ಬಂಟರ ಸಂಘದ ಏಳಿಗೆಗಾಗಿ ಶ್ರಮಿಸಲು ಬದ್ಧನಾಗಿದ್ದು, ಒಳ್ಳೆಯ ಕಾರ್ಯದ ವಿಚಾರದಲ್ಲಿ ಯಾರೂ ಕೂಡಾ ತೊಂದರೆ ಕೊಡಬಾರದು ಎಂದು ಜಿಲ್ಲಾಧ್ಯಕ್ಷ ಬಿ.ಡಿ ಜಗದೀಶ್ ರೈ ಅಭಿಪ್ರಾಯಪಟ್ಟರು. ಮೂರ್ನಾಡು ಹೋಬಳಿ ಬಂಟರ ಸಂಘದ ವತಿಯಿಂದ ಎರಡು ದಿನಗಳ ಕಾಲ ಇಲ್ಲಿನ ಕಾಲೇಜು ಮೈದಾನದಲ್ಲಿ ನಡೆದ ‘ಸ್ವಜಾತಿ ಬಂಧುಗಳ ಸಮ್ಮಿಲನ – 2023’ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಂಟರ ಸಂಘ ಹಾಗೂ ಸಮುದಾಯದ ಅಭಿವೃದ್ಧಿ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಮುಂದಿನ ದಿನದಲ್ಲಿ ಒಂದೊಂದಾಗಿ ಕಾರ್ಯರೂಪಕ್ಕೆ ತರಲಾಗುವುದು. ಮುಖ್ಯವಾಗಿ ಬಂಟರ ಭವನ ನಿರ್ಮಾಣ ಕಾರ್ಯವನ್ನು ಶ್ರೀಘ್ರದಲ್ಲೇ ಆರಂಭಿಸಬೇಕೆಂಬ ಇರಾದೆ ಇದೆ. ಯಾರು ಕೂಡ ವಿನಾಕಾರಣ ಅಡ್ಡಗಾಲು ಹಾಕಬಾರದೆಂದು ಮನವಿ ಮಾಡಿದರು. ಜಿಲ್ಲಾ ಬಂಟರ ಶಾಂತಿ ಧಾಮಕ್ಕೆ ಸುಂದರ ರೂಪ ನೀಡಲಾಗಿದೆ. ಮುಂದೆ ಪ್ರತಿಭಾ ಪುರಸ್ಕಾರ, ಸಮುದಾಯದ ಸಾಧಕರನ್ನು ಗುರುತಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಸಮುದಾಯದವರ ಏಳಿಗೆಗಾಗಿ ಬಂಟರ ಸಂಘ ಸದಾ ಬೆಂಬಲವಾಗಿರುತ್ತದೆ. ಎಲ್ಲಾ ಹೋಬಳಿಯಲ್ಲೂ ಸಂಘದ ಘಟಕ ಆರಂಭಿಸಿ, ಕಾರ್ಯಚಟುವಟಿಕೆಯಿಂದ ಕೂಡಿರುವಂತೆ ಕಾಳಜಿ ವಹಿಸಬೇಕು. ಸಮುದಾಯದ ಎಲ್ಲರನ್ನೂ ಒಟ್ಟು ಸೇರಿಸಿಕೊಂಡು ಕಾರ್ಯಕ್ರಮ ರೂಪಿಸಬೇಕೆಂದು ಕಿವಿಮಾತು ಹೇಳಿದರು.
ಸನ್ಮಾನ : ವಿವಿಧ ಕ್ಷೇತ್ರದ ಸಾಧಕರಾದ ಡಾ. ಹೇಮಂತ್ ಕುಮಾರ್, ಬಾಬ ಅರುಣ್ ರೈ, ಬಿ.ಕೆ.ಸುರೇಶ್ ರೈ, ಸುಮತಿ ಶೆಟ್ಟಿ, ಜಿತೇಂದ್ರ ರೈ, ಜಯಂತಿ ಲವ ರೈ, ಪ್ರೇಮಲತಾ ಶೆಡ್ತಿ, ಕಿಶೋರ್ ರೈ ಕತ್ತಲೆಕಾಡು ಅವರನ್ನು ಸನ್ಮಾನಿಸಲಾಯಿತು. ಮೂರ್ನಾಡು ಹೋಬಳಿ ಘಟಕ ಅಧ್ಯಕ್ಷ ಬಿ.ಕೆ.ಚಂದ್ರಶೇಖರ ರೈ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಬಿ.ಬಿ.ಐತಪ್ಪ ರೈ, ರವೀಂದ್ರ ವಿ.ರೈ, ಅಶ್ವಿನಿ ಪುರುಷೋತ್ತಮ ರೈ, ಸುದೀಶ್ ರೈ, ರಮೇಶ್ ರೈ, ಜನಾದ೯ನ ಶೆಟ್ಟಿ, ದುಷ್ಯಂತ್ ರೈ, ರತ್ನಾಕರ ರೈ, ವಸಂತ ರೈ, ಬಿ.ಸಿ.ಹರೀಶ್ ರೈ, ಗಿರೀಶ್ ರೈ, ಸೌಮ್ಯ ಶೆಟ್ಟಿ, ಶರತ್ ಶೆಟ್ಟಿ, ಜಯಂತಿ ರೈ ವೇದಿಕೆ ಯಲ್ಲಿದ್ದರು. ಅಶ್ವಥ್ ರೈ ಸ್ವಾಗತಿಸಿದರು. ಕಿಶೋರ್ ರೈ ಕತ್ತಲೆಕಾಡು ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ : ಮಂಗಳೂರಿನ ಮಸ್ಕಿರಿ ಕುಡ್ಲ ತಂಡದ ಕಾಮಿಡಿ ಕಚಗುಳಿ ವಿಶೇಷ ಆಕರ್ಷಣೆಯಾಗಿ ರಂಜಿಸಿದೆ. ಖ್ಯಾತ ಕಲಾವಿದರಾದ ದೀಪಕ್ ರೈ ಪಾಣಾಜೆ, ಜೆ.ಪಿ. ತೂಮಿನಾಡು, ಪ್ರಕಾಶ್ ತೂಮಿನಾಡು, ರಾಜೇಶ್ ಮುಗುಳಿ ಮನೋಜ್ಙ ಅಭಿನಯದ ಮೂಲಕ ನೆರೆದಿದ್ದವರನ್ನು ನಗೆಗಡಲಿನಲ್ಲಿ ತೇಲಿಸಿದರು. ಇದರೊಂದಿಗೆ ಸಮಾಜದ ಯುವ ಪ್ರತಿಭೆಗಳು ನೃತ್ಯ, ಗಾಯನ ಕಾಯ೯ಕ್ರಮ ನಡೆಸಿಕೊಟ್ಟರು.