
ತುಳುನಾಡಿನ ಮಾತೃ ಮೂಲ ಸಂಸ್ಕೃತಿ, ಮಹಿಳಾ ಶಕ್ತಿ, ಸಮಾಜಮುಖಿ ಸೇವೆ ಹಾಗೂ ನಾನಾ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ನಡೆಯುವ ‘ಅಪ್ಪೆ ಬೇರ್ ದ ತುಳುನಾಡ್’ ರಾಷ್ಟ್ರೀಯ ತುಳು ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಏಳು ಮಂದಿ ಸಾಧಕಿಯರಿಗೆ ‘ತುಳು ಅಪ್ಪೆ ಸಿರಿ’ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಮೇ 24 ರಂದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ ಈ ಕಾರ್ಯಕ್ರಮ ತುಳುನಾಡಿನ ಮಾತೃ ಮೂಲ ಸಂಸ್ಕೃತಿ, ತುಳು ಭಾಷೆ ಪರಂಪರೆ, ಮಹಿಳಾ ನಾಯಕತ್ವ ಹಾಗೂ ಸಾಮಾಜಿಕ ಏಕತೆಯ ಸಂದೇಶ ಸಾರುವ ವಿಶಿಷ್ಟ ವೇದಿಕೆಯಾಗಿದೆ. ಕಾರ್ಯಕ್ರಮದ ಅಂಗವಾಗಿ ಮಾತೃ ಮೂಲ ಸಂಸ್ಕೃತಿ, ತಾಯಿ ಮೂಲದ ತತ್ವ, ಅಳಿಯ ಸಂತಾನ ಪದ್ಧತಿ, ತುಳು ಭಾಷೆಯ ಭವಿಷ್ಯ, ಮಹಿಳಾ ನಾಯಕತ್ವ ಹಾಗೂ ತುಳುನಾಡಿನ ಸಾಂಸ್ಕೃತಿಕ ಪುನರುಜ್ಜೀವನ ಕುರಿತ ರಾಷ್ಟ್ರೀಯ ಮಟ್ಟದ ವಿಚಾರಗೋಷ್ಠಿ ಮತ್ತು ವಿಶೇಷ ಪ್ರಬಂಧ ಮಂಡನೆ ನಡೆಯಲಿದ್ದು, ನಾನಾ ಕ್ಷೇತ್ರದ ಗಣ್ಯರು, ಸಂಶೋಧಕರು, ಸಾಹಿತಿಗಳು, ಕಲಾವಿದರು ಹಾಗೂ ಸಮಾಜಮುಖಿ ನಾಯಕರು ಭಾಗವಹಿಸಲಿದ್ದಾರೆ. ತುಳು ಅಪ್ಪೆ ಸಿರಿ ಪ್ರಶಸ್ತಿಗೆ ಉದ್ಯಮ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿ ಚಂದ್ರಿಕಾ ಹರೀಶ್ ಶೆಟ್ಟಿ, ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಸಾವಿತ್ರಿ ಶೆಟ್ಟಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಸಿಂಧು ಗುಜರನ್, ಕೃಷಿ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿ ಸರೋಜಿನಿ ಸುವರ್ಣ, ಸಾಹಿತ್ಯ ಕ್ಷೇತ್ರದಲ್ಲಿ ಜಯಂತಿ ಬಂಗೇರ, ರಾಜಕೀಯ ಕ್ಷೇತ್ರದಲ್ಲಿ ಕಸ್ತೂರಿ ಪಂಜ, ಕುಲ ಕಸುಬು ಮತ್ತು ಪರಂಪರೆ ಸಂರಕ್ಷಣಾ ಕ್ಷೇತ್ರದಲ್ಲಿ ಸುನಂದ ಅಮೀನ್ ಅವರು ಭಾಜನರಾಗಿದ್ದಾರೆ.


ತುಳುನಾಡಿನ ತಾಯಿ ಸಂಸ್ಕೃತಿ ಸೇವೆ, ಸಾಧನೆ ಹಾಗೂ ಸಾಮಾಜಿಕ ನಾಯಕತ್ವದ ಪ್ರತೀಕವಾಗಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಮಹಿಳೆಯರ ಸಾಧನೆಯನ್ನು ಗುರುತಿಸಿ ಮುಂದಿನ ಪೀಳಿಗೆಗೆ ಪ್ರೇರಣೆಯಾಗಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಕಾರ್ಯಕ್ರಮದ ಸಂಘಟಕಿ ಭಾನುಮತಿ ಶೆಟ್ಟಿ ಕಕ್ವಗುತ್ತು ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ತುಳುನಾಡಿನ ನಾನಾ ಸಮುದಾಯದ ಮುಖಂಡರು, ಸಾಹಿತಿಗಳು, ಕಲಾವಿದರು, ಸಂಶೋಧಕರು, ಮಹಿಳಾ ಪ್ರತಿನಿಧಿಗಳು ಹಾಗೂ ದೇಶ ವಿದೇಶಗಳಲ್ಲಿ ನೆಲೆಸಿರುವ ತುಳುವರು ಭಾಗವಹಿಸಲಿದ್ದಾರೆ.

























































































































