ಕಾವೂರು ಮಾಲಾಡಿ ಕೋರ್ಟ್ ಮುಖ್ಯ ರಸ್ತೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾವೂರು ಬಂಟರ ಭವನದ ಉದ್ಘಾಟನಾ ಸಮಾರಂಭದಲ್ಲಿ ‘ಬಂಟ ಬೆಳಕು’ ಸ್ಮರಣ ಸಂಚಿಕೆ ಬಿಡುಗಡೆಗೊಳ್ಳಲಿದ್ದು, ಇದರ ತಂಡದ ಮೊದಲ ಸಭೆಯು ಬಂಟರ ಭವನದ ಬಯಲು ರಂಗ ಮಂಟಪದ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಆನಂದ ಶೆಟ್ಟಿ ಅಡ್ಯಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸ್ಮರಣ ಸಂಚಿಕೆಯ ಮುಖ್ಯ ಸಲಹೆಗಾರರಾದ ಹಿರಿಯ ಪತ್ರಕರ್ತ ಆನಂದ್ ಶೆಟ್ಟಿ ಹಾಗೂ ರವೀಂದ್ರ ಶೆಟ್ಟಿ ಉಪಸ್ಥಿತರಿದ್ದು, ಮಾದರಿ ಸ್ಮರಣ ಸಂಚಿಕೆಯಾಗಿ ಮೂಡಿ ಬರಲು ಸಲಹೆ ನೀಡುವ ಭರವಸೆ ನೀಡಿದರು. ಬಂಟ ಬೆಳಕು ಸ್ಮರಣಿಕೆಯ ಪ್ರಧಾನ ಸಂಪಾದಕ ಮೂಲ್ಕಿ ಕರುಣಾಕರ ಶೆಟ್ಟಿ ಮಾತನಾಡಿ, ಒಡಿಯೂರು ಶ್ರೀಗಳು ಈ ಸಂಚಿಕೆಗೆ ‘ಬಂಟ ಬೆಳಕು’ ನಾಮಕರಣ ಮಾಡಲು ಸಲಹೆ ನೀಡಿದ್ದಾರೆ. ಬಂಟರ ಭವನದ ಮುಖಪುಟದೊಂದಿಗೆ ಅಂದಾಜು 300 ಪುಟಗಳಲ್ಲಿ ಸ್ವಾಮೀಜಿಗಳ, ಗಣ್ಯರ ಸಂದೇಶ, ಕಾವೂರು ಬಂಟರ ಸಂಘ ನಡೆದು ಬಂದ ದಾರಿ, ಸ್ಥಾಪಕಾಧ್ಯಕ್ಷರ ಸಹಿತ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ರೀಡಾ ಚಟುವಟಿಕೆಗಳ ಸಚಿತ್ರ ವರದಿ, ಬಂಟರ ಬದುಕು, ಸಂಸ್ಕೃತಿ, ಸಂಪ್ರದಾಯ, ದೈವಾರಾಧನೆ ಹಾಗೂ ಗತಿಸಿದವರ ಸಾಧನೆಯನ್ನು ಇಂದಿಗೂ ಶಾಶ್ವತವಾಗಿ ನೆನಪಿಸಿಕೊಳ್ಳುವ ಸಾಧಕರ ಸಚಿತ್ರ ವರದಿ ಸ್ಮರಣಿಕೆಯಲ್ಲಿ ಮೂಡಿ ಬರಲಿದೆ ಎಂದರು.




ಅಧ್ಯಕ್ಷ ಆನಂದ ಶೆಟ್ಟಿ ಮಾತನಾಡಿ, ಬಂಟ ಬೆಳಕು ಸ್ಮರಣಿಕೆ ಒಂದು ಅವಿಸ್ಮರಣೀಯವಾಗಿ ಮೂಡಿ ಬರಲು ಒಗ್ಗಟ್ಟಾಗಿ ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಎಲ್ಲರ ಸಲಹೆ, ಸಹಾಯ, ಸಹಕಾರ ಕೋರಲಾಗುವುದು ಎಂದರು. ಡಿ. ಸುಧಾಕರ್ ಶೆಟ್ಟಿ ಮುಗ್ರೋಡಿ, ಸುಧಾಕರ್ ಆಳ್ವ, ಡಾ| ಮಾಲತಿ ಶೆಟ್ಟಿ ಮಾಣೂರು, ದಿನೇಶ್ ಶೆಟ್ಟಿ, ಲಕ್ಷ್ಮೀನಾರಾಯಣ ಶೆಟ್ಟಿ, ದಿವಾಕರ್ ಶೆಟ್ಟಿ, ಗಣೇಶ್ ಮಲ್ಲಿ, ರೇಖಾ ವಿ ಶೆಟ್ಟಿ, ಹರುಷ ಎಸ್ ಶೆಟ್ಟಿ, ನಯನ ಎಂ ಪಕ್ಕಳ ಈ ಸಂಧರ್ಭ ಉಪಸ್ಥಿತರಿದ್ದರು.


















































































































