ದೀಪಾವಳಿ ಹಬ್ಬದ ಅಂಗವಾಗಿ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಡಾ| ಆರ್ ಕೆ ಶೆಟ್ಟಿ ಅಭಿಮಾನಿ ಬಳಗದವರಿಂದ ದೀಪಾವಳಿ ಹಬ್ಬದ ಬಂಟರ ಸ್ನೇಹ ಸಮ್ಮಿಲನ ಸಂಭ್ರಮಾಚರಣೆಯು ನವೆಂಬರ್ 4 ರಂದು ಮುಂಬಯಿ ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್ ಕೆ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಉದ್ಯಮಿಗಳಾದ ಮಹೇಶ್ ಶೆಟ್ಟಿ ತೆಳ್ಳಾರ್, ಧನಂಜಯ ಶೆಟ್ಟಿ ಜೂಹೂ, ಸಿ.ಎ ಎನ್.ಬಿ ಶೆಟ್ಟಿ, ಗಿರೀಶ್ ಶೆಟ್ಟಿ ತೆಳ್ಳಾರ್, ಶಶಿಧರ್ ಶೆಟ್ಟಿ ಇನ್ನಂಜೆ, ಬೆಳ್ಳಾಡಿ ಅಶೋಕ್ ಶೆಟ್ಟಿ, ಚಂದ್ರಹಾಸ್ ಶೆಟ್ಟಿ ಗುರುಸ್ವಾಮಿ, ಕೃಷ್ಣ ವಿ ಶೆಟ್ಟಿ ಸಯನ್, ಗಣೇಶ್ ರೈ ಚೆoಬೂರು, ಉಳ್ತೂರು ಮೋಹನದಾಸ್ ಶೆಟ್ಟಿ, ದಿವಾಕರ್ ಶೆಟ್ಟಿ ಇಂದ್ರಾಳಿ, ಚಿತ್ರಾ ಆರ್ ಶೆಟ್ಟಿ, ಮನೋರಮ ಎನ್.ಬಿ ಶೆಟ್ಟಿ ಹಾಗೂ ಶಿವರಾಮ ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಚಂದ್ರಹಾಸ್ ಶೆಟ್ಟಿ ಗುರುಸ್ವಾಮಿ ಮಾತನಾಡಿ, ಬಂಟರ ಸಂಘವು ಬಡವರ ಸೇವೆಯನ್ನು ಮಾಡುತ್ತಾ ಬಂದಿದ್ದು, ನಾವು ಬಂಟರು ಸ್ವಾಭಿಮಾನಿಗಲಾಗಿದ್ದೇವೆ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಬಾರದಂತೆ ದೇವರು ನಮಗೆ ಅನುಗ್ರಹಿಸಲಿ ಎಂದರು.




ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಮಾತನಾಡಿ, ದೀಪಾವಳಿಯ ಶುಭ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಂಟ ಸಮಾಜ ಬಂಧುಗಳು ಬಂಟರ ಭವನದಲ್ಲಿ ಸೇರಿಕೊಂಡದ್ದನ್ನು ಕಂಡಾಗ ಅಭಿಮಾನವಾಗುತ್ತದೆ. ನಾವೆಲ್ಲರೂ ಒಗ್ಗಟ್ಟಿನಲ್ಲಿದ್ದಾಗ ಸಂಘದಲ್ಲಿ, ಸಮಾಜದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಬರಲು ಸಾಧ್ಯವಾಗುವುದಿಲ್ಲ. ಎಲ್ಲರೂ ಒಗ್ಗಟ್ಟಿನದ್ದಾಗ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ. ಹಿರಿಯರ ಮಾರ್ಗದರ್ಶನದಲ್ಲಿ ಬಂಟ ಸಮಾಜದೊಳಗೆ ಬಂದಿರುವ ಸಮಸ್ಯೆಗಳು ದೂರವಾಗುತ್ತದೆ ಎಂಬ ಆತ್ಮವಿಶ್ವಾಸ ನನಗಿದೆ. 