ಹಚ್ಚ ಹಸುರಿನಿಂದ ಕಂಗೊಳಿಸುವ, ಕಣ್ಮನ ಸೆಳೆಯುವ ಪೆರುವಾಯಿಯ ನದಿಗೆ ಸಮೀಪವೇ ಇರುವ ಅರಮನೆಯಂತೆ ಕಂಗೊಳಿಸುವ ಸುಂದರ,ಸುಸಜ್ಜಿತ, ಕಣ್ಮನ ಸೆಳೆಯುವ ಬಂಟರ ಸಂಘ, ಮುಂಬಯಿ ಸಂಚಾಲಿತ ಎಸ್.ಎಂ ಶೆಟ್ಟಿ ಶಿಕ್ಷಣ ಸಂಸ್ಥೆ ಬಂಟರ ಹೆಮ್ಮೆಯೂ ಹೌದು. ಈ ಶಿಕ್ಷಣ ಸಂಕುಲಕ್ಕೆ ಈಗ ಇಪ್ಪತ್ತೈದರ ಹರೆಯ. ದಿನಾಂಕ 22/1/23ರ ಆದಿತ್ಯವಾರ ಸಂಜೆ 5.30ರಿಂದ ಎಸ್.ಎಂ.ಶ್ಟ್ಟಿ ಶಿಕ್ಷಣ ಸಂಸ್ಥೆ ರಜತ ಸಂಭ್ರಮವನ್ನು ಆಚರಿಸಲಿದೆ. ಈ ಸಂದರ್ಭದಲ್ಲಿ ಗಣ್ಯಾತಿಗಣ್ಯರ ಸಮಕ್ಷಮದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ರಾಣಿ ಅಬ್ಬಕ್ಕನ ಕುರಿತ ಬ್ಯಾಲೆಟ್, ಕಿರು ಚಿತ್ರ, ಕಾಫಿ ಟೇಬಲ್ ಪುಸ್ತಕ ಬಿಡುಗಡೆ ಹೀಗೆ ಭಿನ್ನ ರೀತಿಯ ಕಾರ್ಯಕ್ರಮದೊಂದಿಗೆ ಈ ಸಮಾರಂಭ ಅರ್ಥಪೂರ್ಣವಾಗಿ ನಡೆಯಲಿದೆ. ಆ ಪ್ರಯುಕ್ತ ಎಸ್.ಎಂ.ಶೆಟ್ಟಿ ಶಿಕ್ಷಣ ಸಂಸ್ಥೆಯು ನಡೆದು ಬಂದ ಹಾದಿಯ ಅವಲೋಕನ ಈ ಕಿರು ಲೇಖನದಲ್ಲಿದೆ.
ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಮಿನಿ ಭಾರತವೆಂದೇ ಜನಜನಿತವಾಗಿರುವ ಮುಂಬಯಿ ಮಹಾನಗರ ಭಾರತದ ಭಾಗ್ಯ ನಗರಿ ಎಂದರೆ ಉತ್ಪ್ರೇಕ್ಷೆಯಾಗಲಾರದು. ಮುಂಬೈ ನಮ್ಮ ದೇಶದ ಆರ್ಥಿಕ ರಾಜಧಾನಿ. ಈ ಮಹಾನಗರದಲ್ಲಿ ಜನರ ಅದಮ್ಯ ಜೀವನೋತ್ಸಾಹ, ಕ್ರಿಯಾಶೀಲತೆ, ಸಮಯಪ್ರಜ್ಞೆ, ಕಾರ್ಯನಿಷ್ಠೆ , ಸಹಕಾರ ಗುಣಗಳಿಂದಾಗಿ ಜನರನ್ನು ಅಯಸ್ಕಾಂತದಂತೆ ಸೆಳೆಯಿತು. ಮುಂಬಯಿಗೆ ಅವಕಾಶವನ್ನು ಹುಡುಕಿಕೊಂಡು ಕರ್ನಾಟಕದ ಮೂಲೆ ಮೂಲೆಗಳಿಂದ ಜನರು ವಲಸೆ ಬಂದವರಲ್ಲಿ ಬಂಟರೂ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಮುಂಬಯಿಗೆ ವಲಸೆ ಬಂದ ಬಂಟರ ಸಾಧನೆ ಅಪೂರ್ವವಾದುದು. ಒಂದು ಕಾಲದಲ್ಲಿ ಅತಿ ಚಿಕ್ಕ ಪ್ರಾಯದಲ್ಲಿಯೇ ಬದುಕನ್ನು ಕಟ್ಟಿಕೊಳ್ಳಲು ಬರಿಗಾಲಲ್ಲಿ ಮುಂಬಯಿಗೆ ಪಾದಾರ್ಪಣೆ ಮಾಡಿದವರು, ಇಲ್ಲಿ ಮಾಡಿದ ಸಾಹಸ, ಸಾಧನೆ ಎಲ್ಲವೂ ರೋಚಕವಾದುದು. ಮುಂಬಯಿಯಲ್ಲಿ ಹೆಚ್ಚಿನ ಹೋಟೇಲು, ಮತ್ತಿತರ ಕೈಗಾರಿಕೋದ್ಯಮಗಳು ಬಂಟರ ಮಾಲಕತ್ವದಲ್ಲಿ ಇರುವುದು ಅವರ ಶ್ರಮ ಸಂಸ್ಕೃತಿಗೆ ಉತ್ತಮ ಉದಾಹರಣೆ. ಇಲ್ಲಿಗೆ ವಲಸೆ ಬಂದವರು ಆಯಾಯ ಜಾತೀಯ ಸಂಘಟನೆಗಳನ್ನು ಕಟ್ಟಿಕೊಂಡು ಆ ಮೂಲಕ ನಮ್ಮ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರಗಳಿಗೆ ಜೊತೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದರು. ಅದರಲ್ಲಿ ಬಂಟರ ಸಂಘ ಕೂಡಾ ಮುಂಬಯಿಯಲ್ಲಿ ಸ್ಥಾಪನೆಗೊಂಡ ದೀರ್ಘ ಇತಿಹಾಸವುಳ್ಳ ಸಂಘವೆನಿಸಿಕೊಂಡಿದೆ.
