ಬ್ರಹ್ಮಾವರ ಸೆ. 20 ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯನ್ನು ಆಯೋಜಿಸಲಾಗಿತ್ತು. ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಯುತ ಮುನಿರಾಜ್ ರೆಂಜಾಳರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅವರು ಮಾತನಾಡಿ ಮಕ್ಕಳನ್ನು ಶಾಲೆಗೆ ಸೇರಿಸಿದ ಮಾತ್ರಕ್ಕೆ ಪೋಷಕರು ಕರ್ತವ್ಯ ಮುಗಿಯಿತು ಅಂದುಕೊಳ್ಳದೇ ಅವರು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ತಿಳಿಸಿದರು. ಮಕ್ಕಳ ಭವಿಷ್ಯಕ್ಕಾಗಿ ಮೌಲ್ಯಯುತ ಶಿಕ್ಷಣ ನೀಡಿ, ಋಣಪ್ರಜ್ಞೆಯ ಮತ್ತು ದೇವರ ಅಸ್ತಿತ್ವದ ಭಾವನೆಯನ್ನು ಮೂಡಿಸಿ ಮಕ್ಕಳಲ್ಲಿ ಧನಾತ್ಮಕ ಚಿಂತನೆಗಳನ್ನು ಬೆಳೆಸಬೇಕೆಂದು ತಿಳಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಪ್ರಕಾಶ್ಚಂದ್ರ ಶೆಟ್ಟಿಯವರು ಮಾತನಾಡಿ ನಮ್ಮ ವಿದ್ಯಾಸಂಸ್ಥೆಯು ಮಕ್ಕಳ ಜೀವನೋಪಾಯಕ್ಕಾಗಿ ಮಾತ್ರ ಶಿಕ್ಷಣ ನೀಡದೇ ಅವರ ಉತ್ತಮ ಜೀವನಕ್ಕಾಗಿ ಸಂಸ್ಕಾರದ ಜೊತೆಗೆ ಜ್ಞಾನವನ್ನು ನೀಡುತ್ತಿದೆಯೆಂದು ತಿಳಿಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ರವರು ಪೋಷಕರ ಪ್ರಶ್ನೆಗಳಿಗೆ ಉತ್ತರಿಸಿ, ಅತಿಥಿಗಳು ಪೋಷಕರಿಗೆ ನೀಡಿದ ಸಲಹೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಡಾ. ಅನೂಷಾ ಸುಬ್ರಹ್ಮಣ್ಯಂ ಮಾತನಾಡಿ ಪೋಷಕರು ಮಕ್ಕಳ ಅಭಿವೃದ್ಧಿಯಲ್ಲಿ ಸಂಸ್ಥೆಯೊಂದಿಗೆ ಕೈ ಜೋಡಿಸಬೇಕೆಂದರು ಹಾಗೂ ಉಪಾಧ್ಯಕ್ಷೆ ಶ್ರೀಮತಿ ರೇವತಿ ಕೆ. ಶಾಲಾ ಕಾರ್ಯಚಟುವಟಿಕೆಗಳನ್ನು ಪ್ರಶಂಶಿಸಿದರು. ಸಂಸ್ಥೆಯಿಂದ ನಿವೃತ್ತಿಗೊಂಡ ಶಿಕ್ಷಕಿಯರಾದ ಶ್ರೀಮತಿ ಗೀತಾ ಕಲ್ಕೂರ ಮತ್ತು ಶ್ರೀಮತಿ ಜಯಲಕ್ಷ್ಮೀ ಹೆಗ್ಡೆ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಚಟುವಟಿಕೆಗಳ ಮುಖ್ಯಾಂಶಗಳನ್ನು ವಿಭಾಗದ ಮುಖ್ಯಸ್ಥರಾದ ಶಿಕ್ಷಕ ಸೆಬಾಸ್ಟಿಯನ್ ಪಿ ಎಮ್ ಅವರು ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳ ಪೋಷಕರು ವಿದ್ಯಾಸಂಸ್ಥೆಯ ಕುರಿತು ತಮ್ಮ ಅಭಿಪ್ರಾಯ ಮಂಡಿಸಿ, ಸಲಹೆಯನ್ನು ನೀಡಿ ಸಂಸ್ಥೆಯ ಕಾರ್ಯ ವೈಖರಿಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದ ಹಾಗೂ ಪೋಷಕರು ಉಪಸ್ಥಿತರಿದ್ದರು.






































































