35 ವರ್ಷಗಳಿಂದ ಬಂಟ ಸಮಾಜದ ಸೇವೆಯನ್ನು ಮಾಡುತ್ತಾ ಬಂದಿದ್ದೇನೆ. ಜಗತ್ತಿನ ಎಲ್ಲಾ ಸಮಾಜಕ್ಕೂ ಬಂಟರ ಸಮಾಜ ಆದರ್ಶವಾಗಿದ್ದು, ಅದರ ಗೌರವವನ್ನು ನಾವು ಉಳಿಸೋಣ. ಆದ್ದರಿಂದ ಬಂಟ ಸಮಾಜದ ಬಂಧುಗಳು ನನ್ನ ಎಲ್ಲಾ ಸಂದರ್ಭದಲ್ಲೂ ನನ್ನೊಂದಿಗೆ ಇದ್ದು ಆತ್ಮಸ್ಥೈರ್ಯ ತುಂಬಿದ್ದಾರೆ ಎಂದರು. ಮಹೇಶ್ ಶೆಟ್ಟಿ ತೆಳ್ಳಾರ್ ತನ್ನ ಅಭಿಪ್ರಾಯ ತಿಳಿಸುತ್ತಾ, ಬಡವರ ಸೇವೆ ಮಾಡುವವರೊಂದಿಗೆ ನಾನು ಸದಾ ಇರುವವನು. ಬಂಟರ ಸಮಾಜ ಯಾವಾಗಲೂ ಒಗ್ಗಟ್ಟಾಗಿರಬೇಕು ಎಂದರು. ಸಿ.ಎ ಎನ್.ಬಿ ಶೆಟ್ಟಿ ಮಾತನಾಡಿ, ದೀಪಾವಳಿಯು ಎಲ್ಲರ ಮನಸ್ಸನ್ನು ಒಂದುಗೂಡಿಸಲಿ. ಸಮಾಜದಲ್ಲಿ ಬಾಂಧವ್ಯ ಒಗ್ಗಟ್ಟು ಬಲಗೊಳ್ಳಲಿ ಎಂದು. ಶಶಿಧರ್ ಶೆಟ್ಟಿ ಇನ್ನಂಜೆ ಮಾತನಾಡಿ, ಆರ್ ಕೆ ಶೆಟ್ಟಿ ಅವರ ಅಭಿಮಾನದಿಂದ ಸಮುದ್ರದ ಅಲೆಯಂತೆ ಎಲ್ಲಾ ಪ್ರದೇಶದಿಂದ ಸಮಾಜ ಬಾಂಧವರು ಸೇರಿದ್ದು, ಎಲ್ಲಾ ಸಂದರ್ಭದಲ್ಲಿ ನಮ್ಮೆಲ್ಲರ ಒಗ್ಗಟ್ಟು ಹೀಗೆಯೇ ಇರಲಿ ಎಂದರು. ದಿವಾಕರ್ ಶೆಟ್ಟಿ ಇಂದ್ರಾಳಿಯವರು ದೀಪಾವಳಿಯ ಶುಭಾಶಯಗಳನ್ನು ತಿಳಿಸುತ್ತಾ, ಬಹಳ ವರ್ಷಗಳಿಂದ ಬಂಟರ ಸಂಘದಲ್ಲಿ ಸೇವೆಯಲ್ಲಿ ನಾನು ತೊಡಗಿಕೊಂಡವನು. ಸಂಘದ ಸೇವೆ ಮಾಡಬೇಕೆನ್ನುವವರಿಗೆ ಎಲ್ಲರಿಗೂ ಅವಕಾಶ ಸಿಗುವಂತಾಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ| ಆರ್ ಕೆ ಶೆಟ್ಟಿ ಮಾತನಾಡಿ, ನಿಮ್ಮೆಲ್ಲರ ನಡುವೆ ನಿಂತು ಮಾತನಾಡುತ್ತಿರುವುದು ನನಗೆ ಅತ್ಯಂತ ಸಂತೋಷ ಮತ್ತು ಹೆಮ್ಮೆಯ ವಿಷಯವಾಗಿದೆ. ಇಂದಿನ ಈ ಸುಂದರ ಸಮಾಗಮ ಕೇವಲ ಒಂದು ಹಬ್ಬದ ಆಚರಣೆಗೆ ಸೀಮಿತವಾಗಿರದೇ, ನಮ್ಮ ಸಮಾಜದ ಒಗ್ಗಟ್ಟು, ಪರಸ್ಪರ ಪ್ರೀತಿ, ವಿಶ್ವಾಸ, ಸಹಕಾರ ಮತ್ತು ಸಾಮರಸ್ಯವನ್ನು ಮತ್ತೊಮ್ಮೆ ಪ್ರತಿಬಿಂಬಿಸುವ ಮಹತ್ವದ ಸಂದರ್ಭವಾಗಿದೆ. ಈ ಹಿಂದೆ ದೀಪಾವಳಿಯ ಸಂದರ್ಭದಲ್ಲಿ ಸಮಾಜದ ಬಂಧುಗಳನ್ನೆಲ್ಲಾ ಸೇರಿಕೊಂಡು ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯಲ್ಲಿ ಆಯೋಜಿಸಿಕೊಂಡಿದ್ದೆ. ಕಳೆದ ವರ್ಷ ನಮ್ಮ ದೀಪಾವಳಿ ಸಂಪ್ರದಾಯದ ಕಾರ್ಯಕ್ರಮ ನಡೆಯಬೇಕಾಗಿತ್ತು. ಆದರೆ ಕೆಲವು ಅನಿವಾರ್ಯ ಕಾರಣಗಳಿಂದಾಗಿ ಅದನ್ನು