ಮರಾಠಿ ಮಣ್ಣಿನಲ್ಲಿ ಬಂಟರ ಕನಸಿನ ಸೌಧ ಬಂಟರ ಸಂಘ:- ಶತಮಾನಗಳ ಹಿಂದೆ ನಮ್ಮ ಸಮುದಾಯದ ಹಿತಚಿಂತನೆಯಿಂದ ಅನೇಕ ಯೋಜನೆ, ಯೋಚನೆಗಳೊಂದಿಗೆ ಬಂಟರ ಸಂಘ, ಮುಂಬಯಿ ಸ್ಥಾಪನೆಗೊಂಡಿತು. ವಲಸೆ ಬಂದು ಮುಂಬಯಿಯಲ್ಲಿ ನೆಲೆಸತೊಡಗಿದ ಹಲವು ಬಂಟ ಧುರೀಣರು ಕಲೆತು ಮುಂಬಯಿಯಲ್ಲಿ ಅಂದು ಬಂಟರ ಸಂಘದ ಕನಸು ಕಂಡು ಅದು ಸಾಕಾರಗೊಳ್ಳುವಲ್ಲಿ ಅಹರ್ನಿಶಿ ಶ್ರಮಿಸಿದರು. ಅವರೆಲ್ಲರನ್ನು ಇಂದಿಗೂ ಹೃದಯಂತರಾಳದಿಂದ ಸ್ಮರಿಸಿಕೊಳ್ಳುತ್ತಿದ್ದೇವೆ. ಆ ಕಾಲದಲ್ಲಿ ಬಂಟರ ಸಂಘದಂತಹ ಒಂದು ಜಾತೀಯ ಸಂಸ್ಥೆಯನ್ನು ಸ್ಥಾಪಿಸುವ ಕನಸು ಕಾಣುವುದು ಕೂಡಾ ಅಷ್ಟು ಸುಲಭದ ಮಾತಾಗಿರಲಿಲ್ಲ. ಆದರೂ ಅವರ ಅಂದಿನ ದೂರದೃಷ್ಟಿ, ತತ್ವ, ಆದರ್ಶಗಳ ಪರಿಣಾಮವಾಗಿ ಸಂಘ ಅಭಿವೃದ್ಧಿ ಪಥದತ್ತ ಸಾಗುತ್ತಿದೆ.
ಬಂಟರ ಸಂಘದ ಶಿಕ್ಷಣ ಪ್ರೀತಿ, ಜನಪರ ಕಾಳಜಿ:- ಸುಮಾರು 200 ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆ, ಕರಾವಳಿಯಿಂದ ಮುಂಬಯಿಗೆ ಬಂದ ಬಂಟರಲ್ಲಿ ಬೆರಳೆಣಿಕೆಯ ಜನ ಮಾತ್ರ ಗುತ್ತಿನ ಮನೆತನದಿಂದ, ಶ್ರೀಮಂತಿಕೆಯ ಕುಟುಂಬದಿಂದ ಬಂದವರಾದರೆ ಮಧ್ಯಮ ವರ್ಗದಿಂದ, ಕಡು ಬಡತನದಿಂದ ಬಂದವರೇ ಹೆಚ್ಚು. ತಮ್ಮ ಕುಟುಂಬ ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸುತ್ತಿರುವಾಗ ಆ ಕುಟುಂಬಕ್ಕೆ ಆಸರೆಯಾಗಬೇಕು ಎನ್ನುವ ಉದ್ದೇಶವನ್ನು ಇಟ್ಟು ಬಂದ ಬಾಲಕ, ಯುವಕರೆಲ್ಲರೂ ವಿದ್ಯಾರ್ಜನೆ ಪಡೆಯುವಲ್ಲಿ ಅವಕಾಶ ವಂಚಿತರಾದವರು. ಅವರು ಬಾಲ್ಯದಲ್ಲಿಯೇ ಮುಂಬಯಿಗೆ ಬಂದು ಬೇರೆ ಬೇರೆ ಕಡೆಗಳಲ್ಲಿ ಸಿಕ್ಕ ಕೆಲಸವನ್ನು ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಬದುಕು ಕಟ್ಟುವುದೇ ಮುಖ್ಯವಾಗಿತ್ತು. ಬಡತನದ ಬೇಗೆಯಲ್ಲಿದ್ದ ಯುವಜನತೆಗೆ ಮುಂಬಯಿ ಎನ್ನುವುದು ಸ್ವಪ್ನ ನಗರಿಯಾಗಿತ್ತು. ವಿಪುಲ ಅವಕಾಶಗಳನ್ನು ಒದಗಿಸಬಲ್ಲ ನೆಲವೆಂಬ ಭರವಸೆಯಿತ್ತು. ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ಜೀವನ ಸಾಗಿಸುವುದಕ್ಕೇನೂ ತೊಂದರೆಯಿಲ್ಲ. ಆದರೆ ಸಣ್ಣ ಪ್ರಾಯದಲ್ಲಿಯೇ ಮುಂಬಯಿಗೆ ಬಂದ ಬಂಟ ಯುವಕರು ಕಂಡ ಆಸೆ ಆಕಾಂಕ್ಷೆಗಳು ಸಾಕಾರಗೊಳ್ಳಲು ಸರಿಯಾದ ವಿದ್ಯಾಭ್ಯಾಸದ ಅಗತ್ಯವೂ ಇತ್ತು. ಆಗ ಮಾತ್ರ ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳಲು ಅವರಿಗೆ ಸಾಧ್ಯವಿತ್ತು.
