ಮೂಡುಬಿದಿರೆ: ಆಳ್ವಾಸ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ವತಿಯಿಂದ ಅಳ್ವಾಸ್ನ ಕುವೆಂಪು ಸಭಾಂಗಣದಲ್ಲಿ ಒಂದು ದಿನದ ರಾಷ್ಟ್ರಿಯ ಸಮ್ಮೇಳನ ‘’ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್-ಗ್ಲೋಬಲ್ ಥ್ರೆಟ್ಸ್, ಲೋಕಲ್ ಆ್ಯಕ್ಷನ್ಸ್, ಒನ್ ಹೆಲ್ತ್ ಸೊಲ್ಯೂಷನ್ಸ್-2025’’ (ಎಎಂಆರ್-ಜಿಎಲ್ಒಎಚ್) ನಡೆಯಿತು. ಕರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತುಮಕೂರು ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಬಿ ಪ್ರಕಾಶ್, ಆಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ ಎಂಬುದು ವೈರಸ್, ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ಪರೋಪಜೀವಿಗಳು ಮೊದಲಾದ ಸೂಕ್ಷ್ಮಾಣುಗಳು ಔಷಧಿಗಳಿಗೆ ಪ್ರತಿರೋಧವನ್ನು ತೋರಿಸುವ ಸಾಮರ್ಥ್ಯವನ್ನು ಹೊಂದಿದ ಸ್ಥಿತಿಯಾಗಿದೆ. 2011 ರಲ್ಲಿಯೇ ವಿಶ್ವ ಆರೋಗ್ಯ ಸಂಸ್ಥೆಯು “ಆಂಟಿ ಮೈಕ್ರೊಬಿಯಲ್ ಪ್ರತಿರೋಧವನ್ನು-ಇಂದು ಕ್ರಮವಿಲ್ಲದಿದ್ದರೆ, ನಾಳೆ ಚಿಕಿತ್ಸೆ ಇಲ್ಲ’’ ಎಂಬ ಘೋಷವಾಕ್ಯದೊಂದಿಗೆ ಜಾಗೃತಿಯನ್ನು ಮೂಡಿಸುವ ಕೆಲಸ ಮಾಡಿತ್ತು. ಇಂದು ಆಳ್ವಾಸ್ ಸಂಸ್ಥೆಯು ಆಂಟಿ ಮೈಕ್ರೊಬಿಯಲ್ ಪ್ರತಿರೋಧದ ಕುರಿತು ಹೆಚ್ಚಿನ ಜ್ಞಾನವನ್ನು ನೀಡುವ ಸಲುವಾಗಿ ಈ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.

ಆರೋಗ್ಯವೃತ್ತಿಪರರಾಗಿ ನಾವು ಈ ಎಲ್ಲಾ ಆಂಟಿ ಮೈಕ್ರೊಬಿಯಲ್ ಪ್ರತಿರೋಧದ ಸಮಗ್ರ ಮಾಹಿತಿಯನ್ನು ಪಡೆದುಕೊಂಡು, ಅದು ಹೇಗೆ ಪರಿಣಾಮ ಬೀರುತ್ತದೆ ಮತ್ತು ಪ್ರತಿರೋಧವನ್ನು ಹೇಗೆ ಎದುರಿಸುವುದು ಎನ್ನುದರ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದರು. ಪ್ರತಿ ವರ್ಷ ನವೆಂಬರ್ 18 ರಿಂದ 24 ರವರೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಭಿಯಾನವನ್ನು “ವಿಶ್ವ ಎಎಂಆರ್ ಜಾಗೃತಿ ವಾರ” ವಾಗಿ ಆಚರಿಸಲಾಗುತ್ತದೆ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ. ವಿನಯ್ ಆಳ್ವ ಮಾತನಾಡಿ, ನಮ್ಮ ದೇಶಕ್ಕೂ, ನಮ್ಮ ದೇಹಕ್ಕೂ ಹೆಚ್ಚು