ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ, ಪತ್ರಿಕೋದ್ಯಮದಲ್ಲಿ ಕಳೆದ 38 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಅವರು ಸುರತ್ಕಲ್ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 1987 ರಲ್ಲಿ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ‘ಮುಂಗಾರು’ ಕನ್ನಡ ದಿನ ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಪಾದಾರ್ಪಣೆ ಮಾಡಿದ ಬಳಿಕ ಹೊಸಸಂಜೆ, ಕರಾವಳಿ ಮಿತ್ರ, ಕರಾವಳಿ ಮಾರುತದಲ್ಲಿ ಕಾರ್ಯ ನಿರ್ವಹಿಸಿದರು. ಪ್ರಸ್ತುತ ಜಯಕಿರಣ ಕನ್ನಡ ದೈನಿಕದಲ್ಲಿ ಕಳೆದ 20 ವರ್ಷಗಳಿಂದ ಪ್ರಧಾನ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಂಗ ಚಾವಡಿ ಎಂಬ ಸಾಂಸ್ಕೃತಿಕ, ಸಾಮಾಜಿಕ ಸಂಸ್ಥೆಯನ್ನು ಕಟ್ಟಿ ಹಲವಾರು ವರ್ಷಗಳಿಂದ ಕಲಾ ಸಾಧಕರಿಗೆ ಪ್ರಶಸ್ತಿ ನೀಡುತ್ತಾ ಬರುತ್ತಿರುವ ಜಗನ್ನಾಥ ಶೆಟ್ಟಿಯವರಿಗೆ 2008 ರಲ್ಲಿ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2017 ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ. 2018 ರಲ್ಲಿ ಅಬುದಾಭಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಪ್ರಶಸ್ತಿ ಲಭಿಸಿದೆ.

2011 ರಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, 2021 ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಜಗನ್ನಾಥ ಶೆಟ್ಟಿಯವರು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕೇಂದ್ರೀಯ ಘಟಕದಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜೀ ಅಧ್ಯಕ್ಷರಾಗಿ, ಪ್ರೆಸ್ ಕ್ಲಬ್ ನಲ್ಲಿ ಉಪಾಧ್ಯಕ್ಷರಾಗಿ, ಪತ್ರಿಕಾಭವನ ಟ್ರಸ್ಟ್ ನಲ್ಲಿ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಂಟರ ಯಾನೆ ನಾಡವರ ಮಾತೃ ಸಂಘದಲ್ಲಿ ನಾಲ್ಕು ಬಾರಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಸುರತ್ಕಲ್ ಬಂಟರ ಸಂಘದಲ್ಲಿ 29 ವರ್ಷಗಳಲ್ಲಿ ನಿರ್ದೇಶಕರಾಗಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಸಂಘಟನಾ ಕಾರ್ಯದರ್ಶಿಯಾಗಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಬಾಳ ಜಗನ್ನಾಥ ಶೆಟ್ಟಿ ಅವರು ಈಗ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.