ಬದುಕಿನ ಬೆಳಕು ಶಿಕ್ಷಣಕ್ಕಾಗಿ ರಾತ್ರಿ ಶಾಲೆಯ ಪರಿಕಲ್ಪನೆ:- ಬದುಕಿನ ಸುಧಾರಣೆಗೆ ಶಿಕ್ಷಣವೊಂದೇ ದಾರಿ. “ಶಿಕ್ಷಣ ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ” ಎಂದು ಡಾ.ಎಸ್.ರಾಧಕೃಷ್ಣನ್ ಅವರು ಶಿಕ್ಷಣದ ಮಹತ್ವವನ್ನು ಹೇಳಿದ್ದಾರೆ. ಶಿಕ್ಷಣ ಪ್ರತಿಯೊಬ್ಬರಲ್ಲಿ ಆತ್ಮಸ್ಥೈರ್ಯವನ್ನು ನೀಡುತ್ತದೆ. ಜೀವನವನ್ನು ಪರಿಪೂರ್ಣ ಗೊಳಿಸಿ ನಾವಿಡುವ ಪ್ರತಿ ಹೆಜ್ಜೆಯನ್ನು ದೃಢತೆಯಿಂದ ಇಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದನ್ನು ಅರಿತ ಬಂಟರ ಸಂಘದ ಹಿರಿಯರು ನಮ್ಮವರು ಶಿಕ್ಷಿತರಾಗಬೇಕು ಎಂದು ಯೋಚಿಸಿದ ಪರಿಣಾಮ ರಾತ್ರಿ ಶಾಲೆ ತೆರೆಯುವಂತಾಯಿತು. ಸಮಾಜದಲ್ಲಿ ಜನರನ್ನು ಕಾಡುತ್ತಿದ್ದ ಬಡತನ ನಿವಾರಣೆಯಾಗಬೇಕಾದರೆ ಅವರಿಗೆ ಒಳ್ಳೆಯ ವೃತ್ತಿಯ, ಕೆಲಸದ, ಪದವಿಯ ಅವಶ್ಯಕತೆ ಇತ್ತು. ಎಲ್ಲ ಕಡೆಗಳಲ್ಲಿ ಅನಕ್ಷರಸ್ಥರಿಗಿಂತ ವಿದ್ಯಾವಂತರಿಗೆ ವಿಪುಲ ಅವಕಾಶಗಳು ಇತ್ತು. ಇದನ್ನು ಮನಗಂಡ ನಮ್ಮ ಹಿರಿಯರು ರಾತ್ರಿ ಶಾಲೆಯ ಕನಸನ್ನು ಕಂಡರು. ಅದನ್ನು ನನಸಾಗಿಸಲು ಅಹರ್ನಿಶಿ ಶ್ರಮಿಸಿದರು. ಕೈಯಲ್ಲಿ ಹಣವಿಲ್ಲದಿದ್ದರೂ ಮನದಲ್ಲಿ ರಾತ್ರಿಶಾಲೆಯಂತಹ ಒಳ್ಳೆಯ ಕೆಲಸವನ್ನು ಮಾಡುವ ಅಚಲ ನಿರ್ಧಾರವಿತ್ತು. ನಮ್ಮವರು ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾಳಜಿಯಿತ್ತು.
