ಮುಂಬೈ: ಮುಂಬೈ ವಿದ್ಯಾಲಯ, ಕನ್ನಡ ವಿಭಾಗವು ಶೈಕ್ಷಣಿಕ ಸೇವೆಯೊಂದಿಗೆ ಮುಂಬಯಿನ ಅನೇಕ ಸಂಘ ಸಂಸ್ಥೆಗಳೊಂದಿಗೆ ಕೈಜೋಡಿಸಿ ವಿಭಿನ್ನ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದೆ ಎನ್ನಲು ಸಂತೋಷವಾಗುತ್ತದೆ. ವಿಭಾಗವು ಎಲ್ಲರ ಜೊತೆ ಸೇರಿ ಕನ್ನಡವನ್ನು ಕಟ್ಟುವ ಕೆಲಸವನ್ನು ಮಾಡುತ್ತಿದೆ. ಮುಂಬೈಯಲ್ಲಿರುವ ಸಂಘ -ಸಂಸ್ಥೆಗಳು ತಮ್ಮನ್ನು ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ದೇಶದ ಯಾವುದೇ ಭಾಗದಲ್ಲಿ ಈ ಪ್ರಕ್ರಿಯೆ ಇಲ್ಲ. ಮುಂಬೈಯ ಸಂಘ –ಸಂಸ್ಥೆಗಳು ಮಾಡುತ್ತಿರುವ ಕಾರ್ಯಗಳು ಅಪೂರ್ವವಾದುದು. ಮುಂಬೈಯಲ್ಲಿ ಈಗ ಶತಕೋತ್ತರ ಸಂಭ್ರಮದಲ್ಲಿರುವ ಸಂಸ್ಥೆಗಳನ್ನು ಗೌರವಿಸಲು ಸಂತೋಷವಾಗುತ್ತದೆ. ಸುಮಾರು 147 ವರ್ಷಗಳಷ್ಟು ಹಳೆಯದಾದ ಶ್ರೀಮದ್ಭಾರತ ಮಂಡಳಿ, ಶತ ಸಂಭ್ರಮದಲ್ಲಿರುವ ಬಿ. ಎಸ್. ಕೆ .ಬಿ ಅಸೋಸಿಯೇಷನ್, ದೇವಾಡಿಗ ಸಂಘ, ಮೈಸೂರು ಅಸೋಸಿಯೇಷನ್, ಬಂಟರ ಸಂಘ ಈ ಸಂಸ್ಥೆಗಳನ್ನು ಗೌರವಿಸುವುದು ಸಂತೋಷವನ್ನು ನೀಡಿದೆ.

ಮುಂಬಯಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸುವ ಪ್ರಕ್ರಿಯೆಯನ್ನು ವಿಭಾಗ ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಇಂದು ಈ ಕಾರ್ಯಕ್ರಮವನ್ನು ಅಸೀಮ ಸಾಧಕ, ತಾರಾ ಮೌಲ್ಯ ಇರುವ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ಮಹಾನ್ ಸಂಘಟಕ ಐಕಳ ಹರೀಶ್ ಶೆಟ್ಟಿ ಅವರು ಉದ್ಘಾಟಿಸಿರುವುದು ಆನಂದವಾಗಿದೆ. ನಮ್ಮಲ್ಲಿ ಐತಿಹಾಸಿಕ ಪ್ರಜ್ಞೆ ಇರಬೇಕು. ಸಂಘ ಸಂಸ್ಥೆಗಳ ಸಾಧನೆಗಳ ದಾಖಲಾತಿಯೂ ಅಗತ್ಯ ಮಾಡಬೇಕು ಎಂದು ಪ್ರೊ. ಜಿ. ಎನ್. ಉಪಾಧ್ಯ ಅವರು ನುಡಿದರು. ಅವರು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಜಂಟಿ ಆಶ್ರಯದಲ್ಲಿ ಕಲಿನಾ ವಿದ್ಯಾನಗರಿಯ ಜೆ.