ಸುರತ್ಕಲ್ ನ ಸುಭಾಷಿತ ನಗರ ರೆಸಿಡೆಂಟ್ಸ್ ಅಸೋಸಿಯೇಶನ್ ವೆಲ್ಫೇರ್ ಅಸೋಸಿಯೇಶನ್ ಇದರ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಹಾಗೂ ಸ್ನೇಹ ಸಮ್ಮಿಲನ ಸಮಾರಂಭ ಸುರತ್ಕಲ್ ಬಂಟರ ಸಂಘದ ವಠಾರದಲ್ಲಿ ಜರುಗಿತು. ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಅಂತಾರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಧನಲಕ್ಷ್ಮೀ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಅಸೋಸಿಯೇಶನ್ ವತಿಯಿಂದ ಸಂಗ್ರಹಿಸಿದ ರೂ.1,01,000 ಅನ್ನು ಹಸ್ತಾಂತರಿಸಲಾಯಿತು. ಬಳಿಕ ಮಾತಾಡಿದ ಅವರು, ಸುಭಾಷಿತ ನಗರ ಅಸೋಸಿಯೇಷನ್ ನನ್ನ ಪ್ರತಿಭೆಯನ್ನು ಗುರುತಿಸಿ ನನಗೆ ಸನ್ಮಾನದ ಜೊತೆಗೆ ಆರ್ಥಿಕ ಸಹಾಯ ಮಾಡಿರುವುದು ತುಂಬಾ ಖುಷಿಯಾಗಿದೆ. ಇದನ್ನು ಮರೆಯಲು ಸಾಧ್ಯವಿಲ್ಲ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿರುವ ಸಂಘಟನೆ ಇನ್ನಷ್ಟು ಸಮಾಜಮುಖಿಯಾಗಿ ಬೆಳೆಯಲಿ ಎಂದರು.

ವೇದಿಕೆಯಲ್ಲಿ ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ರಮೇಶ್ ಶೆಟ್ಟಿ, ಉಪಾಧ್ಯಕ್ಷ ತಾರಾನಾಥ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಕೋಶಾಧಿಕಾರಿ ನರಸಿಂಹ ಸುವರ್ಣ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಜೊತೆ ಕಾರ್ಯದರ್ಶಿ ಲಕ್ಷ್ಮಿ ಚಂದ್ರಶೇಖರ್ ಆಚಾರ್ಯ, ಗೌರವ ಸಲಹೆಗಾರರಾದ ಸತ್ಯಜಿತ್ ಸುರತ್ಕಲ್, ಮಾಜಿ ಕಾರ್ಪೋರೇಟರ್ ನಯನ ಆರ್.ಕೋಟ್ಯಾನ್, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಉದ್ಯಮಿ ದಿನೇಶ್ ಶೆಟ್ಟಿ ಕಬ್ಬಿನಹಿತ್ಲು, ಸಮಾಜಸೇವಕ ಭರತ್ ಹಾಗೂ ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಗೌರವ ನಡೆಯಿತು. ರಾಜೇಶ್ವರಿ ಡಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

















































































































