ತುಳುನಾಡ ಸೃಷ್ಟಿಕರ್ತನ ಕಂಚಿನ ಪ್ರತಿಮೆಯನ್ನು ಹೊಂದಿರುವ “ಪರಶುರಾಮ ಥೀಂ ಪಾರ್ಕ್’ 15 ಕೋ.ರೂ. ವೆಚ್ಚದಲ್ಲಿ ಕಾರ್ಕಳ ಸಮೀಪದ ಉಮ್ಮಿಕ್ಕಳ ಬೆಟ್ಟದಲ್ಲಿ ನಿರ್ಮಾಣಗೊಳ್ಳುತ್ತಿದೆ. 57 ಅಡಿ ಎತ್ತರದಲ್ಲಿ 33 ಅಡಿಯ ಸುಂದರ ಕಂಚಿನ ಮೂರ್ತಿ ಸ್ಥಾಪನೆಯಾಗಲಿದೆ. 2 ಕೋಟಿ ರೂ. ವೆಚ್ಚದ ಈ ಮೂರ್ತಿ ರಚನೆಗೆ 15 ಟನ್ ಕಂಚು ಮತ್ತು ಉಕ್ಕು ಬಳಸಲಾಗಿದೆ.ಪ್ರತಿಮೆಯ ನಿರ್ಮಾಣ ಕಾರ್ಯವು ಬೆಂಗಳೂರಿ ನಲ್ಲಿ 7 ತಿಂಗಳ ಹಿಂದೆ ಆರಂಭ ಗೊಂಡಿದ್ದು, ಅಂತಿಮ ಹಂತಕ್ಕೆ ತಲುಪಿದೆ. ಉಮ್ಮಿಕ್ಕಳ ಬೆಟ್ಟಕ್ಕೆ ಪ್ರತಿಮೆಯ ತಳಭಾಗ ಬಂದಿದ್ದು ಅಳವಡಿಸುವ ಕಾರ್ಯ ನಡೆಯುತ್ತಿದೆ. ಸೊಂಟದ ಪಟ್ಟಿ, ಮೂರ್ತಿ ಹಾಗೂ ಪರಶುರಾಮನ ಕೊಡಲಿ ಬರಲು ಬಾಕಿಯಿದೆ. 10 ದಿನಗಳಲ್ಲಿ ಮೂರ್ತಿ ಜೋಡಣೆ ಕಾರ್ಯ ಪೂರ್ಣಗೊಳ್ಳಲಿವೆ. ಜನವರಿ 10ರ ವೇಳೆಗೆ ಬೆಟ್ಟದ ಮೇಲೆ ಪರಶುರಾಮ ಮೂಡಿಬರಲಿದ್ದಾನೆ.


ಪಾರ್ಕ್ನಲ್ಲಿ ಆಡಿಯೋ ವಿಶುವಲ್ ಕೊಠಡಿ, ಸುಸಜ್ಜಿತ ಆರ್ಟ್ ಮ್ಯೂಸಿಯಂ, ನೇಯ್ಗೆ ಡೆಕ್ ಗ್ಯಾಲರಿ, ಸಾವಿರ ಮಂದಿ ಆಸನ ಸಾಮರ್ಥ್ಯದ ಬಯಲು ಮಂದಿರ, ಭಜನ ಮಂದಿರ, ಹಸುರು ಕೋಣೆಗಳ ಪಾಪ್ ಸಂಗ್ರಹಣೆ, ಪೂರಕ ಸೌಲಭ್ಯಗಳನ್ನು ಹೊಂದಿದ ವೇದಿಕೆ ಇದೆ.