ಪಿ.ನಾಯಕ್ ಭವನದಲ್ಲಿ ಸೆ.24 ರಂದು ನಡೆದ ಸಾಧಕರಿಗೆ ಗೌರವಾರ್ಪಣೆ, ಶತಕೋತ್ತರ ಸಂಸ್ಥೆಗಳೊಂದಿಗೆ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ವಿಭಾಗದ ನಲ್ವತ್ತೇಳರ ಸಂಭ್ರಮವನ್ನು ಉದ್ಘಾಟಿಸಿದ ಜಾಗತಿಕ ಬಂಟರ ಸಂಘಗಳ ಅಧ್ಯಕ್ಷರಾದ ಐಕಳ ಹರೀಶ ಶೆಟ್ಟಿ ಅವರು ಮುಂಬಯಿಯ ಎಲ್ಲ ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕವನ್ನು ಇಟ್ಟುಕೊಂಡು ಸೌಹಾರ್ದ ಭಾವವನ್ನು ಉಳಿಸಿಕೊಂಡು ಬಂದಿದ್ದೇನೆ ಎನ್ನಲು ಸಂತೋಷವಾಗುತ್ತದೆ.ಇಂದು ಗೌರವಾರ್ಪಣೆ ಸ್ವೀಕರಿಸಲಿರುವ ಎಲ್ಲರು ನನ್ನ ಆತ್ಮೀಯರು. ಮುಂದೆಯೂ ಎಲ್ಲರು ಜೊತೆ ಸೇರಿ ಕೆಲಸ ಮಾಡೋಣ ಎಂದು ಶತಕೋತ್ತರ ಸಂಭ್ರಮದಲ್ಲಿರುವ ಎಲ್ಲ ಸಂಸ್ಥೆಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಎಂ.ಎ. ಪದವಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಎಂ. ಬಿ. ಕುಕ್ಯಾನ್ ಬಂಗಾರದ ಪದಕಕ್ಕೆ ಅರ್ಹತೆಯನ್ನು ಸಾಧಿಸಿದ ವಿಕ್ರಂ ಜೋಶಿ, ಸಂಘಟನೆಯ ಕ್ಷೇತ್ರದಲ್ಲಿ ಹೆಸರು ಮಾಡಿದ ನವೀನ ಶೆಟ್ಟಿ ಇನ್ನಬಾಳಿಕೆ ಮತ್ತು ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ವಿಜಯ ಶೆಟ್ಟಿ ಮೂಡುಬೆಳ್ಳೆ ಇವರನ್ನು ವಿಶ್ವವಿದ್ಯಾಲಯ ಕನ್ನಡ ವಿಭಾಗದ ವತಿಯಿಂದ ಶಾಲು ಹೊದಿಸಿ, ಗ್ರಂಥ, ಪದಕ ನೀಡಿ ಗೌರವಿಸಲಾಯಿತು.
ಗೌರವವನ್ನು ಸ್ವೀಕರಿಸಿ ಮಾತನಾಡಿದ ಸಂಘಟಕ, ಕಲಾವಿದ ನವೀನ ಶೆಟ್ಟಿ ಇನ್ನಬಾಳಿಕೆ ಅವರು ಉಪಾಧ್ಯ ಅವರ ಅಂತರಾಳದಲ್ಲಿ ಕನ್ನಡದ ಬಗ್ಗೆ ಇರುವ ಪ್ರೀತಿ ಕಂಡು ಅಭಿಮಾನವೆನಿಸುತ್ತದೆ. ಐಕಳ ಅವರು ನನಗೆ ಸಂಘಟನೆಗೆ ಮುಖ್ಯ ಮಾರ್ಗದರ್ಶಕರು; ಮಾದರಿಯನ್ನು ನೀಡಿದವರು. ವಿವಿ ಸುಂದರವಾದ ಹೂತೋಟ. ಇಲ್ಲಿ ಸಾಹಿತ್ಯದ ಅಭಿರುಚಿಯಿರುವ ವಿದ್ಯಾರ್ಥಿಗಳನ್ನು ಕಂಡು ಸಂತೋಷವೆನಿಸುತ್ತಿದೆ. ಕನ್ನಡದ ಮೇಲಿನ ಪ್ರೀತಿಯನ್ನು ಇಟ್ಟಿರುವ ನನ್ನನ್ನು, ನನ್ನ ಕೆಲಸವನ್ನು ಗುರುತಿಸಿ ವಿಶ್ವವಿದ್ಯಾಲಯದಲ್ಲಿ ಗೌರವಿಸಿದ್ದೀರಿ. ವಿವಿಗೆ ಋಣಿಯಾಗಿದ್ದೇನೆ ಎಂದು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಗೌರವ ಪದಕ ಸ್ವೀಕರಿಸಿದ ವಿಜಯ ಶೆಟ್ಟಿ ಮೂಡುಬೆಳ್ಳೆ ಅವರು ಮಾತನಾಡಿ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದಿಂದ ಗೌರವ ಪ್ರಾಪ್ತವಾಗಿರುವುದು ನನಗೆ ಧನ್ಯತಾಭಾವ ತಂದಿದೆ. ಐಕಳ ಅವರು ಸಮಕ್ಷಮದಲ್ಲಿ ಈ ಗೌರವ ದೊರೆತಿರುವುದು ಮತ್ತೂ ಸಂತೋಷ ನೀಡಿದೆ. ಬಂಟರ ಸಂಘದ ವೇದಿಕೆಯಲ್ಲಿ ಪ್ರಾರ್ಥನೆಯನ್ನು ಹಾಡುವ ಅವರು ಅವಕಾಶ ನೀಡಿದ್ದಾರೆ. ಅಲ್ಲಿಂದ ಮುಂದೆ ಸಂಗೀತ ಕ್ಷೇತ್ರದಲ್ಲಿ ಬೆಳೆಯುತ್ತಾ ಹೋಗುವುದು ಸಾಧ್ಯವಾಯಿತು. ಇದು ಜನರು ನನ್ನನ್ನು ಗುರುತಿಸಲು ಮತ್ತು ಹಲಕೆಲವು ಅವಕಾಶಗಳು ದೊರೆಯಲು ಕಾರಣವೂ ಆಯಿತು ಎಂದು ಇಂದಿನ ಈ ಸನ್ಮಾನ ತಾಯಿ ಸರಸ್ವತಿಗೆ ಎಂದು ಹಾಡಿನ ಮೂಲಕ ಅರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ಶತಕೋತ್ತರ ಸಂಭರ್ಮದಲ್ಲಿ ಇರುವ ಸಂಸ್ಥೆಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಶ್ರೀಮದ್ಭಾರತ ಮಂಡಲಿಯ ಪರವಾಗಿ ಸ್ವೀಕರಿಸಿದ ಹರಿಶ್ಚಂದ್ರನ ಕಾಂಚನ್ ಅವರು 147 ವರ್ಷಗಳಷ್ಟು ಹಳೆಯದಾದ ಶ್ರೀ ಮದ್ಭಾರತ ಮಂಡಳಿಯು ಸ್ಥಾಪನೆಯಾದ ಬಗ್ಗೆ, ಅದರ ಕೈಂಕರ್ಯ ಸಾಧನೆಗಳ ಬಗ್ಗೆ ವಿವರ ನೀಡುತ್ತಾ, ಹಿಂದೂ ಧರ್ಮದ ಆಚರಣೆಗಳು, ಭಜನೆ, ಗ್ರಂಥ ಪಾರಾಯಣ ಮುಂತಾದ ಚಟುವಟಿಕೆಗಳಲ್ಲಿ ಶ್ರೀ ಮದ್ಭಾರತ ಮಂಡಳಿಯು ತೊಡಗಿಸಿಕೊಂಡಿದೆ. ಕನ್ನಡಗ ವಿಭಾಗದ ಜೊತೆಗೆ ಕನ್ನಡವನ್ನು ಉತ್ತುಂಗ ಶಿಖರಕ್ಕೆ ಏರಿಸುವುದಕ್ಕೆ ನಮ್ಮ ಸಂಘವೂ ಕಟಿಬದ್ಧವಾಗಿದೆ. ಕನ್ನಡ ವಿಭಾಗದ ಕೆಲಸಗಳು ನಿಜವಾಗಿಯೂ ಅನುಕರಣೀಯ ಎಂದು ಶ್ಲಾಘಿಸಿದರು.
