ವಿದ್ಯಾಗಿರಿ: ಸಂಶೋಧನಾ ಪ್ರಸ್ತಾವನೆಯನ್ನು ಬರೆಯುವ ಮುನ್ನ ಬಾಹ್ಯ ನಿಧಿಯ ಕುರಿತು ಅರಿತುಕೊಳ್ಳುವುದು ಹೆಚ್ಚು ಅವಶ್ಯ ಎಂದು ಕೋಟ ಜನತಾ ಫಿಶ್ ಮಿಲ್ ಮತ್ತು ಆಯಿಲ್ ಉತ್ಪನ್ನಗಳ ವಿಭಾಗದ ಹಿರಿಯ ವ್ಯವಸ್ಥಾಪಕ ಡಾ ಚಂದ್ರ ಎಂ ವಿ ಹೇಳಿದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಸ್ನಾತಕೋತ್ತರ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ವತಿಯಿಂದ ರಾಷ್ಟೀಯ ತಂತ್ರಜ್ಞಾನ ದಿನದ ಅಂಗವಾಗಿ ಮಂಗಳವಾರ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡ ‘ನ್ಯೂಟ್ರಿಗೇಟ್: ವೈದ್ಯಕೀಯ ಒಳನೋಟಗಳು ಮತ್ತು ಉತ್ಪನ್ನ ನಾವೀನ್ಯತೆಗಳ ಪ್ರದರ್ಶನ ಕುರಿತು ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಶೋಧನೆಯ ಮೊದಲ ಹಂತವಾಗಿ ಸೂಕ್ತ ಫಂಡಿಂಗ್ ಏಜೆನ್ಸಿಯನ್ನು ಗುರುತಿಸಿ, ಯೋಜನಾ ಅಭಿವೃದ್ಧಿ ಮತ್ತು ಪ್ರಾಯೋಜಕ ವ್ಯವಸ್ಥೆಯ ಮುಖ್ಯ ಕೌಶಲ್ಯಗಳನ್ನು ಅರ್ಥ ಮಾಡಿಕೊಂಡು, ಬಳಿಕ ಸಂಶೋಧನಾ ಪ್ರಸ್ತಾವನೆಯನ್ನು ಬರೆಯಲು ಮುಂದಾಗಬೇಕು ಎಂದು ತಿಳಿಸಿದರು. ಬಹುಮುಖ್ಯವಾಗಿ ಸಂಶೋಧನಾ ಪ್ರಸ್ತಾವನೆಯ ಆರಂಭಿಕ ಹಂತದಲ್ಲಿಯೇ ನಿರ್ವಹಣಾ ಮತ್ತು ತಾಂತ್ರಿಕ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು.ಸಂಶೋಧನೆಯಲ್ಲಿ ಸಾಹಿತ್ಯ ವಿಮರ್ಶಿಸುವ ಸಂದರ್ಭದಲ್ಲಿ ಭಾರತೀಯ ವಿಜ್ಞಾನಿಗಳಿಗೆ ಮೊದಲ ಆದ್ಯತೆ ಇರಲಿ ಎಂದರು. ಪ್ರತಿ ಸಂಶೋಧನಾ ಅಭ್ಯರ್ಥಿಗಳು ತಮ್ಮ ಸಂಶೋಧನಾ ಪ್ರಸ್ತಾವನೆ ಅಭಿವೃದ್ಧಿ ರಚನೆಯ ಹಂತಗಳನ್ನು ಅರಿತಿರಬೇಕು. ಪ್ರಸ್ತಾವನೆಯಲ್ಲಿ ಅತಿ ಮುಖ್ಯವಾಗಿ ಶೀರ್ಷಿಕೆ, ಮುನ್ನುಡಿ, ತಾರ್ಕಿಕ ವಿವರಣೆ , ಸಂಶೋಧನಾ ವಿಧಾನಗಳು, ವರ್ಕ್ ಬಜೆಟ್ ಅಂಶಗಳು ಸವಿಸ್ತಾರವಾಗಿ ಒಳಗೊಂಡಿರತಕ್ಕದ್ದು ಎಂದು ಸಲಹೆ ನೀಡಿದರು. ಸಂಶೋಧನೆಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ಪಟ್ಟಿ ಮಾಡಿ ಹಾಗೂ ಪ್ರತಿಯೊಂದು ಚಟುವಟಿಕೆಗೆ ಸ್ಪಷ್ಟವಾದ ವಿಧಾನಗಳನ್ನು ನೀಡುವುದು ಹೆಚ್ಚು ಸೂಕ್ತ ಎಂದು ಹೇಳಿದರು.

ಬಳಿಕ, ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ ವಿಶೇಷ ಸುದ್ದಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ನಡೆಸಿದ ಪ್ರಬಂಧ ಪ್ರಸ್ತುತಿಯಲ್ಲಿ ವಿಜೇತರಾದ ವಿಭಾಗದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಆಳ್ವಾಸ್ ಸ್ನಾತಕೋತ್ತರ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ಮುಖ್ಯಸ್ಥೆ ಡಾ ಅರ್ಚನಾ ಪ್ರಭಾತ್ , ಆಳ್ವಾಸ್ (ಸ್ವಾಯತ್ತ ) ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಪದವಿ ಮತ್ತು ಸ್ನಾತಕೋತ್ತರ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಸಿರಿ ವಸವಿ ನಿರೂಪಿಸಿ, ವಿದ್ಯಾರ್ಥಿನಿ ನವಮಿ ಪ್ರಶಾಂತ್ ವಂದಿಸಿದರು.