ಸಮಾಜ ಸೇವಾ ಸಂಘ ಸಂಸ್ಥೆಗಳು ತಮ್ಮ ವರ್ಷಂಪ್ರತಿ ಸರಣಿ ಕಾರ್ಯಕ್ರಮ ಸಮಾರಂಭಗಳಲ್ಲಿ ಬಾಷೆ ಸಂಸ್ಕೃತಿ ಸಂಪ್ರದಾಯವನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡಬೇಕು. ಇದನ್ನು ನಮ್ಮ ಯುವ ಪೀಳಿಗೆ ಅನುಸರಿಸಿ ಮುಂದುವರಿಸಲು ಸಾಧ್ಯ ಎಂದು ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ ಡಾ| ಎ ಸದಾನಂದ ಶೆಟ್ಟಿ ಅಭಿಪ್ರಾಯ ಪಟ್ಟರು. ಅವರು ಟ್ರಸ್ಟಿನ ವತಿಯಿಂದ ಮರವೂರು ಗ್ರಾಂಡ್ ಬೇನಲ್ಲಿ ನಡೆದ ಮರಿಯಲದ ಮಿನದನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿಯಾಗಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಮಾತನಾಡಿ, ನಮ್ಮ ಪೂರ್ವಜರು ನಡೆಸಿಕೊಂಡು ಬಂದಿದ್ದ ಈ ಆಚರಣೆಗಳು, ಆಹಾರ ಪದ್ಧತಿಗಳು ರೋಗ ಮುಕ್ತ ಜೀವನಕ್ಕೆ ಹಾಗೂ ದೀರ್ಘಾಯುಷ್ಯಕ್ಕೆ ದಾರಿ ಎಂದರು. ಟ್ರಸ್ಟಿನ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಡಾ| ಅತ್ತೂರು ಸದಾನಂದ ಶೆಟ್ಟಿ ಅವರು ಶಿಕ್ಷಣ, ಕ್ರೀಡಾಕ್ಷೇತ್ರದಲ್ಲಿ ಜಿಲ್ಲೆಗೆ ನೀಡಿದ ಕೊಡುಗೆ ಶ್ಲಾಘನೀಯ ಎಂದರು.

ಮಂಗಳೂರು ವಿವಿಯಿಂದ ಡಾಕ್ಟರೇಟ್ ಗೌರವ ಪುರಸ್ಕೃತರಾದ ಉದ್ಯಮಿ ಡಾ| ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಅಂತರಾಷ್ಟ್ರೀಯ ವೃತ್ತಿಪರ ಕಾರ್ ಕೋಡ್ರೈವರ್ ಎಮ್ ಅಶ್ವಿನ್ ನಾಯ್ಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಕನ್ಯಾನ ಸದಾಶಿವ ಶೆಟ್ಟಿ ಅವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆಯನ್ನು ಸಾರ್ವಜನಿಕರು, ಸಂಘ ಸಂಸ್ಥೆಗಳು ಗಮನಿಸಿ ಗೌರವ ನೀಡುತ್ತಿರುವುದು ಸಂತಸ ತಂದಿದೆ. ಟ್ರಸ್ಟಿನ ಕಾರ್ಯಕ್ರಮಗಳು ಪ್ರಶಂಸನೀಯ ಎಂದರು. ಮರಿಯಲದ ಮಿನದನ ಸಮಾರಂಭವನ್ನು ನಾಗರತ್ನ ಚಿತ್ತರಂಜನ್ ರೈ ಉದ್ಘಾಟಿಸಿ ಕ್ರೀಡೆ ಹಾಗೂ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ವಿವಿಧ ಕ್ರೀಡೆಗಳ ವಿಜೇತರಿಗೆ ಗುರ್ಮೆ ಸುರೇಶ್ ಶೆಟ್ಟಿ ಬಹುಮಾನ ವಿತರಿಸಿದರು.
ಟ್ರಸ್ಟಿನ ಕಾರ್ಯಾಧ್ಯಕ್ಷ ದೇವಿಚರಣ್ ಶೆಟ್ಟಿ, ಸಂತೋಷ್ ಶೆಟ್ಟಿ ಪಡುಬಿದ್ರಿ, ಪ್ರಸಾದ್ ರೈ ಕಲ್ಲಿಮಾರು, ಎಸ್ಪಿ ದಿನಕರ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ನಗ್ರಿಗುತ್ತು ವಿವೇಕ್ ಶೆಟ್ಟಿ, ವಿಜಯಲಕ್ಷ್ಮಿ ಬಿ ಶೆಟ್ಟಿ, ಲಕ್ಷ್ಮಿ ಪ್ರಸಾದ್ ರೈ, ಸಿಎಸ್ ಭಂಡಾರಿ, ವಸಂತ ಶೆಟ್ಟಿ, ರಾಮಚಂದ್ರ ಆಳ್ವ, ವಿವಿಧ ಬಂಟರ ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಘಟನಾ ಕಾರ್ಯದರ್ಶಿ ರಾಜಗೋಪಾಲ ರೈ ಸ್ವಾಗತಿಸಿ, ಪ್ರದೀಪ ಆಳ್ವ ಕದ್ರಿ ವಂದಿಸಿದರು. ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು.