ಖ್ಯಾತ ಲೇಖಕ ಹಾಗೂ ಸಾಹಿತಿ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿಯವರಿಗೆ ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನೀಡಿ ಸಮ್ಮಾನಿಸಲಾಯಿತು. ವಿಜಯ ಬ್ಯಾಂಕ್ ನ ನಿವೃತ್ತ ಮುಖ್ಯ ಪ್ರಬಂಧಕರಾದ ಅವರು ಎಂಎ, ಎಲ್.ಎಲ್.ಬಿ, ಸಿಎ ಐಐಬಿ ಪದವೀಧರರು. ಅವರ 400ಕ್ಕೂ ಅಧಿಕ ಆರ್ಥಿಕತೆ, ಬ್ಯಾಂಕಿಂಗ್, ಶೈಕ್ಷಣಿಕ, ಪ್ರಜಾಪ್ರಭುತ್ವ, ಸಂವಿಧಾನ, ಪ್ರಕೃತಿ ಮತ್ತು ಪರಿಸರ ಹಾಗೂ ಇತರ ವೈಚಾರಿಕ ಕನ್ನಡ ಮತ್ತು ಆಂಗ್ಲ ಭಾಷೆಯ ಬರಹಗಳು ಪ್ರಮುಖ ದಿನಪತ್ರಿಕೆ, ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ.

ಹಲವು ಸಂಘ ಸಂಸ್ಥೆ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆ, ಆಕಾಶವಾಣಿ, ದೂರದರ್ಶನಗಳಲ್ಲಿ ಆರ್ಥಿಕತೆ, ಪರಿಸರ, ಶಿಕ್ಷಣ, ಸಮಾಜ, ನೀತಿ ಸಂಬಂಧಿತ ವಿಚಾರಗೋಷ್ಠಿ ಉಪನ್ಯಾಸ ನೀಡಿದ್ದಾರೆ. ಸಂದರ್ಶಕ ಉಪನ್ಯಾಸಕರೂ ಆಗಿದ್ದಾರೆ. ಐದು ಪ್ರಮುಖ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿದ್ದಾರೆ. ಪ್ರಕೃತಿಯೇ ಮಹಾಮಾತೆ, ಬದುಕಿನ ಹಾದಿ, ನೋಬೆಲ್ ಪುರಸ್ಕೃತ ಟಾಗೋರರ ಆಂಗ್ಲ ಗೀತಾಂಜಲಿಯ ಕನ್ನಡಾನುವಾದ, ವ್ಯಾಲ್ಯೂಸ್ ಆ್ಯಂಡ್ ವಾಯ್ಸಸ್, ಲ್ಯಾಂಗ್ವೇಜ್ ಆಫ್ ದಿ ನೇಚರ್ ಎಂಬ ಐದು ಪುಸ್ತಕ ಬರೆದಿದ್ದಾರೆ. ಆರ್ಯಭಟ ಪ್ರಶಸ್ತಿ, ಕಾರಂತ ಪ್ರಶಸ್ತಿ, ಬಂಟರ ಯಾನೆ ನಾಡವರ ಮಾತೃ ಸಂಘ, ಲಯನ್ಸ್ ಹಾಗೂ ವಿವಿಧ ಸಂಘ ಸಂಸ್ಥೆಗಳು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿವೆ.





































































































