ತುಲುವೆರೆ ಕಲ ಟ್ರಸ್ಟ್ (ರಿ) ಮುಂಬಯಿ ವಲಯದ ವತಿಯಿಂದ ಆಯೋಜಿಸಿದ್ದ ‘ತುಲುವೆರೆ ಕಲ ಬೊಂಬಾಯಿ’ ಶಾಖೆಯ ‘ಕಲತೋಚ್ಚಾಯ’ ಕಾರ್ಯಕ್ರಮವು ಡೊಂಬಿವಿಲಿಯ ಪ್ರೀತಿ ಬ್ಯಾಂಕ್ವೆಟ್ ಹಾಲ್ನಲ್ಲಿ ಅದ್ದೂರಿಯಾಗಿ ನೆರವೇರಿತು. ಸಮಾರಂಭದಲ್ಲಿ ಲೇಖಕಿ, ಕವಯತ್ರಿ ಶೋಭಾ ಎಸ್ ಶೆಟ್ಟಿ ನೆಲ್ಲಿದಡಿಗುತ್ತು ಅವರ ‘ಮಾಯದ ತುಡರ್’ ತುಳು ಕವನ ಸಂಕಲನವು ಲೋಕಾರ್ಪಣೆಗೊಂಡಿತು. ಕನ್ನಡ ಸಂಘ ಆದಿಶಕ್ತಿ, ಮಾಜಿವಾಡ ಥಾಣೆ ಇದರ ಮಾಜಿ ಅಧ್ಯಕ್ಷರಾದ ಶಿಮಂತೂರು ಶಂಕರ್ ಶೆಟ್ಟಿ ಅವರು ಪುಸ್ತಕವನ್ನು ಬಿಡುಗಡೆಗೊಳಿಸಿದರು. ಹೊರನಾಡ ಕವಿ, ಸಾಹಿತಿ ಕೆ ಲಕ್ಷ್ಮೀನಾರಾಯಣ ರೈ ಹರೇಕಳ ಅವರು ಕೃತಿ ಪರಿಚಯ ಮಾಡಿದರು. ತುಳು ಭಾಷಾ ವಿದ್ವಾಂಸ, ಹಿರಿಯ ಕವಿ, ಸಾಹಿತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಶಿಮಂತೂರು ಚಂದ್ರಹಾಸ ಸುವರ್ಣ ಅವರ ಮುನ್ನುಡಿ ಹಾಗೂ ‘ಸ್ನೇಹ ಸೌರಭ’ ಪತ್ರಿಕೆಯ ಸಂಪಾದಕ, ಕವಿ, ಸಾಹಿತಿ ಡಾ| ಕರುಣಾಕರ ಶೆಟ್ಟಿ ಪಣಿಯೂರು ಅವರ ಬೆನ್ನುಡಿ ಕೃತಿಯ ಮೌಲ್ಯ ಹೆಚ್ಚಿಸಿದೆ ಎಂದವರು ನುಡಿದರು.




ತುಳುವೆರೆ ಕಲ ಟ್ರಸ್ಟ್ ಅಧ್ಯಕ್ಷರು ಶ್ರೀಮತಿ ಗೀತಾ ಲಕ್ಷ್ಮೀಶ್ ಹಾಗೂ ತುಳುವೆರೆ ಕಲಾ ಟ್ರಸ್ಟ್ ಮುಂಬಯಿ ಅಧ್ಯಕ್ಷರು ಶ್ರೀಮತಿ ಪ್ರಫುಲ್ಲ ದಿನೇಶ್ ಶೆಟ್ಟಿ ಮತ್ತು ಗಣ್ಯರು ಉಪಸ್ಥಿತರಿದ್ದರು. ಲೇಖಕಿ ಶೋಭಾ ಶೆಟ್ಟಿ ಅವರು ತಮಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ತುಳು ಭಾಷೆಯಲ್ಲಿ ತಂದಿರುವ ‘ಮಾಯದ ತುಡರ್’ ಕೃತಿಯನ್ನು ಎಲ್ಲರೂ ಓದಿ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು. ಹಿರಿಯ ನಾಟಕಕಾರ ಎಚ್.ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಹಾಸ್ಯ ಹನಿ ಕವಿತೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.












































































































