ಶಿಕ್ಷಣದ ಅವಕಾಶ ಜೀವನದಲ್ಲಿ ಯಾವಾಗಲೂ ಬರುವುದಿಲ್ಲ. ಮಕ್ಕಳು ವಿದ್ಯಾವಂತರಾದಲ್ಲಿ ಇಡೀ ಕುಟುಂಬ ಮತ್ತು ಸಮಾಜದ ಅಭಿವೃದ್ಧಿಯಾಗುತ್ತದೆ. ಜೀವನದಲ್ಲಿ ಕಲಿಕೆಗೆ ಹೆಚ್ಚಿನ ಒತ್ತು ನೀಡಿದಲ್ಲಿ ಜೀವನದಲ್ಲಿ ಯಶಸ್ಸು ಸಾಧ್ಯ. ಶಿಕ್ಷಣದಿಂದ ಸುಂದರ ಬದುಕು ಕಟ್ಟಿಕೊಳ್ಳುವ ವಿದ್ಯಾದೇಗುಲದ ಅಭಿವೃದ್ಧಿಯಲ್ಲಿ ನಾವು ತೊಡಗಿಸಿಕೊಂಡಲ್ಲಿ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಸಿಎ ಶಂಕರ ಬಿ ಶೆಟ್ಟಿ ಹೇಳಿದರು. ಅವರು ಡಿಸೆಂಬರ್ 21 ರಂದು ಕುತ್ಯಾರು ವಿದ್ಯಾದಾಯಿನಿ ಹಿ.ಪ್ರಾ. ಶಾಲೆಯ ಆವರಣದಲ್ಲಿ ನಡೆದ ಶಾಲೆಯ ಶತ ಸಂವತ್ಸರೋತ್ಸವ ಸಮಾರೋಪ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ| ವೈ ಭಾಸ್ಕರ ಶೆಟ್ಟಿ ಮಾತನಾಡಿ, ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ನೀಡುವಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಹೇಳಿದರು.

ಸಿಎ ಶಂಕರ ಬಿ ಶೆಟ್ಟಿ ಮತ್ತು ಮುಂಬಯಿ ಉದ್ಯಮಿ ಸದಾಶಿವ ಶೆಟ್ಟಿ ನವೀಕೃತ ಶಾಲಾ ಕೊಠಡಿಯನ್ನು ಉದ್ಘಾಟಿಸಿದರು. ಶಾಲೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಮುಖ್ಯ ಶಿಕ್ಷಕರು ಮತ್ತು ಹಳೆ ವಿದ್ಯಾರ್ಥಿ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಶಾಲೆಗೆ ಧನಸಹಾಯ ಮಾಡಿದ ದಾನಿಗಳನ್ನು ಗೌರವಿಸಲಾಯಿತು. ಸಂಘಟನಾ ಕಾರ್ಯದರ್ಶಿ ಕುತ್ಯಾರು ಪ್ರಸಾದ್ ಶೆಟ್ಟಿ ಮುಖ್ಯ ಶಿಕ್ಷಕರ ಮತ್ತು ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ದಾನಿಗಳ ಪರಿಚಯ ಮಾಡಿದರು. ಹಳೆ ವಿದ್ಯಾರ್ಥಿ ಬೆಂಗಳೂರು ಕೆಪಿಟಿಸಿಎಲ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರದೀಪ್ ಸ್ವಸ್ತಿವಾಚನಗೈದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶತ ಸಂವತ್ಸರೋತ್ಸವ ಸಮಿತಿಯ ಗೌರವಾಧ್ಯಕ್ಷ ಜಿನೇಶ್ ಬಲ್ಲಾಳ್, ಮುಂಬಯಿ ಸಮಿತಿಯ ಅಧ್ಯಕ್ಷ ಸುರೇಶ್ ಶೆಟ್ಟಿ, ಬೆಂಗಳೂರು ಸಮಿತಿಯ ಅಧ್ಯಕ್ಷ ರಾಜೇಶ್ ಶೆಟ್ಟಿ, ಸಂಚಾಲಕ ಕುತ್ಯಾರು ಕಿಶೋರ್ ಕುಮಾರ್ ಶೆಟ್ಟಿ ಮುಂಬಯಿ, ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಸಂಯೋಜಕರಾದ ಸತ್ಯಹಾಸ ಶೆಟ್ಟಿ ಮುಂಬೈ, ಅಡ್ವೋಕೇಟ್ ಆರ್.ಜಿ ಶೆಟ್ಟಿ ಮುಂಬಯಿ, ಮುಖ್ಯ ಶಿಕ್ಷಕಿ ಶರ್ಮಿಳಾ ವೇದಿಕೆಯಲ್ಲಿದ್ದರು.

ಶಿಕ್ಷಕ ವೃಂದ, ಆಡಳಿತ ಮಂಡಳಿಯ ಸದಸ್ಯರು, ಮುಂಬಯಿ, ಬೆಂಗಳೂರು ಮತ್ತು ಕುತ್ಯಾರು ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಶಾಲೆಯ ಹಳೆ ವಿದ್ಯಾರ್ಥಿಗಳು, ಹೆತ್ತವರು, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಶತ ಸಂವತ್ಸರೋತ್ಸವ ಸಮಿತಿಯ ಅಧ್ಯಕ್ಷ ಕುತ್ಯಾರು ಕೇಂಜ ಶ್ರೀಧರ ತಂತ್ರಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ಅನಂತ ಮೂಡಿತ್ತಾಯ ಕಾರ್ಯಕ್ರಮ ನಿರೂಪಿಸಿ, ಸಮಿತಿಯ ಕೋಶಾಧಿಕಾರಿ ಸತೀಶ್ ಕುತ್ಯಾರು ವಂದಿಸಿದರು. ಸಂಗೀತ ಕಲಾವಿದ ಮುಲ್ಕಿ ರವೀಂದ್ರ ಪ್ರಭು ಬಳಗದವರಿಂದ ರಾಗ್ ರಂಗ್, ಸನಾತನ ನಾಟ್ಯಾಲಯ ಮಂಗಳೂರು ಇವರಿಂದ ಸನಾತನ ರಾಷ್ಟ್ರಾಂಜಲಿ, ಹಳೆ ವಿದ್ಯಾರ್ಥಿಗಳು, ಪೋಷಕರು, ಗ್ರಾಮಸ್ಥರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ ಕಾಪು ರಂಗತರಂಗ ಕಲಾವಿದರಿಂದ ತುಳು ನಾಟಕ ಶೋಬಾಜಿ ನಡೆಯಿತು.
ವರದಿ : ದಿನೇಶ್ ಕುಲಾಲ್

















































































































