ಪ್ರಸಿದ್ಧ ಉದ್ಯಮಿ, ಕಲಿಯುಗದ ಕರ್ಣ ಎಂದೇ ಖ್ಯಾತಿ ಪಡೆದಿರುವ ಸಮಾಜ ಸೇವಕ ಹಾಗೂ ಧಾರ್ಮಿಕ ಧುರೀಣ ಡಾ| ಕನ್ಯಾನ ಸದಾಶಿವ ಶೆಟ್ಟಿ ಅವರು ಇದೀಗ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಮೂಲಕ ಹೊಸ ಇತಿಹಾಸ ಬರೆಯಲು ಮುಂದಾಗಿದ್ದಾರೆ. ‘ಪಂಚರಂಗಿ’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ತಮ್ಮ ಚೊಚ್ಚಲ ‘ಅಮರ್ಥ’ ಚಿತ್ರದ ಮೂಲಕ ಅವರು ನಿರ್ಮಾಪಕರಾಗಿ ಗಾಂಧಿನಗರಕ್ಕೆ ಕಾಲಿಟ್ಟಿದ್ದಾರೆ. ಹಲವಾರು ದೇವಸ್ಥಾನಗಳ ಅಭಿವೃದ್ಧಿಗೆ ಶ್ರಮಿಸಿ, ಅದೆಷ್ಟೋ ಅಸಹಾಯಕರ ಕಣ್ಣೀರು ಒರೆಸಿ ಕಾಮಧೇನುವಾಗಿರುವ ಕನ್ಯಾನ ಸದಾಶಿವ ಶೆಟ್ಟಿ ಅವರು, ಸಿನಿಮಾ ರಂಗದ ಕಷ್ಟ ಸುಖಗಳನ್ನು ಅರಿತು, ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಉದ್ದೇಶದಿಂದ ಈ ಸಾಹಸಕ್ಕೆ ಕೈಹಾಕಿದ್ದಾರೆ.




ಇತ್ತೀಚೆಗಷ್ಟೇ ಬೆಂಗಳೂರಿನ ಒರಾಯನ್ ಮಾಲ್ನಲ್ಲಿ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ಜರುಗಿತು. ಖ್ಯಾತ ಉದ್ಯಮಿ ಹಾಗೂ ಕೊಡುಗೈ ದಾನಿ ಡಾ| ಬಂಜಾರ ಪ್ರಕಾಶ್ ಶೆಟ್ಟಿ ಮತ್ತು ಲವ್ ಮಾಕ್ಟೇಲ್ ಖ್ಯಾತಿಯ ನಟ ಡಾರ್ಲಿಂಗ್ ಕೃಷ್ಣ ಅವರು ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಚಿತ್ರದ ಎಲ್ಲಾ ಕಲಾವಿದರು ಹಾಗೂ ತಾಂತ್ರಿಕ ತಂಡದ ಪ್ರಮುಖರು ಉಪಸ್ಥಿತರಿದ್ದರು. ಗುರು ಹೆಗ್ಡೆ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ಮೇಘನಾ ರಾಜ್ ಸರ್ಜಾ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿರುವ ಈ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಪ್ರೇಕ್ಷಕರಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ. ಸದ್ಯ ಬಿಡುಗಡೆಯ ಅಂತಿಮ ಹಂತದಲ್ಲಿರುವ ‘ಅಮರ್ಥ’ ಸಿನಿಮಾವು ಬರುವ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ಎಲ್ಲಾ ಪ್ರಮುಖ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ.












































































































