ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ| ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಕುಂದಾಪುರದ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ನಡೆದ ಕಾರಂತರ ಕಥನಗಳ ವರ್ತಮಾನದ ಮರು ಓದು ವಿಷಯದ ಕುರಿತು ನಡೆದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಕಾರಂತರ ಕಥನಗಳಲ್ಲಿ ಮಹಿಳಾ ದೃಷ್ಟಿಕೋನ ಎಂಬ ವಿಷಯದ ಕುರಿತು ವಿಚಾರಗೋಷ್ಠಿ ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿ ವಿಶ್ರಾಂತ ಕನ್ನಡ ಪ್ರಾಧ್ಯಾಪಕಿ ಲೇಖಕಿ ಡಾ| ರೇಖಾ ಬನ್ನಾಡಿ ಮಾತನಾಡಿ, ಕಾರಂತರ ಕಥನಗಳಲ್ಲಿ ಮಹಿಳೆಯರ ಬದುಕು, ಬವಣೆ, ಸಂಘರ್ಷ ಹಾಗೂ ಸಾಮಾಜಿಕ ಸ್ಥಿತಿಗತಿಗಳು ವೈವಿಧ್ಯಮಯವಾಗಿ ಅಭಿವ್ಯಕ್ತಿಗೊಂಡಿವೆ. ಮಹಿಳೆಯನ್ನು ಕೇವಲ ಕುಟುಂಬದ ಚೌಕಟ್ಟಿನಲ್ಲಿ ನೋಡುವುದಕ್ಕಿಂತ ಆಕೆಯ ಸ್ವತಂತ್ರ ವ್ಯಕ್ತಿತ್ವ, ಚಿಂತನೆ ಮತ್ತು ಅಸ್ತಿತ್ವಕ್ಕೆ ಕಾರಂತರು ತಮ್ಮ ಸಾಹಿತ್ಯದಲ್ಲಿ ಮಹತ್ವ ನೀಡಿದ್ದಾರೆ. ಅವರ ಕಥನಗಳಲ್ಲಿ ಮಹಿಳೆಯರ ನೋವು, ಶೋಷಣೆ, ಸ್ವಾಭಿಮಾನ ಹಾಗೂ ಬದುಕಿನ ಸವಾಲುಗಳು ಪರಿಣಾಮಕಾರಿಯಾಗಿ ಚಿತ್ರಣಗೊಂಡಿವೆ. ಸ್ತ್ರೀ ಸಂವೇದನೆ ಮತ್ತು ಸಾಮಾಜಿಕ ವಾಸ್ತವಗಳ ನಡುವಿನ ಸಂಬಂಧವನ್ನು ಕಾರಂತರು ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರಂತರ ಸಾಹಿತ್ಯವು ಮಹಿಳಾ ಬದುಕಿನ ವಿವಿಧ ಆಯಾಮಗಳನ್ನು ಅರಿಯಲು ಮಹತ್ವದ ದಿಕ್ಸೂಚಿಯಾಗಿದೆ ಎಂದರು.
ವಿಶ್ರಾಂತ ಇಂಗ್ಲೀಷ್ ಪ್ರಾಧ್ಯಾಪಕರು, ಲೇಖಕಿ ಡಾ| ಪಾರ್ವತಿ ಜಿ ಐತಾಳ್ ಹಾಗೂ ಪ್ರಾಂಶುಪಾಲೆ, ಚಿಂತಕಿ ಡಾ| ನಿಕೇತನ ಪ್ರತಿಕ್ರಿಯೆ ನೀಡಿದರು. ಈ ಸಂದರ್ಭ ಡಾ| ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ| ಗಣನಾಥ ಶೆಟ್ಟಿ ಎಕ್ಕಾರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಾಲೇಜಿನ ಪ್ರಾಂಶುಪಾಲ ಪ್ರೊ. ಡಾ| ಕೆ ಉಮೇಶ್ ಶೆಟ್ಟಿ, ವಿಚಾರ ಸಂಕಿರಣ ಸಂಯೋಜಕ ಉಪ ಪ್ರಾಂಶುಪಾಲ ಡಾ| ಚೇತನ್ ಶೆಟ್ಟಿ ಕೋವಾಡಿ ಮತ್ತಿತರರು ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪೃಥ್ವಿಶ್ರೀ ಜಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.





















































































































