ಭಾರತೀಯ ಪುರಾಣಗಳಲ್ಲಿ ಅಪಾರವಾದ ಜೀವನ ಮೌಲ್ಯಗಳಿವೆ. ಅವು ಸಾರ್ವಕಾಲಿಕವಾದುವುಗಳು. ಪೌರಾಣಿಕ ಕಾವ್ಯಗಳ ಅಧ್ಯಯನದಲ್ಲಿ ಎಳೆಯರಿಗೆ ಆಸಕ್ತಿ ಮೂಡಿಸಿದರೆ ಇಂದಿನ ಪೀಳಿಗೆಯವರಲ್ಲೂ ಪುರಾಣ ಪುರುಷರ ಆದರ್ಶಗಳನ್ನು ಪಾಲಿಸುವ ಮನಸ್ಥಿತಿಯನ್ನು ಬೆಳೆಸಬಹುದಾಗಿದೆ ಎಂದು ಮೂಡಬಿದ್ರಿ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಹೇಳಿದರು. ನಮ್ಮ ಕುಡ್ಲ ವಾಹಿನಿಯಲ್ಲಿ ನೂತನವಾಗಿ ಪ್ರಸಾರವಾಗುವ ‘ಪುರಾಣ ಲೋಕ’ ಕಾವ್ಯ ವಾಚನ – ಪ್ರವಚನದ ಶುಭಾರಂಭ ಮತ್ತು ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಅವರ ನೂತನ ಕೃತಿ ‘ನೀರಾಜನ’ ಕನ್ನಡ ತುಳು ಭಕ್ತಿಗೀತೆಗಳ ಸಂಕಲನ ಬಿಡುಗಡೆಯ ಅವಳಿ ಕಾರ್ಯಕ್ರಮವನ್ನು ಆಗಸ್ಟ್ 3ರಂದು ನಮ್ಮ ಕುಡ್ಲ ಬಿ.ಪಿ ಕರ್ಕೇರ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಸಮಾರಂಭದಲ್ಲಿ ಟಿವಿ ರಿಮೋಟ್ ಒತ್ತುವ ಮೂಲಕ ‘ಪುರಾಣ ಲೋಕ’ದ ಟ್ರೇಲರನ್ನು ಡಾ. ಮೋಹನ ಆಳ್ವ ಬಿಡುಗಡೆಗೊಳಿಸಿದರು. ಹಿಂದಿನ ಕಾಲದಲ್ಲಿ ಮನೆ ಮನೆಗಳಲ್ಲಿ, ಮಠ ಮಂದಿರಗಳಲ್ಲಿ ಆಗುತ್ತಿದ್ದ ಪುರಾಣ ಪ್ರವಚನ ಕಾರ್ಯಕ್ರಮಗಳು ಈಗ ಕಡಿಮೆಯಾಗುತ್ತಿವೆ. ನಮ್ಮ ಕುಡ್ಲದ ಮೂಲಕ ಅದು ಮತ್ತೊಮ್ಮೆ ಮನೆ ಮಾತಾಗಲಿ ಎಂದವರು ಹಾರೈಸಿದರು.
ಇದೇ ಸಂದರ್ಭದಲ್ಲಿ ಮಂಗಳೂರಿನ ಆಕೃತಿ ಆಶಯ ಪಬ್ಲಿಕೇಷನ್ಸ್ ಪ್ರಕಟಿಸಿದ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಅವರ ‘ನೀರಾಜನ’ ದೈವ ದೇವರ ಭಕ್ತಿ ಸುಗಿಪು ಗೀತಾ ಸಂಕಲನವನ್ನು ಅಹ್ಮದ್ ನಗರದ ಉದ್ಯಮಿ ಹಾಗೂ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಸಂಸ್ಥಾಪಕ ಆಡಳಿತ ಮೊಕ್ತೇಸರ ಕೆ.ಕೆ ಶೆಟ್ಟಿ ಕುತ್ತಿಕಾರ್ ಅವರು ಅನಾವರಣಗೊಳಿಸಿದರು. ಕಲಿಯುಗದಲ್ಲಿ ಕೇವಲ ಭಕ್ತಿಪೂರ್ವಕವಾದ ಸ್ತುತಿ ಮತ್ತು ನಾಮಸ್ಮರಣೆಗಳಿಂದ ದೇವರನ್ನು ಸುಲಭವಾಗಿ ಒಲಿಸಿಕೊಳ್ಳಬಹುದು. ನೀರಾಜನ ಹೆಸರೇ ಸುಂದರ; ಈ ಕೃತಿಯೊಳಗಿನ ಅಪೂರ್ವ ಭಕ್ತಿಗೀತೆಗಳನ್ನು ಸ್ವರ ಸಂಯೋಜಿಸಿ ಆಸ್ತಿಕರೆಲ್ಲರೂ ಅಲ್ಲಲ್ಲಿ ಹಾಡುವಂತಾಗಲಿ ಎಂದವರು ಶುಭ ಕೋರಿದರು. ಕೃತಿ ಪರಿಚಯ ಮಾಡಿದ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ನಿಕಟಪೂರ್ವ ಯೋಜನಾ ನಿರ್ದೇಶಕ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ| ಬಿ ಶಿವರಾಮ ಶೆಟ್ಟಿ ಅವರು ‘ನೀರಾಜನ ಕೃತಿ ದೈವ ದೇವರುಗಳ ಕನ್ನಡ ತುಳು ಭಾಷೆಗಳ ದ್ವಿಭಾಷಿಕ ಅವಳಿತನದ ಭಕ್ತಿ ಸ್ತುತಿ ಸುಗಿಪು ಗೀತ ಸಂಕಲನ. ಭಕ್ತಿ ಪರಂಪರೆಯ ಶೈವ, ವೈಷ್ಣವ, ಗಾಣಪತ, ಶಾಕ್ತ ಮುಂತಾದ ಪೂಜಾ ಪರಂಪರೆಯ ದೇವರುಗಳನ್ನು ಹಾಗೂ ಇದಕ್ಕೆ ಸಮಾನವಾಗಿ ತುಳುನಾಡಿನ ಜನಪದೀಯ ದೈವ ಮತ್ತು ನಾಗನನ್ನು ಆರಾಧಿಸುವ ಗೀತೆಗಳು, ಜೊತೆಗೆ ಕ್ಷೇತ್ರ ಪುರಾಣ, ಸ್ಥಳ ಮಹಾತ್ಮೆಯ ಸ್ತುತಿ ಸುಗಿಪು ಹಾಡುಗಳು ಸಮೃದ್ಧವಾಗಿದ್ದು ದೇವಸ್ಥಾನ, ಪೂಜಾ ಮಂದಿರ ಮತ್ತು ಹಬ್ಬ ಹರಿದಿನಗಳಲ್ಲಿ ಹಾಡಲು ಯೋಗ್ಯವಾಗಿವೆ ಎಂದರು.





ಕೃತಿಕರ್ತರಾದ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಅರ್ಥಪೂರ್ಣವಾಗಿ ಸಂಯೋಜಿಸಲಾದ ಅವಳಿ ಕಾರ್ಯಕ್ರಮಗಳ ಹಿನ್ನೆಲೆ ಮತ್ತು ಸ್ವರೂಪಗಳನ್ನು ವಿವರಿಸಿದರು. ನಮ್ಮ ಕುಡ್ಲದ ನಿರ್ದೇಶಕ ಲೀಲಾಕ್ಷ ಬಿ.ಕರ್ಕೇರ ಸ್ವಾಗತಿಸಿದರು. ಆಕೃತಿ ಆಶಯ ಪಬ್ಲಿಕೇಶನ್ಸ್ ನ ಕಲ್ಲೂರು ನಾಗೇಶ್ ವಂದಿಸಿದರು. ನಿತಿನ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು. ಪುರಾಣ ಲೋಕದ ಮೊದಲ ಸಂಚಿಕೆಗಳಲ್ಲಿ ಸಂತಕವಿ ಕನಕದಾಸರ ‘ನಳ ಚರಿತ್ರೆ’ ಕಾವ್ಯದ ತುಳು ಕನ್ನಡ ಆವೃತ್ತಿಗಳನ್ನು ಯಕ್ಷಗಾನ ಭಾಗವತ ದೇವಿಪ್ರಸಾದ ಆಳ್ವ ತಲಪಾಡಿ ಮತ್ತು ಹರಿಕಥಾ ವಿದುಷಿ ಮಂಜುಳಾ ಜಿ ರಾವ್ ಇರಾ ವಾಚಿಸಿದ್ದಾರೆ. ಪ್ರವಚನಕಾರ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ವ್ಯಾಖ್ಯಾನ ನೀಡಿದ್ದಾರೆ. ಆಗಸ್ಟ್ 9 ರಿಂದ ಪ್ರತಿ ಭಾನುವಾರ ಬೆಳಿಗ್ಗೆ ಗಂ.9.00ಕ್ಕೆ ಕಾರ್ಯಕ್ರಮ ನಮ್ಮ ಕುಡ್ಲದಲ್ಲಿ ಪ್ರಸಾರವಾಗುವುದು. ಮಂಗಳವಾರ ರಾತ್ರಿ ಗಂ.9.30 ಕ್ಕೆ ಇದು ಮರುಪ್ರಸಾರವಾಗಲಿದೆ ಎಂದು ವಾಹಿನಿಯ ಪ್ರಕಟಣೆ ತಿಳಿಸಿದೆ.























































































































