ತೋನ್ಸೆ ವಿಜಯಕುಮಾರ್ ಶೆಟ್ಟಿ ಯವರು, ಅವರ ಬಾಲ್ಯದಿಂದಲೇ ರಂಗಭೂಮಿಯ ಹೆಚ್ಚಿನ ಪ್ರಾಕಾರ ಗಳಲ್ಲಿ ಓರ್ವ ಬಹು ಪ್ರಸಿದ್ಧಿಯ ಕಲಾವಿದರಾಗಿ ಬೆಳೆದು ಬಂದವರು. ಅವರ ಹುಟ್ಟು ಉಡುಪಿ ಬಳಿಯ ತೋನ್ಸೆಯ ಕೋಡ್ದಬ್ಬು ದೈವ ಹುಟ್ಟಿ ಬೆಳೆದ ಕೋಡಿ ಕಂಡಾಳ ಕ್ಷೇತ್ರ. ಇವರದ್ದು ತುಳು ನಾಡಿನ ನಾಮಾಂಕಿತ ಕೊಡಂಗೆ ಬನ್ನಾರ್ರವರ ವಂಶ. ಸುಮಾರು ಹತ್ತು ಹನ್ನೆರಡು ವರ್ಷ ಪ್ರಾಯದಲ್ಲಿಯೇ ರಾಷ್ಟ್ರಪ್ರಶಸ್ತಿ ವಿಜೇತ ಗುರು ಕಾಂತಪ್ಪ ಮಾಸ್ತರ್ (ನಮ್ಮ ಪುಷ್ಕಳ ಕುಮಾರ್ ತೋನ್ಸೆಯವರ ತಂದೆ). ಮತ್ತು ಗುರು ಜಯಂತ್ ಕುಮಾರ್ ವರಿಂದ ಯಕ್ಷಗಾನ, ರಾಷ್ಟ್ರಪ್ರಶಸ್ತಿ ವಿಜೇತ ಗುರು ಗೋಪಾಲಕೃಷ್ಣ ರಾವ್ ಇವರಿಂದ ನಾಟಕ ರಂಗದ ಎಲ್ಲಾ ವಿಭಾಗಗಳಲ್ಲೂ ಪರಿಣಿತರಾದ ವಿಜಯಕುಮಾರ್ ಶೆಟ್ಟಿಯವರು ಶಾಲಾ ಮತ್ತು ಕಾಲೇಜ್ ವಿದ್ಯಾರ್ಥಿ ಯಾಗಿದ್ದಾಗಲೆ ನಾಡಿನ ಅತ್ಯಂತ ನಾಮಾಂಕಿತ ನಿರ್ದೇಶಕರಿಂದ ತರಬೇತಿ ಪಡೆದು ಬಹಳ ಪ್ರಸಿದ್ಧಿಯ ನಾಟಕಕಾರರಾಗಿ ಜನಪ್ರಿಯತೆಯನ್ನು ಪಡೆದಿದ್ದರು. 1975 ರಲ್ಲಿ ಅವರು ಬರೆದು ನಿರ್ದೇಶಿಸಿದ್ದ ವಸುಂದರಾ ನಾಟಕ ನೂರಾರು ಪ್ರಯೋಗಗಳನ್ನು ಕಂಡಿತ್ತು. ಅವರ ಎಚ್ಚಮ್ಮ ನಾಯಕ, ನೀರ್ ಕಡ್ತುಂಡ, ಏರ್ ಅಪರಾಧಿ…? ಇಂತಹ ಅನೇಕ ನಾಟಕಗಳು ಓರ್ವ ಲೇಖಕ ನಿರ್ದೇಶಕನಾಗಿ ಕರಾವಳಿ ಕರ್ನಾಟಕದಲ್ಲಿ ಅವರನ್ನು ಆ ಕಾಲದಲ್ಲಿಯೇ ಕೀರ್ತಿ ಶಿಖರಕ್ಕೆ ಏರಿಸಿದ್ದವು. 1977 ರಲ್ಲಿ ಅವರು ಬರೆದು ನಿರ್ದೇಶಿಸಿದ್ದ ಶಬ್ದವೇಧಿ ಪೌರಾಣಿಕ ನಾಟಕ ಬಹಳ ಪ್ರಸಿದ್ಧಿಯನ್ನು ಪಡೆದಿತ್ತು. ಉಡುಪಿಯ ರಂಗಭೂಮಿ ಕಲಾ ಸಂಸ್ಥೆಯಲ್ಲಿ ಕೂಡಾ ಸದಸ್ಯನಾಗಿದ್ದು ರಂಗ ಚಟವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಅವರ ಗುರುಗಳಾದ ರಮಾನಂದ ಚೂರ್ಯರಿಂದ ರಂಗ ತರಬೇತಿ ಪಡೆದು ಅವರ ನಾಟಕಗಳಲ್ಲಿ ಕೂಡಾ ಪಾತ್ರವಹಿಸಿದ್ದರು.
ಮುಂದೆ 1978 ರಲ್ಲಿ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿ ಮುಂಬಯಿ ಸೇರಿಕೊಂಡ ವಿಜಯಕುಮಾರ್, ಆಗ ಮುಂಬಯಿಯಲ್ಲಿದ್ದ ತೋನ್ಸೆಯ ತನ್ನ ಕಲಾವಿದ ಸ್ನೇಹಿತರನ್ನು ಮತ್ತು ಬ್ಯಾಂಕ್ ಸಹಪಾಠಿ ಸರ್ವೋತ್ತಮ ಶೆಟ್ಟಿ, ಡಾ. ಸೀತಾರಾಮ್ ಆಳ್ವ, ನಾಟಕಕಾರ ಉಮೇಶ್ ಶೆಟ್ಟಿ, ಚಿತ್ರನಟ ವಾಮನ್ ರಾಜ್, ಲಕ್ಷ್ಮಣ್ ಕಾಂಚನ್, ರಘುರಾಜ್ ಕುಂದರ್, ಅಶೋಕ್ ಶೆಟ್ಟಿ ಪಾಂಗಾಳ, ರಮೇಶ್ ಕುಂದರ್ ಮುಂತಾದ ಗೆಳೆಯರ ಸಹಕಾರದಿಂದ 1979 ರಲ್ಲಿ ಕಲಾ ಜಗತ್ತು ಸಂಸ್ಥೆಯನ್ನು ಹುಟ್ಟು ಹಾಕಿದರು. ಅತ್ಯದ್ಭುತ ಪ್ರತಿಭಾವಂತ ರಂಗ ತಜ್ಞ, ಲೇಖಕ, ನಟ, ನಿರ್ದೇಶಕ, ಸಾಹಿತಿ, ಉತ್ತಮ ಸಂಘಟಕ, ವಾಗ್ಮಿ, ಸ್ನೇಹಮಯಿ ವಿಜಯಕುಮಾರ್ ಶೆಟ್ಟಿಯವರನ್ನು ಮುಂಬಯಿ ಜನತೆ ಪ್ರೀತಿಯಿಂದ ಸ್ವಾಗತಿಸಿ ಪ್ರೋತ್ಸಾಹವನ್ನು ಕೊಟ್ಟರು. 1979 ರಲ್ಲಿಯೇ ವಿಜಯ ಕುಮಾರ್ ಶೆಟ್ಟಿ ಯವರ ನಿರ್ದೇಶನದಲ್ಲಿ ಅವರ “ವಸುಂದರಾ” ನಾಟಕ ಕಲಾ ಜಗತ್ತಿನ ಪ್ರಬುದ್ಧ ಕಲಾವಿದರ ಮನೋಜ್ಞ ಅಭಿನಯದ ಮೂಲಕ ತಿರುಗು ರಂಗ ಮಂಟಪದಲ್ಲಿ ವಿಶೇಷ ಬೆಳಕಿನ ವ್ಯವಸ್ಥೆನಿಂದ ಯಶಸ್ಸಿನ ದಾಖಲೆಯ ಪ್ರದರ್ಶನಗಳನ್ನು ನೀಡಲು ಪ್ರಾರಂಭಿಸಿತು. ಈ ನಾಟಕದಿಂದ ಮುಂಬೈ ರಂಗಭೂಮಿಗೆ ಹೊಸ ಸಂಚಲನ ದೊರೆಯಿತು.
1980 ರಲ್ಲಿ ಕಲಾ ಜಗತ್ತು ಸಂಸ್ಥೆಗಾಗಿ ವಿಜಯಣ್ಣ ಬರೆದು, ನಿರ್ದೇಶಿಸಿ ಒಂದು ಹಾಸ್ಯ ಪಾತ್ರದಲ್ಲಿ ಅಭಿನಯಿಸಿದ ಬೂತದ ಇಲ್ಲ್ ತುಳು ನಾಟಕ ಮುಂಬಯಿಯ ಷನ್ಮುಖಾನಂದ ಸಭಾಗೃಹದ 3000 ಆಸಿನಗಳು ಭರ್ತಿಯಾಗಿ ಪ್ರದರ್ಶಿಸಲ್ಪಟ್ಟಿತು. ತುಳು ರಂಗಭೂಮಿಯಲ್ಲಿ ಹೊಸ ಕ್ರಾಂತಿಯನ್ನು ಮಾಡಿದ ಬೂತದ ಇಲ್ಲ್ ಮುಂದೆ ನೂರಾರು ಪ್ರಯೋಗಗಳನ್ನು ಕಂಡು ಕಲಾ ಜಗತ್ತಿನ ಹೆಸರನ್ನು ವಿಶ್ವ ಖ್ಯಾತಿಗೆ ಏರಿಸಿದೆ. ಅದೇ ವರ್ಷ ವಿಜಯ್ ಕುಮಾರ್ ಶೆಟ್ಟಿಯವರ ನಿರ್ದೇಶನದ ನಾವಿಲ್ಲದಾಗ ನಾಟಕವು ಅದ್ಬುತ ಯಶಸ್ಸಿನ ಮೂಲಕ ನೂರಕ್ಕೂ ಹೆಚ್ಚಿನ ಪ್ರಯೋಗವನ್ನು ಕಂಡಿತು. 1981ರಲ್ಲಿ ಕಲಾ ಜಗತ್ತು ತನ್ನ ಬೂತದ ಇಲ್ಲ್ ಮತ್ತು ನಾವಿಲ್ಲದಾಗ ನಾಟಕಗಳೊಂದಿಗೆ ಊರಿನ ಪ್ರವಾಸ ಕೈಗೊಂಡು ಧರ್ಮಸ್ಥಳದಲ್ಲಿ ಪೂಜ್ಯ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ ಈ ಎರಡೂ ನಾಟಕಗಳ ಪ್ರದರ್ಶನ ತುಂಬಾ ಯಶಸ್ಸನ್ನು ಕಂಡಿತು. ತುಳು ರಂಗಭೂಮಿಯಲ್ಲಿ ಹೊಸ ಕ್ರಾಂತಿಯನ್ನು ಈ ನಾಟಕಗಳು ಹುಟ್ಟಿಸಿವೆ ಎಂದು ಖಾವಂದರು ಮನಸಾ ಹೊಗಳಿ ಲೇಖಕ ನಿರ್ದೇಶಕ ವಿಜಯಕುಮಾರ್ ಶೆಟ್ಟಿಯವರಿಗೆ ಚಿನ್ನದ ಉಂಗುರ ತೊಡಿಸಿ ಸನ್ಮಾನಿಸಿ ಅಂತೆಯೇ ಎಲ್ಲಾ ಕಲಾವಿದರನ್ನು ಕೂಡಾ ಪ್ರತ್ಯೇಕವಾ ಗಿ ಪ್ರೀತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಹರಸಿದರು.
