ಖ್ಯಾತ ಲೇಖಕ, ಸಾಹಿತಿ, ನಿವೃತ್ತ ಬ್ಯಾಂಕ್ ಅಧಿಕಾರಿ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ ಅವರು ಸುವರ್ಣ ಸಂಭ್ರಮದ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ತನ್ನ 50ನೇ ವರ್ಷಾಚರಣೆ ಸಂದರ್ಭದಲ್ಲಿ 2024- 25 ನೇ ಸಾಲಿನ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಭಾರತೀಯ ಪ್ರಜೆಗಳಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡುತ್ತಿದೆ.

ಉಡುಪಿ ಜಿಲ್ಲೆಯ ಚೇರ್ಕಾಡಿ ಗ್ರಾಮದ ಸಚ್ಚಿದಾನಂದ ಶೆಟ್ಟಿಯವರು ತಮ್ಮ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಚೇರ್ಕಾಡಿಯಲ್ಲಿ ಪೂರೈಸಿ ಪದವಿ ವ್ಯಾಸಂಗವನ್ನು ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ಮುಗಿಸಿ, 1976ರಲ್ಲಿ ವಿಜಯಾ ಬ್ಯಾಂಕಿಗೆ ಸೇರ್ಪಡೆಗೊಂಡು ಸೇವೆಯಲ್ಲಿರುವಾಗಲೇ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕ ಪದವಿಯನ್ನು ಗಳಿಸಿದರು. ತದನಂತರ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಕಾನೂನು ವ್ಯಾಸಂಗವನ್ನು ಪೂರೈಸಿ ಮುಂದೆ ಐಬಿಐ ನಿರ್ವಹಿಸುವ ಪ್ರತಿಷ್ಠಿತ ಬ್ಯಾಂಕಿಂಗ್ ನ ಸಿಎಐಐಬಿ ಪದವಿಯನ್ನು ಪಡೆದುಕೊಳ್ಳುತ್ತಾರೆ. ಬ್ಯಾಂಕ್ ನಲ್ಲಿನ ಸುದೀರ್ಘ 39 ವರ್ಷ ಸೇವೆಯಲ್ಲಿ ದೇಶ ಉದ್ದಗಲಗಳ ಆರು ರಾಜ್ಯಗಳಲ್ಲಿ ಸೇವೆಯನ್ನು ಸಲ್ಲಿಸಿ ಬ್ಯಾಂಕಿನ ಅತಿ ದೊಡ್ಡ ಶಾಖೆಯಾದ ಕನ್ನಾಟ್ ಪ್ಲೇಸ್ ಶಾಖೆಯಲ್ಲಿ ಮುಖ್ಯ ಪ್ರಬಂಧಕರಾಗಿ ನಿವೃತ್ತರಾಗುತ್ತಾರೆ. ಇದೀಗ ಎರಡು ವಿಶ್ವ ವಿದ್ಯಾನಿಲಯಗಳು ಮತ್ತು ಮೂರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಯುತರು ಹವ್ಯಾಸಿ ಬರಹಗಾರರು ಮತ್ತು ಉತ್ತಮ ಸಾಹಿತಿ. ಬ್ಯಾಂಕಿನ ಸೇವೆಯಿಂದ ನಿವೃತ್ತರಾದ ಬಳಿಕ ಕಳೆದ 12 ವರ್ಷಗಳಲ್ಲಿ ಬರವಣಿಗೆ ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಈ ತನಕ ಉದಯವಾಣಿ, ವಿಶ್ವವಾಣಿ, ಹೊಸದಿಗಂತ, ವಿಜಯವಾಣಿ, ವಿಜಯ ಕರ್ನಾಟಕ ದಿನ ಪತ್ರಿಕೆಗಳಲ್ಲಿಯೂ ನಮ್ಮ ಸಂಪರ್ಕ, ಸಮಾಜಮುಖಿ, ತರಂಗ, ಸುಧಾ, ಮತ್ತಿತರ ಮಾಸಿಕ ಮತ್ತು ಸಾಪ್ತಾಹಿಕಗಳಲ್ಲಿ ಒಟ್ಟು 400ಕ್ಕೂ ಮಿಕ್ಕಿದ ಇವರ ಲೇಖನಗಳು ಪ್ರಕಟವಾಗಿವೆ. ಇವರು ಬರೆದ ಆರ್ಥಿಕತೆ, ಬ್ಯಾಂಕಿಂಗ್, ಪರಿಸರ, ಶೈಕ್ಷಣಿಕ, ಪ್ರಕೃತಿ, ಪರಿಸರ ಮತ್ತು ಪ್ರಚಲಿತ ವಿಷಯಗಳು ವೈಚಾರಿಕತೆಯ ನೆಲೆಯಲ್ಲಿ ಓದುಗರ ಮೆಚ್ಚುಗೆಗೆ ಪಾತ್ರವಾಗಿರುತ್ತದೆ.‘ಪ್ರಕೃತಿಯೇ ಮಹಾಮಾತೆ’ ಯೆಂಬ 200 ಪುಟಗಳ ಪುಸ್ತಕವನ್ನು ಬರೆದಿರುತ್ತಾರೆ. ಈ ಪುಸ್ತಕವು ಸ್ವಲ್ಪ ಕಾಲದ ಅಂತರದಲ್ಲಿಯೇ ಪರಿಷ್ಕೃತ ದ್ವಿತೀಯ ಮುದ್ರಣದೊಂದಿಗೆ ಪ್ರಕಟಗೊಂಡಿದೆ. ಈ ಪುಸ್ತಕವು ವಿದ್ಯಾರ್ಥಿಗಳು, ಅಧ್ಯಾಪಕರು, ಜವಾಬ್ದಾರಿಯುತ ನಾಗರಿಕರೆಲ್ಲರಿಗೂ ಕೈಪಿಡಿಯಂತೆ ಮೂಡಿ ಬಂದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯವರು ಈ ಪುಸ್ತಕದ ಬಗ್ಗೆ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಸಂದೇಶವನ್ನು ಕಳುಹಿಸಿರುತ್ತಾರೆ. ಗುರುದೇವ ರವೀಂದ್ರನಾಥ ಟಾಗೋರ್ ರ ನೋಬೆಲ್ ಪುರಸ್ಕೃತ ಗೀತಾಂಜಲಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯು ಶೇಷ್ಠ ಸಾಹಿತಿಗಳು ಮತ್ತು ವಿದ್ವಾಂಸರಿಂದ ಪ್ರಶಂಸಿಲ್ಪಟ್ಟಿದೆ.
‘ಬದುಕಿನ ಹಾದಿಯೆಂಬ’ ನೂರ ಹನ್ನೆರಡು ಕವನಗಳ ಕವನ ಸಂಕಲನವನ್ನು ರಚಿಸಿ ಸಮಾಜದ ವಿವಿಧ ಆಯಾಮಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ‘ವ್ಯಾಲ್ಯೂಸ್ ಆಂಡ್ ವೊಯ್ಸಸ್ ಮತ್ತು ಲ್ಯಾಂಗ್ಯುವೇಜ್ ಸಿಲೆಬಸ್ ಆಫ್ ನೇಚರ್’ ಎನ್ನುವ ಆಂಗ್ಲ ಕೃತಿಗಳನ್ನು ಬರೆದಿದ್ದಾರೆ. ಟಿ.