ತಮ್ಮವರು ಶಿಕ್ಷಣ ಪಡೆದು ಜೀವನದಲ್ಲಿ ಮುಂದೆ ಬರಬೇಕು ಎಂಬ ಹೆಬ್ಬಯಕೆಯಿಂದ ಬಂಟರ ಸಂಘವು 1950ರಲ್ಲಿ ಎರಡು ರಾತ್ರಿಶಾಲೆಗಳನ್ನು ತೆರೆಯಿತು. ಇದು ಕಲಿಯಬೇಕೆಂಬ ಹಂಬಲವಿದ್ದವರಿಗೆ ಮರಳುಗಾಡಿನಲ್ಲಿ ಕಂಡ ಓಯಸಿಸ್ನಂತೆ ಕಂಡಿತು. ಹಗಲು ಕೆಲಸ ಮಾಡಿ ತಮ್ಮೊಳಗೆ ಕಲಿಯಬೇಕೆಂಬ ತುಡಿತವಿದ್ದವರಿಗೆ ರಾತ್ರಿ ಶಾಲೆಗಳು ಮುಕ್ತ ದ್ವಾರವನ್ನುತೆರೆದು ಸ್ವಾಗತಿಸಿದವು. ಆ ಸಂದರ್ಭದಲ್ಲಿ ರಾತ್ರಿ ಶಾಲೆಯಲ್ಲಿ ಪ್ರವೇಶ ಪಡೆಯಲು ನೂಕುನುಗ್ಗಲು ಇತ್ತು. ಅವರಲ್ಲಿ ಕಲಿಯುವ ಹುಮ್ಮಸ್ಸು, ಸಾಧಿಸುವ ಛಲ ಎದ್ದು ಕಾಣುತ್ತಿತ್ತು. ಇಂದು ನಾವು ಹಿಂದಿರುಗಿ ನೋಡಿದಾಗ ಈ ರಾತ್ರಿಶಾಲೆಯು ಅದೆಷ್ಟೋ ಅಪೂರ್ವ ಪ್ರತಿಭೆಗಳನ್ನು ಸೃಷ್ಟಿಸಿದೆ. ಕತ್ತಲಲ್ಲಿದ್ದ ಎಷ್ಟೋ ಜನರ ಬಾಳಿಗೆ ಬೆಳಕು ನೀಡಿದೆ. ರಾತ್ರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಮುಂದೆ ವೈದ್ಯರು, ಇಂಜಿನಿಯರ್, ಲಾಯರ್, ಲೆಕ್ಕಪರಿಶೋಧಕರು, ಹೋಟೇಲು ಉದ್ಯಮಿಗಳು, ಕೈಗಾರಿಕೋದ್ಯಮಿಗಳು ಹೀಗೆ ಬೇರೆ ಬೇರೆ ವೃತ್ತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಇನ್ನು ಕೆಲವರು ವೃತ್ತಿಯ ಜೊತೆಯಲ್ಲಿ ಸಂಘಟಕರಾಗಿ, ಸಮಾಜಸೇವಕರಾಗಿಯೂ ಮಿಂಚುತ್ತಿದ್ದಾರೆ. ಅವರು ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ ಈ ಮಟ್ಟದ ಸಾಧನೆ ಮಾಡಲು ರಾತ್ರಿಶಾಲೆಗಳು ಕಾರಣವಾದವು ಎನ್ನುವುದು ಗಮನಾರ್ಹ ಸಂಗತಿ. ಈ ರಾತ್ರಿಶಾಲೆಗಳಲ್ಲಿ ಕಲಿತು ಹೊರಬಂದ ವಿದ್ಯಾರ್ಥಿಗಳು ತಮ್ಮದೇ ಆದ ದೃಷ್ಟಿಕೋನದಿಂದ ವಿಚಾರ ವಿಮರ್ಶೆ ಮಾಡಬಲ್ಲವರಾದರು. ಬುದ್ದಿವಂತರಾಗಿ ಕ್ಷಮತೆಯಿಂದ, ಶ್ರಮದಿಂದ ಕೆಲಸ ಮಾಡಿ ತಮ್ಮ ತಮ್ಮ ಕ್ಷೇತ್ರದಲ್ಲಿ ಎತ್ತರೆತ್ತರಕ್ಕೇರಿದರು. ಸಹಾನುಭೂತಿಯಿಂದ, ನೈತಿಕ ಪ್ರಜ್ಞೆಗಳನ್ನು ಅರಿತು ಇತರರ ಕಷ್ಟಕ್ಕೆ ಸ್ಪಂದಿಸುವ ವಿಶಾಲ ಮನೋಭಾವವನ್ನು ಬೆಳೆಸಿಕೊಂಡರು. ಅಂದು ಜಾತಿ ಮತ ಭೇದವಿಲ್ಲದೆ ಬಂಟರ ಸಂಘ ತೆರೆದ ರಾತ್ರಿ ಶಾಲೆಗಳಲ್ಲಿ ಶಿಕ್ಷಣವನ್ನು ಪಡೆದವರು ಇಂದು ಅವರು ಏರಿದ ಎತ್ತರ ಅಚ್ಚರಿಯನ್ನು ಹುಟ್ಟಿಸುತ್ತದೆ. ಅವರು ಇಂದಿಗೂ ತಮ್ಮ ಶ್ರೇಯಸ್ಸಿಗೆ, ಯಶಸ್ಸಿಗೆ ತಾವು ಕಲಿತ ಬಂಟರ ಸಂಘದ ರಾತ್ರಿಶಾಲೆಗಳೇ ಕಾರಣ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ತಮ್ಮನ್ನು ಬೆಳೆಸಿದ ಶಾಲೆಯನ್ನು ಮರೆಯದೇ ತಾವು ಇತರರನ್ನು ಬೆಳೆಸುವ ಬಹುದೊಡ್ಡ ಗುಣಧರ್ಮವನ್ನು ತಮ್ಮಲ್ಲಿ ಬೆಳೆಸಿಕೊಂಡಿದ್ದಾರೆ. ತಮ್ಮಿಂದಾದ ಸಹಾಯ ಹಸ್ತವನ್ನು ತೆರೆದ ಮನಸ್ಸಿನಿಂದ ಮಾಡುತ್ತಾರೆ. ರಾತ್ರಿ ಶಾಲೆಗಳಲ್ಲಿ ಕಲಿತವರ ಈ ಸಾಧನೆಯೇ ಮುಂದೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಒಳ್ಳೆಯ ಶಾಲೆ, ಕಾಲೇಜು ತೆರೆಯುವಲ್ಲಿ ಪ್ರೇರಣೆಯನ್ನು ನೀಡಿತು ಎಂದರೆ ತಪ್ಪಾಗಲಾರದು. ಕನಸು ನನಸಾಗಿಸಿದ ಎಸ್.ಎಂ.ಶೆಟ್ಟಿ ಶಿಕ್ಷಣ ಸಂಕುಲ.