ಮುಂದೆ ಊರಿನಲ್ಲಿ ದಾಖಲೆಯ ಉತ್ತಮ ಪ್ರದರ್ಶನಗಳ ಮೂಲಕ ವಿಜಯಣ್ಣ ಮತ್ತು ಕಲಾ ಜಗತ್ತು ಊರಿನ ಜನಮಾನಸದ ಮನದಲ್ಲಿ ಶಾಶ್ವತ ಸ್ಥಾನವನ್ನು ಗಳಿಸಿದರು. 1982ರಲ್ಲಿ ವಿಜಯಕುಮಾರ್ ಶೆಟ್ಟಿ ಯವರ ನಿರ್ದೇಶನದಲ್ಲಿ, ಡಾ. ಸೀತಾರಾಮ್ ಆಳ್ವ ಮುಖ್ಯ ಪಾತ್ರ “ನಾಜೂಕಯ್ಯ” ನಾಗಿ ನಟಿಸಿದ ಹಿರಣ್ಣಯ್ಯನವರ ದೇವದಾಸಿ ಕನ್ನಡ ನಾಟಕ ಕಿಂಗ್ಸ್ ಸರ್ಕಲ್ ನ ಷಣ್ಮುಖಾನಂದ ಸಭಾಗೃಹದಲ್ಲಿ ಹೌಸ್ ಫುಲ್ ಬೋರ್ಡ್ ಹಾಕಿಸಿ ಪ್ರದರ್ಶನ ನೀಡಿತು. ನೂರಾರು ಮಂದಿ ಟಿಕೆಟ್ ಸಿಗದೇ ಹಿಂತಿರಿಗಿದ್ದರು. ನಾಟಕದಲ್ಲಿ ಡಾ. ಸೀತಾರಾಮ್ ಆಳ್ವ, ವಿಜಯಣ್ಣ ಮತ್ತು ಚಿತ್ರ ನಟಿ ಸರೋಜಿನಿ ಶೆಟ್ಟಿ ಮುಖ್ಯ ಪಾತ್ರ ವಹಿಸಿದ್ದರು. ಮೂವರು ಮಹಾನ್ ಕಲಾವಿದರ ಅಭಿನಯಕ್ಕೆ ಕರತಾಡನದ ಸುರಿಮಳೆ ಸುರಿದಿತ್ತು. ಆ ಕಾಲದಲ್ಲಿಯೇ ಕಲಾಜಗತ್ತು ಜನಪ್ರಿಯತೆಯ ತುತ್ತ ತುದಿಯಲ್ಲಿತ್ತು. ಎಲ್ಲಕ್ಕಿಂತಲೂ ಮಿಗಿಲಾಗಿ ತುಳು ರಂಗಭೂಮಿಯಲ್ಲಿ ಅತಿ ಎತ್ತರದ ಸ್ಥಾನವನ್ನು ಕಲಾಜಗತ್ತು ಸಂಸ್ಥೆ ಮತ್ತು ತೋನ್ಸೆ ವಿಜಯ್ ಕುಮಾರ್ ಶೆಟ್ಟಿಯವರಿಗೆ ನೀಡಿದ ನಾಟಕ ಈ ನಲಿಕೆ ದಾಯೆಗ್…? 1982 ರಲ್ಲಿ ವಿಜಯಣ್ಣ ಬರೆದು ನಿರ್ದೇಶಿಸಿ ಅಭಿನಯಿಸಿದ ಈ ನಾಟಕ ಕಲಾಜಗತ್ತು ಕಲಾವಿದರ, ವಿಷೇಶವಾಗಿ ಚಿತ್ರ ನಟ ವಾಮನ್ ರಾಜ್ ಮತ್ತು ಚಂದ್ರಪ್ರಭ ಸುವರ್ಣ ರವರ ಮನೋಜ್ಞ ಅಭಿನಯ, ಚಲಿಸುವ ರಂಗ ಮಂಟಪ, ತುಳು ಜಾನಪದ ಸಂಸ್ಕೃತಿ, ಆಚಾರ, ವಿಚಾರ, ಶ್ರೇಷ್ಟತೆಗಳ ಸಮಾಗಮದ ಈ ನಲಿಕೆ ದಾಯೆಗ್…? ನಾಟಕ ಮುಂಬಯಿ, ಕರ್ನಾಟಕ ಹಾಗೂ ವಿದೇಶಗಳಲ್ಲೂ ಪ್ರದರ್ಶನಗೊಂಡು ಇಂದಿಗೂ ಪ್ರೇಕ್ಷಕರು ಅವರ ನೆನಪಿನಂಗಳದಲ್ಲಿ ಸ್ಥಾಯಿಯಾಗಿ ಇರಿಸಿಕೊಂಡು ಮನಸಾ ಹೊಗಳುತ್ತಿರುವ ಈ ನಾಟಕದಿಂದಾಗಿಯೆ ಮುಂಬಯಿ ಕನ್ನಡಿಗರ ಕಣ್ಮಣಿ ತೋನ್ಸೆ ವಿಜಯ್ ಕುಮಾರ್ ಶೆಟ್ಟಿಯವರು ತುಳು ರಂಗಭೂಮಿಯ ಭೀಷ್ಮ ಅನಿಸಿಕೊಂಡು ಜನಪ್ರಿಯತೆಯ ತುತ್ತ ತುದಿಯಲ್ಲಿದ್ದಾರೆ.
ಅಂದಿನಿಂದ ಇಂದಿನವರೆಗೂ ಕಲಾ ಜಗತ್ತು, ವಿಜಯ್ ಕುಮಾರ್ ಶೆಟ್ಟಿಯವರು ಬರೆದು ನಿರ್ದೇಶಿಸಿ ಅಭಿನಯಿಸಿದ 50 ಕ್ಕಿಂತಲೂ ಹೆಚ್ಚು ನಾಟಕಗಳು ದೇಶ ವಿದೇಶಗಳಲ್ಲಿ ಹೆಚ್ಚಿನವು ನೂರಕ್ಕಿಂತಲೂ ಅಧಿಕ ಯಶಸ್ಸಿನ ಪ್ರಯೋಗಗಳನ್ನು ಕಂಡು ದಾಖಲೆಯನ್ನು ನಿರ್ಮಿಸಿವೆ.
1981ರಿಂದ ಹಲವು ವರ್ಷ ಮುಂಬೈ ಯಿಂದ ಊರಿಗೆ ನಾಟಕ ಪ್ರವಾಸ ಕೈಗೊಳ್ಳುತ್ತಿದ್ದ ಕಲಾ ಜಗತ್ತು ತಂಡ ಕರಾವಳಿ ಕರ್ನಾಟಕದಾದ್ಯಂತ ನೂರಾರು ಯಶಸ್ವೀ ರಂಗಪ್ರಯೋಗ ಗಳನ್ನು ನೀಡಿದೆ. ಆ ಕಾಲದಲ್ಲಿ ಊರಿನ ನಾಟಕ ಪ್ರೇಮಿಗಳು ಕಲಾ ಜಗತ್ತು ನಾಟಕಗಳನ್ನು ನೋಡಲು ಕಾತರದಿಂದ ಕಾಯುತ್ತಿದ್ದರು. ಜನ ಜಾತ್ರೆಯಂತೆ ಈ ಮುಂಬೈ ತಂಡದ ನಾಟಕಗಳನ್ನು ವೀಕ್ಷಿಸಲು ಬರುತ್ತಿದ್ದರು. ಅತ್ತ್ಯುತ್ತಮ ಕೃತಿ ಅನುಭವಿ ನಿರ್ದೇಶನ, ಪ್ರಭುದ್ದ ಕಲಾವಿದರು, ಅವರು ಹಿಂದೆಂದೂ ಕಾಣದ ತಿರುಗುವ ಮತ್ತು ಚಲಿಸುವ ರಂಗ ತಂತ್ರ, ಮರಾಠಿ ರಂಗೂಮಿಯಿಂದ ಪ್ರೇರಿತವಾದ ಅದ್ಬುತ ಸಂಯೋಜನೆಯ ಬೆಳಕಿನ ವ್ಯವಸ್ಥೆ, ಉತ್ತಮ ಸಂಗೀತ, ಜೊತೆಗೆ ಅವರ ನೆಚ್ಚಿನ ಮೆಚ್ಚಿನ ರಂಗರಾಜ ವಿಜಯ್ ಕುಮಾರ್ ಶೆಟ್ಟಿ ಯವರ ಸಂಘಟನೆಯ ಕಲಾ ಜಗತ್ತು ತಂಡ ಜಯಭೇರಿ ಬಾರಿಸುತ್ತಿದ್ದ ಪ್ರವಾಸ ಮತ್ತು ರಂಗ ಪ್ರಯೋಗಗಳನ್ನು ಈಗಲೂ ಊರಿನ ಜನತೆ ನೆನಪಿಸಿಕೊಳ್ಳುತ್ತಾರೆ.
ವಿಜಯಣ್ಣ ಬರೆದು ನಿರ್ದೇಶಿಸಿದ ಊರ್ರ್ದ ಮಾರಿ, ಶರಶಯ್ಯೆ, ಗಿಡಪ್ಪುನಕ್ಲುಲಾ ಬಲ್ಪುನಕ್ಲುಲಾ, ಪಗರಿದ ಮಂಚಾವು, ಮೋಕ್ಷ, ಪಾಪೊದ ಪುದೆ, ಕೋಡೆ ಅಂಚ ಇನಿ ಇಂಚ, ಗುಬ್ಬಚ್ಚಿ ಮುಂತಾದ ನಾಟಕಗಳು ರಾಷ್ಟ್ರೀಯ ಮಟ್ಟದಲ್ಲಿ ಅನೇಕಪ್ರಶಸ್ತಿಗಳನ್ನು ಪಡೆದಿವೆ. ಬದಿ ನಾಟಕಕ್ಕೆ ತುಳು ನಾಟಕ ಅಕಾಡಮಿ ಪ್ರಶಸ್ತಿ ದೊರಕಿದೆ. ಜೋಕಲು ದೇವೆರ್ ವಿಜಯಣ್ಣ ಕಲಾ ಜಗತ್ತು ಚಿಣ್ಣರ ಬಿಂಬದ ಮಕ್ಕಳಿಗಾಗಿ ಬರೆದ ನಾಟಕ. ಅದು ಮಂಗಳೂರಿನ ತುಳು ಅಕಾಡೆಮಿ ಪ್ರಕಟಿತ ತುಳು ನಾಟಕಗಳ ಗೊಂಚಿಲ್ ಪುಸ್ತಕದಲ್ಲಿ ಪ್ರಕಟವಾಗಿದೆ. ಬರ್ಸ, ಬೊಲ್ಲ, ತೆಡಿಲ್, ಎನಡ್ದಾವಂದ್, ಒರಿಯೆ ಮಗೆ ಒರಿಯೆ, ತೂ ತುಡರ್, ಒವುಲಾವು, ಈ ಬಾಲೆ ನಮ್ಮವು, ಪತ್ತಾದ್ ಪದ್ರಾಡ್, ಅಮ್ಮ ಚಾವಡಿಡ್ ಅಪ್ಪೆ ಸೀತೆ, ಬೋಂಬುಯೇ ಬೋಂಬು, ಜೋಕುಲು ದೇವೆರ್ ಇವೆಲ್ಲವೂ ವಿಜಯಣ್ಣನ ವಿಶಿಷ್ಟ ಪರಿಕಲ್ಪನೆಯ, ಇಂದಿಗೂ ರಂಗ ಪ್ರಯೋಗಗಳನ್ನು ನೀಡುತ್ತಿರುವ ಕಲಾ ಜಗತ್ತಿನ ಪ್ರಸಿದ್ಧಿಯ ನಾಟಕಗಳು. ರಾಜ್ಯ ರಾಷ್ಟ್ರ ಮಟ್ಟದ ಅನೇಕ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿ, ಹೆಚ್ಚಿನ ಬಾರಿ ಪ್ರಥಮ ಯಾ ದ್ವಿತೀಯ ಸ್ಥಾನ ಪಡೆದ ಹೆಗ್ಗಳಿಕೆ ಕಲಾಜಗತ್ತು ಸಂಸ್ಥೆಯದ್ದು. ಎಂದಾದರೂ ಒಮ್ಮೆ ನೀವು ಡೊoಬಿವಿಲಿಯ ವಿಜಯ ಕುಮಾರ್ ಶೆಟ್ಟಿಯವರ ಮನೆಗೆ ಹೋಗಿ ನೋಡಬೇಕು. ನಿರ್ದೇಶನ ಮತ್ತು ಕೃತಿಗೆ ಪ್ರಥಮ ಪ್ರಶಸ್ತಿ ಪಡೆದ ಸುಮಾರು 22 ಫಲಕಗಳು, ಹೆಮ್ಮೆ ಎನಿಸುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಸುಂದರ ಫಲಕ ಮತ್ತು ಚಿನ್ನದ ಸರ, ಅಲ್ಲಲ್ಲಿ ಎದ್ದು ಕಾಣುವ ಚಿನ್ನದ ಪದಕಗಳು, ಎರಡು ಚಿನ್ನದ ಮಕುಟ, ಮುಂಬಯಿಯ ಅಭಿಮಾನಿಗಳು 2008ರಲ್ಲಿ ನೀಡಿದ 100 ಗ್ರಾಂ ಚಿನ್ನದ ಪದಕ, ಪ್ರತಿಭಾ ಪುರಸ್ಕಾರದ ನೂರಾರು ಪ್ರಶಸ್ತಿಗಳು, ದೇಶದ ವಿವಿದೆಡೆ ಹಾಗೂ ಲಂಡನ್, ಅಬುಧಾಬಿ, ದುಬೈ, ಮಸ್ಕತ್, ಭೆಹರಿನ್,ಶಾರ್ಜಾ, ಖಟಾರ್ ಹೀಗೆ ಜಗತ್ತಿನ ವಿವಿಧ ಕ್ಷೇತ್ರಗಳಲ್ಲಿ ಭಾಗವಹಿಸಿ ಅಲ್ಲಿನ ಕನ್ನಡಿಗರು ನೀಡಿದ ಪ್ರಶಸ್ತಿ ಫಲಕಗಳು, ಹಲವು ಅಭಿನಂದನಾ ಗ್ರಂಥಗಳು, ಗೋಡೆ ತುಂಬಾ ಅಚ್ಚುಕಟ್ಟಾಗಿ ನೇತಾಡಿಸಿರುವ ನೂರಾರು ಸನ್ಮಾನ ಪತ್ರಗಳು, ಜಗತ್ತಿನ ಅತ್ಯಂತ ಶ್ರೇಷ್ಠರ ಜೊತೆಯಲ್ಲಿ ನಗುಮೊಗದ ವಿಜಯಣ್ಣ ಎದ್ದು ಕಾಣುವ ಆಕರ್ಷಕ ಭಾವಚಿತ್ರಗಳು ಆ ಮನೆಯನ್ನು ತುಂಬಿವೆ. ವಿಜಯಕುಮಾರ್ ಶೆಟ್ಟಿ ಯವರ ಪ್ರಕಟಿತ ನಾಟಕ ಪುಸ್ತಕಗಳು, ಲಿಮ್ಕಾ ಬುಕ್ ರಾಷ್ಟ್ರೀಯ ದಾಖಲೆಗೆ ದೊರೆತ ವಿಶೇಷ ಸರ್ಟಿಫಿಕೇಟ್ ಮತ್ತು ಭಿತ್ತಿ ಪತ್ರಗಳು, ಮಹಾರಾಷ್ಟ್ರ ಸರಕಾರದ ಮಂತ್ರಿವರ್ಯ ಸನ್ಮಾನ್ಯ ಶ್ರೀ ರವೀಂದ್ರ ಚವ್ಹಾಣ್ ರವರಿಂದ ಪ್ರತಿಷ್ಟೆಯ ಆದರ್ಶ ಡೊಂಬಿವಲಿಕಾರ್ ಪ್ರಶಸ್ತಿ ಸ್ವೀಕರಿಸುತ್ತಿರುವ ಸುಂದರ ಸಮಾರಂಭದ ಭಾವಚಿತ್ರಗಳು, ಮರಾಠಿ ಮಣ್ಣಿನಲ್ಲಿ ಓರ್ವ ತುಳು ಸಾಧಕನಿಗೆ ದೊರೆತ ವಿಶೇಷ ಮನ್ನಣೆ ಅದು, ಗೋಡೆಯಲ್ಲಿ ವ್ಯವಸ್ಥಿತ ರೀತಿಯಲ್ಲಿ ಜೋಡಿಸಿಟ್ಟ ಪ್ರಕಟಿತವಾದ ವಿಜಯಣ್ಣನ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಬಲ್ಲ ಪ್ರಕಟಿತ ಬರಹಗಳು ಅಲ್ಲಿ ಕಾಣಲು ಸಿಗುತ್ತವೆ. ಒಬ್ಬ ವ್ಯಕ್ತಿಯ ದೊಡ್ದ ವ್ಯಕ್ತಿತ್ವಕ್ಕೆ ಸಾಕ್ಷಿಯಾಗುವ ಸುಂದರ ದೃಶ್ಯವನ್ನು ಆ ಮನೆಯೊಳಗೆ ಕಣ್ಮನ ತುಂಬಿಕೊಳ್ಳಬಹುದು.
ಇಂದು ಜಗತ್ತಿನ ಅನೇಕ ರಾಷ್ಟ್ರಗಳಿಗೆ ಹೋಗಿ ಅಲ್ಲಿ ತಮ್ಮ ನಾಟಕಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿದ ಮುಂಬಯಿಯ ಏಕೈಕ ಸಂಸ್ಥೆ ಕಲಾ ಜಗತ್ತು. ಕಲಾ ಜಗತ್ತಿನ ಸುಮಾರು 25 ಮಂದಿ ಕಲಾವಿದರು ಅನೇಕ ಬಾರಿ ವಿದೇಶ ಪ್ರವಾಸ ಮಾಡಿದ್ದಾರೆ. ಹೊರ ದೇಶದ ತುಳು ಕಲಾಭಿಮಾನಿ ಪ್ರೇಕ್ಷಕರ ಎದುರು ತಮ್ಮ ಕಲಾ ಪ್ರೌಡಿಮೆಯನ್ನು ತೋರಿಸುವ ಸುವರ್ಣಾವಕಾಶವನ್ನು ಪಡೆದ ಇವರೆಲ್ಲರೂ ಇದಕ್ಕೇ ಅವಕಾಶ ಮಾಡಿಕೊಟ್ಟ ವಿಜಯಣ್ಣ ಮತ್ತು ಕಲಾ ಜಗತ್ತು ಮಾತೃ ಸಂಸ್ಥೆಯ ಬಗ್ಗೆ ಧನ್ಯತಾ ಮನೋಭಾವನೆಯನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೇ ಕೊಲ್ಲಿ ರಾಷ್ಟ್ರಗಳಲ್ಲಿನ ನಮ್ಮ ಎಲ್ಲಾ ನಾಟಕ ಪ್ರದರ್ಶನಗಳಿಗೆ ಕಾರಣೀಭೂತರಾದವರು ನಮ್ಮ ವಿಜಯಣ್ಣನ ಜೀವದ ಗೆಳೆಯ, ಕಲಾಜಗತ್ತಿನ ಸ್ಥಾಪಕ ಸದಸ್ಯ ಅಬುಧಾಬಿಯ ಶ್ರೀ ಸರ್ವೋತ್ತಮ ಶೆಟ್ಟಿಯವರು. ಅವರಿಗೆ ಕೂಡಾ ಸಂಸ್ಥೆ ಸದಾ ಚಿರಋಣಿಯಾಗಿದೆ.
ಈ 43 ವರ್ಷಗಳ ಅವಧಿಯಲ್ಲಿ ತೋನ್ಸೆ ವಿಜಯ ಕುಮಾರ್ ಶೆಟ್ಟಿಯವರ ನಿರ್ದೇಶನದಲ್ಲಿ ದಾಖಲೆಯ 3000 ಕ್ಕಿಂತಲೂ ಹೆಚ್ಚು ರಂಗ ಪ್ರಯೋಗಗಳನ್ನು ನೀಡಿದ ಕಲಾಜಗತ್ತು ಸಂಸ್ಥೆ ಕಲಾ ಕ್ಷೇತ್ರಕ್ಕೆ ನೂರಾರು ನಟ ನಟಿಯರನ್ನು ನೀಡಿದೆ. ದಿ.ಭವಾನಿ ಶಂಕರ್ ಶೆಟ್ಟಿ, ಡಾ. ಸೀತಾರಾಮ್ ಆಳ್ವ, ರಘುರಾಜ್ ಕುಂದರ್, ಡಾ. ಸುರೇಂದ್ರ ಕುಮಾರ್ ಹೆಗ್ಡೆ, ರಮೇಶ್ ಕುಂದರ್, ಸರೋಜಾ ದೇವಿ, ಪ್ರಭಾಕರ್ ಶೆಟ್ಟಿ, ಚಂದ್ರಾವತಿ ದೇವಾಡಿಗ, ಸುಧಾ ಶೆಟ್ಟಿ, ದಿ. ರಮೇಶ್ ಕರ್ಕೇರಾ, ಮೋಹನ್ ಮಾರ್ನಾಡ್, ಲಕ್ಷ್ಮಣ್ ಕಾಂಚನ್, ಕೃಷ್ಣರಾಜ ಶೆಟ್ಟಿ, ಹರೀಶ್ ಎಂ. ಶೆಟ್ಟಿ, ಹೇಮಂತ್ ಶೆಟ್ಟಿ, ಮಧುಸೂದನ್ ಶೆಟ್ಟಿ, ಸುಂದರ್ ಅಡಪ, ಲೀಲೇಶ್ ಆರ್. ಶೆಟ್ಟಿ, ಸುರೇಶ್ ಶೆಟ್ಟಿ ಡೋoಬಿವಿಲಿ, ಅಶೋಕ್ ಶೆಟ್ಟಿ ಪಾಂಗಾಳ, ಅಜಿತ್ ಶೆಟ್ಟಿ, ದಿ. ಭಾರತಿ ಕೊಡ್ಲೇಕರ್, ಕಲಾ ಕುಲಕರ್ಣಿ, ರಘುವೀರ್ ಭಟ್ , ಅಶೋಕ್ ಪಕ್ಕಳ, ಎನ್ ಪ್ರಥ್ವಿರಾಜ್ ಮುಂಡ್ಕೂರು, ವೈಷ್ಣವಿ ಶೆಟ್ಟಿ, ಸುರೇಶ್ ದೇವಾಡಿಗ, ದಿ. ಎಚ್ ಮೋಹನ್, ಜಯರಾಜ್, ರೂಪಾ ಭಟ್, ಜೂಲಿಯೆಟ್ ಪಿರೇರಾ, ಜಗದೀಶ್ ರಾವ್, ಕೃತಿಕಾ ಅಮೀನ್, ಶ್ರೇಯಸ್ ಎಸ್. ಹೆಗ್ಡೆ, ಅಶೋಕ್ ಶೆಟ್ಟಿ ಮುಂಡ್ಕೂರು, ಅರವಿಂದ ಶೆಟ್ಟಿ ಕೊಜಕುಳ್ಳಿ, ಮೋಹನ್ ಸಾಲಿಯಾನ್, ಲತೇಶ್ ಪೂಜಾರಿ, ದರ್ಶನ್ ಶೆಟ್ಟಿ, ಶ್ಯಾಮ್ ಸುಂದರ್, ರೇಷ್ಮಾ ಶೆಟ್ಟಿ,( ನಮ್ಮ ಪತ್ತನಾಜೆ ಸಿನೆಮಾದ ನಾಯಕಿ), ವೀಣಾ ಸುವರ್ಣ ಸರಪಾಡಿ, ಪುಷ್ಪಲತಾ ಸುವರ್ಣಾ, ಬಲಿ ಹಿಂದಿ ಧಾರಾವಾಹಿಯ ನಾಯಕಿ ನಟಿ ದೀಪಿಕಾ ಸಾಲಿಯಾನ್ ,ಪಾರ್ದನ ಚಲನ ಚಿತ್ರದ ನಾಯಕಿ, ಸುಮಂಗಲಾ ಶೆಟ್ಟಿ , ಲೋರೆನ್ಸ್ ಡಿ ‘ಸೋಜಾ, ಬಿ. ಎಸ್. ಪೈ, ಭಾಸ್ಕರ್ ಸರಪಾಡಿ, ಶೋಭಾ ಕೋಟಿಯಾನ್ ,ವಿಜಯ್ ತಿಂಗಳಾಯ, ದಿನೇಶ್ ಹೆಗ್ಡೆ, ಭುಜಂಗ ಸಾಲಿಯಾನ್, ಇವರೆಲ್ಲ ವಿಜಯಣ್ಣ ಬರೆದು ನಿರ್ದೇಶಿಸಿದ ಕಲಾಜಗತ್ತಿನ ನಾಟಕಗಳಲ್ಲಿ ಅಭಿನಯಿಸಿ ರಂಗಭೂಮಿಯ ಪ್ರಭುದ್ದ ಕಲಾವಿದರಾಗಿ ಗುರುತಿಸಿಕೊಂಡಿರುವ ಮುಂಬಯಿಯ ಹೆಸರಾಂತ ಕಲಾವಿದರು. ಇತ್ತೀಜೆಗೆ ಕಲಾಜಗತ್ತು ತಂಡಕ್ಕೆ ಸುಮಾರು 40 ಮಂದಿ ಯುವ ಮತ್ತು ಹಿರಿಯ ಕಲಾವಿದರ ಸೇರ್ಪಡೆಯಾಗಿದೆ. ಜಗತ್ಪಾಲ್ ಶೆಟ್ಟಿ, ಅಂತರಾಷ್ಟ್ರೀಯ ಖ್ಯಾತಿಯ ಬಹುಮುಖ ಪ್ರತಿಭೆಯ ಚಿತ್ರ ಕಲಾವಿದ) ನವೀನ್ ಶೆಟ್ಟಿ ಇನ್ನಬಾಳಿಕೆ, ಉತ್ತಮ್ ಶೆಟ್ಟಿಗಾರ್, ಸದಾನಂದ್ ಸಾಲಿಯಾನ್, ಕುಶಲ್ ಶೆಟ್ಟಿ, ಸತೀಶ್ ಎಮ್ .ಶೆಟ್ಟಿ ಕಣಂಜಾರ್, ಅಪೇಕ್ಷಾ ಶೆಟ್ಟಿ, ನಿಧಿ ಶೆಟ್ಟಿ, ಜೀವಿಕಾ ವಿಶ್ವನಾಥ್ ಶೆಟ್ಟಿ, ಜಯಂತಿ ದೇವಾಡಿಗ, ಕೃತಿಕಾ ಶೆಟ್ಟಿ, ರೂಪಾ ಬೆಲ್ಲೈರು, ನಿಖಿಲ್ ಶೆಟ್ಟಿ, ನಿಶಾ ಮೊಯ್ಲಿ, ಸುರೇಖಾ ದೇವಾಡಿಗ, ಶ್ರೇಯಾಸ್ ಆರ್.ಹೆಗ್ಡೆ, ಕರುಣಾಕರ್ ಶೆಟ್ಟಿ, ಉಷಾ ಸತೀಶ್ ಕಣಂಜಾರ್, ನಿತ್ಯಾನಂದ ಭಂಡಾರಿ, ಸತೀಶ್ ಶೆಟ್ಟಿ ಡೊಂಬಿವಲಿ (Dolly), ವೀರಜ್ ವಿದ್ಯಾಧರ ಶೆಟ್ಟಿ, ಕು.ಸೃಷ್ಟಿ.ಸತೀಶ್ ಶೆಟ್ಟಿ, ಶ್ರದ್ಧಾ ಬಂಗೇರಾ, ಪದ್ಮನಾಭ ಶೆಟ್ಟಿ, ಅಮಿತ್ ಶೆಟ್ಟಿ, ಶ್ರುತಿ ದಿವಾಕರ್ ಶೆಟ್ಟಿ, ಶಿಲ್ಪಾ ಪೂಜಾರಿ, ದೃಶ್ಯ ಶೆಟ್ಟಿ, ಗಣೇಶ್ ಬಂಗೇರಾ, ಆಯುಷ್ ಸತೀಶ್ ಶೆಟ್ಟಿ, ಮಾಸ್ಟರ್ ಮಿತಾನ್ಶ್ ಸತೀಶ್ ರೈ, ಆಶಾ ಎಸ್.ಶೆಟ್ಟಿ , ಕಾವ್ಯ ಪೂಜಾರಿ ಈ ಬಳಗದ ಪ್ರಮುಖರು.
ಮೀರಾರೋಡ್ ಪರಿಸರದ ಪ್ರತಿಭಾ ಸಂಪನ್ನ ಕಲಾವಿದ ಜಿ. ಕೆ. ಕೆಂಚನಕೆರೆಯವರ ಸಾರಥ್ಯದ ಒಂದು ಕಲಾವಿದರ ತಂಡ ವಿಜಯಕುಮಾರ್ ಶೆಟ್ಟಿ ಯವರ ನೂತನ ನಾಟಕ ಮೋಕೆದ ಜೋಕುಲು ಮತ್ತು ಕೊರೋನಾ ಒಂಜಿ ಕಣನೀರ್ದ ಕತೆ ನಾಟಕಗಳಲ್ಲಿ ಭಾಗವಹಿಸುತ್ತಿದ್ದಾರೆ. ಜಿ.ಕೆ.ಕೆಂಚನಕೆರೆ, ಪ್ರತಿಮಾ ಬಂಗೇರಾ, ಸುಜಾತಾ ಕೋಟ್ಯಾನ್, ನಿತೇಶ್ ಪೂಜಾರಿ, ಶೈಲಜಾ ಶೆಟ್ಟಿ ಕೃತೇಷ್ ಅಮೀನ್, ಲೀಲಾ ಗಣೇಶ್ ಕಾರ್ಕಳ, ಅವರಲ್ಲಿ ಪ್ರಮುಖರು. ಸುಧೀರ್ಘವಾದ ಈ 43 ವರ್ಷಗಳ ಅವಧಿಯಲ್ಲಿ ವಿಜಯ್ ಕುಮಾರ್ ಶೆಟ್ಟಿಯವರು ಒಳನಾಡಿನ ಆನೇಕ ಹಿರಿಯ ಕಲಾವಿದರನ್ನು ಮುಂಬಯಿಗೆ ಕರೆಸಿ ಅವರದ್ದಾದ ಪ್ರತಿಭಾ ಪ್ರದರ್ಶನಗಳಿಗೆ ವೇದಿಕೆಯನ್ನು ನಿರ್ಮಿಸಿಕೊಟ್ಟು ಅವರನ್ನು ವಿಶೇಷ ರೀತಿಯಲ್ಲಿ ಗೌರವಿಸಿದ ಸನ್ಮಾನ ನೀಡಿದ ಪ್ರಕರಣಗಳು ತುಂಬಾ ಇವೆ. ಅವರಲ್ಲಿ ಸಂಗೀತ ನಿರ್ದೇಶಕರಾದ ಉಡುಪಿಯ ರಾಘವೇಂದ್ರ ಭಟ್ ಮಂಗಳೂರಿನ ವಿಜಯ್ ಕೋಕಿಲ ಸತೀಶ್ ಸುರತ್ಕಲ್ ಇವರು ಪ್ರಮುಖರು. ಬಾಲ್ಯ ಸ್ನೇಹಿತ ಸಂಘಟಕ ತೋನ್ಸೆಯ ಖ್ಯಾತ ನಾಮಾಂಕಿತ ವ್ಯಕ್ತಿ ಶ್ರೀ ಸುಧಾಕರ ಆಚಾರ್ಯ, ಮತ್ತೊಬ್ಬ ರಂಗಭೂಮಿಯ ಸಕಲ ಕಲಾವಲ್ಲಭ ಪುಷ್ಕಳ ಕುಮಾರ್ ತೋನ್ಸೆ, ಸಾಹಿತಿ ಶ್ರೀ ಭಾಸ್ಕರ್ ರೈ ಕುಕ್ಕುವಳ್ಳಿ, ಲಕ್ಷ್ಮೀನಾರಾಯಣ ಶೆಟ್ಟಿ ಹರೇಕಳ, ಕಲಾವಿದರಾದ ಸರೋಜಿನಿ ಶೆಟ್ಟಿ, ಕುಮುದಾ ಬಾರ್ಕೂರು, ರೂಪಾಶ್ರೀ ವರ್ಕಾಡಿ, ತೋನ್ಸೆ ಭಾಸ್ಕರ್ ಕಾಂಚನ್, ಅಕ್ಷತ್ ಅಮೀನ್, ಇವರೆಲ್ಲರೂ ಈಗಲೂ ಆಹ್ವಾನಿತ ರಾಗಿ ಕಲಾ ಜಗತ್ತು ತಂಡದಲ್ಲಿ ಭಾಗವಹಿಸುತ್ತಿದ್ದಾರೆ. ವಿಜಯ್ ಕುಮಾರ್ ಶೆಟ್ಟಿಯವರ ಊರಿನ ಆತ್ಮೀಯ ಗೆಳೆಯರಾದ ಖ್ಯಾತ ನಾಟಕಕಾರ ಶ್ರೀ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ದುಬೈಯ ಉದ್ಯಮಿ ವಿಜಯಣ್ಣನ ಬಾಲ್ಯ ಸ್ನೇಹಿತ ಶ್ರೀ ಫ್ರಾಂಕ್ ಫರ್ನಾಂಡಿಸ್, ಶ್ರೀ ಗಣೇಶ್ ಶೆಟ್ಟಿ, ಪ್ರಶಾಂತ್ ಶೆಟ್ಟಿ , ಶ್ರೀಮತಿ ಶಮಿನಾ ಆಳ್ವ, ನ್ಯಾಯವಾದಿ ಉಮೇಶ್ ಶೆಟ್ಟಿ, ಇವರೆಲ್ಲರೂ ಸಂಸ್ಥೆಯ ಪೋಷಕರು. ವಿಜಯ ಕುಮಾರರ ಆತ್ಮೀಯ ಗೆಳೆಯರಾದ ಕಲಾ ಸೌರಭದ ಶ್ರೀ ಪದ್ಮನಾಭ ಸಸಿಹಿತ್ಲು ಮತ್ತು ಶೇಖರ್ ಸಸಿಹಿತ್ಲು ಕಲಾಜಗತ್ತು ತಂಡದ ಸಂಗೀತ ನಿರ್ದೇಶಕರು.
