ಸ್ವಚ್ಛ ಭಾರತ ಹಾಗೂ ಸ್ವಸ್ಥ ಭಾರತದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಅನುದಾನದಡಿ ನಿರ್ಮಾಣಗೊಂಡ ಯೋಜನೆಯೊಂದು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸ್ಥಿತಿಗೆ ತಲುಪಿತ್ತು. ಮಂಗಳೂರು ಹೊರವಲಯದ ಕೂಳೂರು ಸೇತುವೆ ಸಮೀಪವಿರುವ ಕುದ್ರೆಮುಖ ಕಂಪೆನಿಯ ಮುಂಭಾಗದ ಬಸ್ ತಂಗುದಾಣವೇ ಈ ದುಸ್ಥಿತಿಗೆ ಸಾಕ್ಷಿಯಾಗಿತ್ತು. ಪ್ರತಿದಿನ ಸಾವಿರಾರು ಪ್ರಯಾಣಿಕರು ಸಂಚರಿಸುವ ಈ ಜನನಿಬಿಡ ಸ್ಥಳವು, ನಿರ್ವಹಣೆಯಿಲ್ಲದೆ ತ್ಯಾಜ್ಯದ ತೊಟ್ಟಿಯಾಗಿ ಪರಿಣಮಿಸಿತ್ತು. ದುರ್ನಾತ, ಅಸ್ತವ್ಯಸ್ತವಾಗಿ ಬೆಳೆದಿದ್ದ ಹುಲ್ಲು ಮತ್ತು ಗಿಡಗಂಟಿಗಳಿಂದಾಗಿ ಪ್ರಯಾಣಿಕರು ಬಸ್ ಕಾಯಲು ನಿಲ್ಲುವುದಕ್ಕೂ ಅಯೋಗ್ಯವಾದ ವಾತಾವರಣ ಇಲ್ಲಿತ್ತು. ಸಾರ್ವಜನಿಕರು ಅನುಭವಿಸುತ್ತಿದ್ದ ಈ ನರಕಯಾತನೆಯನ್ನು ಕಂಡು ಸುಮ್ಮನಿರದ ಸ್ಥಳೀಯರೊಬ್ಬರು, ಈ ಸಮಸ್ಯೆಯ ಕುರಿತು ‘ಮೀಡಿಯಾ ಮನಸುಗಳು’ ತಂಡದ ಗಮನಕ್ಕೆ ತಂದರು. ಸಾರ್ವಜನಿಕರ ದೂರಿಗೆ ತಕ್ಷಣವೇ ಸ್ಪಂದಿಸಿದ ತಂಡದ ಸದಸ್ಯರು ಕೇವಲ ಸುದ್ದಿ ವರದಿ ಮಾಡುವುದಕ್ಕೆ ತಮ್ಮ ಸೇವೆಯನ್ನು ಸೀಮಿತಗೊಳಿಸದೆ ತಾವೇ ಖುದ್ದಾಗಿ ಕಣಕ್ಕಿಳಿಯಲು ನಿರ್ಧರಿಸಿದರು. ದೈನಂದಿನ ಮಾಧ್ಯಮ ರಂಗದ ವಿಪರೀತ ಕೆಲಸದ ಒತ್ತಡ ಮತ್ತು ಜಂಜಾಟಗಳ ನಡುವೆಯೂ ಸಮಯವನ್ನು ಕಾಯ್ದಿರಿಸಿಕೊಂಡ ತಂಡದ ಸದಸ್ಯರು, ಬಸ್ ತಂಗುದಾಣಕ್ಕೆ ಕಾಯಕಲ್ಪ ನೀಡಲು ಶ್ರಮದಾನಕ್ಕೆ ಮುಂದಾದರು.




ಸುಮಾರು ಮೂರು ಗಂಟೆಗಳ ಕಾಲ ಸತತವಾಗಿ ನಡೆದ ಈ ಸ್ವಚ್ಛತಾ ಅಭಿಯಾನದಲ್ಲಿ ಮೀಡಿಯಾ ಮನಸುಗಳು ತಂಡದ ಪ್ರಮುಖರಾದ ಶಶಿ ಬೆಳ್ಳಾಯರು, ಶಿವು ಕುಲಾಲ್, ಚಿತ್ರಾ ಪ್ರೀತಂ ಹಾಗೂ ಗಿರೀಶ್ ಮಣೇಲ್ ಅವರು ಶ್ರಮಿಸಿದರು. ಕಸ ತೆಗೆದು, ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿ ಬಸ್ ನಿಲ್ದಾಣವನ್ನು ತೊಳೆದು ಹೊಸ ಕಳೆಯನ್ನು ತಂದಿತ್ತರು. ಈ ಜನಪರ ಕಾಳಜಿಯ ಕಾರ್ಯಕ್ಕೆ ಮನಪಾ ನಿಕಟಪೂರ್ವ ಕಾರ್ಪೊರೇಟರ್ ಸುಮಿತ್ರಾ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಮೇಲ್ವಿಚಾರಕರಾದ ರೋಷನ್ ಅಮಿನ್ ಅವರು ತಂಡದ ಮನವಿಗೆ ತಕ್ಷಣ ಸ್ಪಂದಿಸಿ, ಸಂಗ್ರಹಗೊಂಡ ತ್ಯಾಜ್ಯವನ್ನು ವಿಲೇವಾರಿ ಮಾಡಲು ವಾಹನದ ವ್ಯವಸ್ಥೆ ಕಲ್ಪಿಸಿಕೊಟ್ಟು ಸಹಕರಿಸಿದರು.
ಸುದ್ದಿ ಬಿತ್ತರಿಸುವ ಕೈಗಳು ಸ್ವಚ್ಛ ಮತ್ತು ಸ್ವಾಸ್ಥ್ಯ ಸಮಾಜಕ್ಕಾಗಿ ಪಣತೊಟ್ಟಾಗ ಅಲ್ಲಿ ಅಸಲಿ ಸಾಮಾಜಿಕ ಜಾಗೃತಿ ಮೂಡುತ್ತದೆ ಎಂಬುದಕ್ಕೆ ಈ ಘಟನೆ ಜ್ವಲಂತ ನಿದರ್ಶನ. ಕೇವಲ ವ್ಯವಸ್ಥೆಯನ್ನು ಟೀಕಿಸುತ್ತಾ ಕೂರದೆ, ಬದಲಾವಣೆಗೆ ತಾವೇ ಮುನ್ನುಡಿ ಬರೆದ ‘ಮೀಡಿಯಾ ಮನಸುಗಳು’ ಬಳಗದ ಈ ಕಾರ್ಯವು ಇಂದು ಪ್ರತಿಯೊಬ್ಬ ಯುವ ಜನತೆಗೆ ಹಾಗೂ ಸಮಾಜಕ್ಕೆ ದೊಡ್ಡ ಪ್ರೇರಣೆಯಾಗಿದೆ. ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಬಸ್ ತಂಗುದಾಣವೀಗ ಮತ್ತೆ ಪ್ರಯಾಣಿಕರ ಬಳಕೆಗೆ ಯೋಗ್ಯವಾಗಿದ್ದು, ಸ್ಥಳೀಯರು ಮಾಧ್ಯಮ ತಂಡದ ಈ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.












































































































