ಅಸ್ತ್ರ ಪ್ರೊಡಕ್ಷನ್ ಲಾಂಛನದಲ್ಲಿ ಸ್ವರಾಜ್ ಶೆಟ್ಟಿ ನಿರ್ದೇಶನದಲ್ಲಿ ಲಂಚುಲಾಲ್ ಕೆ.ಎಸ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ‘ನೆತ್ತರೆಕೆರೆ’ ತುಳು ಸಿನಿಮಾದ ಟೀಸರ್ ಬಿಡುಗಡೆಗೊಂಡಿದ್ದು, ಸಿನಿಮಾ ರಂಗದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ. ನೆತ್ತರಕೆರೆ ವಿಭಿನ್ನ ಬಗೆಯ ಕಮರ್ಷಿಯಲ್ ಚಿತ್ರವಾಗಿದ್ದು ಪಾತ್ರಗಳು ಭಿನ್ನವಾಗಿದೆ. ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿ ಕಾತರ, ಕುತೂಹಲ ಹೆಚ್ಚಿದೆ. ಹೀಗಾಗಿ ಸಿನಿಮಾವನ್ನು ಜೂನ್ ಕೊನೆಯ ವಾರದಲ್ಲಿ ತೆರೆ ಕಾಣಿಸಲು ಚಿತ್ರ ತಂಡ ಸಿದ್ದತೆ ಮಾಡಿಕೊಂಡಿದೆ. ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಸಿನಿಮಾಕ್ಕೆ ಚೇಳಾರ್, ಮುಲ್ಕಿ, ಕಿನ್ನಿಗೋಳಿಯಲ್ಲಿ ಚಿತ್ರೀಕರಣಗೊಂಡಿದೆ.ಸ್ವರಾಜ್ ಶೆಟ್ಟಿ ಸಿನಿಮಾಕ್ಕೆ ಚಿತ್ರಕತೆ , ಸಂಭಾಷಣೆಯೊಂದಿಗೆ ನಿರ್ದೇಶನದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರಲ್ಲದೆ ನಾಯಕ ನಟನಾಗಿಯೂ ಅಭಿನಯಿಸಿದ್ದಾರೆ. ನಾಯಕಿಯಾಗಿ ದಿಶಾಲಿ ಪೂಜಾರಿ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಸುಮನ್ ತಲ್ವಾರ್, ಲಂಚುಲಾಲ್ ಕೆ.ಎಸ್ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಪೃಥ್ವಿನ್ ಪೊಳಲಿ, ಯುವ ಶೆಟ್ಟಿ, ಅನಿಲ್ ಉಪ್ಪಳ, ಪುಷ್ಪರಾಜ್ ಬೊಳ್ಳಾರು, ವಿಜಯ ಮಯ್ಯ, ನೀತ್ ಪೂಜಾರಿ, ಉತ್ಸವ್ ವಾಮಂಜೂರು, ಚಂದ್ರಶೇಖರ ಸಿದ್ದಕಟ್ಟೆ, ಮನೀಶ್ ಶೆಟ್ಟಿ, ಭವ್ಯಾ ಪೂಜಾರಿ, ನಮಿತ ಕಿರಣ್, ಸುನೀತಾ, ವಿನಾಯಕ್ ಜಪ್ಪು, ಭಗವಾನ್, ಕೀರ್ತನ್ ಮುಲ್ಕಿ ಇದ್ದಾರೆ. ಸಿನಿಮಾ ತುಳುವಿನ ಜೊತೆಗೆ ಬೇರೆ ಭಾಷೆಗಳಲ್ಲೂ ಬಿಡುಗಡೆಯಾಗಲಿದ್ದು, ಇದೊಂದು ಪಾನ್ ಇಂಡಿಯಾ ಸಿನಿಮಾ ಆಗಿದೆ.