ಕಲಾ ಜಗತ್ತು ಕೇವಲ ನಾಟಕ ಪ್ರದರ್ಶನಗಳಿಗೆ ಸೀಮಿತವಾಗಿರದೇ ಕಲಾಜಗತ್ತು ಚಿಣ್ಣರ ಬಿಂಬ ವಿಜಯ್ ಕುಮಾರ್ ಶೆಟ್ಟಿಯವರ ವಿಶೇಷ ಪರಿಕಲ್ಪನೆಯ ಕೂಸು. ಮುಂಬೈಯ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳ ಉತ್ತಮ ಭವಿಷ್ಯ ಮತ್ತು ಅವರಿಗೆ ನಮ್ಮದಾದ ತುಳು ಸಂಸ್ಕೃತಿ ಸಂಸ್ಕಾರಗಳನ್ನು ತಿಳಿಹೇಳುವ ಹಾಗೂ ಅವರಿಗೆ ಉತ್ತಮ ಬದುಕಿನ ಯೋಗ್ಯ ಮಾರ್ಗದರ್ಶನವನ್ನು ನೀಡುವ ಹೊಣೆಗಾರಿಕೆಯನ್ನು ಹೊತ್ತುಕೊಂಡು ಓರ್ವ ಹೃದಯವಂತ ಸಂಸ್ಕಾರವಂತ ಅನುಭವಿ ತವ್ಲವ ಶ್ರೇಷ್ಠ ನಾಗಿ, ಮುಂಬೈಯ ತುಳುವರ ಮಕ್ಕಳ ಸೋದರ ಮಾವನಂತೆ ವಿಜಯಣ್ಣ ತನ್ನ ಕಲಾ ಜಗತ್ತು ಸಂಸ್ಥೆಯ ಕಲಾವಿದರ ಸಹಕಾರದೊಂದಿಗೆ ಕಲಾ ಜಗತ್ತು ಸಂಸ್ಥೆಯ ಅಂಗ ಸಂಸ್ಥೆಯಾಗಿ “ಕಲಾ ಜಗತ್ತು ಮಕ್ಕಳ ವಿಭಾಗ” (ಚಿಣ್ಣರ ಬಿಂಬ)” ವನ್ನು ಸ್ಥಾಪಿಸಿದರು. ಮುಂಬೈಯಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳ ಉತ್ತಮ ಭವಿಷ್ಯ ಹಾಗೂ ಅವರನ್ನು ಸಂಸ್ಕಾರ ವಂತ ಮನುಷ್ಯರನ್ನಾಗಿ ನಿರ್ಮಿಸುವ ಕಾರ್ಯದಲ್ಲಿ ಓರ್ವ ತುಳುನಾಡಿನ ಅನುಭವಿ ಸಂಪತ್ಮೂಲ ವ್ಯಕ್ತಿಯಾಗಿ ವಿಜಯಣ್ಣ ಈ ಸೇವೆ ಮಹತ್ತರವಾದುದು. ಮಕ್ಕಳನ್ನು ಪ್ರೀತಿಯಿಂದ ಒಲಿಸಿ, ತಿದ್ದಿ ತೀಡಿ ಗುಣವಂತರನ್ನಾಗಿ ಮಾಡುವ ಆ ಕಲೆ ವಿಜಯಣ್ಣನವರಲ್ಲಿ ರಕ್ತಗತವಾಗಿ ಬಂದಿದೆ. ಮಕ್ಕಳೊಡನೆ ಸ್ನೇಹಿತರಾಗಿ ಬೆರೆಯುತ್ತಾರೆ. ಅವರ ಭವಿಷ್ಯದ ಬಗ್ಗೆ ಚಿಂತಿಸುತ್ತಾರೆ. ಅದಕ್ಕಾಗಿ ಅವರಲ್ಲಿ ಒಳ್ಳೆಯ ಯೋಜನೆಗಳು ಇರುತ್ತವೆ. ಚಿಣ್ಣರ ಬಿಂಬದ ಮಕ್ಕಳಿಗೆ ಜೀವನ ಪಾಠ ಮತ್ತು ನಮ್ಮ ಸಂಸ್ಕೃತಿ ಸಂಸ್ಕಾರಗಳ ಅನುಭವ ನೀಡುವ ರಂಗಕೃತಿಗಳನ್ನು ಬರೆದು ಮಕ್ಕಳಿಂದಲೇ ರಂಗ ಪ್ರಯೋಗಗಳನ್ನು ಮಾಡಿಸಿದ ಪ್ರತಿಭೆ ನಮ್ಮ ವಿಜಯಣ್ಣನವರಿಂದ ಮಾತ್ರ ಸಾಧ್ಯ ಅಲ್ಲವೇ. ತುಳು ಅಪ್ಪೆಗ್ ತುಡರ್ ದ ಪರ್ಬ, ಓ ಬೇಲೆ ಹಾಡು ಹೀಗೆ ಚಿಣ್ಣರ ಬಿಂಬದ ಮಕ್ಕಳಿಗಾಗಿಯೇ ಸ್ವಂತ ರಾಗದಲ್ಲಿ ಹಾಡುಗಳನ್ನು ಬರೆದು ಮಕ್ಕಳಿoದ ನೃತ್ಯ ಮಾಡಿಸುವ ರೀತಿ ಅದ್ಭುತ. ವಿಜಯಣ್ಣನ ಪರಿಕಲ್ಪನೆಯ ತುಳು ಪೊರ್ಲು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದ ಮಕ್ಕಳಿಗೆ ತುಳು ಭಾಷೆಯ ಬಗ್ಗೆ, ತುಳು ಜನತೆಯ ಬಗ್ಗೆ , ತುಳು ಸಂಸ್ಕತಿ ಸಂಸ್ಕಾರಗಳ ಸಂಪೂರ್ಣ ಅನುಭವ ದೊರೆತಿದೆ. ತರಬೇತಿ ಶಿಬಿರಗಳಲ್ಲಿ ವಿಜಯಣ್ಣ ಬಂದು ನಿಂತರೆ ಸಾಕು, ಮಕ್ಕಳು ಗರಿ ಕೆದರಿ ಹಾರುವ ಪಕ್ಷಿಗಳಂತೆ ಉಲ್ಲಸಿತರಾಗುತ್ತಾರೆ. ಮೈಯೆಲ್ಲಾ ಕಿವಿಯಾಗಿ ಅವರ ಮಾತುಗಳನ್ನು ಆಲಿಸುತ್ತಾರೆ. ಈ ವಿಷಯ ಎಲ್ಲಾ ಪಾಲಕರು ತಿಳಿದಿರುವ ಮತ್ತು ಅವರೆಲ್ಲರೂ ಊರಿಡೀ ಹೇಳುತ್ತಿರುವ ವಾಸ್ತವದ ಸತ್ಯ ವಿಷಯವಾಗಿದೆ.
ಕಲಾ ಜಗತ್ತು ಸ ರಿ ಗ ಮ ಪ ದ ನಿ
ಕಲಾಜಗತ್ತಿನ ಸಂಗೀತ ವಿಭಾಗ. ಪ್ರತಿಭಾನ್ವಿತ ಗಾಯಕಿ ಶ್ರೀಮತಿ ಶೈಲಜಾ ಅಮರನಾಥ್ ಶೆಟ್ಟಿಯವರ ನೇತೃತ್ವದ ಈ ಉಪ ಸಮಿತಿಯಲ್ಲಿ ಹರೀಶ್ ಶೆಟ್ಟಿ ಎರ್ಮಾಳ್, ಶೇಖರ್ ಸಸಿಹಿತ್ಲು, ಶ್ರದ್ಧಾ ಬಂಗೇರಾ, ಜಯಾನಂದ ಶೆಟ್ಟಿ, ವೈಷ್ಣವಿ ಶೆಟ್ಟಿ, ತ್ರಿಶಾ ಆಳ್ವ ಮೊದಲಾದ ಪ್ರತಿಭಾ ಸಂಪನ್ನ ಕಲಾವಿದರಿದ್ದಾರೆ. ವಿಜಯ್ ಕುಮಾರ್ ಶೆಟ್ಟಿ ಮತ್ತು ನವೀನ್ ಶೆಟ್ಟಿ ಯವರ ಪರಿಕಲ್ಪನೆ ಹಾಗೂ ಸಂಯೋಜನೆಯಲ್ಲಿ ಮಂಗಳೂರಿನ ನಮ್ಮ ಟಿ. ವಿ. ದೂರ ದರ್ಶನದಲ್ಲಿ ನಿರಂತರ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ ಕಲಾ ಜಗತ್ತು ಇಲ್ಲಿಯೂ ಜನಪ್ರಿಯತೆ ಯನ್ನು ಗಳಿಸುತ್ತಿದೆ.
