ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ರಾಜಾಂಗಣದಲ್ಲಿ ಸೆಪ್ಟೆಂಬರ್ 27 ರಂದು ಯಕ್ಷಕಲಾ ಪೊಳಲಿ ಇದರ 30 ನೇ ವರ್ಷದ ಪ್ರಯುಕ್ತ ತ್ರಿಂಶತಿ ಸಂಭ್ರಮದ ‘ಪೊಳಲಿ ಯಕ್ಷೋತ್ಸವ’ವು ಪ್ರಶಸ್ತಿ ಪ್ರದಾನ, ಗೌರವಾರ್ಪಣೆ, ಸಮ್ಮಾನ, ಸಂಸ್ಮರಣೆ ಹಾಗೂ ಯಕ್ಷಗಾನ ಪ್ರದರ್ಶನದೊಂದಿಗೆ ಸಂಪನ್ನಗೊಂಡಿತು. ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಯಕ್ಷಕಲಾ ಪೋಷಕ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಇವರಿಗೆ ‘ಪೊಳಲಿ ಯಕ್ಷೋತ್ಸವ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಅಲ್ಲದೇ ಯಕ್ಷಗಾನ ರಂಗದ ವಿಶಿಷ್ಟ ಸಾಧನೆಗಾಗಿ ಹಿರಿಯ ಕಲಾವಿದರಾದ ಭಾಸ್ಕರ ರೈ ಕುಕ್ಕುವಳ್ಳಿ, ಮಾಂಬಾಡಿ ಸುಬ್ರಹ್ಮಣ್ಯ ಭಟ್, ಅಡೂರು ಲಕ್ಷ್ಮೀನಾರಾಯಣ ರಾವ್, ಕೊಳ್ತಿಗೆ ನಾರಾಯಣ ಗೌಡ, ಉಬರಡ್ಕ ಉಮೇಶ್ ಶೆಟ್ಟಿ, ಜಬ್ಬಾರ್ ಸಮೋ ಸಂಪಾಜೆ, ಶಿವರಾಮ ಪಣಂಬೂರು, ಗಿರೀಶ್ ಹೆಗ್ಡೆ ಪುತ್ತೂರು, ಜಗದಾಭಿರಾಮ ಸ್ವಾಮಿ ಪಡುಬಿದ್ರೆ, ನಾ. ಕಾರಂತ ಪೆರಾಜೆ, ನಗ್ರಿ ಮಹಾಬಲ ರೈ, ಮಹಾಬಲೇಶ್ವರ ಭಟ್ ಭಾಗಮಂಡಲ ಹಾಗೂ ಲೇಖಕ ಡಾ. ವಸಂತಕುಮಾರ ಪೆರ್ಲ ಇವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಮಂಗಳೂರಿನ ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘ ಹಾಗೂ ಕೈರಂಗಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿಗೆ ಯಕ್ಷಕಲಾ ಗೌರವ ನೀಡಲಾಯಿತು. ಜತೆಗೆ 30 ವರ್ಷಗಳ ಕಾಲ ಸಂಸ್ಥೆಯಲ್ಲಿ ಕಲಾ ಸೇವೆ ನೀಡಿದ 5 ಮಂದಿ ಕಲಾವಿದರಿಗೆ ಗೌರವಾರ್ಪಣೆ, ಇಬ್ಬರು ಸಂಘಟಕರಿಗೆ ಯಕ್ಷ ಪೋಷಕ ಗೌರವ ನೀಡಲಾಯಿತು. ಪ್ರಶಸ್ತಿ ಪುರಸ್ಕೃತರ ಪರವಾಗಿ ಯಕ್ಷಗಾನ ವಿದ್ವಾಂಸ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ, ಕೃತಜ್ಞತೆ ಸಲ್ಲಿಸಿದರು. ಕೀರ್ತಿಶೇಷ 8 ಮಂದಿ ಕಲಾವಿದರನ್ನು ಸ್ಮರಿಸಿ ಅರ್ಥಧಾರಿ ಉಜಿರೆ ಅಶೋಕ ಭಟ್ ಅವರು ಸಂಸ್ಮರಣ ಭಾಷಣ ಮಾಡಿದರು. ಕದ್ರಿ ನವನೀತ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಜ್ಯೋತಿಷಿ ಕೋಡಿಮಜಲು ಆನಂತಪದ್ಮನಾಭ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು.
ಪೊಳಲಿ ಕ್ಷೇತ್ರದ ಪ್ರಧಾನ ಅರ್ಚಕ ಪಿ. ಮಾಧವ ಭಟ್, ಆಡಳಿತ ಮೊಕ್ತಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಯಕ್ಷಗಾನ ಸಂಘಟಕ ಭುಜಬಲಿ ಧರ್ಮಸ್ಥಳ, ಯಕ್ಷಧ್ರುವ ಪಟ್ಲ ಫೌಂಡೇಶನ್ ಸಂಸ್ಥಾಪಕ ಸತೀಶ್ ಶೆಟ್ಟಿ ಪಟ್ಲ, ಕರ್ನಿರೆ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಪ್ರಭಾಕರ ಸುವರ್ಣ ಕರ್ನಿರೆ, ಬಿಲ್ಲವಾಸ್ ದುಬೈನ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ ಬೆಳಪು, ಬೆಂಗಳೂರಿನ ಉದ್ಯಮಿ ರಾಜೇಂದ್ರ ಕಕ್ಯಪದವು, ಬಂಟ್ವಾಳ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಯಕ್ಷಕಲಾ ಸಂಸ್ಥಾಪಕ ಅ.ನ.ಭ ಪೊಳಲಿ ಉಪಸ್ಥಿತರಿದ್ದರು. ಬೆಳಗ್ಗೆ ಯಕ್ಷೋತ್ಸವವನ್ನು ಪೊಳಲಿ ಕ್ಷೇತ್ರದ ಅರ್ಚಕ ಅನಂತ ಪದ್ಮನಾಭ ಭಟ್ ಮತ್ತು ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ದೀಪೋಜ್ವಲನ ಮಾಡಿ ಉದ್ಘಾಟಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು ಭೇಟಿ ನೀಡಿ ಶುಭ ಹಾರೈಸಿದರು. ಯಕ್ಷಕಲಾ ಪೊಳಲಿ ಸಂಚಾಲಕ ವೆಂಕಟೇಶ ನಾವಡ ಸ್ವಾಗತಿಸಿದರು. ಸಂಯೋಜಕ ಬಿ. ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರ್ವಹಿಸಿದರು. ಪೊಳಲಿ ಯಕ್ಷೋತ್ಸವ ಅಂಗವಾಗಿ ಬೆಳಿಗ್ಗೆ ತೆಂಕುತಿಟ್ಟಿನ ಕಲಾವಿದರಿಂದ ‘ಜ್ವಾಲಾ ಪ್ರತಾಪ’, ‘ವೀರ ಬಬ್ರುವಾಹನ’, ಅಪರಾಹ್ನ ‘ದಮಯಂತಿ ಪುನಃ ಸ್ವಯಂವರ’ ಹಾಗೂ ರಾತ್ರಿ ಬಡಗು ತಿಟ್ಟಿನ ಕಲಾವಿದರಿಂದ ‘ಮಧುರಾ ಮಹೀಂದ್ರ’ ಯಕ್ಷಗಾನ ಪ್ರದರ್ಶನಗೊಂಡಿತು.