ರಂಗ ಡಿಂಡಿಮ ಸಾಂಸ್ಕೃತಿಕ ಸಾಹಿತ್ಯ ಸಂಘ ಕಾಸರಗೋಡು ಆಯೋಜಿಸಿದ ಜಿಲ್ಲಾಮಟ್ಟದ ‘ರಂಗಭೂಮಿ ಕಾರ್ಯಾಗಾರ -2026’ನ್ನು ದಕ್ಷಿಣ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ, ರಂಗಕರ್ಮಿ, ಸಾಹಿತಿ ಹರೀಶ್ ಸುಲಾಯ ಒಡ್ಡಂಬೆಟ್ಟು ಕುಂಬಳೆ ಹೋಲಿ ಫ್ಯಾಮಿಲಿ ವಿದ್ಯಾಸಂಸ್ಥೆಯಲ್ಲಿ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಪರಸ್ಪರ ಸಂವಹನದ ಮೂಲಕ ಅನುಭವವನ್ನು ಪಡೆದು ರಂಗಪ್ರಜ್ಞೆ ಬೆಳೆಸುವುದರೊಂದಿಗೆ ತಾತ್ವಿಕ ಚಿಂತನಾತ್ಮಕ ಮನೋಭಾವವನ್ನು ರಂಗ ಕಾರ್ಯಾಗಾರ ಸೃಷ್ಠಿಸುತ್ತದೆ. ಕಲೆ ಎನ್ನುವುದು ಅನುಭವ ಮೀಮಾಂಸೆಯಾಗಿದೆ. ಅದರೊಳಗೆ ಒಂದಾಗುವುದೆಂದರೆ ನಮ್ಮನ್ನು ನಾವು ಸೃಜನಾತ್ಮಕವಾಗುವುದಾಗಿದೆ ಎಂದವರು ಕಾಸರಗೋಡು ವಿವಿಧ ಪ್ರದೇಶಗಳಿಂದ ಭಾಗವಹಿಸಿದ ಉದಯೋನ್ಮುಖ ನಾಳೆಯ ರಂಗಕರ್ಮಿಗಳ ಆಸಕ್ತಿ ಹಾಗೂ ರಂಗ ಡಿಂಡಿಮದ ಮೌಲ್ಯಯುತ ಕಾರ್ಯಕ್ರಮವನ್ನು ಪ್ರಶಂಸಿ ಮಾತನಾಡಿದರು.




ರಂಗ ಡಿಂಡಿಮದ ಅಧ್ಯಕ್ಷ, ರಂಗ ನಿರ್ದೇಶಕ ಉದಯ ಸಾರಂಗ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಿವೃತ್ತ ಶಿಕ್ಷಕಿ, ಕಲಾವಿದೆ ಪ್ರಭಾವತಿ ಕೆದಿಲಾಯ, ರಂಗ ನಿರ್ದೇಶಕ ಮಧುಸೂದನ ಬಲ್ಲಾಳ್, ಶಿಕ್ಷಕಿ ಸಾವಿತ್ರಿ ಟೀಚರ್, ಶಿಕ್ಷಕ ಕಮಲಾಕ್ಷ ನಾಯಕ್ ನಲ್ಕ, ಪತ್ರಕರ್ತರಾದ ಅಖಿಲೇಶ್ ನಗುಮುಗಂ, ಜಯ ಮಣಿಯಂಪಾರೆ ಉಪಸ್ಥಿತರಿದ್ದರು. ಪ್ರಸಿದ್ಧ ರಂಗ ನಿರ್ದೇಶಕ ವಿದ್ದು ಉಚ್ಚಿಲ ಹಾಗೂ ಯುವ ಕಲಾವಿದೆ ಮೇಘನಾ ಕುಂದಾಪುರ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ತರಗತಿ ನಡೆಸಿಕೊಟ್ಟರು. ಶಿಕ್ಷಕ, ರಂಗಕರ್ಮಿ ಅಶೋಕ್ ಮಾಸ್ತರ್ ಕೊಡ್ಲಮೊಗರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕವಿ ಶ್ರೀನಿವಾಸ ಪೆರಿಕ್ಕಾನ ವಂದಿಸಿದರು.















































































