ಕಲಾ ಜಗತ್ತು ಅಮ್ಮ ಚಾವಡಿ
ಮಾತೃ ವಾತ್ಸಲ್ಯ ಹಾಗೂ ಸೋದರ ಸಂಬಂಧಗಳ ಗಟ್ಟಿತನವನ್ನು ರೂಪಿಸಿಕೊಂಡು ಸೇವಾಕಾಂಕ್ಷಿಗಳಿಗೆ ಹೊಸ ಬದುಕನ್ನೇ ಕೊಡುವ ಒಂದು ವಿಶಿಷ್ಟ ಪರಿಕಲ್ಪನೆಯ ಸಮಾಜ ಸೇವೆಗಾಗಿ ವಿಜಯಣ್ಣ ಪ್ರಾರಂಭಿಸಿದ ನೂತನ ಸಮಿತಿ ಇದು. ಮಾಟುoಗಾ ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಕಲಾ ಜಗತ್ತು ಅಮ್ಮ ಚಾವಡಿಯ ಪ್ರಾರಂಭೋತ್ಸವ ದಲ್ಲಿ ತಂದೆಯನ್ನು ಕಳೆದುಕೊಂಡು ಕೇವಲ ತಾಯಿಯ ಆಶ್ರಯದಲ್ಲಿ ಬೆಳೆದು ವಿದ್ಯೆ ಕಲಿಯುತ್ತಿದ್ದ ಹಲವು ಮಕ್ಕಳನ್ನು ದತ್ತು ಸ್ವೀಕಾರ ಮಾಡಿ ಅವರ ವಿದ್ಯಾಭ್ಯಾಸದ ಜವಾಬ್ದಾರಿ ಯನ್ನು ಸಮಿತಿಯ ಸದಸ್ಯರು ವಹಿಸಿಕೊಂಡರು. ಇಂತಹ ವಿಚಾರಗಳನ್ನು ಕಲಾಸಂಸ್ಥೆಯ ಅಂಗ ಸಂಸ್ಥೆಯಾದ ಅಮ್ಮ ಚಾವಡಿಯ ಎರಡನೇ ಕಾರ್ಯಕ್ರಮದಲ್ಲಿ ವಿಶಿಷ್ಟ ಪರಿಕಲ್ಪನೆಯಲ್ಲಿ ಸಮಾಜಕ್ಕೆ ತಿಳಿಹೇಳುವ ನಿಟ್ಟಿನಲ್ಲಿ ರಾಮಾಯಣದ ಸೀತೆಯನ್ನು ವಿಶ್ವ ಮಾತೆಯಾಗಿ ತೋರಿಸಿದ ವಿಜಯಣ್ಣ ಅಮ್ಮ ಚಾವಡಿಡ್ ಅಪ್ಪೆ ಸೀತೆ ಎಂಬ ತುಳು ನಾಟಕವನ್ನು ರಚಿಸಿ ಅದ್ಭುತ ಯಶಸ್ಸು ಕಂಡ ರಂಗ ಪ್ರಯೋಗದ ಮೂಲಕ ಪ್ರೇಕ್ಷಕರ ಮನ ಗೆದ್ದರು. ಸುಮಾರು 60 ಮಂದಿ ಕಲಾ ಜಗತ್ತು ಅಮ್ಮ ಚಾವಡಿಯ ಕಲಾವಿದರು, ವಿಶಿಷ್ಟವಾದ ಚಲಿಸುವ ರಂಗಮಂಟಪ, ಕ್ಷಣ ಮಾತ್ರದಲ್ಲಿ ಬದಲಾಗುವ ಪೂರ್ಣ ಮಟ್ಟದ ಸೆಟ್ಟಿಂಗ್ಸ್ ರಂಗಭೂಮಿಯಲ್ಲಿ ಒಂದು ದಾಖಲೆಯನ್ನೇ ನಿರ್ಮಿಸಿದ ರಂಗ ಪ್ರಯೋಗವಾಯಿತು.
ಈ ಸಮಾಜದಲ್ಲಿ ಕೆಲವು ಮಕ್ಕಳು ತಂದೆಯನ್ನು ಕಳೆದುಕೊಂಡಿದ್ದರೆ, ಕೆಲವು ಮಕ್ಕಳು ಲವ ಕುಶ ರಂತೆ ತಾಯಿಯ ಪಾಲನೆಯಲ್ಲಿ ಬೆಳೆಯುವವರು ಇರುತ್ತಾರೆ. ಕೆಲವೊಮ್ಮೆ ಇಂತಹ ಪರಿಸ್ಥಿತಿಯಲ್ಲಿ ಪಾಲಕರು ಮಾತ್ರವಲ್ಲ ಮಕ್ಕಳೂ ಆಶ್ರಯ ಕಳೆದುಕೊಂಡು ಅನಾಥ ರಾಗುತ್ತಾರೆ. ಇಂತಹವರಿಗೆ ಸಹಕರಿಸುವ ನೆಲೆಯಲ್ಲಿ ಅವರದ್ದೇ ಒಂದು ವಿಶಾಲ ಸ್ಥಳದಲ್ಲಿ ಹಲವು ಯೋಜನೆಗಳ ಮೂಲಕ ಮನೆಗಳನ್ನು ನಿರ್ಮಿಸುವ ಸಿದ್ಧತೆಯನ್ನು ಮಾಡಿದ್ದರು. ಮಹಾರಾಷ್ಟ್ರದ ಮೂರ್ಬಾಡ್ನಲ್ಲಿ ಸುಮಾರು ಹತ್ತು ಎಕರೆ ಜಾಗ ಖರೀದಿ ಮಾಡಿ ಅಲ್ಲಿ ಒಂದು ಸುಂದರವಾದ ತುಳು ಗ್ರಾಮ ನಿರ್ಮಾಣದ ಕೆಲಸ ಪ್ರಾರಂಭವಾಗಿತ್ತು. ಸುತ್ತ ಬೇಲಿ ಹಾಕಿ ಒಳಗೆ ಊರಿಂದ ತರಿಸಿದ್ದ 300 ತೆಂಗಿನ ಗಿಡಗಳನ್ನು ನೆಟ್ಟು ತೋಟಗಾರಿಕೆಯ ಕೆಲಸ ಪ್ರಾರಂಭವಾಗಿತ್ತು. ಸುಂದರವಾದ ಒಂದು ಮನೆಯೂ ನಿರ್ಮಾಣ ವಾಗಿದೆ. ಈ ಎಲ್ಲಾ ಖರ್ಚಿನ ಹೆಚ್ಚಿನ ಹಣವನ್ನು ಸಮಿತಿಯ ಸಂಚಾಲಕ ಮಹಾದಾನಿ ಥಾಣೆಯ ಶ್ರೀ ರತ್ನಾಕರ್ ಶೆಟ್ಟಿಯವರು ನೀಡಿದ್ದರು. ಆದರೆ ದುರಾದೃಷ್ಟ ಎಂಬಂತೆ ಒಂದು ದಿವಸ ಒಮ್ಮೆಲೇ ಆ ವಠಾರದ ಭೂಮಿಯ ಜಲ ಉತ್ಪತ್ತಿ ನಿಂತು ಹೋಯಿತು. ಬೋರ್ ವೆಲ್ ಗಳಲ್ಲಿಯೂ ನೀರು ಬರುವುದು ನಿಂತಿತು. ಒಂದಷ್ಟು ಖರ್ಚು ಮಾಡಿ ಬೇರೆ ಬೇರೆ ಪ್ರದೇಶಗಳಲ್ಲಿ ಬೋರ್ ವೆಲ್ ನಿರ್ಮಿಸಿದರೂ ನೀರು ಬರಲಿಲ್ಲ. ಆ ವಠಾರದವರು ಟ್ಯಾಂಕರ್ ನೀರಿನಿಂದ ಬದುಕು ಸಾಗಿಸಲು ಪ್ರಾರಂಭಿಸಿದರು. ನೀರು ಕಡಿಮೆಯಾಗಿ ತೆಂಗಿನ ಸಸಿಗಳು ನಾಶವಾದವು. ಈಗ ಯೋಜನೆ ಅರ್ಧದಲ್ಲಿ ನಿಂತಿದೆ. ಈ ನಡುವೆ ಹಲವು ರೀತಿಯ ಪ್ರಯತ್ನ ಸಾಗಿದೆ. ಇತ್ತೀಚೆಗೆ ಬೇರೆಯೇ ಯೋಜನೆಯೊಂದನ್ನು ರೂಪಿಸುತ್ತಿದ್ದಾರೆ. ಪ್ರಯತ್ನ ಸಾಗಿದೆ ನೋಡೋಣ.
ಕಲಾ ಜಗತ್ತು ಸಾಹಿತ್ಯ ಸಮಿತಿ
ಶ್ರೀ ದಯಾಸಾಗರ ಚೌಟ
ಶ್ರೀಮತಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ, ಶ್ರೀ ಹೇಮಂತ್ ಶೆಟ್ಟಿ ಕಾವೂರು ಗುತ್ತು, ಶ್ರೀ ಸತೀಶ್ ಶೆಟ್ಟಿ, ಕಣoಜಾರ್, ಮುಂತಾದ ಸಾಹಿತಿಗಳ ನೇತೃತ್ವದ ಈ ಸಮಿತಿಯಿಂದ ಕಲಾ ಜಗತ್ತು ವೇದಿಕೆಯ ಆಶ್ರಯದಲ್ಲಿ ನಿರಂತರ ಸಾಹಿತ್ಯ ಹಾಗೂ ವಿಚಾರ ಗೋಷ್ಠಿ ಕಾರ್ಯಕ್ರಮಗಳು ನಡೆಯುತ್ತಿವೆ.
2008 ರಲ್ಲಿ ಕಲಾ ಜಗತ್ತು ಮುಂಬೈ, ದಾದರ್ ನ ಕಾಮ್ ಗಾರ್ರ್ ಸ್ಟೇಡಿಯಂ ನಲ್ಲಿ ತುಳುನಾಡನ್ನೇ ನಿರ್ಮಿಸಿ ವಿಶ್ವ ಮಟ್ಟದ ತುಳು ಹಬ್ಬವನ್ನೇ ಮಾಡಿ ವಿಶ್ವ ದಾಖಲೆಯ ಸಮಾರಂಭವನ್ನು ಏರ್ಪಡಿಸಿತು. ಕಾಂಕ್ರಿಟ್ ನೆಲದಲ್ಲಿ ಕಂಬಳ ಪರಿ, ಗದ್ದೆ ನಿರ್ಮಿಸಿ ಊರಿನಿಂದ ಪ್ರಶಸ್ತಿ ವಿಜೇತ ಓಟದ ಕೋಣಗಳನ್ನು ತರಿಸಿ ಮಹಾರಾಷ್ಟ್ರದ ಅನೇಕ ಮಂದಿ ಮಂತ್ರಿವರೇಣ್ಯರ ಮತ್ತು ಸಾವಿರಾರು ಮಂದಿ ಪ್ರೇಕ್ಷಕರ ಸಮ್ಮುಖದಲ್ಲಿ ಕಂಬಳವನ್ನೇ ಮಾಡಿ ನೆರೆದ ಮಂದಿ ಮನಸಾ ಕೊಂಡಾಡುವಂತೆ ಮೆರೆದಾಡಿದ ಎದೆಗಾರಿಕೆ ಹೆಗ್ಗಳಿಕೆ ಇದ್ದರೆ ಈ ಜಗತ್ತಿನಲ್ಲಿ ಅದು ನಮ್ಮ ವಿಜಯ್ ಕುಮಾರ್ ಶೆಟ್ಟಿಯವರಿಗೆ ಮಾತ್ರ ಎಂದು ಹೇಳಬಹುದು.
ವಿಜಯ್ ಕುಮಾರ್ ಶೆಟ್ಟಿಯವರ ಮಾರಿಗೊಂಜಿ ಕುರಿ ತುಳು ಕತೆ ಬಲಿ ಶೀರ್ಷಿಕೆಯೊಂದಿಗೆ ಮಂಜು ಸಿಂಘ್ ನಿರ್ಮಾಣದ ಏಕ್ ಕಹಾನಿ (National network) ಧಾರಾವಾಹಿಯಲ್ಲಿ ಪ್ರಸಾರ ಗೊಂಡಿದೆ. ವಿಶೇಷವೆಂದರೆ ಇದರಲ್ಲಿ ಕೇವಲ ಕಲಾ ಜಗತ್ತಿನ ಕಲಾವಿದರನ್ನೇ ಆಯ್ಕೆ ಮಾಡಲಾಗಿತ್ತು, ಮುಂದೆ ಅಧಿಕಾರ್, ಪುರಸ್ಕಾರ್ ಮುಂತಾದ ಹಲವಾರು ಹಿಂದಿ ಧಾರಾವಾಹಿಗಳಲ್ಲಿ ಕಲಾ ಜಗತ್ತಿನ ಸದಸ್ಯರು ಭಾಗವಹಿಸಿದರು. ಅಮೆರಿಕಾದ ಫಿಲ ಡೆಲ್ಫಿಯದ ಟೆಂಪಲ್ ಯುನಿವರ್ಸಿಟಿಯ ಅನೂಲ ಶೆಟ್ಟಿ ನಿರ್ಮಾಣದ ಪಾಡ್ದ ನ ತುಳು ಸಿನಿಮಾಕ್ಕೆ ನಮ್ಮ ವಿಜಯಣ್ಣ ಕತೆ ಸಂಭಾಷಣೆ ಬರೆದಿದ್ದು ಕಲಾ ಜಗತ್ತಿನ ಸುರೇಂದ್ರ ಕುಮಾರ್ ಹೆಗ್ಡೆ ಚಂದ್ರಾವತಿ ದೇವಾಡಿಗ, ದೀಪಿಕಾ ಸಾಲಿಯಾನ್, ಭಾರತೀ ಕೊಡ್ಲೇಕರ್ ಮತ್ತು ಕೃಷ್ಣರಾಜ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಈ ಸಿನಿಮಾಕ್ಕೆ 11 ಅಂತರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.
ವಿಜಯ್ ಕುಮಾರ್ ಶೆಟ್ಟಿಯವರ ನಿರ್ದೇಶನ ನಿರ್ಮಾಣದ ಮುಂಬೈ ಕಲಾ ಜಗತ್ತಿನ ರೇಷ್ಮಾ ಶೆಟ್ಟಿ, ಪ್ರತೀಕ್ ಶೆಟ್ಟಿ, ಕಾಜೋಲ್ ಕುಂದರ್, ಸುರೇಂದ್ರಕುಮಾರ್ ಹೆಗ್ಡೆ, ದೃಶ್ಯ ಶೆಟ್ಟಿ, ಪಲ್ಲವಿ ಶೆಟ್ಟಿ, ಎನ್ ಪ್ರಥ್ವಿರಾಜ್ ಮುಂಡ್ಕೂರು ಮುಖ್ಯ ತಾರಾಗಣ ದಲ್ಲಿದ್ದ ನಟಿಸಿದ್ದ ಪತ್ತನಾಜೆ ಒಂದು ಉತ್ತಮ ಸಿನೆಮಾ ಎಂದು ಜನಪ್ರಿಯತೆಯನ್ನು ಗಳಿಸಿ ಮುಂಬೈಯಲ್ಲಿ ದಾಖಲೆಯ ಪ್ರದರ್ಶನಗಳನ್ನು ಕಂಡಿದೆ.
ಕಲಾ ಜಗತ್ತು ನಿರಂತರವಾಗಿ ನಾಟಕೋತ್ಸವ, ಕಲೋತ್ಸವ, ನೃತ್ಯೋತ್ಸವ, ಸಾಹಿತ್ಯ, ವಿಚಾರ ಗೋಷ್ಠಿ ಗಳನ್ನು ಏರ್ಪಡಿಸುತ್ತಿದೆ. 2019 ರಲ್ಲಿ ಕಾಂದಿವಲಿಯ ಪೋಯಿಸರ್ ಕ್ರೀಡಾಂಗಣದಲ್ಲಿ 3 ದಿನದ ಮುಂಬೈಡ್ ತುಳು ನಾಡ್ ನಿರ್ಮಿಸಿ, ಮುಂಬೈ ಜನತೆಗೆ ನಮ್ಮೂರಿನ ಪ್ರತ್ಯಕ್ಷ ದರ್ಶನ ಮಾಡಿದ ಕೀರ್ತಿ ಕಲಾಜಗತ್ತು ಸಂಸ್ಥೆಗೆ ಸಲ್ಲುತ್ತದೆ.
ಕಲಾ ಜಗತ್ತಿನ ಮೂಲಕ ಈ ಜಗತ್ತು ಕಂಡ ಶ್ರೇಷ್ಟ ನಟ, ನಿರ್ದೇಶಕ, ಲೇಖಕ,ಸಂಘಟಕ, ಅಪ್ರತಿಮ ಪ್ರತಿಭಾ ಸಂಪನ್ನ ತಾನು ಎನ್ನುವುದನ್ನು ಜಗದ ಜನತೆಗೆ ಗಟ್ಟಿ ಸಾಕ್ಷಿಗಳ ಮೂಲಕ ಸಾಬೀತು ಪಡಿಸಿದ ಮತ್ತು ಈ ಸಾಧನೆಯನ್ನು ಜಗತ್ತಿನ ಯಾವುದೇ ರಂಗ ಕಲಾವಿದ ಮಾಡಲು ಸಾಧ್ಯತೆ ಇಲ್ಲ ಎಂದೇ ಹೇಳಬಹುದಾದ ವಿಜಯಣ್ಣನ ಪ್ರತಿಭೆ ಅದು ‘ಲಿಮ್ಕಾ ಬುಕ್ ರಾಷ್ಟ್ರೀಯ ದಾಖಲೆ’. ತನ್ನ ಅರವತ್ತರ ಹುಟ್ಟು ಹಬ್ಬದಂದು ಅರ್ವತ್ತು ಕೃತಿಗಳ, ಅರ್ವತ್ತು ಭಿನ್ನ ವಯೋಮಿತಿಯ, ಅರವತ್ತು ಭಿನ್ನ ವೇಷ ಭೂಷಣದ, ಅರ್ವತ್ತು ದ್ವನಿ (ಸ್ವರ)ಯಲ್ಲಿ ಸುಮಾರು 14 ಗಂಟೆಗಳ ಕಾಲ ಅರವತ್ತು ಮಂದಿ ಕಲಾಜಗತ್ತಿನ ಸಹ ಕಲಾವಿದರೊಂದಿಗೆ, ನಿರಂತರ ರಂಗಭೂಮಿಯಲ್ಲಿ ಪಾತ್ರೋಚಿತವಾಗಿ ಅಭಿನಯಿಸಿದ ಈ ಕಲಾವಿದ, ರಂಗ ಭೂಮಿಯಲ್ಲಿ ಬಹುಶಃ ವಿಶ್ವ ದಾಖಲೆಯನ್ನೇ ಮಾಡಿ, ಇಂದು ಈ ಸಾಹಸದಿಂದ ಈ ದೇಶದ ನಾಟಕ ರಂಗದಲ್ಲಿ, ಸಮಸ್ತ ತುಳು ಕನ್ನಡಿಗರು ಅಭಿಮಾನ ಪಡುವಂಥಹ ಎತ್ತರದ ಸ್ಥಾನದಲ್ಲಿ ಕಂಡು ಬರುತ್ತಾರೆ. ಯಾಕೆಂದರೆ ಇಂತಹ ಪ್ರತಿಭೆಯನ್ನು ಈವರೆಗೆ ಯಾರೂ ಕಂಡಿಲ್ಲ.. ಮುಂದೆಯೂ ಇದು ಯಾರಿಗೂ ಸಾಧ್ಯವಾಗದ ಸಂಗತಿ.
ಇಂಥಹ ಇನ್ನೂ ಅನೇಕ ಸಾಧನೆಗಳ ರೂವಾರಿ, ಪ್ರತಿಭಾ ಸಂಪನ್ನ ಶ್ರೀ ವಿಜಯ್ ಶೆಟ್ಟಿಯವರಿಗೆ ನೂರಾರು ಪ್ರಶಸ್ತಿ, ಪುರಸ್ಕಾರ, ಬಿರುದು, ಸನ್ಮಾನಗಳು ಅವರನ್ನರಸಿಕೊಂಡು ಬಂದಿವೆ. ಅದರಲ್ಲಿ ಅತ್ಯಂತ ಪ್ರತಿಷ್ಠೆಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2008, ಮಹಾರಾಷ್ಟ್ರದ ಡೊಂಬಿವಲಿಳ್ಕರ್ ಪ್ರಶಸ್ತಿ, ಉದಯ ವಾಣಿ ಪತ್ರಿಕೆಯ ಐಕಾನ್ ಪ್ರಶಸ್ತಿ, “ಕರ್ನಾಟಕ ಸಂಘ ಮುಂಬಯಿ ಇವರು ನೀಡುವ ಡಾ. ಸುನೀತಾ ಶೆಟ್ಟಿ ಸಾಹಿತ್ಯ ಪ್ರಶಸ್ತಿ ಇಂತಹ ಅನೇಕ ಗೌರವದ ಪ್ರಶಸ್ತಿಗಳು ನ್ಯಾಯವತ್ತಾಗಿ ವಿಜಯ್ ಕುಮಾರ್ ಶೆಟ್ಟಿಯವರಿಗೆ ಲಭಿಸಿವೆ. ಇದು ಸಮಸ್ತ ತುಳು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.
ಕಲಾ ಜಗತ್ತಿನ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭಗಳು
ಕಲಾ ಜಗತ್ತು ಕಳೆದ 43 ವರ್ಷಗಳಿಂದ ನಿರಂತರ ತುಳು ಕನ್ನಡ ನಾಟಕ ಪ್ರದರ್ಶನಗಳನ್ನು ನೀಡುತ್ತಾ ಬಂದಿದೆ. ಜೊತೆಗೆ ಭಿನ್ನ ರೀತಿಯಲ್ಲಿ ಇತರ ಕಾರ್ಯಕ್ರಮಗಳನ್ನು ಕೂಡಾ ಆಯೋಜಿಸುತ್ತಾ ಬಂದಿದೆ. ಹೊಸ ತನದ, ಎಲ್ಲಿಯೂ ಯಾರಿಂದಲೂ ಸಾಧ್ಯವಾಗದ ವಿಶಿಷ್ಟ ಪರಿಕಲ್ಪನೆಯ ಕಾರ್ಯಕ್ರಮಗಳ ಯೋಜನೆ ವಿಜಯ್ ಕುಮಾರ್ ರವರ ತಲೆಯಲ್ಲಿ ಹುಟ್ಟುತ್ತದೆ. ಅವುಗಳನ್ನು ಸಂಪೂರ್ಣ ಯಶಸ್ಸಿನೊಂದಿಗೆ ಅವರು ಮಾಡಿ ತೋರಿಸುತ್ತಾರೆ. ಮೂರು ಬಾರಿ ಮುಂಬೈಯಲ್ಲಿ ನಾಟಕೋತ್ಸವ ನಿರಂತರ ಏಳು ದಿವಸ ಅವರೇ ಬರೆದು ನಿರ್ದೇಶಿಸಿ, ಕಲಾ ಜಗತ್ತು ಸಂಸ್ಥೆಯ ಕಲಾವಿದರೇ ನಟಿಸಿದ ಏಳು ಭಿನ್ನ ನಾಟಕಗಳು, ಏಳು ದಿವಸ ಭಿನ್ನ ರೀತಿಯಲ್ಲಿ ಸಭಾ ಕಾರ್ಯಕ್ರಮಗಳು, ಪ್ರತಿದಿವಸ ವೇದಿಕೆಯಲ್ಲಿ ಏಳು ಮಂದಿ ಬೇರೆ ಬೇರೆ ಕ್ಷೇತ್ರದ ಅತಿಥಿಗಳು, ಏಳು ಮಂದಿ ಕಲಾವಿದರಿಗೆ ಕ್ಷೇಮ ನಿಧಿಯೊಂದಿಗೆ ಸನ್ಮಾನ. 42 ವಾರ್ಷಿಕೋತ್ಸವಗಳನ್ನು ಕೂಡಾ ತೀರಾ ಭಿನ್ನವಾಗಿ ಆಚರಿಸಲಾಗಿದೆ. ಪ್ರತೀ ಬಾರಿಯೂ ಭಿನ್ನ ಅಲಂಕಾರ ಭಿನ್ನ ರೀತಿಯ ಸಭಾ ಕಾರ್ಯಕ್ರಮಗಳು. ಒಂದು ವಾರ್ಷಿಕ ಹಬ್ಬದಲ್ಲಿ ಸುಮಾರು 270 ಮಂದಿ ರಂಗ ಭೂಮಿಯ ನೇಪಥ್ಯ ಕಲಾವಿದರಿಗೆ ಬಂಟರ ಭವನದಲ್ಲಿ ಬೇರೆಯೇ ,”ಸನ್ಮಾನ ಚಪ್ಪರ” ವನ್ನು ನಿರ್ಮಿಸಿ ಸ್ಮರಣೀಯ ರೀತಿಯಲ್ಲಿ ಗೌರವಿಸಿದರೆ, ಮತ್ತೊಮ್ಮೆ ಸ್ವರ್ಗಸ್ಥರಾದ ಬೇರೆ ಬೇರೆ ಕ್ಷೇತ್ರದ ಸಾಧಕ ಶ್ರೇಷ್ಠರ ನೆನಪಿಗಾಗಿ ಅವರ ಹೆಸರಿನಲ್ಲಿ ಈಗ ಅದೇ ಕ್ಷೇತ್ರದಲ್ಲಿ ಹೆಸರು ಮಾಡಿರುವ ಸುಮಾರು 43 ಮಂದಿ ಮಹಾನ್ ಸಾಧಕರನ್ನು ಗುರುತಿಸಿ ಸಂಸ್ಮರಣಾ ಪ್ರಶಸ್ತಿ ನೀಡಲಾಯಿತು.
