ಇಂದಿನ ಯಾಂತ್ರೀಕೃತ ಜೀವನ ಶೈಲಿಯಲ್ಲಿ ಆರೋಗ್ಯವಂತರಾಗಿ ಉತ್ಸಾಹದಿಂದಿರಲು ದೇಹಕ್ಕೆ ವ್ಯಾಯಾಮ ಅತೀ ಅಗತ್ಯವಾಗಿದೆ. ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಿದ್ದು ದಿನನಿತ್ಯ ನಾವು ಸ್ವಲ್ಪ ಸಮಯವನ್ನು ವ್ಯಾಯಾಮಕ್ಕೆ ನೀಡಬೇಕು . ಹಿಂದೆ ಒಂದು ಕಾಲವಿತ್ತು ಕೇವಲ ಅಂಕ ಗಳಿಕೆಯೇ ನೌಕರಿಯ ಮಾನದಂಡವಾಗಿತ್ತು. ಆದರೆ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಕ್ರೀಡಾಪಟುಗಳಾದರೆ ಬ್ಯಾಂಕಿಂಗ್, ರೈಲ್ವೇ, ಪೊಲೀಸ್ ಇಲಾಖೆಗಳು ನೌಕರಿ ನೀಡಲು ಕೈಬೀಸಿ ಕರೆಯುತ್ತವೆ. ಆದುದರಿಂದ ಮಕ್ಕಳು ಕಲಿಕೆಯೊಂದಿಗೆ ಕ್ರೀಡೆಗೂ ಆದ್ಯತೆ ನೀಡಿ ಆಸಕ್ತಿಯನ್ನು ಬೆಳೆಸಿಕೊಂಡು ಶ್ರಮ ಪಟ್ಟರೆ ವಿಪುಲ ಅವಕಾಶಗಳನ್ನು ಬಳಸಿಕೊಂಡು ಜೀವನವನ್ನು ಸಮೃದ್ಧಗೊಳಿಸಬಹುದಾಗಿದೆ ಎಂದು ಪಿಂಪ್ರಿ- ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆ ಅಭಿಪ್ರಾಯಪಟ್ಟರು.
ಅವರು ನಗರದ ಮೋರ್ಯಾ ಗೋಸಾವಿ ಮೈದಾನದಲ್ಲಿ ನಡೆದ ಬಂಟರ ಸಂಘ ಪಿಂಪ್ರಿ – ಚಿಂಚ್ವಾಡ್ ಇದರ ವಾರ್ಷಿಕ ಕ್ರೀಡಾಕೂಟ ಹಾಗೂ ರಾಷ್ಟ್ರಮಟ್ಟದ ಕಬಡ್ಡಿ ಮತ್ತು ತ್ರೋ ಬಾಲ್ ಪಂದ್ಯಾಟ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕಬಡ್ಡಿಯಂತಹ ಗ್ರಾಮೀಣ ಕ್ರೀಡೆ ಇಂದು ದೇಶ ,ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆಯುತ್ತಿದೆ. ಅದಕ್ಕಾಗಿ ಕಬಡ್ಡಿ ಪಂದ್ಯಾಟವನ್ನು ಇಂದು ಆಯೋಜಿಸಿದ್ದೇವೆ ನಮ್ಮ ಸಂಘದ ರಜತ ಮಹೋತ್ಸವ ಸಂಭ್ರಮಾಚರಣೆಯ ಸರಣಿ ಕಾರ್ಯಕ್ರಮಗಳ ಅಂಗವಾಗಿ ನಡೆಯುವ ಇಂದಿನ ರಾಷ್ಟ್ರಮಟ್ಟದ ಕಬಡ್ಡಿ ಬಾಲ್ ಪಂದ್ಯಾಟ ,ತ್ರೋ ಬಾಲ್ ಪಂದ್ಯಾಟ ಹಾಗೂ ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು ಸಮಾಜ ಬಾಂಧವರೆಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪುಣೆಯ ಮಕ್ಕಳ ತಜ್ಞ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ಡಾ. ಸುಧಾಕರ ಶೆಟ್ಟಿಯವರು ಮಾತನಾಡಿ ಪಿಂಪ್ರಿ ಚಿಂಚ್ವಾಡ್ ಮಾತನಾಡಿ ಪಿಂಪ್ರಿ- ಚಿಂಚ್ವಾಡ್ ಬಂಟರ ಸಂಘವು ರಾಕೇಶ್ ಶೆಟ್ಟಿ ನೇತೃತ್ವದಲ್ಲಿ ಇಂದು ಕ್ರೀಡಾಕೂಟವನ್ನು ಬಹಳ ಅಚ್ಚುಕಟ್ಟಾಗಿ ಆಯೋಜಿಸಿ ಯುವ ಪೀಳಿಗೆಗೆ ಉತ್ಸಾಹ ತುಂಬುತ್ತಿರುವುದು ಶ್ಲಾಘನೀಯವಾಗಿದೆ. ಸಾಮಾಜಿಕ ಬಂಧುತ್ವವನ್ನು ಬೆಸೆಯಲು ಇಂತಹ ಕ್ರೀಡಾಕೂಟ ಪೂರಕವಾಗಿದೆ. ಇಂದು ನನ್ನನ್ನು ಪ್ರೀತಿಯಿಂದ ಗೌರವಿಸಿರುವುದಕ್ಕೆ ವಂದನೆಗಳನ್ನು ಸಲ್ಲಿಸುತ್ತೇನೆ. ಇಂದಿನ ಕ್ರೀಡಾಕೂಟದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿ ಎಂದರು.
ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ತುಳು ಸಂಘ ಪಿಂಪ್ರಿ ಚಿಂಚ್ವಾಡ್ ಇದರ ಅಧ್ಯಕ್ಷರಾದ ಹರೀಶ್ ಶೆಟ್ಟಿ ಕುರ್ಕಾಲ್ ಮಾತನಾಡಿ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆ ಇವರ ದಕ್ಷ ನೇತೃತ್ವದಲ್ಲಿ ರಜತ ಸಂಭ್ರಮವನ್ನು ಸರಣಿ ಕಾರ್ಯಕ್ರಮಗಳ ಮೂಲಕ ಆಚರಿಸುತ್ತಿದ್ದು ಇಂದು ಕ್ರೀಡಾಕೂಟ, ಕಬಡ್ಡಿ ಹಾಗೂ ತ್ರೋ ಬಾಲ್ ಪಂದ್ಯಾಟವನ್ನು ಆಯೋಜಿಸುತ್ತಿದ್ದು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆನಂದವಾಗುತ್ತಿದೆ. ಕ್ರೀಡೆ ಎಂಬುದು ಒಂದು ದಿನಕ್ಕೆ ಸೀಮಿತವಾಗಬಾರದು. ನಮ್ಮ ದಿನನಿತ್ಯದ ಜೀವನದಲ್ಲಿ ಆರೋಗ್ಯ ಕ್ಕೆ ಬಹಳ ಮಹತ್ವ ನೀಡಬೇಕಾಗಿದೆ. ಪ್ರತೀದಿನ ಒಂದೆರಡು ಗಂಟೆ ನಾವು ವ್ಯಾಯಮ, ಯೋಗ ನಡಿಗೆ ಸೈಕ್ಲಿಂಗ್ ಗಳಲ್ಲಿ ದೇಹವನ್ನು ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ. ಇಂದಿನ ಕ್ರೀಡಾಕೂಟದಲ್ಲಿ ಸಮಾಜಬಾಂಧವರೆಲ್ಲರೂ ಉತ್ಸಾಹದಿಂದ ಭಾವಹಿಸಿ ಎಂದರು.
ವೇದಿಕೆಯಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಎರ್ಮಾಳ್ ನಾರಾಯಣ ಶೆಟ್ಟಿ, ವಿಶ್ವನಾಥ ಡಿ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷರಾದ ವಿಜಯ್ ಶೆಟ್ಟಿ ಕಟ್ಟಣಿಗೆ ಮನೆ ಬೋರ್ಕಟ್ಟೆ, ಉಪಾಧ್ಯಕ್ಷರಾದ ಜಗದೀಶ್ ಶೆಟ್ಟಿ ,ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ ಬೆಳ್ಳಂಪಳ್ಳಿ, ಗೌರವ ಕೋಶಾಧಿಕಾರಿ ಸುಧಾಕರ ಶೆಟ್ಟಿ ಪೆಲತ್ತೂರು, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಜಯಾನಂದ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ಶೆಟ್ಟಿ ಉಜಿರೆ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ವಿಶ್ವನಾಥ ಕೆ ಶೆಟ್ಟಿ ಮುಂಡ್ಕೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜ್ಯೋತಿ ವಿ ಶೆಟ್ಟಿ,ಯುವ ವಿಭಾಗದ ಕಾರ್ಯಾಧ್ಯಕ್ಷ ಆಕಾಶ್ ಜೆ ಶೆಟ್ಟಿ, ಮಹಿಳಾ ವಿಭಾಗದ ಕ್ರೀಡಾ ಸಮಿತಿಕಾರ್ಯಧ್ಯಕ್ಷೆ ದಿವ್ಯಾ ಯು ಶೆಟ್ಟಿ, ಯುವ ವಿಭಾಗದ ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಸಚಿನ್ ಶೆಟ್ಟಿ ಉಪಸ್ಥಿತರಿದ್ದರು. ಅತಿಥಿ ಗಣ್ಯರು ತೆಂಗಿನಕಾಯಿ ಒಡೆದು ದೀಪ ಪ್ರಜ್ವಲಿಸಿ ಬಲೂನು ಹಾರಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು . ವಿಜಯ್ ಶೆಟ್ಟಿ ಸ್ವಾಗತಿಸಿದರು. ಶ್ರೀಕಾ ರಾಕೇಶ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಅವಿನಾಶ್ ಶೆಟ್ಟಿ ಮಂದಾಡಿಗುತ್ತು ಕಾರ್ಯಕ್ರಮ ನಿರೂಪಿಸಿದರು, ದಿವ್ಯಾ ಯು ಶೆಟ್ಟಿ ವಂದಿಸಿದರು.