ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಕೃಪೆಯಿಂದ ವರಮಹಾಲಕ್ಷ್ಮಿ ಹಬ್ಬದ ಪುಣ್ಯ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿಯಿಂದ ನವೀನವಾಗಿ ವಿನ್ಯಾಸಗೊಳಿಸಲಾದ ವಿಶೇಷ ಪ್ರಭಾವಳಿಯನ್ನು ಆಗಸ್ಟ್ 28 ರಂದು ಕಟೀಲು ಶ್ರೀ ಕ್ಷೇತ್ರಕ್ಕೆ ಸಮರ್ಪಿಸಲಾಗುತ್ತಿದೆ. ಈ ಪವಿತ್ರ ಪ್ರಭಾವಳಿಯನ್ನು ಶಂಕರ್ ಎಲೆಕ್ಟ್ರಿಕಲ್ಸ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಿಎಂಡಿ ರಾಜೇಶ್ ಶೆಟ್ಟಿ, ಶ್ರೀಮತಿ ಅಪರ್ಣಾ ರಾಜೇಶ್ ಶೆಟ್ಟಿ ಹಾಗೂ ಕುಟುಂಬದವರು ಶ್ರೀ ಕ್ಷೇತ್ರ ಕಟೀಲು ಅಮ್ಮನವರಿಗೆ ಭಕ್ತಿಪೂರ್ವಕವಾಗಿ ಸಮರ್ಪಿಸುತ್ತಿದ್ದಾರೆ.




ಕಟೀಲು ಶ್ರೀ ಕ್ಷೇತ್ರಕ್ಕೆ ಬಹಳ ವರ್ಷಗಳ ಹಿಂದೆ ಬೆಳ್ಳಿಯ ಬಾಗಿಲನ್ನು ಸಮರ್ಪಿಸಿದ್ದ ಅಪರ್ಣಾ ರಾಜೇಶ್ ಶೆಟ್ಟಿ ಕುಟುಂಬದಿಂದ ಇದೀಗ ಮತ್ತೊಮ್ಮೆ ಅಮ್ಮನವರ ಸೇವೆಯ ಭಾಗವಾಗಿ ಈ ಅಪೂರ್ವ ಪ್ರಭಾವಳಿಯನ್ನು ಸಮರ್ಪಿಸುತ್ತಿರುವುದು ಅತ್ಯಂತ ಸಂತೋಷ ಮತ್ತು ಪುಣ್ಯದ ಕ್ಷಣವಾಗಿದೆ. ಈ ಪ್ರಭಾವಳಿಯ ಮೇಲ್ಭಾಗದ ಮಧ್ಯದಲ್ಲಿ ಯಾಳಿ ವಿನ್ಯಾಸ, ಮೇಲಿನ ಮೂಲೆಗಳಲ್ಲಿ ಗರುಡ ಮತ್ತು ಹನುಮಂತ ಹಾಗೂ ಕೆಳಭಾಗದಲ್ಲಿ ಜಯ ವಿಜಯ ದ್ವಾರ ಪಾಲಕರ ಸುಂದರ ವಿನ್ಯಾಸವನ್ನು ಅಳವಡಿಸಲಾಗಿದೆ. ಈ ರೀತಿಯ ವಿನ್ಯಾಸದ ಪ್ರಭಾವಳಿಯನ್ನು ಪ್ರಥಮ ಬಾರಿಗೆ ರೂಪಿಸಲಾಗಿದೆ ಎಂಬುದು ವಿಶೇಷ.















































































































