ವಿದ್ಯಾಗಿರಿ: ಅನೇಕ ಸಮುದಾಯಗಳಿಗೆ, ವಿದ್ಯಾರ್ಥಿಗಳಿಗೆ ಯಶಸ್ಸನ್ನು ನೀಡುವ ದೀವಿಗೆಯಾಗಿ ಆಳ್ವಾಸ್ ರೀಚ್ ಕಾರ್ಯಕ್ರಮ ಮೂಡಿ ಬರಲಿ ಎಂದು ಎಸ್ಸೇ ಡಿಜಿಟ್ರೋನಿಕ್ಸ್ ಪ್ರೈವೆಟ್ ಲಿಮಿಟೆಡ್ನ ಮಾನವ ಸಂಪನ್ಮೂಲ ವಿಭಾಗದ ಸಹಾಯಕ ಜನರಲ್ ಮ್ಯಾನೇಜರ್ (2005 ಬ್ಯಾಚ್ ಹಳೆ ವಿದ್ಯಾರ್ಥಿ) ಶಾಲಿನಿ ಗಿರೀಶ ಹೇಳಿದರು. ಆಳ್ವಾಸ್ (ಸ್ವಾಯತ್ತ)ಕಾಲೇಜಿನ ಸಮಾಜ ಕಾರ್ಯ ವಿಭಾಗದ ರಜತ ಮಹೋತ್ಸವ ಅಂಗವಾಗಿ ಕುವೆಂಪು ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡ “ಸಾಮೂಹಿಕ ಅಭ್ಯುದಯಕ್ಕಾಗಿ ಸಮಾಜಕರ್ಯ’ ಹಳೆ ವಿದ್ಯಾರ್ಥಿಗಳು ಪ್ರಾಯೋಜಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ‘ಲೋಕಾಃ ಸಮಸ್ತಾಃ ಸುಖಿನೋ ಭವಂತು’ ಎಂಬ ಮಂತ್ರದಂತೆ ಆಳ್ವಾಸ್ ಸಂಸ್ಥೆ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಕೊಡುಗೆಯನ್ನಾಗಿ ನೀಡುತ್ತಾ ಬಂದಿದೆ. ಸುಮಾರು 20 ವರ್ಷಗಳ ನಂತರ ಮತ್ತೊಮ್ಮೆ ಆಳ್ವಾಸ್ ಕಾಲೇಜಿಗೆ ಭೇಟಿ ನೀಡುತ್ತಿರುವುದು ಬಹಳ ಸಂತಸ ನೀಡಿದೆ. ಅಂದಿನ ಕಾಲೇಜು ದಿನಗಳು, ವಿಭಾಗದೊಂದಿಗೆ ಸೇರಿ ಕೈಗೊಂಡಿದ್ದ ಕಾರ್ಯಕ್ರಮಗಳು ಪುನರ್ಮನನ ಮಾಡಲು ಅವಕಾಶ ದೊರೆಯಿತು ಎಂದರು.

ಬಾರ್ಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ರಾಷ್ಟ್ರೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ ಶ್ರೀದೇವಿ ಕೆ ಮಾತನಾಡಿ, ಮಾನಸಿಕ ಆರೋಗ್ಯ, ಸಮುದಾಯ ನಿರ್ಮಾಣ, ಸಾಮಾಜಿಕ ಉದ್ಯಮಶೀಲತೆ ಮತ್ತು ಯುವ ಸಬಲೀಕರಣವು ಈ ವಿಚಾರ ಸಂಕಿರಣದ ಮುಖ್ಯ ಉದ್ದೇಶವಾಗಿದೆ. ಜೀವನದಲ್ಲಿ ಸಹಾನುಭೂತಿಯೇ ಮೂಲ ಶಕ್ತಿ. ಜೀವನದಲ್ಲಿ ಪ್ರತಿ ಹಂತವನ್ನು ಸವಾಲಾಗಿ ಸ್ವೀಕರಿಸಿ ಎಂದು ತಿಳಿಸಿದರು. ಮಂಗಳೂರಿನ ಫಾದರ್ ಮುಲ್ಲರ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹಿರಿಯ ಮನೋವೈದ್ಯಕೀಯ ಸಮಾಲೋಚಕ (2002 ಬ್ಯಾಚ್) ಶ್ರೀಪತಿ ಭಟ್ ಕೆ ಮಾತನಾಡಿ, ಸ್ಥಳೀಯ ನಗರಗಳಲ್ಲಿ ಸಮಾಜಕಾರ್ಯ ವಿಭಾಗವಿದ್ದರೂ, ಆಳ್ವಾಸ್ನ ಸಮಾಜಕಾರ್ಯ ವಿಭಾಗ ಎಲ್ಲಕ್ಕಿಂತ ಭಿನ್ನ ಹಾಗೂ ಹೆಚ್ಚು ವಿಶೇಷತೆಯಿಂದ ಕೂಡಿದೆ. ಸಮಾಜಕಾರ್ಯ ವಿಭಾಗ ಕೇವಲ ಉದ್ಯೋಗವನ್ನು ಅರಸುವುದಲ್ಲ ಬದಲಾಗಿ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸುವ ಕೋರ್ಸ್ ಆಗಿ ಬದಲಾಗಬೇಕು ಎಂದು ಆಶಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ , ಮನುಷ್ಯ ನಿರಂತರವಾಗಿ ಸಮಾಜಮುಖಿಯಾದ್ದರಿಂದ, ನಿಜವಾದ ಸಮಾಜ ಕಾರ್ಯಕರ್ತರನ್ನು ಬೆಂಬಲಿಸುವುದು ಬಹಳ ಮುಖ್ಯ. ಅನೇಕ ಅವಕಾಶಗಳಿವೆ ಅದನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಸಮಾಜಕ್ಕೆ ಮತ್ತು ಸಮುದಾಯಕ್ಕೆ ಕೊಡುಗೆಯನ್ನು ನೀಡಿ.ಸಾಧ್ಯವಾದಷ್ಟು ಸುತ್ತಮುತ್ತಲಿನ ಜನರೊಂದಿಗೆ ಬೆರೆಯಿರಿ ಎಂದು ಕರೆ ನೀಡಿದರು. ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, 25 ವರ್ಷಗಳ ಸುಧೀರ್ಘ ಪಯಣದಲ್ಲಿ ಕಲಿಸಿದ ಅದೆಷ್ಟೋ ವಿದ್ಯಾರ್ಥಿಗಳು ತಮ್ಮ ಪ್ರಾದ್ಯಾಪಕರೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿರುವುದು ಗುರುವಿಗೆ ಸಂದ ಶ್ರೇಷ್ಠ ಗೌರವ ಎಂದರು. ಸ0ಸ್ಥೆಯ ಅಧ್ಯಕ್ಷರು. ಸಮಾಜಕ್ಕೆ ಮತ್ತು ಸಮುದಾಯಕ್ಕೆ ಸೇವೆ ಸಲ್ಲಿಸುವ ದೃಷ್ಟಿಯಿಂದ ಆರಂಭಗೊAಡಿದ್ದೇ ಸಮಾಜಕಾರ್ಯ ವಿಭಾಗ. ಈ ರೀತಿಯ ವಿಚಾರ ಸಂಕಿರಣ ವಿದ್ಯಾರ್ಥಿಗಳ ಜ್ಞಾನಮಟ್ಟವನ್ನು ಉತ್ತೇಜಿಸಲು ಪೂರಕವಾಗಲಿ ಎಂದು ಹಾರೈಸಿದರು. ಬಳಿಕ ನಡೆದ ವಿವಿಧ ವಿಚಾರಗೋಷ್ಠಿಗಳಲ್ಲಿ ಹಳೆ ವಿದ್ಯಾರ್ಥಿಗಳಾದ ಶಾಲಿನಿ ಗಿರೀಶ್, ಅಶೋಕ ವಿಠ್ಠಲ್, ಡಾ ರಾಯನ್, ಗಣೆಶ್ ಶೆಟ್ಟಿ, ಸುದಿನ್ ಹೆಗ್ಡೆ, ಸುರೇಶ್ ಕುಡುಮಲ್ಲಿಗೆ, ಆತ್ಮೀಯಾ ಜೆ ಕಡಂಬ ತಮ್ಮ ವಿಷಯಗಳನ್ನು ಪ್ರಸ್ತುತ ಪಡಿಸಿದರು. ರಜತ ಮಹೋತ್ಸವದ ಅಂಗವಾಗಿ ವಿವಿಧ ಕಾಲೇಜಿನ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಿಗೆ ವೆರೈಟಿ ಸ್ಪರ್ಧೆ (ನೃತ್ಯ), ಫೋಟೋಗ್ರಫಿ ಸ್ಪರ್ಧೆ ಮತ್ತು ಪೋಸ್ಟರ್ ತಯಾರಿಕಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಆಳ್ವಾಸ್ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ ಮಧುಮಾಲ ಕೆ, ಸಹಪ್ರಾಧ್ಯಾಪಕ ಕೃಷ್ಣಮೂರ್ತಿ ಬಿ, ಕರ್ಯಕ್ರಮ ಸಂಯೋಜಕಿ ಡಾ ಸಪ್ಮ ಆಳ್ವ, ಆಡಳಿತಾಧಿಕಾರಿ ಬಾಲಕೃಷ್ಣ, ವಿದ್ಯಾರ್ಥಿ ಸಂಯೋಜಕರಾದ ಲಾವಣ್ಯ ಮತ್ತು ಆನ್ಸನ್ ಪಿಂಟೋ ಇದ್ದರು. ವಿವಿಧ ಕಾಲೇಜಿನ ಸ್ಪರ್ಧಾರ್ಥಿಗಳು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು 2011 ಬ್ಯಾಚ್ ಸಮಾಜ ಕಾರ್ಯ ವಿಭಾಗದ ಹಳೆ ವಿದ್ಯಾರ್ಥಿ ಸಂಗೀತಾ ಹೆಗ್ಡೆ ನಿರೂಪಿಸಿ, ಆಳ್ವಾಸ್ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪವಿತ್ರಾ ಪ್ರಸಾದ್ ಸ್ವಾಗತಿಸಿ, ಆಳ್ವಾಸ್ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ನಯೋಮಿ ಮೋರಿಸ್ ವಂದಿಸಿದರು. ಸಮಾರೋಪ ಸಮಾರಂಭ ಇರಿಲೆಗೋ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಸುಕೇಶ್ ಶೆಟ್ಟಿ ಮಾತನಾಡಿ, ಸಮಾಜಕಾರ್ಯ ಎನ್ನುವುದು ವ್ಯಕ್ತಿನಿಷ್ಠ ಸಾಧನವಾಗಿದ್ದು, ಅದನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಂಡು ಸಮಾಜಕ್ಕೆ ಒಳಿತು ಮಾಡುವಲ್ಲಿ ಶ್ರಮವಹಿಸಿ ಎಂದು ಕರೆ ನೀಡಿದರು. ಬೆಂಗಳೂರಿನ ಅಮೆಜಾನ್ನಲ್ಲಿ ಮಾರಾಟ ಮತ್ತು ಲೆಕ್ಕ ಪತ್ರ- ಅಂತರರಾಷ್ಟ್ರೀಯ ಬ್ರಾಂಡ್ಸ್ನ ವ್ಯವಸ್ಥಾಪಕಿ ಇಶಾ ಮಾತನಾಡಿ, ವಿದ್ಯಾರ್ಥಿ ದಿನಗಳಲ್ಲಿ ಪ್ರಾಯೋಗಿಕ ಕೆಲಸದಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಿ. ಉನ್ನತ ಕೋರ್ಸ್ ಆಯ್ಕೆಗಿಂತ ಅದನ್ನು ಯಾವ ರೀತಿ ಉದ್ಯೋಗ ಗಳಿಸುವಲ್ಲಿ ಬಳಸಿಕೊಳ್ಳುತ್ತೇವೆ ಎನ್ನುವುದು ಬಹಳ ಮುಖ್ಯ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ , ಜೀವನದಲ್ಲಿ ನಿಷ್ಕಲ್ಮಶ ತಾಳ್ಮೆ ಇದ್ದಾಗ ಯಶಸ್ಸು ಕಾಣಲು ಸಾಧ್ಯ. ಪ್ರಸ್ತುತ ಸ್ಥಿತಿಗತಿಯಲ್ಲಿ ವಿದ್ಯಾರ್ಥಿಗಳಲ್ಲಿ ತಾಳ್ಮೆಯ ಕೊರತೆ ಅಗಾಧವಾಗಿ ಕಾಣುತ್ತಿದ್ದೇವೆ. ಆದ್ದರಿಂದ , ಇಂದಿನ ವಿದ್ಯಾರ್ಥಿಗಳು ತಮ್ಮ ಗುರಿಯ ಸ್ಪಷ್ಟತೆ ಮತ್ತು ಉದ್ದೇಶದ ಕಡೆಗೆ ಹೆಚ್ಚು ಗಮನವಿರಲಿ ಎಂದು ಸಲಹೆ ನೀಡಿದರು. ದಿವಂಗತ ಹರಿಪ್ರಸಾದ್ ಪಿ. ಸ್ಮರಣಾರ್ಥ ಪದವಿ ಮತ್ತು ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಾರ್ಷಿಕ ಪರೀಕ್ಷೆಯಲ್ಲಿ ಕ್ಷೇತ್ರ ಕಾರ್ಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್ ಪಿ ಮತ್ತು ಹೊಸಂಗಡಿ ಗುರುದೇವ ಫಾರ್ಮ್ಸ್ ರಶ್ಮಿ ಹರಿಪ್ರಸಾದ್ ರೋಲಿಂಗ್ ಶೀಲ್ಡ್ನ್ನು ನೀಡಿ ಗೌರವಿಸಿದರು. ರಜತ ಮಹೋತ್ಸವದ ಅಂಗವಾಗಿ ವಿಭಾಗದ ವತಿಯಿಂದ ನಡೆಸಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಧಕ ರವಿ ಕಟಪಾಡಿ, ಕಲಿಕೆಗಿಂತ ಹೆಚ್ಚಾಗಿ ಜೀವನವನ್ನು ಪ್ರೀತಿಸಿ. ಕಷ್ಟದಲ್ಲಿರುವವರಿಗೆ ಕೈಲಾದಷ್ಟು ಸಹಾಯಮಾಡಿ, ಹೆತ್ತವರನ್ನು ಮರೆಯದೆ ಬದುಕನ್ನು ಸಾರ್ಥಕಗೊಳಿಸಿಕೊಳ್ಳಿ ಎಂದು ಸಲಹೆ ನೀಡಿದರು. ಆಳ್ವಾಸ್ ರೀಚ್- 2025 ರ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಕಟಪಾಡಿಯ ತ್ರಿಶಾ ಕಾಲೇಜು ಸಮಗ್ರ ಪ್ರಶಸ್ತಿಗೆ ಭಾಜನವಾಯಿತು. ಹಳೆ ವಿದ್ಯಾರ್ಥಿ ಶುಭಕರ್ ಅಂಚನ್ ನಿರೂಪಿಸಿ, ಆಳ್ವಾಸ್ ಸಮಾಜಕಾರ್ಯ ವಿಭಾಗದ ಸಹ ಪ್ರಾಧ್ಯಾಪಕಿ ಡಾ ಮೂಕಾಂಬಿಕಾ ಸ್ವಾಗತಿಸಿ, ಡಾ ಮಧುಮಲಾ ವಂದಿಸಿದರು.