ಕಲಾ ಜಗತ್ತಿನ 25 ನೇ ವರ್ಷದ ಬೆಳ್ಳಿಹಬ್ಬ ಆಚರಣೆಯನ್ನು ಮುಂಬಯಿಯ ನಾಮಾಂಕಿತ ಪೊಲೀಸ್ ಅಧಿಕಾರಿ ಶ್ರೀ ಪ್ರಕಾಶ್ ಭಂಡಾರಿಯವರ ನೇತೃತ್ವದಲ್ಲಿ, ಮುಂಬಯಿ ಬಂಟರ ಭವನದಲ್ಲಿ ಒಂದು ವಾರ ಮತ್ತು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಸಭಾಂಗಣದಲ್ಲಿ ಒಂದು ವಾರ
ಬಹಳ ವಿಜೃಂಭಣೆಯಿಂದ, ನಾಟಕೋತ್ಸವ ವಿವಿಧ ಸಾಂಸ್ಕೃತಿಕ ಸಾಹಿತ್ಯಿಕ,ಕಾರ್ಯಕ್ರಮಗಳು ನಾಡಿನ ಗಣ್ಯಾತಿ ಗಣ್ಯರ ಉಪಸ್ಥಿತಿಯಲ್ಲಿ ಅರ್ಥಪೂರ್ಣ ಸಮಾರಂಭ ದೊಂದಿಗೆ ಅತ್ಯಂತ ಯಶಸ್ವಿಯಾಗಿ ಆಚರಿಸಲಾಯಿತು.
2013 ರಲ್ಲಿ ವಿಜಯ್ ಕುಮಾರ್ ಶೆಟ್ಟಿ ಯವರು ಡೊಂಬಿವಲಿಯಲ್ಲಿ ಅಲ್ಲಿನ ತುಳುವರನ್ನು ಒಟ್ಟು ಗೂಡಿಸಿ ತುಳು ಕೂಟ ಡೊಂಬಿವಲಿ ನೂತನ ಸಂಸ್ಥೆಯನ್ನು ಹುಟ್ಟು ಹಾಕಿದರು. ಅಲ್ಲಿಯೂ ತುಳು ಕಾರ್ಯಕ್ರಮಗಳ ಸುಗ್ಗಿ ಪ್ರಾರಂಭವಾಯಿತು. ಮಹಾರಾಷ್ಟ್ರದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಡೊಂಬಿವಲಿಯಲ್ಲಿ ತುಳು ಗ್ರಾಮ ನಿರ್ಮಾಣ ಮಾಡಿ, ಕೆಸರ ಕಂಡದ ಗೊಬ್ಬುಲು ಮತ್ತಿತರ ಗ್ರಾಮೀಣ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ತುಳು ಮಣ್ಣಿನ ಮಕ್ಕಳು, ಮೈ ಮರೆತು ತಾವು ತುಳು ನಾಡಿನಲ್ಲಿಯೇ ಇದ್ದಂತೆ ಭಾವಿಸಿ ಇಲ್ಲಿ ಭಾಗವಹಿಸಿದರು. ಅಂದು ರಾತ್ರಿ ಉತ್ಸವ ನಡೆದ ಜಾಗದಲ್ಲಿಯೇ ದೈವಕ್ಕೆ ಕೋಳಿ ಕೊಟ್ಟು ಅಗೆಲ್ ಬಳಸಿ ಎಲ್ಲರಿಗೂ ಊಟದ ವ್ಯವಸ್ಥೆ ಇತ್ತು. ಡೊಂಬಿವಲಿಯಲ್ಲಿ ತೋನ್ಸೆ ವಿಜಯ್ ಕುಮಾರ್ ರವರ ಯೋಜನೆಯಂತೆ ತುಳು ಕೂಟದ ವೇದಿಕೆಯಲ್ಲಿ ತುಳುವರ ಎಲ್ಲಾ ಹಬ್ಬ ಗಳ ಆಚರಣೆ ಮಾಡಲಾಗುತ್ತದೆ. ಕಳೆದ 10 ವರ್ಷಗಳಿಂದ ಆಟಿಡೊಂಜಿ ಕೂಟ ಬಹಳ ವಿಜೃಂಭಣೆಯಿಂದ ವಿಜಯಣ್ಣನ ಪರಿಕಲ್ಪನೆಯಂತೆ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಕಲಾಜಗತ್ತು ಸಂಸ್ಥೆ ಮತ್ತು ತುಳು ಕೂಟದ ಜಂಟಿ ಆಶ್ರಯದಲ್ಲಿ ಡೊಂಬಿವಿಲಿಯಲ್ಲಿ ಪ್ರತೀ ಶನಿವಾರ, ಗುರು ತೋನ್ಸೆ ವಿಜಯ್ ಕುಮಾರ್ ಶೆಟ್ಟಿಯವರಿಂದ ಜೀವನ ಪಾಠ, ರಂಗ ತರಬೇತಿ, ಭಾಷಣ ಕಲೆ, ಬದುಕು ಕಟ್ಟುವ ಕಲೆ ಮುಂತಾದ ವಿಷಯಗಳ ಶಿಬಿರ ಪ್ರಾರಂಭವಾಗಿದೆ.
ಧರ್ಮ ಪತ್ನಿ ಲಕ್ಷ್ಮಿ, ಹಿರಿಯ ಮಗಳು ದಿವ್ಯಾ, ಆಕೆಯ ಪತಿ ಸಂತೋಷ್ ಶೆಟ್ಟಿ, ಅವರ ಮಗಳು ಆಶ್ವಿ, ಕಿರಿಯ ಮಗಳು ರಮ್ಯಾ, ಪತಿ ಮಯುರೇಶ್ ಶೆಟ್ಟಿ, ಅವರ ಮಗ ಶಾರವ್ ಹೀಗೆ ವಿಜಯ್ ಕುಮಾರ್ ಶೆಟ್ಟಿ ಯವರದ್ದು ಸುಂದರವಾದ ಅತ್ಯಂತ ನೆಮ್ಮದಿಯ ಬದುಕು. ವಿಜಯಣ್ಣನ ಒಳಿತಿಗಾಗಿ ಅವರ ಶ್ರೇಯೋಭಿಲಾಷಿಗಳಾಗಿ ಅವರ ಎಲ್ಲಾ ಸುಖ ಕಷ್ಟಗಳಿಗೆ ಸ್ಪಂದಿಸುವವರು ಕೋಡಿ ಕಂಡಾಳ ಕೋಡ್ದಬ್ಬು ಕ್ಷೇತ್ರದ ಧರ್ಮದರ್ಶಿ ಶ್ರೀ ರಘುರಾಮ ಶೆಟ್ಟಿ ಮತ್ತವರ ಮಕ್ಕಳು, ಲಕ್ಷ್ಮೀಯಕ್ಕನ ಆರು ಮಂದಿ ಸಹೋದರರು ಮತ್ತು ತಂಗಿಯ ಗಂಡ ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ ಮಹೇಶ್ ರೈ ಜೊತೆಗೇ ತೋನ್ಸೆಯ ನೂರಾರು ಮಂದಿ ಗ್ರಾಮಸ್ಥರು ಮತ್ತು ಕೋಡಿ ಕಂಡಾಳ ಕುಟುಂಬಸ್ಥರು ಅವರೊಂದಿಗೆ ಸದಾ ಇದ್ದಾರೆ. ಯಾವುದೇ ರೀತಿಯಲ್ಲಿ ಅವರನ್ನು ಗೆಲುವಿನ ದಾರಿಯತ್ತ ಕೊಂಡೊಯ್ಯುವ ಅವರ ಬಾಲ್ಯ ಸ್ನೇಹಿತರಿದ್ದಾರೆ, ಹೆದರಬೇಡಿ ನಾವು ನಿಮ್ಮೊಂದಿಗಿದ್ದೇವೆ ಎಂದು ಅವರನ್ನು ಸಲಹುವ ಮುಂಬಯಿಯ ನೂರಾರು ಮಂದಿ ದಾನಿಗಳು ಕಲಾ ಪೋಷಕರು ತೋನ್ಸೆ ವಿಜಯ್ ಕುಮಾರ್ ಶೆಟ್ಟಿ ಯವರ ಬದುಕಿನ ಬೆನ್ನೆಲುಬಾಗಿ ಅವರೊಂದಿಗಿದ್ದಾರೆ.
ತೋನ್ಸೆ ವಿಜಯ ಕುಮಾರ್ ಶೆಟ್ಟಿ ಯವರ ಒಂದಷ್ಟು ವಿಚಾರಗಳನ್ನು ನಿಮ್ಮ ಮುಂದಿರಿಸಿದ್ದೇವೆ. ಇಲ್ಲಿ ಯಾವುದೇ ದುರುದ್ದೇಶವಿಲ್ಲ. ಮುಂದೆ ಅವರ ಸಂದರ್ಶನ ಮಾತುಕತೆ, ಅವರ ಪ್ರತೀ ನಾಟಕಗಳ ವಿಮರ್ಶೆ, ಅವರ ಸುಂದರ ಬದುಕಿನ ಚಿತ್ರಣ ಈ ವಯಸ್ಸಿನಲ್ಲಿಯೂ ಅವರ ಆರೋಗ್ಯ ಮತ್ತು ಲವಲವಿಕೆಯ ಗುಟ್ಟು ಹೀಗೆ ಎಲ್ಲೂ ಸಿಗದ ಅದೆಷ್ಟೊ ಒಳ್ಳೆಯ ಜೀವನಾನುಭವಗಳನ್ನು ಅವರಿಂದ ತಿಳಿದು ಸಮಾಜಕ್ಕೆ ನೀಡುವ ಒಂದು ಕಾರ್ಯದಲ್ಲಿ ನಮ್ಮನ್ನು ತೊಡಗಿಸಿ ಕೊಳ್ಳುತ್ತಿದ್ದೇವೆ.