ಕರಾವಳಿಯ ಶಿಲ್ಪಿ; ಸಾಗರದಾಚೆಗೂ ಪ್ರಸಿದ್ಧಿ
ಕರಾವಳಿಯವರೇ ಆದ ಹೊನ್ನಾವರದ ಇಡಗುಂಜಿ ಮೂಲದ ಶಿಲ್ಪಿ 42ರ ಹರೆಯದ ಕೃಷ್ಣ ನಾಯ್ಕ ಅವರ ಕೈಯಲ್ಲಿ ಮೂರ್ತಿ ಸುಂದರವಾಗಿ ರೂಪುಗೊಳ್ಳುತ್ತಿದೆ. ಬಾಲಗಂಗಾಧರನಾಥ ಸ್ವಾಮೀಜಿ, ಸಿದ್ದಗಂಗಾ ಸ್ವಾಮೀಜಿ, ತುಮಕೂರಿನಲ್ಲಿ ಮೋದಿಯ ಬೆಳ್ಳಿಯ ಮೂರ್ತಿ, ಸಂಗೊಳ್ಳಿ ರಾಯಣ್ಣನ ಕಂಚಿನ ಪ್ರತಿಮೆ ಹೀಗೆ ಇದುವರೆಗೆ ಸುಮಾರು 2 ಸಾವಿರ ಮೂರ್ತಿಗಳನ್ನು ಇವರು ರಚಿಸಿದ್ದಾರೆ. ದೇವಸ್ಥಾನ, ದೈವಸ್ಥಾನಗಳಿಗೂ ಮೂರ್ತಿ ರಚನೆ ಮಾಡಿದ್ದಾರೆ. ಕೃಷ್ಣ ನಾಯ್ಕ ರಚಿಸಿರುವ ಕಂಚಿನ, ಬೆಳ್ಳಿಯ ಮೂರ್ತಿಗಳು ಪ್ರಸಿದ್ಧಿ ಪಡೆದಿವೆ. ಅವರು ಪ್ರಸ್ತುತ ಸ್ವಿಜರ್ಲ್ಯಾಂಡ್ಗೆ ಕಳುಹಿಸಲು ಮೂರ್ತಿ ತಯಾರಿಯಲ್ಲಿ ತೊಡಗಿದ್ದಾರೆ. ಅಮೆರಿಕ ಸೇರಿದಂತೆ ವಿದೇಶಗಳಿಗೆ ಮೂರ್ತಿ ತಯಾರಿಸಿ ನೀಡಿದ್ದಾರೆ.
ಸಹಸ್ರಾರು ಪ್ರತಿಮೆಗಳನ್ನು ನಿರ್ಮಿಸಿದ್ದೇನೆ. ಪರಶುರಾಮನ ಈ ಪ್ರತಿಮೆ ಹೆಚ್ಚು ಖುಷಿ ನೀಡಿದೆ. ಹೆಮ್ಮೆಯೂ ಎನಿಸಿದೆ. ಕಾರಣ ನಾನು ಕೂಡ ತುಳುನಾಡಿನ ಊರಿಗೆ ಸೇರಿದವನು. ಉತ್ಸಾಹದಿಂದ ಪ್ರತಿಮೆ ತಯಾರಿಯಲ್ಲಿ ತೊಡಗಿಸಿಕೊಂಡಿರುವೆ.
– ಕೃಷ್ಣ ನಾಯ್ಕ, ಮೂರ್ತಿ ರಚನೆಗಾರ
ಮಿಂಚು ಪ್ರತಿಬಂಧಕ ವಿಶೇಷ
ಪಶ್ಚಿಮ ಘಟ್ಟದ ತಪ್ಪಲಿನ ಬೆಟ್ಟ ಗುಡ್ಡಗಳಿರುವ ಪ್ರದೇಶ ಕಾರ್ಕಳ. ಇಲ್ಲಿ ಗುಡುಗು ಮಿಂಚು ಹೆಚ್ಚಿರುತ್ತದೆ. ಇದೇ ಕಾರಣಕ್ಕೆ ಪರಶುರಾಮನ ಪ್ರತಿಮೆಯನ್ನು ಕಂಚು ಜತೆಗೆ ವಿಶೇಷ ಮಿಶ್ರಣ ಬಳಸಿ ಮಿಂಚು ಪ್ರತಿಬಂಧಕ ವ್ಯವಸ್ಥೆ ಮಾಡಲಾಗಿದೆ.
– ಬಾಲಕೃಷ್ಣ ಭೀಮಗುಳಿ








































































