ವ್ಯತ್ಯಾಸವಿಲ್ಲ. ಮಿಲಿಟರಿ, ನ್ಯಾಯಾಂಗ, ಕರ್ಯಾಂಗ ಇತ್ಯಾದಿಗಳನ್ನು ಬಳಸಿಕೊಂಡು ನಾವು ನಮ್ಮ ದೇಶವನ್ನು ಹೇಗೆ ರಕ್ಷಿಸುತ್ತೇವೆಯೋ, ಅಂತೆಯೇ ನಮ್ಮ ದೇಹವನ್ನು ರಕ್ಷಿಸಲು ವಿವಿಧ ವೈದ್ಯಕೀಯ ವಿಜ್ಞಾನಗಳಾದ ಆಲೋಪಥಿ ಔಷಧ, ರ್ಯಾಯ ಮೆಡಿಸಿನ್ ಹಾಗೂ ಡಯಟ್ನಂತಹ ವ್ಯವಸ್ಥೆಗಳನ್ನು ಅವಲಂಬಿಸಬೇಕಾಗುತ್ತದೆ. ಒಂದು ದೇಶ ಹೇಗೆ ತನ್ನ ಸಂಪನ್ಮೂಲಭರಿತ ಜನಸಂಖ್ಯೆಯಿ0ದ ಅಸ್ತಿತ್ವ ಪಡೆದುಕೊಳ್ಳುತ್ತದೆಯೋ, ಅಂತೆಯೇ ನಮ್ಮ ದೇಹವು ಆರೋಗ್ಯವಾಗಿದ್ದರೆ ಮಾತ್ರ ಅಸ್ತಿತ್ವದಲ್ಲಿರುತ್ತದೆ ಎಂದರು. ಜಾಗತಿಕ ಮಾರುಕಟ್ಟೆಯ ವ್ಯವಸ್ಥೆಯಿಂದಾಗಿ ಇಂದು ಆರೋಗ್ಯ ಸಮಸ್ಯೆಗಳು ಉಲ್ಬಣವಾಗುತ್ತಿವೆ. ಈ ಜಾಗತಿಕ ಬೆದರಿಕೆಯನ್ನು ನಾವು ಸ್ಥಳೀಯವಾಗಿ ಹೇಗೆ ಎದುರಿಸುತ್ತೇವೆ? ನಮ್ಮ ಸ್ಥಳೀಯ ಜ್ಞಾನದ ಮೂಲಕ ಪರಿಹಾರವನ್ನು ಹೇಗೆ ಪಡೆಯುತ್ತೇವೆ ಎಂಬುದು ಸಮ್ಮೇಳನದ ಮೂಲಕ ಚರ್ಚೆಯಾಗಲಿ ಎಂದರು .
ಉದ್ಘಾಟನೆಯ ಬಳಿಕ ಡಿಜಿಟಲ್ ಸ್ಮರಣಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ರಾಜ್ಯ ಎಎಂಆರ್ ಸೆಲ್ನ ನೋಡಲ್ ಅಧಿಕಾರಿ ಡಾ.ಉಮಾ. ಎಂ ಪ್ರಸ್ತಾವಿಕ ನುಡಿಗಳನ್ನಾಡಿದರು. ಅಮೇರಿಕಾದ ಸಂಶೋಧನಾ ವಿಶ್ಲೇಷಕ ಡಾ. ಶಿವನಂದ್ ಸಾವಟಗಿ, ನವದೆಹಲಿಯ ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯ (ಪಥ್) ಡಾ. ತಿಕೇಶ್ ಬಿಸನ್, ಗುಜರಾತ್ ತಾಂತ್ರಿಕ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಡೊಲಾತ್ಸಿನ್ ಝಲಾ, ಎ.ಜೆ. ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಸಹಪ್ರಾಧ್ಯಾಪಕಿ ಡಾ. ರೂಪಾ ಎಸ್ ಭಂಡಾರಿ, ಆಳ್ವಾಸ್ ಕಾಲೇಜ್ ಆಫ್ ನರ್ಸಿಂಗ್ನ ಸಹ ಪ್ರಾಧ್ಯಾಪಕಿ ನಿಕ್ಕಿ ಎನ್.ಎಂ ವಿವಿಧ ವಿಷಯಗಳಲ್ಲಿ ಗೋಷ್ಠಿಯನ್ನು ನಡೆಸಿಕೊಟ್ಟರು. ಆಳ್ವಾಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಯತಿಕುಮಾರಸ್ವಾಮಿಗೌಡ, ಸಂಘಟನಾ ಕಾರ್ಯದರ್ಶಿ ಪ್ರೊ. ಕವಿತಾ ಡಿ’ಸಿಲ್ವಾ ಉಪಸ್ಥಿತರಿದ್ದರು. ಆಳ್ವಾಸ್ ನರ್ಸಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕಿ ನಿಕ್ಕಿ ಎನ್.ಎಂ ನಿರೂಪಿಸಿ, ಉಪ ಪ್ರಾಂಶುಪಾಲೆ ಪ್ರೊ. ರೇಣುಕಾ ಭಂಡಾರಿ ವಂದಿಸಿದರು.