರು.ಇತ್ತೀಚಿಗೆ ಬಿದ್ಕಲ್ ಕಟ್ಟೆ ಸರ್ಕಾರಿ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಭೇಟಿಯ ಸಂದರ್ಭದಲ್ಲಿ ಇಂತಹ ಇಂಧನರಹಿತ ಪ್ರಾತ್ಯಕ್ಷಿಕೆಯನ್ನು ತಯಾರಿ ಮಾಡುವುದರ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ಈ ವೈಶಿಷ್ಟ್ಯತೆಯನ್ನು ನೋಡಿ ಫುಲ್ ಫಿದಾ ಆಗಿದ್ದಾರೆ.
ಏನಿದು ಕಾರ್ಯಕ್ರಮ:-
ಸುಂದರ ಪರಿಸರದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಸರ್ಕಾರಿ ಶಾಲೆ ಕಾರ್ಯನಿರ್ವಹಿಸುತ್ತಿದೆ. ಹತ್ತಾರು ಮುಗ್ಧ ಮನಸುಗಳು ಇಲ್ಲಿ ಕಲಿಯುವ ಚಿನ್ನಾರಿಗಳು. ಪುಟ್ಟ ಪುಟ್ಟ ಕೈಗಳ ನಡುವೆ ತಮ್ಮನ್ನ ವಿಶೇಷವಾಗಿ ತೊಡಗಿಸಿಕೊಳ್ಳುವ ಉತ್ಸಾಹ, ಇಂಧನ ದುಬಾರಿಯಾದಂತಹ ಇಂದಿನ ಜನಮಾನಸದಲ್ಲಿ ಇಂಧನವಿಲ್ಲದೆ ತುರ್ತಾಗಿ ತಯಾರಿಸಬಹುದಾದಂತಹ ಅಡುಗೆ ಪದಾರ್ಥಗಳ ಪ್ರಾತ್ಯಕ್ಷಿಕೆಯನ್ನು ಸ್ಥಳದಲ್ಲಿ ಸಿದ್ಧಪಡಿಸಲಾಯಿತು. ಅಂತಹ ಪ್ರಾತ್ಯಕ್ಷಿಕೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಫುಲ್ ಫಿದಾ ಆಗ್ಬಿಟ್ಟಿದ್ದಾರೆ. ಸರ್ಕಾರಿ ಶಾಲೆಯ ಶಿಕ್ಷಕರ ಮುತುವರ್ಜಿ ಹಾಗೂ ಅದಮ್ಯ ಸಳತ ಮಕ್ಕಳಲ್ಲಿ ಇರುವಂತಹ ನೈಪುಣ್ಯತೆ ವಿಶೇಷವಾಗಿ ಗುರುತಿಸುವಂತಾಯಿತು.
ಇಂಧನ ರಹಿತ ಅಡುಗೆ ತಯಾರಿ:-
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಿದ್ಕಲ್ ಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ವಿಶೇಷ ಇಂಧನ ರಹಿತ ಅಡುಗೆ ತಯಾರಿ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು. ವಿದ್ಯಾರ್ಥಿಗಳು ತಮ್ಮ ಕೌಶಲ್ಯ ಮತ್ತು ತಮ್ಮ ವೈಯಕ್ತಿಕ ಚಿಂತನೆಗಳನ್ನ ಗಮನದಲ್ಲಿಟ್ಟುಕೊಂಡು ಶಾಲೆಯಲ್ಲಿ ಇಂಧನವಿಲ್ಲದೆ ತಯಾರಿಸಬಹುದಾದಂತಹ ಅಡುಗೆ ಪದಾರ್ಥಗಳನ್ನ ಪ್ರಾತ್ಯಕ್ಷಿಕೆ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತೋರ್ಪಡಿಸಲಾಯಿತು. ವಿವಿಧ ತರಹದ ಪದಾರ್ಥಗಳನ್ನು ಸಿದ್ಧಪಡಿಸುವಂತಹ ವಿಧಾನಗಳನ್ನು