ಸಂಗೀತದಲ್ಲಿ ಶ್ರುತಿ ತಪ್ಪಿದರೆ ಸುಮಧುರವಾದ ಗಾಯನವೂ ಅಪಸ್ವರವಾಗುತ್ತದೆ. ಅದೇ ರೀತಿ ವಿದ್ಯಾರ್ಥಿ ಜೀವನಕ್ಕೂ ಸರಿಯಾದ ಶ್ರುತಿ, ಲಯ ಮತ್ತು ದಿಕ್ಕು ಅಗತ್ಯ. ಜ್ಞಾನ, ಶಿಸ್ತು, ಮೌಲ್ಯ ಮತ್ತು ಗುರಿಯೊಂದಿಗೆ ವಿದ್ಯಾರ್ಥಿಗಳ ಬದುಕನ್ನು ಶ್ರುತಿಬದ್ಧಗೊಳಿಸುವುದೇ ನಿಜವಾದ ಶಿಕ್ಷಣ. ಈ ಮಹತ್ತರ ಕಾರ್ಯದಲ್ಲಿ ಶಿಕ್ಷಣ ಸಂಸ್ಥೆಯೊಂದಿಗೆ ಪಾಲಕರ ಪಾತ್ರವೂ ಅತ್ಯಂತ ಅಗತ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು. ಅವರು ಆಳ್ವಾಸ್ನ ಕೃಷಿಸಿರಿ ವೇದಿಕೆಯಲ್ಲಿ ನಡೆದ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಪಾಲಕ ಶಿಕ್ಷಕ ಸಮಾವೇಷದಲ್ಲಿ ಮಾತನಾಡಿದರು. ಪದವಿಪೂರ್ವ ಶಿಕ್ಷಣದ ಹಂತವು ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ನಿರ್ಣಾಯಕ ಘಟ್ಟ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಶಿಕ್ಷಣ ಹಾಗೂ ವೃತ್ತಿಜೀವನಕ್ಕೆ ಭದ್ರವಾದ ಅಡಿಪಾಯ ಹಾಕಿಕೊಳ್ಳಬೇಕು. ಇದಕ್ಕಾಗಿ ವಿದ್ಯಾರ್ಥಿಗಳು ಮಾತ್ರವಲ್ಲದೇ ಪಾಲಕರು ಕೂಡಾ ಶಿಕ್ಷಣ ವ್ಯವಸ್ಥೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದರು. ವಿದ್ಯಾರ್ಥಿ ಶಿಕ್ಷಕ ಪಾಲಕ ಎಂಬ ಮೂರು ಶಕ್ತಿಗಳು ಒಂದೇ ದಿಕ್ಕಿನಲ್ಲಿ ಸಾಗಿದಾಗ ಮಾತ್ರ ಉತ್ತಮ ಫಲಿತಾಂಶ ಸಾಧ್ಯ. ನಾವು ಹಾಲು ಮತ್ತು ಜೇನಿನಂತೆ ಬೆರೆತು ಕೆಲಸ ಮಾಡಬೇಕು. ಈ ಹಿನ್ನೆಲೆಯಲ್ಲಿ ಸಂಸ್ಥೆ ಹಾಗೂ ಪಾಲಕರ ನಡುವೆ ಪರಸ್ಪರ ವಿಶ್ವಾಸ ಮತ್ತು ಒಡಂಬಡಿಕೆ ಮೂಡಬೇಕು. ನಮ್ಮ ಪೂರ್ವಜರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಅತ್ಯಂತ ಪವಿತ್ರವಾದ ಜವಾಬ್ದಾರಿಯೆಂದು ಪರಿಗಣಿಸಿ, ಅವುಗಳ ಮಹತ್ವ ಹಾಗೂ ಮೌಲ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಅವರು ನಮಗೆ ಹಸ್ತಾಂತರಿಸಿರುವ ಈ ಅಮೂಲ್ಯ ಪರಂಪರೆಯನ್ನು ಕೇವಲ ಮುಂದುವರಿಸುವುದಷ್ಟೇ ಅಲ್ಲದೇ, ಅದನ್ನು ಇನ್ನಷ್ಟು ಸಮೃದ್ಧಗೊಳಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆ ನಮ್ಮ ಮೇಲಿದೆ.
ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ಒಟ್ಟು 16 ವಿಭಾಗಗಳಲ್ಲಿ ಶಿಕ್ಷಣ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಮಗ್ರ ತರಬೇತಿ ನೀಡಲಾಗುತ್ತಿದೆ. ಎನ್ಸಿಇಆರ್ಟಿ ಪಠ್ಯಕ್ರಮದೊಂದಿಗೆ ಸಿಇಟಿ, ನೀಟ್, ನಾಟಾ, ಎನ್ಡಿಎ, ಸಿಎ, ಸಿಎಸ್, ಯುಪಿಎಸ್ಸಿ ಹಾಗೂ ಕ್ಲಾಟ್ ಸೇರಿದಂತೆ ವಿವಿಧ ಪ್ರವೇಶ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕ ತರಬೇತಿ ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳ ಆರ್ಥಿಕ ಹಿನ್ನೆಲೆ ಅವರ ಶಿಕ್ಷಣಕ್ಕೆ ಎಂದಿಗೂ ಅಡ್ಡಿಯಾಗಬಾರದು ಎಂಬ ಆಶಯದೊಂದಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಪ್ರತಿ ವರ್ಷ ಸುಮಾರು 70–80 ಕೋಟಿ ಮೊತ್ತವನ್ನು ವಿದ್ಯಾರ್ಥಿವೇತನ ಹಾಗೂ ಶೈಕ್ಷಣಿಕ ನೆರವಿಗಾಗಿ ವಿನಿಯೋಗಿಸುತ್ತಿದೆ. ಇದರಲ್ಲಿ ಪದವಿಪೂರ್ವ ಶಿಕ್ಷಣದ ವಿದ್ಯಾರ್ಥಿಗಳಿಗಾಗಿ 28.62 ಕೋಟಿ ಮೊತ್ತವನ್ನು ಕೇವಲ ವಿದ್ಯಾರ್ಥಿವೇತನಕ್ಕಾಗಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು. ಆಳ್ವಾಸ್ ಸಂಸ್ಥೆಯಲ್ಲಿ ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವುದರಿಂದ, ಕ್ಯಾಂಪಸ್ನಲ್ಲಿ ‘ಮಿನಿ ಇಂಡಿಯಾ’ದ ಅನುಭವ ದೊರೆಯುತ್ತದೆ. ವಿವಿಧ ರಾಜ್ಯ, ಭಾಷೆ, ಸಂಸ್ಕೃತಿ ಮತ್ತು ಸಾಮಾಜಿಕ ಹಿನ್ನೆಲೆಯ ವಿದ್ಯಾರ್ಥಿಗಳೊಂದಿಗೆ ಬೆರೆಯುವ ಅವಕಾಶವು ವಿದ್ಯಾರ್ಥಿಗಳಲ್ಲಿ ವಿಶಾಲ ದೃಷ್ಟಿಕೋನ ಹಾಗೂ ಸಹಬಾಳ್ವೆಯ ಮನೋಭಾವ ಬೆಳೆಸುತ್ತದೆ ಎಂದು ಅವರು ಹೇಳಿದರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದು ವಿಶಿಷ್ಟ ಪ್ರತಿಭೆ ಇದೆ. ಆ ಪ್ರತಿಭೆಯನ್ನು ಗುರುತಿಸಿ, ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವುದು ನಮ್ಮೆಲ್ಲರ ಜವಾಬ್ದಾರಿ. ಪಾಲಕರು ಮಕ್ಕಳನ್ನು ಕೇವಲ ಪರೀಕ್ಷೆಯ ಅಂಕಗಳಿಂದ ಅಳೆಯದೆ, ಅವರ ಆಸಕ್ತಿ, ಸಾಮರ್ಥ್ಯ ಮತ್ತು ವ್ಯಕ್ತಿತ್ವ ವಿಕಸನಕ್ಕೂ ಆದ್ಯತೆ ನೀಡಬೇಕು, ಎಂದು ಸಲಹೆ ನೀಡಿದರು.




ಸಭೆಯಲ್ಲಿ ಕಾಲೇಜಿನ ಶೈಕ್ಷಣಿಕ ವ್ಯವಸ್ಥೆ, ವಿದ್ಯಾರ್ಥಿಗಳ ಪ್ರಗತಿ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ, ವಿದ್ಯಾರ್ಥಿ ಕಲ್ಯಾಣ ಹಾಗೂ ಪಾಲಕರು–ಶಿಕ್ಷಕರ ಸಮನ್ವಯ ಕುರಿತು ಚರ್ಚಿಸಲಾಯಿತು. ವಿಜ್ಞಾನ ವಿಭಾಗದ 2219 ವಿದ್ಯಾರ್ಥಿಗಳ ಪಾಲಕರು ಹಾಗೂ ಬೋಧಕ ಸಿಬ್ಬಂದಿ ಸಭೆಯಲ್ಲಿ ಭಾಗವಹಿಸಿದ್ದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಮೊಹಮ್ಮದ್ ಸದಾಕತ್, ವಿವಿಧ ಶೈಕ್ಷಣಿಕ ವಿಭಾಗಗಳ ಮುಖ್ಯಸ್ಥರು ಇದ್ದರು. ಕನ್ನಡ ವಿಭಾಗದ ಮುಖ್ಯಸ್ಥ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.















































































