ರದ್ದುಗೊಳಿಸಬೇಕಾಯಿತು. ಆ ಸಂದರ್ಭದಲ್ಲಿ ನಮಗೆಲ್ಲರಿಗೂ ಒಂದು ರೀತಿಯ ಬೇಸರವಾಗಿತ್ತು. ಏಕೆಂದರೆ, ವರ್ಷದಿಂದ ವರ್ಷಕ್ಕೆ ಮುಂದುವರಿಸಿಕೊಂಡು ಬಂದಿರುವ ಇಂತಹ ಸಂಪ್ರದಾಯಗಳು ನಮ್ಮ ಸಮಾಜದ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಬಂಧಗಳನ್ನು ಗಟ್ಟಿಗೊಳಿಸುವ ಅಮೂಲ್ಯ ಕೊಂಡಿಗಳಾಗಿವೆ. ಆದ್ದರಿಂದ ಈ ಬಾರಿ ಯಾವುದೇ ಕಾರಣಕ್ಕೂ ಈ ಸಂಪ್ರದಾಯಕ್ಕೆ ವಿರಾಮ ಬೀಳಬಾರದು. ನಮ್ಮ ಹಿರಿಯರು ಹಾಕಿ ಕೊಟ್ಟಿರುವ ಉತ್ತಮ ಪರಂಪರೆಯನ್ನು ಮುಂದುವರಿಸಬೇಕು ಎಂಬ ದೃಢ ಸಂಕಲ್ಪದೊಂದಿಗೆ ನಾವೆಲ್ಲರೂ ಒಂದಾಗಿದ್ದೇವೆ. ನಮ್ಮ ಮುಂದಿನ ಪೀಳಿಗೆಗೂ ಇಂತಹ ಸಂಪ್ರದಾಯಗಳ ಮಹತ್ವ ತಿಳಿಯಬೇಕು. ಅವರು ಕೂಡಾ ಸಮಾಜದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಸಂಘಟನೆಯ ಮೌಲ್ಯಗಳನ್ನು ಮುಂದುವರಿಸಿಕೊಂಡು ಹೋಗಬೇಕೆನ್ನುವುದು ನಮ್ಮೆಲ್ಲರ ಆಶಯವಾಗಿದೆ. ಇಂದು ನಮ್ಮ ಸಮಾಜಕ್ಕೆ ಅತ್ಯಂತ ಅಗತ್ಯವಾಗಿರುವುದು ಒಗ್ಗಟ್ಟು. ನಮ್ಮಲ್ಲಿ ಅಭಿಪ್ರಾಯಗಳು ಬೇರೆ ಬೇರೆಯಾಗಿರಬಹುದು, ಆಲೋಚನೆಗಳು ವಿಭಿನ್ನವಾಗಿರಬಹುದು. ಆದರೆ ಸಮಾಜದ ಅಭಿವೃದ್ಧಿ ಎಂಬ ಒಂದೇ ಗುರಿಯ ನಾವೆಲ್ಲರೂ ಒಂದಾಗಬೇಕು. ಬಂಟ ಸಮಾಜದ ಬಂಧುಗಳ ಅಭಿವೃದ್ಧಿಯೇ ನಮ್ಮ ಧ್ಯೇಯ. ಮುಂಬಯಿ ಬಂಟರ ಸಂಘದ ಒಗ್ಗಟ್ಟಿನಲ್ಲಿ ಬಲಿಷ್ಠ ಆಗಬೇಕೆಂಬುದು ಸಮಾಜದ ಎಲ್ಲಾ ಬಂಧುಗಳ ಆಶಯವಾಗಿದ್ದು, ದೇವರ ಮತ್ತು ಹಿರಿಯರ ಆಶೀರ್ವಾದದಂತೆ ಸಂಘ ಒಗ್ಗಟ್ಟಾಗಿ ಮುನ್ನಡೆಯುತ್ತದೆ. ಯಾವುದೇ ಅಪಚಾರಗಳಿಗೆ ಟೀಕೆಗಳಿಗೆ ಸಮಾಜ ಬಾಂಧವರು ಕಿವಿಯಾಗದೆ ಸಮಾಜದಲ್ಲಿ ಒಗ್ಗಟ್ಟಾಗಿ ಸಮಾಜದ ಸೇವೆ ಮಾಡೋಣ. ಈ ದೀಪಾವಳಿ ಬೆಳಕು ನಮ್ಮೆಲ್ಲರ ಮನಸ್ಸಿನಲ್ಲಿರುವ ಭಿನ್ನಾಭಿಪ್ರಾಯಗಳ ಕತ್ತಲೆಯನ್ನು ದೂರಮಾಡಿ, ಪ್ರೀತಿ, ವಿಶ್ವಾಸ, ಸಾಮರಸ್ಯ ಮತ್ತು ಒಗ್ಗಟ್ಟಿನ ಹೊಸ ಬೆಳಕನ್ನು ಮೂಡಿಸಲಿ. ನಮ್ಮ ಬಂಟರ ಸಂಘ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಸಮಾಜದ ಕೀರ್ತಿ ಎಲ್ಲೆಡೆ ಪಸರಿಸುವಂತೆ ಆಗಲಿ, ಸಂಘದ ಸಮಾಜದ ಒಳಿತಿಗಾಗಿ ಎಲ್ಲಾ ತ್ಯಾಗಕ್ಕೂ ಸಿದ್ಧ ಎಂದು ನುಡಿದರು.
ಸಂಘಟಕ ಬಂಟರ ಸಂಘ ಮುಂಬಯಿಯ ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್ ಸ್ವಾಗತಿಸಿ, ದೀಪಾವಳಿಯ ಶುಭ ಸಂದರ್ಭದಲ್ಲಿ ಬಂಟ ಬಂಧುಗಳು ಆರ್ ಕೆ ಶೆಟ್ಟಿ ಅವರು ಆಯೋಜಿಸಿದ ಈ ಕಾರ್ಯಕ್ರಮಕ್ಕೆ ಗ್ರಾಮೀಣ ಪ್ರದೇಶದ ತಳಮಟ್ಟದ ಸಮಾಜ ಬಾಂಧವರು ಅಪಾರ ಸಂಖ್ಯೆಯಲ್ಲಿ ಸೇರಿರುವುದು ನಮ್ಮ ಸಮಾಜದಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಿದೆ. ಬಂಟ ಸಮಾಜದ, ಸಂಘದ ಸೇವಾ ಕಾರ್ಯಗಳು ಒಗ್ಗಟ್ಟಾಗಿ ನಡೆಯಬೇಕಿದ್ದರೆ ಸಮಾಜ ಬಂಧುಗಳೆಲ್ಲರ ಒಮ್ಮತದ ಸಹಕಾರ ಬೇಕಾಗುತ್ತದೆ. ಆದ್ದರಿಂದ ಸಾವಿರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಸೇರಿಕೊಂಡಿದ್ದೀರಿ. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಗೌರವ ಸಮಾಜದ ಮೇಲಿರಲಿ. ಸಂಘದಲ್ಲಿ ಸಮಾಜದಲ್ಲಿ ಬಂದಿರುವ ಭಿನ್ನಾಭಿಪ್ರಾಯಗಳು ಎಲ್ಲವೂ ದೂರವಾಗುತ್ತದೆ. ಸಮಾಜದ ಹಿರಿಯರ ಮಾರ್ಗದರ್ಶನದಲ್ಲಿ ಎಲ್ಲವೂ ಸುಸಂಗವಾಗಿ ನಡೆಯುತ್ತದೆ. ಮುಂಬಯಿ ಬಂಟರು ಒಗ್ಗಟ್ಟಿಗೆ ಪ್ರಸಿದ್ಧಿ ಪಡೆದವರು. ಮುಂದಿನ ದಿನಗಳಲ್ಲಿ ಒಗ್ಗಟ್ಟಿನಲ್ಲಿ ಇರುತ್ತಾರೆ ಎಂದು ನುಡಿದರು. ಸುರೇಶ್ ಶೆಟ್ಟಿ ಶಿಬರೂರು ಪ್ರಾರ್ಥಿಸಿದರು. ವಿಜಯ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿವರಾಮ್ ಶೆಟ್ಟಿ ಧನ್ಯವಾದರು ಸಮರ್ಪಿಸಿದರು. ಪ್ರಾರಂಭದಲ್ಲಿ ಕೊಡ್ಯಡ್ಕ ಕ್ರಿಯೇಷನ್ಸ್ ಅವರ ಮನೋಹರ ಶೆಟ್ಟಿ ನಂದಳಿಕೆ ರಚಿಸಿದ ಅಶೋಕ್ ಕುಮಾರ್ ಕೊಡ್ಯಡ್ಕ ನಿರ್ದೇಶನದ “ಮಕ್ಕರ್ ಮಲ್ಪಡೆ” ತುಳು ಹಾಸ್ಯ ನಾಟಕ ಪ್ರದರ್ಶನ ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಚಿತ್ರ, ವರದಿ : ದಿನೇಶ್ ಕುಲಾಲ್


















































































