ಮೊಗವೀರ ವ್ಯವಸ್ಥಾಪಕ ಮಂಡಳಿಯ ಪರವಾಗಿ ಮಾತನಾಡಿದ ಅಶೋಕ ಸುವರ್ಣ ಅವರು ಮೊಗವೀರ ಸಂಘ ನಡೆದು ಬಂದ ಹಾದಿ ಮತ್ತು ಅದರ ಸಾಧನೆಗಳ ಕುರಿತು ಸವಿಸ್ತಾರವಾಗಿ ವಿವರಣೆ ನೀಡುತ್ತ, ಬೇರೆ ಬೇರೆ ಸಂದರ್ಭಗಳಲ್ಲಿ ಕನ್ನಡ ವಿಭಾಗಕ್ಕೆ ಬರುವ ಭಾಗ್ಯ ಸಿಕ್ಕಿದೆ. ಪ್ರೊ.ಉಪಾಧ್ಯ ಅವರ ಬೆಂಬಲಕ್ಕೆ ಸದಾ ಋಣಿ. ಪ್ರತೀ ಸಲ ಬಂದಾಗಲೂ ಹೊಸ ಹೊಸ ಪ್ರತಿಭೆಗಳನ್ನು ಕಾಣಲು ಸಿಗುತ್ತವೆ. ಆ ರೀತಿ ವಿಭಾಗವನ್ನು ಬೆಳೆಸಿದ್ದಾರೆ. ವಿದ್ಯಾರ್ಥಿಗಳು ಕನ್ನಡ ವಿಭಾಗದ ಶೋಭೆಯನ್ನು ಹೆಚ್ಚಿಸಿದ್ದಾರೆ ಎಂದು ಶ್ಲಾಘಿಸಿದರು. ಬಿ .ಎಸ್. ಕೆ.ಬಿ. ಅಸೋಸಿಯೇಷನ್ ನ ಅಧ್ಯಕ್ಷರಾದ ಡಾ. ಸುರೇಶ ರಾವ್ ಅವರು ಮಾತನಾಡಿ, ನಾವೆಲ್ಲಾ ಕಳೆದ ಐವತ್ತು ವರ್ಷಗಳಿಂದಲೂ ವಿಶ್ವವಿದ್ಯಾಲಯಕ್ಕೆ ಕಾಲಿಟ್ಟವರಲ್ಲ. ಆದರೆ ಪ್ರೊ. ಉಪಾಧ್ಯ ಅವರ ದೆಸೆಯಿಂದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ವಿವಿಗೆ ಭೇಟಿ ಕೊಡುವಂತಾಗಿದೆ. ಅನೇಕ ಗಣ್ಯ ವ್ಯಕ್ತಿಗಳು, ಸಂಘಟನೆಗಳು ಕನ್ನಡ ವಿಭಾಗದ ಕಾರ್ಯವೈಖರಿಗೆ ಮಾರುಹೋಗಿದ್ದಾರೆ. ಇಲ್ಲಿ ಎಲ್ಲ ವಿದ್ಯಾರ್ಥಿಗಳ ಪ್ರಗತಿಗೆ ಅವಕಾಶಗಳು .ಸಿಗುತ್ತಿರುವುದರಿಂದ ವಿದ್ಯಾರ್ಥಿಗಳು ಪ್ರತಿಭಾವಂತರಾಗಿ ಹೊರಹೊಮ್ಮುತ್ತಿದ್ದಾರೆ ಎಂದರು. ಮೈಸೂರು ಅಸೋಸಿಯೇಷನ್ ನ ಕಾರ್ಯಾಧ್ಯಕ್ಷೆಯಾಗಿರುವ ಕೆ. ಕಮಲಾ ಅವರು ಮಾತನಾಡಿ ವಿವಿಗಳು ಅಂಕಗಳನ್ನು ತಯಾರು ಮಾಡುವ ಉದ್ಯಮವಾಗಿ ಬೆಳೆದಂತಹ ವಾತಾವರಣದಲ್ಲಿ ಕನ್ನಡವನ್ನು ಬೆಳೆಸುವುದಕ್ಕೆ ವಿಭಾಗ ಇಷ್ಟೊಂದು ಪರಿಶ್ರಮವನ್ನು ಹಾಕುತ್ತಾ ಇದೆ. ಕನ್ನಡ ವಿಭಾಗದ ತಂಡಕ್ಕೆ ದೊಡ್ಡ ಚಪ್ಪಾಳೆ. ಯಾವುದೇ ಒಂದು ಸಂಸ್ಥೆ ಮುಂದೆ ಬರುವುದಕ್ಕೆ ಅದರ ಹಿಂದೆ ಇರುವ ಶಕ್ತಿ ಬಹಳ ಮುಖ್ಯ. ಇಲ್ಲಿಯ ಪ್ರಾಧ್ಯಾಪಕರಿಗೆ ಅಭಿನಂದನೆಗಳು. ಮೈಸೂರು ಅಸೋಸಿಯೇಷನ್ ಕಾಲದಿಂದ ಕಾಲಕ್ಕೆ ತನ್ನ ರೂಪವನ್ನು ಬದಲಾಯಿಸಿಕೊಳ್ಳುತ್ತ ಬರುತ್ತಿದೆ.