ಅನಾವರಣ ಮಾಡಲಾಯಿತು. ಬಿದ್ಕಲ್ ಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಕುಂದಾಪುರ ವಲಯದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಕಾಂತರಾಜು ಸರ್, ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿಗಳಾದ ಶ್ರೀ ವಿ.ಡಿ.ಮೊಗೇರ ಸರ್ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀ ಅಶೋಕ್ ನಾಯಕ್ ಸರ್ ಭೇಟಿ ನೀಡಿ, ಶಾಲಾ ಶೈಕ್ಷಣಿಕ ಚಟುವಟಿಕೆಗಳನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ದಿನ ವಿಶೇಷವಾಗಿ ಹಮ್ಮಿಕೊಂಡಿದ್ದ “ಇಂಧನ ರಹಿತ ಅಡುಗೆ” ಎಂಬ ವಿಶಿಷ್ಟ ಕಾರ್ಯ ಚಟುವಟಿಕೆಯನ್ನು ವೀಕ್ಷಿಸಿ ಮಕ್ಕಳನ್ನು ಶ್ಲಾಘಿಸಿದರು. ಮಕ್ಕಳು ಮಾಡಿದ ವಿವಿಧ ಬಗೆಯ ತಿನಿಸುಗಳನ್ನು ಸವಿದು, ಮಕ್ಕಳಲ್ಲಿ ಸಾರ್ಥಕತೆಯ ಮನೋಭಾವನೆಯನ್ನು ಮೂಡಿಸಿದರು.
ವಿವಿಧ ತರಗತಿಗಳಿಗೆ ಭೇಟಿ ನೀಡಿ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತರು.
ಸರ್ವ ಶಿಕ್ಷಕರ ಸಭೆ ಕರೆದು, ಶಾಲಾ ಶೈಕ್ಷಣಿಕ ಚಟುವಟಿಕೆಗಳು ಹಾಗೂ ಶಾಲಾ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿ ಮಾಹಿತಿ ಪಡೆದರು. ಇಷ್ಟು ದೊಡ್ಡ ಸಂಸ್ಥೆಯಲ್ಲಿ ಎಲ್ಲಾ ಶಿಕ್ಷಕರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿರುವುದನ್ನು ಗಮನಿಸಿ ಎಲ್ಲರಿಗೂ ವಿಶೇಷ ಅಭಿನಂದನೆ ತಿಳಿಸಿದರು. ಅಡುಗೆ ಮನೆಗೆ ಭೇಟಿ ನೀಡಿ ಅಡುಗೆ ಸಿಬ್ಬಂದಿಗಳೊಂದಿಗೆ ಮಾತನಾಡಿದರು. ಬಿಸಿಯೂಟವನ್ನು ಸವಿದು, ಉತ್ತಮ ಗುಣಮಟ್ಟದ ಆಹಾರವನ್ನು ತಯಾರಿಸಿ ಮಕ್ಕಳಿಗೆ ಬಡಿಸುತ್ತಿರುವುದರ ಬಗ್ಗೆ ಮೆಚ್ಚುಗೆ ಸೂಚಿಸಿ, ಅಡುಗೆ ಸಿಬ್ಬಂದಿಗಳಿಗೂ ಕೃತಜ್ಞತೆ ಸಲ್ಲಿಸಿದರು.ಒಟ್ಟಾರೆ ಈ ದಿನ ಮೂವರು ಅಧಿಕಾರಿಗಳ ಭೇಟಿಯಿಂದ ಪಬ್ಲಿಕ್ ಸ್ಕೂಲ್ ನಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿ, ಎಲ್ಲರಲ್ಲೂ ಪುನೀತಭಾವ ಒಡಮೂಡಿತು.