ಗುಣ ಮಟ್ಟದ ಶಿಕ್ಷಣದ ಉದ್ದೇಶದಿಂದ ಹುಟ್ಟಿದ ಕೂಸಿಗೀಗ ಇಪ್ಪತ್ತೈದರ ಸಂಭ್ರಮ:- ಬಂಟರ ಸಂಘದ ಎರಡನೆಯ ಹಂತದ ಬಹುದೊಡ್ಡ ಕ್ರಾಂತಿ ಅಂದರೆ ಅದು 1998ರಲ್ಲಿ ಪೂವಾಯಿ ಪರಿಸರದಲ್ಲಿ ಸ್ಥಾಪಿತವಾದ ಬಂಟರ ಸಂಘದ ಎಸ್.ಎಂ.ಶೆಟ್ಟಿ ಹೈಸ್ಕೂಲು. ಶಾಲೆಯನ್ನು ಕಟ್ಟುವುದಕ್ಕಾಗಿ ಮುಂಬಯಿ ಮಹಾನಗರದಲ್ಲಿ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಸುಂದರವಾದ, ಸರ್ವರೀತಿಯ ಸವಲತ್ತುಗಳಿರುವ ಪ್ರಧಾನ ಜಾಗ ಪೆರುವಾಯಿಯಲ್ಲಿ ಸ್ಥಳಾವಕಾಶವನ್ನು ಮಾಡಿಕೊಟ್ಟ ಬಂಟ ಸಮಾಜದ ಯಶಸ್ವಿ ಉದ್ಯಮಿಯಾದ ಶ್ರೀ ಎಸ್.ಎಂ.ಶೆಟ್ಟಿ ಅವರ ಹೃದಯವೈಶಾಲ್ಯ ಸ್ಮರಣೀಯ. ಇದರ ನಂತರ ಮುಂದಿನ ಹೆಜ್ಜೆಯೆಂಬಂತೆ ಶೈಕ್ಷಣಿಕ ಉದ್ದೇಶದಿಂದಲೇ ಶಾಲೆ ಕಟ್ಟಲು ತಳಹದಿಯನ್ನು ಹಾಕಲಾಯಿತು. ಭಾರತೀಯ ಚಲನಚಿತ್ರ ರಂಗದ ಯಶಸ್ವೀ ನಿರ್ಮಾಪಕರು, ಆಡ್ ಲ್ಯಾಬ್ನ ಮಾಲಕರು ಆಗಿರುವ ಶ್ರೀ ಮನಮೋಹನ ಆರ್ಶೆ ಟ್ಟಿ ಅವರ ಸಂಪೂರ್ಣ ಸಹಕಾರ ಮತ್ತು ದಿಟ್ಟ ಹೆಜ್ಜೆಯ ಪರಿಣಾಮವಾಗಿ ಎಸ್.ಎಂ.ಶೆಟ್ಟಿ ಹೈಸ್ಕೂಲು ಆರಂಭವಾಯಿತು. ಮುಂದೆ ಅದು ಹಂತ ಹಂತವಾಗಿ ಪ್ರಗತಿಯನು ಸಾಧಿಸುತ್ತ ಅನೇಕ ದಾನಿಗಳ ನೆರವಿನಿಂದ, ಉದಾರ ದೇಣಿಗೆಗಳನ್ನು ನೀಡಿದ್ದರಿಂದ ಈಗ ಈ ಶಿಕ್ಷಣ ಸಂಸ್ಥೆಗೊಂದು ಸುಂದರ ಸ್ವರೂಪ ದೊರೆತಿದೆ. ಪೆರುವಾಯಿ ಪರಿಸರದಲ್ಲಿ ಗುತ್ತಿನರಮನೆಯಂತೆ ಗತ್ತಿನಿಂದ ತಲೆ ಎತ್ತಿ ನಿಂತಿರುವ ಈ ಶಿಕ್ಷಣ ಸಂಸ್ಥೆ ಬಂಟ ಸಮುದಾಯದ ಮುಡಿಗೆ ಗರಿ ಮೂಡಿಸಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ಬಂಟರ ಸಂಘದ ಈ ಎಲ್ಲ ಹಿರಿಯರ ದೂರದೃಷ್ಟಿ, ಅನುಭವ, ಕುಶಾಗ್ರಮತಿ, ಸಹಾನುಭೂತಿ ಮತ್ತು ವಿದ್ಯಾಭ್ಯಾಸದ ಮೇಲಿನ ಕಾಳಜಿ ಮತ್ತು ಮಾರ್ಗದರ್ಶನದ ಫಲವಾಗಿ ಈ ಶಿಕ್ಷಣ ಸಂಸ್ಥೆ ಇಂದು ಅತಿ ಎತ್ತರಕ್ಕೇರಿದೆ. ಪೀಳಿಗೆಯಿಂದ ಪೀಳಿಗೆಗೆ ವಿದ್ಯಾಭ್ಯಾಸವನ್ನು ಪಡೆದ ಸಾವಿರಾರು ವಿದ್ಯಾರ್ಥಿಗಳು, ಪಾಲಕರು ಹಾಗೂ ಸಮಸ್ತ ಬಂಟರು ಈ ಶಿಕ್ಷಣ ಸಂಸ್ಥೆಗೆ ಕಾರಣೀಭೂತರಾದವರನ್ನು, ಅದೆಷ್ಟೋ ಆಧಾರಸ್ತಂಭಗಳನ್ನು ಸದಾ ಸ್ಮರಿಸುತ್ತಾರೆ. ಆರಂಭದ ಹಂತದಲ್ಲಿ ಶ್ರೀ ಬಿ.ಎಂ.ಶೆಟ್ಟಿ, ಶ್ರೀ ವಿವೇಕ್ ಶೆಟ್ಟಿ, ಶ್ರೀ ಸಿ.ಎ ಶಂಕರ ಶೆಟ್ಟಿ, ಶ್ರೀ ಐಕಳ ಹರೀಶ್ ಶೆಟ್ಟಿ ಮತ್ತಿತರರು ಈ ಶಿಕ್ಷಣ ಸಂಸ್ಥೆಯ ಅಭುವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೆ, ಶ್ರೀ ಬಿ.ಆರ್.ಶೆಟ್ಟಿ, ಶ್ರೀ ಪಿ.ಕೆ.ಶೆಟ್ಟಿ, ದಿ. ಶ್ರೀ ಎಂ.ಎಸ್.ಶೆಟ್ಟಿ ಮೊದಲಾದವರ ನಿರಂತರ ಪ್ರೋತ್ಸಾಹದಿಂದ ಶೈಕ್ಷಣಿಕ ಮಟ್ಟದಲ್ಲಿ ಸಾಟಿಯಿಲ್ಲದಂತೆ ಮೇಲುಗೈ ಸಾಧಿಸುತ್ತಲೇ ಬಂದಿದೆ. ಅಂದು ಇಪ್ಪತ್ತೈದು ವರ್ಷಗಳ ಹಿಂದೆ ಬಂಟರ ಸಂಘದ ಎಸ್.ಎಂ.ಶೆಟ್ಟಿ ಹೈಸ್ಕೂಲು ನೆಲಮಹಡಿ ಮತ್ತು ಪ್ರಥಮ ಮಹಡಿಯ ಕಾಮಗಾರಿ ಕೆಲಸವನ್ನು ಮುಗಿಸಿ ಉದ್ಘಾಟನೆಗೊಂಡಿತ್ತು. ಇಂದು ಎಸ್.ಎಂ.ಶೆಟ್ಟಿ ಶಿಕ್ಷಣ ಸಂಸ್ಥೆ ಸುಸಜ್ಜಿತ, ಸರ್ವಾಂಗ ಸುಂದರವಾಗಿ ನವೀಕರಣಗೊಂಡು ಶೋಭಿಸುತ್ತಿದೆ. ಈ ಕಟ್ಟಡದಲ್ಲಿ ಇಂದು ಕೆ.ಜಿಯಿಂದ ಪಿ.ಜಿಯವರೆಗೆ, ಪಿ.ಜಿಯಿಂದ ಪಿಎಚ್.ಡಿಯವರೆಗೆ ಅಂದರೆ ಶಿಸುವಿಹಾರದಿಂದ ಹಿಡಿದು ಸ್ನಾತಕೋತ್ತರವೇ ಅಲ್ಲದೆ ಸಂಶೋಧನ ವ್ಯಾಸಂಗವನ್ನೂ ಒಂದೇ ಸೂರಿನಡಿ ದೊರೆಯುವಂತೆ ಮಾಡಿರುವುದು ಇದರ ವೈಶಿಷ್ಟ್ಯ.