ವಿ. ವಾಹಿನಿಗಳಾದ ದಾಯ್ಚಿವರ್ಲ್ಡ್ ಮತ್ತು ನಮ್ಮ ಕೊಡ್ಲ ವಾಹಿನಿಗಳಲ್ಲಿ ಮತ್ತು ಆಕಾಶವಾಣಿ ಮಂಗಳೂರಿನಲ್ಲಿ ಬ್ಯಾಂಕಿಂಗ್ ಆರ್ಥಿಕತೆ ಶೈಕ್ಷಣಿಕ ಕ್ಷೇತ್ರ ಪ್ರಕೃತಿ ಪರಿಸರ ಅವಮಾನ ಹಾಗೂ ಕನ್ನಡ ಪರ ಚಿಂತನೆಗಳ ಬಗ್ಗೆ 30 ಕ್ಕಿಂತಲೂ ಹೆಚ್ಚಿನ ಸಂದರ್ಶಗಳನ್ನು ನೀಡಿದ್ದಾರೆ. ಆಕಾಶವಾಣಿಯ ಚಿಂತನ ಕಾರ್ಯಕ್ರಮದಲ್ಲಿ ಮಾನವೀಯ ಮೌಲ್ಯಗಳ ಬಗೆಗಿನ ಕಾರ್ಯಕ್ರಮಗಳು ಮತ್ತು ಪ್ರಚಲಿತ ಸಾಮಾಜಿಕ ನ್ಯಾಯ ಮತ್ತು ವಿದ್ಯಾಮಾನಗಳ ಬಗೆಗಿನ ಅಭಿಮತಗಳು ಪ್ರತಿ ತಿಂಗಳೂ ಮೂಡಿ ಬರುತ್ತವೆ. ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. ಅತ್ಯುತ್ತಮ ವಾಗ್ಮಿ, ಕೇಂದ್ರ ಗ್ರಂಥಾಲಯ ಮತ್ತು ವಿವಿಧ ಆಶುಭಾಷಣ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿಶ್ವ ವಿದ್ಯಾನಿಲಯಗಳಲ್ಲಿ ಸಂದರ್ಶಕ ಉಪನ್ಯಾಸಕರಾಗಿ ಹಲವಾರು ವಿಚಾರಗೋಷ್ಠಿಗಳನ್ನು ನಡೆಸಿದ್ದಾರೆ. ಜೇಸೀಸ್ ಅಧ್ಯಕ್ಷರಾಗಿ, ಲಯನ್ಸ್ ಜಿಲ್ಲೆ, 317 ಡಿಯಲ್ಲಿ ಎಜುಕೇಶನ್ ಮತ್ತು ಕ್ಯಾರಿಯರ್ ಗೈಡೆನ್ಸ್ ಹಾಗೂ ಇಮೇಜ್ ಬಿಲ್ಡಿಂಗ್ ನಲ್ಲಿ ಎಂಟು ವರ್ಷಗಳಿಂದ ಮುಖ್ಯ ಸಂಯೋಜಕರಾಗಿದ್ದಾರೆ. ಲಯನ್ಸ್ ಮ್ಯಾಗಜಿನ್ ‘ಕುರಾಲ್’ ನ ಸಂಪಾದಕರಾಗಿದ್ದಾರೆ.
ಪತ್ನಿ ಗೃಹಣಿ, ಮಗ ಡಾ. ಗೌತಮ್ ಶೆಟ್ಟಿ ಎಂಬಿಬಿಎಸ್, ಎಂಸಿಹೆಚ್, ಎಫ್ ಪಿಸಿಎಸ್ ಓದಿರುವ ಡಾಕ್ಟರ್. ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ಆಸ್ಪತ್ರೆಯಲ್ಲಿ ಮಕ್ಕಳ ಹೃದ್ರೋಗ ತಜ್ಞರು, ಸೊಸೆ ಎಚಿಡಿ, ಡರ್ಮಾಟೋಲೋಜಿಸ್ಟ್ ಡಾಕ್ಟರ್, ಮಗಳು ಎಂಟೆಕ್ ಡೆಲ್ ಕಂಪ್ಯೂಟರ್ ನಲ್ಲಿ ಸೀನಿಯರ್ ಸಿಸ್ಟಂ ಎನಾಲಿಸ್ಟ್, ಆಳಿಯ ಇಂಜಿನಿಯರ್ ಮತ್ತು ಎಂಬಿಎ (ಲಂಡನ್) ಹಾಂಗ್ ಕಾಂಗ್ ಮೂಲದ ಸೈನರ್ಜಿ ಕಂಪನಿಯಲ್ಲಿ ಆಡಳಿತ ನಿರ್ವಹಣಾಧಿಕಾರಿಯಾಗಿದ್ದಾರೆ. ಇದೇ ಮೇ 22, 2025 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜರಗುವ 50ನೇ ವರ್ಷದ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚೇರ್ಕಾಡಿ ಸಚ್ಚಿದಾನಂದ ಶೆಟ್ಟರು ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.