ಮೂಡುಬಿದಿರೆ: ಕರಾವಳಿಗೆ ಶಿಕ್ಷಣವನ್ನು ಅರಸಿ ಬಂದ ಮಣಿಪುರಿ ವಿದ್ಯಾರ್ಥಿಗಳು ,ಇಲ್ಲಿನ ವಿವಿಧತೆಯನ್ನು, ಸಮೃದ್ಧ ಸಂಸ್ಕೃತಿಯನ್ನು ಗೌರವಿಸುವ ಜೊತೆಗೆ ಕರಾವಳಿಯ ಭಾಗವಾಗಿ ಎಲ್ಲರೊಂದಿಗೆ ಸಹೋದರತ್ವ, ಭಾತೃತ್ವದೊಂದಿಗೆ ಬೆಳೆಯಿರಿ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಸಂಸ್ಥೆಯ ಮಣಿಪುರಿ ವಿದ್ಯಾರ್ಥಿಗಳಿಗೆ ಆಳ್ವಾಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡ ಮೈತೇಯಿ ಸಂಸ್ಕೃತಿಯ ಪ್ರಮುಖ ಹಬ್ಬ ‘ಶಜೀಬೂ ಚೆರೋಬಾ’ ಆಚರಣೆಯಲ್ಲಿ ಅವರು ಮಾತನಾಡಿದರು. ಇತ್ತೀಚೆಗೆ ಮಣಿಪುರಕ್ಕೆ ಕಾರ್ಯಕ್ರಮಕ್ಕೆಂದು ಹೋದ ಸಂದರ್ಭದಲ್ಲಿ ಅಲ್ಲಿನ ಸಂಸ್ಕೃತಿ, ಊಟೋಪಚಾರ ಮತ್ತು ಅಲ್ಲಿನ ಭಾಷೆ, ಆಚರಣೆ ಮನಸ್ಸಿಗೆ ಹೆಚ್ಚು ಆಪ್ತವಾಗಿತ್ತು ಎಂದು ಭೇಟಿ ನೀಡಿದ ಅನುಭವ ಹಂಚಿಕೊAಡರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ನರ್ತಿಸುವ ವಿಶೇಷ ಸಾಹಸಮಯ ಸ್ಟಿಕ್ ಡ್ಯಾನ್ಸ್ ನನ್ನನ್ನು ಇನ್ನಷ್ಟು ಮಣಿಪುರದ ಸಂಸ್ಕೃತಿ, ನೃತ್ಯ ಪ್ರಕಾರಕ್ಕೆ ಹತ್ತಿರ ಮಾಡಿದೆ. ಕಾಲೇಜು ವಿದ್ಯಾರ್ಥಿಗಳು ಈ ರೀತಿಯ ಸಾಹಸಮಯ ನೃತ್ಯ ಪ್ರದರ್ಶನ ನೀಡುವುದು ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ಪ್ರೊ ಕೈನಿ ಸಿಸಿಲಿಯಾ ಮಾತನಾಡಿ, ನಾರ್ಥ್ ಈಸ್ಟ್ ಪೀಪಲ್ ಅಸೋಸಿಯೇಷನ್ ಆಫ್ ಮಂಗಳೂರು (ನೇಪಮ್) ತಂಡ ಆಳ್ವಾಸ್ ಚೆರೋಬಾ ಆಚರಣೆಯಲ್ಲಿ ಭಾಗಿಯಾಗಿರುವುದು ಹೆಚ್ಚು ಸಂತಸ ತಂದಿದೆ. ನಮ್ಮ ಮನೆಗೆ ನಾವೇ ಬಂದಷ್ಟು ಸಂತೋಷವಾಯಿತು ಎಂದು ಹರ್ಷವನ್ನು ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಯವರು ಮಣಿಪುರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಊಟೋಪಚಾರ ಸವಿದದ್ದನ್ನು ಸದಾ ನೆನೆಯುವಂತೆ, ಮಣಿಪುರಿಯ ವಿದ್ಯಾರ್ಥಿಗಳು ಕರಾವಳಿಯ ವಿಶೇಷ ಖಾದ್ಯ, ಆಹಾರ ಪದ್ಧತಿಯನ್ನು ತುಸು ಮಟ್ಟಿಗೆ ತಿಳಿದುಕೊಂಡು ಸವಿಯುವುದು ಬಹಳ ಅವಶ್ಯಕ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಮಂಗಳೂರು ಶಿಕ್ಷಣ, ಕ್ರೀಡೆ, ಸಂಸ್ಕೃತಿ ಮತ್ತು ಕರಾವಳಿ ಪ್ರವಾಸೋದ್ಯಮಕ್ಕೆ ಹೆಚ್ಚು ಹೆಸರುವಾಸಿ. ಇತ್ತೀಚೆಗೆ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ನಡೆದಂತಹ ಕರಾವಳಿ ಉತ್ಸವ ಮಂಗಳೂರಿನ ಆಚರಣೆ, ಆಹಾರ ಮತ್ತು ಸಂಸ್ಕೃತಿಯನ್ನು ಪ್ರತಿ ನೆಲೆಯಲ್ಲೂ ಬಿಂಬಿಸುತ್ತಿತ್ತು. ಮಣಿಪುರಿ ಸಂಸ್ಕೃತಿ, ಆಹಾರ ಪದ್ಧತಿಗಳ ಕಡೆಗಿನ ಜಿಲ್ಲಾಧಿಕಾರಿಯವರ ಆಸಕ್ತಿ ನಿಜಕ್ಕೂ ಮೆಚ್ಚುವಂತದ್ದು. ಇಲ್ಲಿಗೂ ಮಣಿಪುರಿಯ ಸಂಸ್ಕೃತಿಯಲ್ಲಿ ಯಾವ ಭೇಧ ಭಾವವಿಲ್ಲ.

ಸಹೋದರ ಸಹೋದರಿಯರ ನಡುವಿರುವ ಭ್ರಾತೃತ್ವ, ರಕ್ಷಣಾತ್ಮಕ ಬಾಂಧವ್ಯ ಗಟ್ಟಿಗೊಳಿಸುವ ಮೈತೇಯಿ ಸಂಸ್ಕೃತಿಯ ಪ್ರಮುಖ ಹಬ್ಬ ಶಜಿಬಾ ಚೆರೋಬಾ ಎಂದರು. ಭಾರತವು ವಿವಿಧತೆಯಲ್ಲಿ ಏಕತೆಯನ್ನು ಮೂಡಿಸಿರುವ ದೇಶ. ಎಲ್ಲಾ ಸಂಪ್ರದಾಯ, ಆಚರಣೆ, ಭಾಷೆ, ಆಹಾರ ಪದ್ದತಿ, ನಂಬಿಕೆಗಳು ಮತ್ತು ಸಂಸ್ಕೃತಿಯನ್ನು ಗೌರವಿಸಿ, ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಪತ್ನಿ ಅಶ್ವಿನಿ ಮಣಿ ಹಾಗೂ ಮಗಳು ಅಧೀರಾ, ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ನೇಪಮ್ ಅಧ್ಯಕ್ಷೆ ಡಾ ಅಥೋಲಿಥೋ, ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಡಾ. ವನಿತಾ ಶೆಟ್ಟಿ , ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ ರೋಶನ್ ಪಿಂಟೋ ಇದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಇನ್ಶರೈ, ವಿದ್ಯಾರ್ಥಿ ವಿವೇಕ್ ಮತ್ತು ಈಶ್ವರಚಂದ್ರ ನಿರೂಪಿಸಿದರು. ವಿದ್ಯಾರ್ಥಿ ಕೇಕೇಸನ ಸ್ವಾಗತಿಸಿ, ವಂದಿಸಿದರು. ಬಳಿಕ ಪದವಿ ಮಣಿಪುರಿ ವಿದ್ಯಾರ್ಥಿಗಳಿಂದ ವಿಶೇಷವಾಗಿ ಮಾರ್ಷಲ್ ಆರ್ಟ್ಸ್ ಡೆಮೊ, ದಾಂಡಿಯಾ ನೃತ್ಯ ಹಾಗೂ ಅನೇಕ ರೀತಿಯ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ತಯಾರಿಸಿದ ಮಣಿಪುರಿಯ ಖಾದ್ಯಗಳಾದ ಇರೊಂಬಾ, ಉಟಿ, ಚಂಫೂಟ್, ಕಾಂಫ, ಚಿಕನ್ / ಪನ್ನೀರ್, ಹೇಯ್, ಐಸ್ ಕ್ರೀಂ ಅನ್ನು ಹಬ್ಬದಲ್ಲಿ ಉಣ ಬಡಿಸಲಾಯಿತು.