ರಾಜ್ಯ ಶಿಕ್ಷಣದ(ಸ್ಟೇಟ್ ಬೋರ್ಡ್)ನಲ್ಲಿ 2829 ವಿದ್ಯಾರ್ಥಿಗಳು, ಜೂನಿಯರ್ ಕಾಲೇಜಿನಲ್ಲಿ 2145, ಅಂತರಾಷ್ಟ್ರೀಯ ಶಾಲೆಯಲ್ಲಿ 1068 ಮತ್ತು ಪದವಿ ತರಗತಿಗಳಲ್ಲಿ ಸುಮಾರ್ 2500 ವಿದ್ಯಾರ್ಥಿಗಳು, ಒಟ್ಟು 8600 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವುದು ಈ ಸಂಸ್ಥೆಯ ಪ್ರಗತಿಗೆ ಉತ್ತಮ ನಿದರ್ಶನವಾಗಿದೆ. ಗುಣಮಟ್ಟದ ಶಿಕ್ಷಣವನ್ನು ನೀಡಿ ಶಿಕ್ಷಣಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಹೆಚ್ಚಿಸುವುದರತ್ತ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿರುವುದರಿಂದ, ಹಲವು ವರ್ಷಗಳಿಂದ ವಿದ್ಯಾರ್ಥಿಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡುತ್ತಿದ್ದಾರೆ. 2008ರಲ್ಲಿ ಅಂತಾರಾಷ್ಟ್ರೀಯ ಶಾಲೆಯನ್ನು ತೆರೆದು ನಮ್ಮವರಿಗೆ ವಿದೇಶಿ ಮಟ್ಟದ ಶಿಕ್ಷಣ ನೀಡುವುದು ಮತ್ತು ವಿದೇಶದವರನ್ನೂ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಇಲ್ಲಿ ಶಿಕ್ಷಣ ಪಡೆಯಲು ಜಾತಿ, ಮತ ಭೇದವಿಲ್ಲದೆ ವಿದ್ಯಾರ್ಥಿಗಳು ಬರುತ್ತಾರೆ. ಹಾಗೆ ಬರುವ ವಿದ್ಯಾರ್ಥಿಗಳಲ್ಲಿ ಯಾವುದೇ ಭೇದ ಭಾವವಿಲ್ಲ. ಎಲ್ಲರಲ್ಲಿ ಸಮಭಾವ, ಸಮಪ್ರೇಮ ತೋರುತ್ತಿರುವುದು ಸಮಾನತೆಯ ದ್ಯೋತಕವೂ ಹೌದು. ಸದ್ಯ ಎಸ್.ಎಂ.ಶೆಟ್ಟಿ ಶಿಕ್ಷಣ ಸಂಸ್ಥೆಯಲ್ಲಿ 258 ಭೋಧಕರು ಮತ್ತು 81 ಭೋಧಕೇತರ ಸಿಬ್ಬಂದಿಗಳು ಬಹಳ ನಿಷ್ಠೆ, ವಿಧೇಯತೆ, ಸಮರ್ಪಣಭಾವ, ಬದ್ಧತೆಯಿಂದ ಅವರವರ ಜವಾಬ್ದಾರಿಯೊಂದಿಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದೊಂದಿಗೆ ರಾಷ್ಟ್ರ ಕಟ್ಟುವ ಕೆಲಸವನ್ನು ಕೂಡಾ ನಿಭಾಯಿಸುತ್ತಿದ್ದಾರೆ.
ಎಲ್ಲರಂತೆ ನಾವಾಗಬಾರದು. ಇತರರಿಗಿಂತ ಭಿನ್ನವಾಗಿ ಯೋಚಿಸಬೇಕು ಮತ್ತು ಕಾರ್ಯವೆಸಗಬೇಕು ಎಂಬ ವಿಶಾಲ ಮನೋಭಾವದಿಂದ ಈ ಶಿಕ್ಶಣ ಸಂಸ್ಥೆಯು ಹಣ ಗಳಿಕೆಯ ಮನಸ್ಸಿಗಿಂತ ಇತರರ ಕಷ್ಟಕ್ಕೆ ಸ್ಪಂದಿಸುವ ಹೃದಯಕ್ಕೆ ಹೆಚ್ಚು ಪ್ರಾಧ್ಯಾನ್ಯತೆಯನ್ನು ನೀಡಿದೆ. ಹಣಕ್ಕಿಂತ ಪ್ರೀತಿ, ಕರುಣೆಗೆ ಮಹತ್ವ ನೀಡಿದ ಪರಿಣಾಮವಾಗಿ ವರ್ಷಕ್ಕೆ ಸುಮಾರು ಒಂದೂವರೆ ಕೋಟಿ ರೂಪಾಯಿಯಷ್ಟು ಶುಲ್ಕ ರಹಿತ ಶಿಕ್ಷಣವನ್ನು ನೀಡಲಾಗುತ್ತದೆ. ಕಲಿಯುವ ಆಸಕ್ತಿ ಇರುವ ಮಕ್ಕಳಿಗೆ, ಶಾಲಾ ಕಾಲೇಜಿನ ಶುಲ್ಕ ಪಾವತಿಸಲಾಗದವರಿಗೆ ಜಾತಿ ಮತ ಭೇದವಿಲ್ಲದೆ ಶುಲ್ಕರಹಿತ ವಿದ್ಯಾಭ್ಯಾಸ ನೀಡುವ ಮಹತ್ಕಾರ್ಯವನ್ನು ಎಸ್.ಎಂ.ಶೆಟ್ಟಿ ಶಿಕ್ಷಣ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಸಂಗತಿ. ಪ್ರಸ್ತುತ ಎಸ್.ಎಂ.ಶೆಟ್ಟಿ ಶಿಕ್ಷಣ ಸಂಸ್ಥೆ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಇರುವ ಸಮಯದಲ್ಲಿ ಬಂಟರ ಸಂಘದ ಎಲ್ಲ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಕೊಡುಗೆಯನ್ನು ಮರೆಯುವಂತಿಲ್ಲ. ಸದ್ಯ ಬಂಟರ ಸಂಘದ ಅಧ್ಯಕ್ಷರಾಗಿರುವ ಚಂದ್ರಹಾಸ.ಕೆ.ಶೆಟ್ಟಿ ಹಾಗೂ ಎಲ್ಲ ಪದಾಧಿಕಾರಿಗಳು, ಎಸ್.ಎಂ.ಶೆಟ್ಟಿ ಶಿಕ್ಷಣ ಸಂಕುಲದ ಕಾರ್ಯಾಧ್ಯಕ್ಷರಾಗಿರುವ ಬಿ.ಆರ್ ಶೆಟ್ಟಿ ಹಾಗೂ ಪಧಾಧಿಕಾರಿಗಳು ಅಹೋರಾತ್ರಿ ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.
