

ದ್ವಿತೀಯ ಪಿಯು ಅಂತಿಮ ಪರೀಕ್ಷೆಯಲ್ಲಿ ರಾಜ್ಯದ ಅಗ್ರಗಣ್ಯ 10 ರ್ಯಾಂಕ್ನ ಒಳಗೆ ಸ್ಥಾನ ಪಡೆದ ಆಳ್ವಾಸ್ ಪದವಿಪೂರ್ವ ಕಾಲೇಜಿನ 103 ವಿದ್ಯಾರ್ಥಿಗಳ ಜೊತೆಯಲ್ಲಿ ಎಸ್ಎಸ್ಎಲ್ಸಿ ಹಂತದಲ್ಲಿ 50%ಕ್ಕಿಂತ ಕಡಿಮೆ ಅಂಕಗಳಿಸಿ, ನಂತರ ಪದವಿಪೂರ್ವ ಶಿಕ್ಷಣಕ್ಕೆ ಆಳ್ವಾಸ್ ಸೇರಿದ ನಂತರ 95%ಕ್ಕಿಂತಲೂ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಗೌರವಿಸುವ ಕಾರ್ಯಕ್ರಮ ಭಾನುವಾರ ನುಡಿಸಿರಿ ಸಭಾಂಗಣದಲ್ಲಿ ನಡೆಯಿತು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ, ನೀವು ಈಗ ಕೇವಲ ನಮ್ಮ ವಿದ್ಯಾರ್ಥಿಗಳಲ್ಲ. ನಮ್ಮ ಸಂಸ್ಥೆಯ ರಾಯಭಾರಿಗಳಾಗುವವರು. ಇಲ್ಲಿ ಕಲಿತಿರುವ ಶಿಸ್ತಿನ ಜೊತೆಗೆ ಉತ್ತಮ ಸ್ವಭಾವ, ಹೋರಾಟ ಮನೋಭಾವ ಹಾಗೂ ಕೂಡಿ ಬಾಳುವ ಗುಣಗಳು ನಿಮ್ಮ ಮುಂದಿನ ಜೀವನಕ್ಕೆ ದಾರಿದೀಪವಾಗಲಿ ಎಂದರು.
ಆಳ್ವಾಸ್ ಸಂಸ್ಥೆಯನ್ನು ‘ಮಿನಿ ಇಂಡಿಯಾ’ ಎಂದು ಕರೆಯಲಾಗುತ್ತದೆ. ದೇಶದ ವಿವಿಧ ಭಾಗಗಳಿಂದ ಬಂದ ವಿದ್ಯಾರ್ಥಿಗಳು ಇಲ್ಲಿ ಒಂದೇ ಕುಟುಂಬದಂತೆ ಬೆರೆತು ಬದುಕುತ್ತಾರೆ. ಭಾಷೆ, ಸಂಸ್ಕೃತಿ, ಸಂಪ್ರದಾಯಗಳ ವೈವಿಧ್ಯತೆಯ ನಡುವೆಯೂ ಒಗ್ಗಟ್ಟಿನಿಂದ ಬದುಕುವುದನ್ನು ಕಲಿಸುತ್ತದೆ. ಈ ಅನುಭವವು ನಿಮ್ಮನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುತ್ತದೆ. ನೀವು ಎಲ್ಲಿಗೆ ಹೋದರೂ ಈ ಒಗ್ಗಟ್ಟಿನ ಸಂದೇಶವನ್ನು ಸಮಾಜಕ್ಕೆ ಹಂಚುವ ಜವಾಬ್ದಾರಿ ನಿಮ್ಮ ಮೇಲಿದೆ. ಮುಂದಿನ ಶೈಕ್ಷಣಿಕ ವಿಸ್ತರಣೆಯ ಭಾಗವಾಗಿ, ಈ ವರ್ಷದಿಂದ ಎಂಬಿಬಿಎಸ್ ಕೋರ್ಸ್ ಪ್ರಾರಂಭಿಸಲಾಗುವುದು ಎಂದರು. ವೈದ್ಯಕೀಯ ಕ್ಷೇತ್ರದ ಮಹತ್ವವನ್ನು ತನ್ನ ಸ್ವಂತ ಅನುಭವದ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿದರು. ವೈದ್ಯಕೀಯ ಕ್ಷೇತ್ರದಲ್ಲಿ ಮಾನವೀಯ ಸ್ಪರ್ಶ ಅತ್ಯಂತ ಮುಖ್ಯ ಎಂದರು.



ವಾಣಿಜ್ಯ ವಿಭಾಗದಲ್ಲಿ 600ಕ್ಕೇ 600 (ಪೂರ್ಣಾಂಕ) ಅಂಕ ಪಡೆದ ದಿಶಾಳಿಗೆ 3 ಲಕ್ಷ ನಗದು ಹಾಗೂ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾದ ರಕ್ಷಿತಾ ಮಂಜುನಾಥ್ಳಿಗೆ 2 ಲಕ್ಷ ನಗದಿನೊಂದಿಗೆ ಸನ್ಮಾನಿಸಲಾಯಿತು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೋ. ಮೊಹಮ್ಮದ್ ಸದಾಕತ್, ಉಪ ಪ್ರಾಂಶುಪಾಲೆ ಝಾನ್ಸಿ ಪಿ.ಎನ್ ಹಾಗೂ ವಿವಿಧ ಶೈಕ್ಷಣಿಕ ವಿಭಾಗಗಳ ಮುಖ್ಯಸ್ಥರು ಇದ್ದರು. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

























































































































