ಗೋವಾ ಬಂಟರ ಸಂಘದ ವತಿಯಿಂದ 26ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಗೋ ಪೂಜೆಯು ಗೋವಾದ ಸಖೆರಿ ಮಯೆoನಲ್ಲಿರುವ ‘ಗೋಮಂತಕ ಗೋಶಾಲೆ’ಯಲ್ಲಿ ಅಕ್ಟೋಬರ್ 02ರಂದು ವಿಜೃಂಭಣೆಯಿಂದ ನೆರವೇರಿತು. ಕಳೆದ 25 ವರ್ಷಗಳಿಂದ ಗೋವಾ ಬಂಟರ ಸಂಘದ ವತಿಯಿಂದ ನಗರದ ವಿವಿಧ ದೇವಾಲಯಗಳಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮವನ್ನು ಈ ಬಾರಿ ವಿಶೇಷವಾಗಿ ಗೋ ಶಾಲೆಯಲ್ಲಿ ಆಯೋಜಿಸಲಾಗಿತ್ತು. ಈ ಕುರಿತು ಮಾತನಾಡಿದ ಗೋವಾ ಬಂಟರ ಸಂಘದ ಅಧ್ಯಕ್ಷ ಕೆದಂಬಾಡಿ ಕೊಡಂಕೀರಿ ಶಶಿಧರ್ ರೈ ಅವರು, ಬಂದಿರುವ ಎಲ್ಲಾ ಬಂಟರ ಸಂಘದ ಸದಸ್ಯರು ಮನ:ಪೂರ್ವಕವಾಗಿ ಗೋಶಾಲೆಗೆ ಧನ ಸಹಾಯ ನೀಡಿದ್ದಾರೆ. ಈ ಗೋ ಶಾಲೆಯನ್ನು ಕಂಡು ಮೆಚ್ಚಿ ಹಿತನುಡಿಗಳನ್ನಾಡಿ ನಮ್ಮ ಸೇವೆಯ ಕುರಿತು ಅಭಿನಂದಿಸಿರುವುದು ಅತ್ಯಂತ ಸಂತಸದ ಸಂಗತಿ. ಊರ ಪರವೂರಿನಿಂದ ಈ ಪುಣ್ಯದ ಕಾರ್ಯಕ್ರಮಕ್ಕೆ ಬಂದು ನಮ್ಮೊಂದಿಗೆ ಸದಾ ಇದ್ದೇವೆ ಎಂಬ ಭರವಸೆಯನ್ನು ನೀಡಿದ್ದಾರೆ. ವೇದಮೂರ್ತಿ ಅವಿನಾಶ್ ಭಟ್ ಅವರ ಪೌರೋಹಿತ್ಯದಲ್ಲಿ ನಡೆದ ಪೂಜಾ ವಿಧಿಗಳು 300ಕ್ಕೂ ಹೆಚ್ಚು ಭಕ್ತಾದಿಗಳು ಭಾಗವಹಿಸಿದ್ದು, ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಮೂಡಿ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.




ಸಂಘದ ಕಾರ್ಯದರ್ಶಿ ರಾಘವ ಶೆಟ್ಟಿ ಅವರು ಮಾತನಾಡಿ, ಇದು ಗೋವಾದ ಉತ್ತಮ ಗೋ ಶಾಲೆಯಾಗಿದ್ದು, ಇಲ್ಲೇ ಪೂಜೆ ಏರ್ಪಡಿಸಿರುವುದು ನಮಗೆಲ್ಲರಿಗೂ ತೃಪ್ತಿ ತಂದಿದೆ. ಗೋವು ಇಲ್ಲದಿದ್ದರೆ ಒಂದು ದಿನ ಭೂಮಿ ಬಂಜರಾಗಲಿದೆ. ಈ ನಿಟ್ಟಿನಲ್ಲಿ ಇಂತಹ ಸತ್ಕಾರ್ಯಕ್ಕೆ ಎಲ್ಲರ ಸಹಕಾರ ಅತ್ಯಗತ್ಯ. ನಾವೆಲ್ಲರೂ ಕೃಷಿ ಕುಟುಂಬದಿಂದ ಬಂದವರಾಗಿದ್ದು, ಗೋ ಸೇವೆಯ ಮಹತ್ವ ನಮಗೆ ಚೆನ್ನಾಗಿ ತಿಳಿದಿದೆ ಎಂದರು. ಪೂಜಾ ವಿಧಿಯಲ್ಲಿ ಪತ್ನಿ ಸಮೇತರಾಗಿ ಭಾಗವಹಿಸಿದ ಸಂಘದ ಉಪಾಧ್ಯಕ್ಷ ಸುಬ್ರಮಣ್ಯ ಶೆಟ್ಟಿ ಅವರು ಮಾತನಾಡಿ, ಪೂಜಾ ಕಾರ್ಯಕ್ರಮಗಳು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ನೆರವೇರಿವೆ. ನಾವೆಲ್ಲರೂ ಈ ಗೋ ಶಾಲೆಯ ಸದಸ್ಯರಾಗಿದ್ದು, ಎಲ್ಲರ ಒಗ್ಗಟ್ಟು ಹಾಗೂ ಸಹಕಾರದಿಂದ ಇಲ್ಲಿನ ಪ್ರತಿಯೊಂದು ಕೆಲಸ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂದು ತಿಳಿಸಿದರು. ಸುಮಾರು 300ಕ್ಕೂ ಹೆಚ್ಚು ಬಂಧುಗಳು ಕುಟುಂಬ ಸಮೇತರಾಗಿ ಭಾಗವಹಿಸಿದ್ದ ಈ ಧಾರ್ಮಿಕ ಸಮಾರಂಭದಲ್ಲಿ ಶ್ರೀದೇವರ ಮಹಾಪೂಜೆ, ಪ್ರಸಾದ ವಿತರಣೆಯೊಂದಿಗೆ ವಿಜೃಂಭಣೆಯ ಅನ್ನ ಸಂತರ್ಪಣೆ ಜರುಗಿತು.














































































































