
ಮಹಿಳೆ ಕೇವಲ ವ್ಯಕ್ತಿತ್ವದ ಬಗ್ಗೆ ಗುರುತಿಸುವುದಕ್ಕಿಂತಲ್ಲಲೂ ಮಹಿಳೆ ಎಂಬುವುದು ಒಂದು ಜೀವನದ ಶಕ್ತಿ, ಮಹಿಳೆಯೆಂದರೆ ಮನೆ, ಪರಿಸರ, ದೇಶದ ಸಂಸ್ಕೃತಿ, ಸಂಸ್ಕಾರವನ್ನು ಉಳಿವಿನಡೆ ಕೊಂಡೊಯ್ಯುವ ಸಾಧನೆಗೆ ಪೂರಕವಾಗಿ ಬೆಳೆದು ನಿಂತ ದಿವ್ಯತೇಜ ಸ್ವರೂಪಿಣಿ. ಮಹಿಳೆಯರು ಇಂದು ತನ್ನ ದೈನಂದಿನ ಚಟುವಟಿಕೆಗಳೊಂದಿಗೆ ಸಮಾಜದಲ್ಲಿ ಬೆರೆತು ಪ್ರತೀ ವಿಷಯದಲ್ಲೂ ಪ್ರಖರತೆಯ ಬೆಳಕಿನಂತೆ ಮೂಡಿ ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮೀರಾ ಭಯಂದರ್ ಜಿಲ್ಲೆಯ ಸಮಾಜ ಸೇವಕ ಹಾಗೂ ಬಿಜೆಪಿ ನೇತಾರ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿ ಗುತ್ತುರವರು ಅಭಿಪ್ರಾಯಪಟ್ಟರು. ಅವರು ಮಾರ್ಚ್ 22 ರಂದು ಸಂಜೆ ಮೀರಾರೋಡ್ ಪೂರ್ವದ ಭಾರತಿ ಪಾರ್ಕ್ ನ ಬಾಲಾಜಿ ಇಂಟರ್ ನ್ಯಾಶನಲ್ ಹೊಟೇಲ್ ಸಭಾಂಗಣದಲ್ಲಿ ತುಳು ಕನ್ನಡ ಅಸೋಸಿಯೇಷನ್ ಮೀರಾ ಭಯಂದರ್ ಸಂಸ್ಥೆಯ ಸಾಹಿತ್ಯ ಮತ್ತು ಕಲೆ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆ, ಹಳದಿ ಕುಂಕುಮ ಮತ್ತು ದಿ. ರವಿ ರಾ. ಅಂಚನ್ ದತ್ತಿ ನಿಧಿ ಸಂಸ್ಮರಣಾ ಪ್ರಶಸ್ತಿ ಪ್ರಧಾನ ಹಾಗೂ ಸನ್ಮಾನಗಳ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, ಗಣ್ಯರ ಜೊತೆ ಸೇರಿ ದೀಪ ಪ್ರಜ್ವಲನೆಗೈದು ಮಾತನಾಡುತ್ತಾ ತುಳು ಕನ್ನಡಿಗರು ಅತೀ ಹೆಚ್ಚು ಸಂಖ್ಯೆಯಲ್ಲಿ ಮೀರಾ ಭಯಂದರ್ ನಲ್ಲಿ ನೆಲೆಸಿರುವ ನಮ್ಮಿಗರಲ್ಲಿ ಅತ್ಯಂತ ವಿವಿಧ ರೀತಿಯ ಬಡತನದ ಜೀವನವನ್ನು ನಡೆಸುತ್ತಿದ್ದಾರೆ ಎಂಬುವುದನ್ನು ನಾನು ಕಳೆದ 15 ವರ್ಷಗಳಿಂದ ಮನಗಂಡಿದ್ದೇನೆ. ಇಲ್ಲಿರುವ ಸುಮಾರು 40 ಕ್ಕಿಂತಲೂ ಹೆಚ್ಚು ಇರುವ ಸಂಘ ಸಂಸ್ಥೆಗಳು ಪರಿಸರದಲ್ಲಿರುವ ಬಡತನದ ಬೇಗೆಯ ಸಂಸಾರವನ್ನು ಗುರುತಿಸಿ ಅವರಿಂದ ಕನಿಷ್ಟ 5 ಮಕ್ಕಳನ್ನಾದರೂ ದತ್ತು ಪಡೆದುಕೊಂಡು ಬಡ ಸಂಸಾರದ ಜೀವನದ ಆಸರೆಯಾಗಬೇಕು ಎಂದು ಇಲ್ಲಿರುವ ಸಂಘ ಸಂಸ್ಥೆಗಳಲ್ಲಿ ಭಿನ್ನವಿಸಿದರು. ಎ.ಕೆ ಹರೀಶ್ ನೇತೃತ್ವದಲ್ಲಿ ಹಾಗೂ ಹರೀಶ್ ಸುವರ್ಣ ಕಣಂಜಾರುರವರ ಮುಂದಾಳತ್ವದಲ್ಲಿ ಈ ಸಂಸ್ಥೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯಶಸ್ಸನ್ನು ಕಂಡು ಜನಪರ ನಿರತ ಸೇವಾ ಕಾರ್ಯಗಳಲ್ಲಿ ಮುಂದುವರಿಯಲಿ ಎಂದು ಹಾರೈಸಿದರು.

ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದ ಭಾರತ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಡಾ| ಹರೀಶ್ ಬಿ ಶೆಟ್ಟಿಯವರು ಮಾತನಾಡುತ್ತಾ, ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ ಇಂದು ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆಯರಿಂದ ಮಹಿಳೆಯರಿಗಾಗಿ ಹಲವಾರು ಒಳ್ಳೆಯ ಆಯೋಜನೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಓರ್ವ ಪುರುಷನ ಹಿಂದೆ ಮಹಿಳೆಯ ಪಾತ್ರ ಹಾಗೂ ಮಹಿಳೆಯ ಸಮಾಜದ ಉನ್ನತಿಯಲ್ಲಿ ಪುರುಷನ ಪಾತ್ರವೂ ಅತ್ಯಗತ್ಯವಾಗಿದೆ. ದೇಶ ವಿದೇಶದಲ್ಲೂ ಹಿಂದೂ ಧರ್ಮದ ಪ್ರಚಾರ ಕಾರ್ಯ ಹೆಚ್ಚಿನ ಮಟ್ಟಿನಲ್ಲಿ ಸದಾ ಬೆಳಗುತ್ತಿರಲಿ. ಸನಾತನ ಧರ್ಮಕ್ಕೆ ಇನ್ನೂ ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಟ್ಟು ದೇಶದ ಮುನ್ನಡೆಯಲ್ಲಿ ನಾವೆಲ್ಲರೂ ಸಹಭಾಗಿಯಾಗೋಣ. ಈ ಸಂಸ್ಥೆಯಿಂದ ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ನಡೆಯುತ್ತಿರಲಿ. ತುಳು ಕನ್ನಡ ವೆಲ್ಫೇರ್ ಅಸೋಶಿಯೇಶನ್ ನಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅರ್ಥಪೂರ್ಣ ಕಾರ್ಯಕ್ರಮಗಳು ಜರಗುತ್ತಿರಲಿ. ಈ ಸಂಸ್ಥೆಗೆ ನನ್ನಿಂದಾದ ಕೊಡುಗೆಯನ್ನು ನೀಡುತ್ತೇನೆ ಎಂದರು. ವಿಶೇಷ ಅತಿಥಿಯಾಗಿ ಆಗಮಿಸಿದ ಬಂಟರ ಸಂಘ ಮುಂಬಯಿಯ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ರವೀಂದ್ರ ಡಿ ಶೆಟ್ಟಿ ಕೊಟ್ರಪಾಡಿ ಗುತ್ತುರವರು ಸಂಸ್ಥೆಯ ರೂವಾರಿ ಎ.ಕೆ ಹರೀಶ್ ರವರ ನೇತೃತ್ವದಲ್ಲಿ ಮುಂದುವರೆಯುತ್ತಿರುವ ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ ನ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಈ ಸಂಸ್ಥೆಯ ಜನಪರ ಕಾರ್ಯಕ್ರಮಗಳಿಗೆ ನನ್ನ ಬೆಂಬಲ ಸದಾ ಇದೆ. ಈ ಸಂಸ್ಥೆಯು ಇನ್ನೂ ಹೆಚ್ಚಿನ ಯಶಸ್ಸನ್ನು ಕಾಣಲಿ ಎಂದು ಶುಭ ಹಾರೈಸಿದರು.
ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿದ ಬಿಜೆಪಿಯ ನೇತಾರ ಡಾ. ರವಿ ವ್ಯಾಸ್ ರವರು ಮಾತನಾಡುತ್ತಾ, ಕ್ಷಿಪ್ರ ರೀತಿಯಲ್ಲಿ ಬೆಳವಣಿಗೆಯಾಗುತ್ತಿರುವ ಮೀರಾ ಭಯಂದರ್ ಕ್ಷೇತ್ರದಲ್ಲಿ ತುಳು ಕನ್ನಡಿಗರ ಹೆಚ್ಚಿನ ಪಾಲೂ ಇದೆ. ಕ್ಷೇತ್ರ ಹಾಗೂ ದೇಶದ ಬೆಳವಣಿಗೆಯಲ್ಲಿ ಮತ್ತು ಸಮಾಜದಲ್ಲಿ ಸನಾತನ ಧರ್ಮ ಮುಂದುವರಿಯುವುದರಲ್ಲಿ ನಾವೆಲ್ಲಾ ಸಹಭಾಗಿಯಾಗೋಣ ಎಂದು ನುಡಿದರು. ಅತಿಥಿಯಾಗಿ ಆಗಮಿಸಿದ ಮೀರಾ ಭಯಂದರ್ ನ ಸಮಾಜ ಸೇವಕಿ ತನುಜಾ ಶೆಟ್ಟಿ ಶಂಕರ್ ವೀರ್ಕರ್ ರವರು ತನ್ನ ಅನಿಸಿಕೆಯಲ್ಲಿ ಮಹಿಳೆಯರಿಂದಲೇ ಮನೆ ಮಂದಿಯವರ ದೀಪ ಬೆಳಗುತ್ತಿದೆ. ಇದರಲ್ಲಿ ಪುರುಷರ ಪಾತ್ರವೂ ಇದೆ. ಇಂದು ಮಹಿಳೆಯರು ಪುರುಷರಂತೆ ಸಮಾಜ ಸೇವೆಯಲ್ಲಿ ಹಾಗೂ ಇತರ ರಂಗಗಳಲ್ಲಿ ಮುಂದುವರೆಯುತ್ತಿರುವುದು ಶ್ಲಾಘನೀಯ. ಇಂದು ಸನ್ಮಾನಿಸಲ್ಪಟ್ಟ ಧೀಮಂತ ಸನ್ಮಾನಿತರನ್ನು ಅಭಿನಂದಿಸುತ್ತಾ ಸಂಸ್ಥೆಗೆ ಯಶಸ್ಸನ್ನು ಕೋರಿದರು. ಅತಿಥಿಯಾಗಿ ಆಗಮಿಸಿದ ಅಡ್ವೋಕೇಟ್ ಸೌಮ್ಯ ಪೂಜಾರಿಯವರು, ಇಂದು ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ನಡೆಯುತ್ತಿರುವ ಕಾರ್ಯಕ್ರಮ ಶ್ಲಾಘನೀಯವಾಗಿದೆ. ಇಂದು ಮಹಿಳೆಯರು ಸಾಮಾಜಿಕ ನೆಲೆಯಲ್ಲಿ ಯಕ್ಷಗಾನ, ನಾಟಕ, ಭಜನೆ, ಕ್ರೀಡೆ ಹಾಗೂ ರಾಜಕೀಯದಂತಹ ಅನೇಕ ವಿಷಯಗಳಲ್ಲಿ ಸ್ಪಟಿಕದಂತೆ ಮಿಂಚುತ್ತಿದ್ದಾರೆ. ಮಹಿಳೆಯರು ತಾನು ಮಾಡಲೇಬೇಕಾದ ಮನೆ ಕೆಲಸದಲ್ಲಿ ಸದಾ ನಿರತರಾಗುವುದರ ಜೊತೆಗೆ ಸಮಾಜ ಸೇವೆಯಲ್ಲಿಯೂ ಮುಂದುವರೆಯುತ್ತಿರುವುದು ಸಂತೋಷದಾಯಕ. ಜೀವನದಲ್ಲಿ ಎಲ್ಲಾ ಪಾತ್ರದಲ್ಲೂ ಮಿಂಚುತ್ತಿರುವ ಮಹಿಳೆಯರಿಗೆ ಇನ್ನೂ ಹೆಚ್ಚಿನ ಪ್ರಾಧಾನ್ಯತೆ ದೊರೆಯಲಿ ಎಂದು ಆಶಿಸಿದರು. ಇದೇ ಸಂದರ್ಭದಲ್ಲಿ ಸಭಾ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿದ್ದ ಗಣ್ಯರು ಸೇರಿ ಪ್ರತೀ ವರ್ಷದಂತೆ ಕೊಡಲ್ಪಡುವ ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ ನ ಸಾಹಿತ್ಯ ಮತ್ತು ಕಲೆ ವಿಭಾಗದ ವತಿಯಿಂದ ಡಾ| ರವಿ ರಾ. ಅಂಚನ್ ದತ್ತಿ ನಿಧಿ ಸಂಸ್ಮರಣಾ ಪ್ರಶಸ್ತಿಯನ್ನು ಖ್ಯಾತ ಹಿರಿಯ ರಂಗ ತಜ್ಞ ಹಾಗೂ ಸಾಹಿತಿ ಉಡುಪಿ ಗುಣಪಾಲ್ ರವರಿಗೆ ಪ್ರಧಾನಿಸಲಾಯಿತು.
ವೀರಕೇಸರಿ ಸಂಸ್ಥೆ ಮೀರಾ ಭಯಂದರ್ ನ ಅಧ್ಯಕ್ಷರಾದ ಹರೀಶ್ ಡಿ ರೈ ಕುಂಬ್ಳೆಯವರಿಗೆ ವೀರ ಕೇಸರಿ ಮತ್ತು ಸಮಾಜಸೇವಕ ರವೀಂದ್ರ ಎನ್ ಶೆಟ್ಟಿ ದೇರಳಕಟ್ಟೆ ಇವರನ್ನು ಸಮಾಜ ಬಾಂಧವ ಎಂಬ ಬಿರುದನ್ನಿತ್ತು ಸನ್ಮಾನಿಸಲಾಯಿತು. ದತ್ತಿನಿಧಿ ಸಂಸ್ಮರಣಾ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಉಡುಪಿ ಗುಣಪಾಲ್ ರವರು, ಸನಾತನ ಧರ್ಮದ ಭಾರತ ದೇಶದ ಈ ಪವಿತ್ರವಾದ ಮಣ್ಣಿನಲ್ಲಿ ಈ ಪ್ರಶಸ್ತಿಯನ್ನು ತಲೆಬಾಗಿ ಸ್ವೀಕರಿಸುತ್ತಿದ್ದೇನೆ. ಈ ಪ್ರಶಸ್ತಿಯನ್ನು ನೀಡಿದ ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ ನ ಎಲ್ಲಾ ಪದಾಧಿಕಾರಿಗಳಿಗೂ ನಾನು ಚಿರಋಣಿಯಾಗಿದ್ದೇನೆ ಎಂದರು. ಇದೇ ಸಂದರ್ಭದಲ್ಲಿ ಅಡ್ವೋಕೇಟ್ ಪ್ರಭಾಕರ್ ಎಸ್ ದೇವಾಡಿಗ ಆರೂರು ಇವರು ಬರೆದಂತಹ ಉಡುಪಿ ಗುಣಪಾಲರವರ ಬದುಕು ಬರಹದ ಲಲಿತರಂಗ ಗುಣನಾಯಕ ಎಂಬ ಪುಸ್ತಕವನ್ನು ಗಣ್ಯರು ಸೇರಿ ಬಿಡುಗಡೆಗೊಳಿಸಿದರು.