ಇಲ್ಲಿ ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಪದವಿ ಶಿಕ್ಷಣದವರೆಗೂ ಕಲಿಸುತ್ತಿರುವ ಎಲ್ಲ ಶಿಕ್ಷಕವರ್ಗದವರು ಶ್ಲಾಘನೀಯರು. ಪ್ರಾಂಶುಪಾಲರಾದ ಸೀಮಾ ಸಬ್ಲೋಕ್, ಡಾ.ಶ್ರೀಧರ ಶೆಟ್ಟಿ, ಮಿಲ್ ಡ್ರೆಡ್ ಲೋಬೋ ಇವರ ಬಿಡುವಿಲ್ಲದ ಸೇವೆ, ಕೆಲಸ ಕಾರ್ಯಗಳು ಕಾಲೇಜಿನ ಉನ್ನತಿಗೆ ಕಾರಣ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಇಲ್ಲಿ ವಿದ್ಯಾರ್ಜನೆ ಮಾಡುವ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳ ಮುಂದಿನ ಜೀವನಕ್ಕೆ ಪೂರಕವಾಗಿ ಬೇಕಾಗಿರುವ ಆಟೋಟ ಸ್ಪರ್ಧೆಗಳು, ಭೌದ್ಧಿಕ ಮಟ್ಟವನ್ನು ಹೆಚ್ಚಿಸಬಲ್ಲ ಸ್ಪರ್ಧೆಗಳು, ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಂಡು ಕೇವಲ ಪಠ್ಯಕ್ಕೆ ಒತ್ತುಕೊಡದೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮಕ್ಕಳು ಉತ್ಸಾಹದಿಂದ ಪಾಲ್ಗೊಳ್ಳುವಂತೆ ಮಾಡಲಾಗುತ್ತದೆ. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಒರೆಗಲ್ಲಿಗೆ ಹಚ್ಚಿ ಅವರಿಗೆ ತಕ್ಕ ವೇದಿಕೆಯನ್ನು ಕಲ್ಪಿಸಿಕೊಡಲಾಗುತ್ತದೆ. ತಾಯಿ ಶಾರದೆಯ ಸೇವೆಯನ್ನು ನಿಸ್ವಾರ್ಥವಾಗಿ ಮಾಡುತ್ತಿರುವರುವ ಎಸ್.ಎಂ.ಶೆಟ್ಟಿ ಶಿಕ್ಷಣ ಸಂಸ್ಥೆ ಈಗ ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ. ಈ ಸಂದರ್ಭದಲ್ಲಿ ಈ ಸಂಸ್ಥೆ ಸಾವಿರಾರು ವಿದ್ಯಾರ್ಥಿಗಳ ಜೀವನದಲ್ಲಿ ಚಿಮ್ಮುವ ಕಾರಂಜಿಯಂತೆ ಉಲ್ಲಾಸವನ್ನು ತರಲಿ. ಮಕ್ಕಳ ಭವ್ಯ ಭವಿಷ್ಯ ಉಜ್ವಲವಾಗಲಿ.
“ನಿಜವಾದ ಶಿಕ್ಷಣವೆಂದರೆ ಮಾನವೀಯತೆ ವಿಕಾಸ” ಎಂದು ಸ್ವಾಮಿ ವಿವೇಕಾನಂದರು ಹೇಳಿರುವಂತೆ ಮಕ್ಕಳ ಬದುಕು ವಿಕಾಸ ಹೊಂದಲಿ. ಇಲ್ಲಿ ವಿದ್ಯಾರ್ಜನೆ ಮಾಡಿದ ಎಲ್ಲ ವಿದ್ಯಾರ್ಥಿಗಳು ಸಾಧಕರಾಗಿ ತಾವು ಕಲಿತ ಈ ಶಾಲೆ, ಕಾಲೇಜಿನ ಕೀರ್ತಿಯನ್ನು ಬಾನೆತ್ತರಕ್ಕೆ ಹಬ್ಬಿಸಲಿ. ಈ ಶಿಕ್ಷಣ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿಯನ್ನು ಕಾಣಲಿ ಎಂಬ ಹಾರೈಕೆ.