ವಿದ್ಯಾರ್ಥಿಗಳು ಪಠ್ಯ ವಿಚಾರಗಳಲ್ಲಿ ಮಾತ್ರ ತೊಡಗಿಸಿಕೊಳ್ಳದೆ ಇನ್ನಿತರ ವಿಚಾರಗಳಲ್ಲಿ ಮಕ್ಕಳು ಪ್ರಾಬಲ್ಯವನ್ನ ಹೊಂದಬೇಕು, ಈ ನಿಟ್ಟಿನಲ್ಲಿ ಮಕ್ಕಳಿಗೆ ಕಲಿಸುವಂತಹ ಪಾಠಗಳು ಮನನವಾಗಬೇಕು ಎಂಬ ನಿಟ್ಟಿನಲ್ಲಿ ಸರ್ಕಾರಿ ಶಾಲೆಯಲ್ಲಿ ಇಂತಹ ಇಂಧನರಹಿತ ಕಾರ್ಯಕ್ರಮಗಳನ್ನ ಏರ್ಪಡಿಸುವುದರ ಮೂಲಕ ಮಕ್ಕಳಲ್ಲಿನ ನೈಪುಣ್ಯತೆ ಮತ್ತು ಬೌದ್ಧಿಕ ಜ್ಞಾನ ವೃದ್ಧಿಯಾಗಲು ಸಹಕಾರಿಯಾಗುತ್ತದೆ ಎನ್ನುವುದು ಶಾಲಾ ಶಿಕ್ಷಕರ ಮುಕ್ತ ಅಭಿಪ್ರಾಯ. ಇಂಧನ ಬಳಸದೆ ತಯಾರಿಸುವಂತಹ ಅಡುಗೆ ಪದಾರ್ಥಗಳು ಮನುಷ್ಯನ ದೇಹಕ್ಕೆ ಎಷ್ಟು ಪರಿಣಾಮಕಾರಿಯಾಗಿ ಪೌಷ್ಟಿಕಾಂಶವನ್ನು ನೀಡುತ್ತದೆ ಅದಲ್ಲದೆ ಮನುಷ್ಯನಲ್ಲಿನ ಇನ್ನಿತರ ಖಾಯಿಲೆಗಳನ್ನ ದೂರ ಪಡಿಸುವಲ್ಲಿ ಇದು ಸಹಕಾರಿಯಾಗುತ್ತದೆ ಎನ್ನುವುದು ಶಿಕ್ಷಕರ ಅಭಿಪ್ರಾಯವಾದರೂ ಇದು ಸಮಾಜಕ್ಕೆ ಮಾದರಿಯಂತಿದೆ. ಒಟ್ಟಾರೆಯಾಗಿ ಸರ್ಕಾರಿ ಶಾಲೆಯಲ್ಲಿ ಇಂಧನ ರಹಿತ ಅಡುಗೆ ತಯಾರಿ ಮಾಡುವುದರ ಮೂಲಕ ಪೋಷಕರ ಮತ್ತೆ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವಲ್ಲಿ ಇದು ಸಹಕರಿಸುತ್ತದೆ ಎನ್ನುವುದು ಅಭಿಪ್ರಾಯ. ಸರ್ಕಾರಿ ಶಾಲೆಗಳಲ್ಲಿ ಬೇಸಿಗೆ ಶಿಬಿರದ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಅನಾವರಣ ಮಾಡುವುದರ ಮೂಲಕ ಮಕ್ಕಳು ಪಠ್ಯ ವಿಚಾರ ಬಿಟ್ಟು ಇನ್ನಿತರ ವಿಚಾರಗಳಲ್ಲಿ ತೊಡಗಿಸಿಕೊಳ್ಳಲು ಇದು ಮುಕ್ತ ಅವಕಾಶವಾಗುತ್ತದೆ ಅದಲ್ಲದೆ ಸಾಮಾಜಿಕ ಮತ್ತು ವೈಯಕ್ತಿಕ ವಿಚಾರಗಳನ್ನ ಶಿಕ್ಷಕರೊಂದಿಗೆ ಮುಕ್ತವಾಗಿ ಹಂಚಿಕೊಳ್ಳುವುದರ ಮೂಲಕ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಈ ಕಾರ್ಯಕ್ರಮ ತೋರ್ಪಡಿಸುತ್ತದೆ.