ಸನ್ಮಾನವನ್ನು ಸ್ವೀಕರಿಸಿ ಮಾತಾಡಿದ ವೀರಕೇಸರಿ ಸಂಸ್ಥೆಯ ಸಂಸ್ಥಾಪಕ ಹರೀಶ್ ಡಿ ರೈ ಕುಂಬ್ಳೆಯವರು ಸನ್ಮಾನಕ್ಕೆ ಉತ್ತರಿಸುತ್ತಾ, ಸನಾತನ ಧರ್ಮದ ಈ ನಮ್ಮ ಹಿಂದೂ ದೇಶದಲ್ಲಿ ಪ್ರತಿಯೊಬ್ಬರಿಗೂ ಧರ್ಮ ಸಂದೇಶದ ಗ್ರಂಥಗಳಾದ ರಾಮಾಯಣ ಮಹಾಭಾರತಗಳಂತಹ ಗ್ರಂಥಗಳಲ್ಲಿ ಸಿಗುವಂತಹ ಜೀವನ ಗಾಥೆಯ ಸಂದೇಶವನ್ನು ನಾವು ಜೀವನದಲ್ಲಿ ಅಳವಡಿಸಬೇಕು, ಮೀರಾ ಭಯದರ್ ತುಳು ಕನ್ನಡಿಗರು ನಡೆಸುವಂತಹ ಪ್ರತಿಯೊಂದು ಸಮಾರಂಭಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಾವು ಈ ಪರವೂರಿನಲ್ಲಿಯೂ ತಮ್ಮತನವನ್ನು ಮೆರೆಯಬೇಕು. ನನಗೆ ಇಂದು ಸನ್ಮಾನಿಸಿದ ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ ಸಂಸ್ಥೆಗೆ ನಾನು ಆಭಾರಿಯಾಗಿದ್ದೇನೆ.
ವೇದಿಕೆಯಲ್ಲಿ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು, ಡಾ| ಹರೀಶ್ ಬಿ ಶೆಟ್ಟಿ, ರವೀಂದ್ರ ಶೆಟ್ಟಿ ಕೊಟ್ರಪಾಡಿ ಗುತ್ತು, ಯೋಗೇಂದ್ರ ಗಾಣಿಗ, ಪ್ರಸಾದ್ ಶೆಟ್ಟಿ ನೀರೆಬೈಲೂರು, ನರೇಶ್ ಪೂಜಾರಿ, ಉದಯ ಸುವರ್ಣ, ತನುಜಾ ಶೆಟ್ಟಿ ವೀರ್ ಕರ್, ರಂಜನಾ ಕತಾವಟೆ, ಅಡ್ವೋಕೇಟ್ ಸೌಮ್ಯ ಪೂಜಾರಿ, ರಾಜೇಶ್ ಕುಂದರ್, ಹರೀಶ್ ಸುವರ್ಣ ಕಣಂಜಾರ್, ಎ.ಕೆbಹರೀಶ್, ಆಶಾಲತಾ ಪಿ ಶೆಟ್ಟಿ, ಗೀತಾ ಸಿ. ಶೆಟ್ಟಿ ಮೊದಲಾದವರಿದ್ದರು. ಜಯಶ್ರೀ ಶೆಟ್ಟಿಯವರು ಪ್ರಾರ್ಥನೆಗೈದರೆ, ಕಾರ್ಯಕ್ರಮದ ನಿರೂಪಣೆಯನ್ನು ರಂಗನಟ ಜಿ.ಕೆ ಕೆಂಚನಕೆರೆಯವರು ನಿರ್ವಹಿಸಿದರು. ಉಪಾಧ್ಯಕ್ಷರಾದ ಉಮೇಶ್ ಬಾರ್ಕೂರು, ರಾಜ್ ಕುಮಾರ್ ಕಾರ್ನಾಡ್, ಮನೋಹರ್ ಬಂಗೇರ, ಭಾಸ್ಕರ್ ಪಿ.ಜೆ, ಅಶೋಕ್ ಕರ್ಕೇರ ಮತ್ತು ಗೌ. ಕಾರ್ಯದರ್ಶಿ ಅಶೋಕ್ ಒಳದೂರುರವರು ಸಹಕರಿಸಿ, ವಂದಿಸಿದರು.
ಚಿತ್ರ, ವರದಿ : ವೈ ಟಿ ಶೆಟ್ಟಿ, ಹೆಜಮಾಡಿ


























































































