ಸಂಸ್ಕೃತಿ ಸಾಹಿತ್ಯ ಸಂಗೀತ ಧಾರ್ಮಿಕ ಕಾರ್ಯಗಳು, ಹಬ್ಬ ಆಚರಣೆ, ಎಲ್ಲವನ್ನೂ ಶ್ರದ್ಧೆಯಿಂದ ನಡೆಸಿಕೊಂಡು ಬಂದಿದೆ. ನಮ್ಮ ಜನರಿಗೆ ಊರಿನ ನೆನಪು ಬಾರದಿರುವಂತೆ ಇಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ನಾವೆಲ್ಲ ಉತ್ಸಾಹದಿಂದ ನಮ್ಮ ಸಂಸ್ಥೆಯನ್ನು ಬೆಳೆಸಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು. ದೇವಾಡಿಗ ಸಂಘದ ಪರವಾಗಿ ಮಾತನಾಡಿದ ಪ್ರಭಾಕರ ದೇವಾಡಿಗ ಅವರು ಸಂಘ ನಡೆದು ಬಂದ ಸಾಧನೆಯನ್ನು ವಿವರಿಸಿ ಹಿರಿಯರ ನಡೆಯಲ್ಲಿ ಸಂಘದ ಅಭಿವೃದ್ಧಿಗೆ ಎಲ್ಲರೂ ಯಥಾಸಾಧ್ಯ ಶ್ರಮಿಸುತ್ತಿದೆ. ವೈದ್ಯಕೀಯ,ಸಾಮಾಜಿಕ, ಕ್ರೀಡೆಗೆ ವಿಶೇಷ ಉತ್ತೇಜನ ನೀಡುತ್ತಿದೆ ಎಂದರು. ಬಂಟರ ಸಂಘದ ಪರವಾಗಿ ಬಂಟರವಾಣಿಯ ಪ್ರಧಾನ ಸಂಪಾದಕರಾದ ಅಶೋಕ್ ಪಕ್ಕಳ ಅವರು ಮಾತನಾಡುತ್ತಾ ಬಂಟರ ಸಂಘ ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಎಸ್.ಎಂ ಶೆಟ್ಟಿ ಶಿಕ್ಷಣ ಸಂಕುಲದಲ್ಲಿ ಸುಮಾರು ಒಂಭತ್ತು ಸಾವಿರ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ.
ಬೊರಿವಲಿಯಲ್ಲಿ 170 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶಿಕ್ಷಣ ಸಂಸ್ಥೆ ಇವೆಲ್ಲವೂ ದೊಡ್ಡ ಕೆಲಸ. ಇವೆಲ್ಲದರ ಜೊತೆಯಲ್ಲಿ ಜ್ಞಾನ ಮಂದಿರ, ವೃದ್ಧಾಶ್ರಮ, ಮಹಿಳಾ ವಿಭಾಗ, ಯುವ ವಿಭಾಗದ ಕಾರ್ಯಚಟುವಟಿಕೆಗಳು, ಕೋಟ್ಯಾಂತರ ರೂಪಾಯಿಯ ವಿದ್ಯಾರ್ಥಿವೇತನ ವಿತರಣೆ ಹೀಗೆ ಬಂಟರ ಸಂಘ ಸಾಮಾಜಿಕ, ಧಾರ್ಮಿಕ ಆರ್ಥಿಕ ಕ್ಷೇತ್ರಗಳಲ್ಲಿಯೂ ತಮ್ಮದೇ ಆದ ಛಾಪನ್ನು ಬೀರುತ್ತಾ ಬಂದಿದೆ ಎಂದು ಸಂಘವನ್ನು ಬೆಳೆಸಿದ ಎಲ್ಲ ಅಧ್ಯಕ್ಷರನ್ನು ಪಧಾದಿಕಾರಿಗಳನ್ನು ಸ್ಮರಿಸಿದರು. ಮುಂಬೈ ಕನ್ನಡ ಸಂಘ ಸಂಸ್ಥೆಗಳ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಸವಿತಾ ಅರುಣ್ ಶೆಟ್ಟಿ, ಅಶೋಕ್ ಸುವರ್ಣ, ಪ್ರತಿಭಾ ರಾವ್, ಸುರೇಖಾ ದೇವಾಡಿಗ, ನಳಿನಾ ಪ್ರಸಾದ್, ರಾಜಶ್ರೀ ಶೆಟ್ಟಿ ಪಾಲ್ಗೊಂಡಿದ್ದರು. ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಕಾರ್ಯಕ್ರಮವನ್ನು ಸಂಯೋಜಿಸಿ, ನಿರೂಪಿಸಿದರು. ಸಾಹಿತ್ಯಾಸಕ್ತರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು. ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.